ಭಾರತದಲ್ಲಿ ಕೋವಿಡ್ 19 ಎರಡನೇ ಅಲೆಯು ವಯಸ್ಸಾದವರಿಗಿಂತ ಯುವ ಸಮೂಹದ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಹೊರಗಡೆ ಹೋಗುವುದರಿಂದ ಅಥವಾ SARs-COV-2 ರ ಕೆಲವು ರೂಪಾಂತರಗಳ ಕಾರಣದಿಂದಾಗಿರಬಹುದು ಎಂದು ಮಂಗಳವಾರ ಐಸಿಎಮ್ಆರ್ ಉಲ್ಲೇಖಿಸಿದೆ. ಅಲ್ಲದೇ ಯುವ ಜನತೆಗೆ ತಾವು ಸೋಂಕಿತರಾಗಿದ್ದೇವೆ ಎಂದು ಅರಿವಿಗೆ ಬರಲು ಸಾಕಷ್ಟು ಸಮಯ ಹಿಡಿಯುತ್ತಿದೆ. ಅಷ್ಟರಲ್ಲಾಗಲೇ ವೈರಸ್ ವೇಗವಾಗಿ ಹರಡಿರುತ್ತದೆ. ಕೋವಿಡ್ ರೋಗಿಗಳು ಆಮ್ಲಜನಕ ಕಡಿಮೆಯಾಗಿದ್ದರೂ ಸಹಜವಾಗಿರುವಂತೆ ತೋರುವುದು ಎಷ್ಟೋ ಕಡೆ ಕಂಡು ಬಂದಿದೆ. ವೈದ್ಯರು ಇದನ್ನು ಹ್ಯಾಪಿ ಹೈಪೋಕ್ಸಿಯಾ ಎನ್ನುತ್ತಿದ್ದಾರೆ! ಅಲ್ಲದೇ ವಿಜ್ಞಾನಿಗಳು ಕೆಲವೊಂದು ಸಂಭಾವ್ಯ ವಿವರಣೆಯನ್ನು ಈ ಸಂದರ್ಭದಲ್ಲಿ ಕಂಡುಕೊಂಡಿದ್ದಾರೆ. ಕೆಲವು ಕೋವಿಡ್ 19 ರೋಗಿಗಳ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತದೆ, ಉಸಿರಾಟದ ಸಮಸ್ಯೆ ಕಂಡು ಬರುವುದಿಲ್ಲ ಇದು ಹ್ಯಾಪಿ ಹೈಪೋಕ್ಸಿಯಾ ಎನ್ನಲಾಗಿದೆ.
ಅಮೆರಿಕದ ಜರ್ನಲ್ ಆಫ್ ರೆಸ್ಪಿರೇಟರಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್ ಎನ್ನುವ ಜರ್ನಲ್‌ನಲ್ಲಿ 2020ರಲ್ಲಿ ಅಧ್ಯಯನವೊಂದು ಪ್ರಕಟವಾಗಿತ್ತು. ಈ ಹೊಸ ಕಂಡೀಷನ್ ಹ್ಯಾಪಿ ಹೈಪೋಕ್ಸಿಯಾ ಆಗಿದ್ದು, ಇದು ರೋಗಿಗೆ ವೆಂಟಿಲೇಷನ್ ಮತ್ತು ಕೊಳವೆ ಹಾಕುವುದನ್ನು ನಿಯಂತ್ರಿಸಬಹುದು ಎಂದಿದೆ. ಸದ್ಯ ಎರಡನೇ ಅಲೆಯ ರೋಗಿಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ.
ಬಿಹಾರದ ಭಗಲ್ಪುರದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಜವಹರಲಾಲ್ ನೆಹರು ಮೆಡಿಕಲ್ ಕಾಲೇಜಿನ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆದ ಡಾ. ರಾಜ್ ಕುಮಾರ್ ಚೌದ್ರಿಯವರು ಮಾತನಾಡಿ, ಕೋವಿಡ್ 19 ರೋಗಿಗಳು ಹ್ಯಾಪಿ ಹೈಪೋಕ್ಸಿಯಾವನ್ನು ಅನುಭವಿಸುತ್ತಿದ್ದಾರೆ. ಆಕ್ಸಿಜನ್ ಶೇಕಡಾ 20-30ರಷ್ಟು ಕಡಿಮೆಯಾಗಿದೆ. ಭಾರತದ ಕೋವಿಡ್ 19 ರೋಗಿಗಳಲ್ಲಿ 30 ಪ್ರತಿಶತದಷ್ಟು ರೋಗಿಗಳಿಗೆ ಆಸ್ಪತ್ರೆಯ ಅವಶ್ಯಕತೆ ಇದ್ದು, ಅವರಿಗೆ ಹ್ಯಾಪಿ ಹೈಪೋಕ್ಸಿಯಾ ಇರುವುದು ಮಾರಕವಾದ ಅಂಶವಾಗಿದೆ ಎಂದಿದ್ದಾರೆ.
ಯುವ ಸಮುದಾಯದಲ್ಲಿ ಹೆಚ್ಚಿನ ಸಾವು ಸಂಭವಿಸಲು ಈ ಹ್ಯಾಪಿ ಹೈಪೋಕ್ಸಿಯಾ ಕಾರಣವೆಂದು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ದೆಹಲಿಯ ಎನ್‌ಸಿಆರ್‌ನ ವೈದ್ಯರು ವರದಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ಗರ್ಲ್ಫ್ರೆಂಡ್ ಜೊತೆಗಿದ್ದ ಗಂಡನಿಗೆ ಟ್ರಾಫಿಕ್ನಲ್ಲೇ ಹೆಂಡತಿಯಿಂದ ಚಪ್ಪಲಿಯೇಟು; ವಿಡಿಯೋ ವೈರಲ್
'ಎಷ್ಟೋ ಯುವ ರೋಗಿಗಳಿಗೆ ತಮ್ಮ ಆಕ್ಸಿಜನ್ ಮಟ್ಟ ಕುಸಿಯುವುದು ಕೂಡ ತಿಳಿಯುವುದಿಲ್ಲ. ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ತನ್ಮಯರಾಗಿರುತ್ತಾರೆ. ತಕ್ಷಣವೇ ಆಕ್ಸಿಜನ್ ಮಟ್ಟ ತೀರಾ ಕೆಳಮಟ್ಟಕ್ಕೆ ಇಳಿಯುತ್ತದೆ' ಎಂದು ಮಸೀನಾ ಆಸ್ಪತ್ರೆಯ, ವೈದ್ಯಕೀಯ ನಿರ್ದೇಶಕರಾದ ಡಾ. ಸತ್ಯೇಂದ್ರ ನಾಥ್ ಮೆಹ್ರಾ ಅವರು ಹೇಳುತ್ತಾರೆ.
ಕೋವಿಡ್ ಲಕ್ಷಣಗಳನ್ನು ಬಿಟ್ಟು, ಒಬ್ಬ ವ್ಯಕ್ತಿ ಹ್ಯಾಪಿ ಹೈಪೋಕ್ಸಿಯಾ ಹೊಂದಿದ್ದರೆ, ಅವರ ತುಟಿಗಳು ಸಹಜ ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ. ಮುಖ ಕೆಂಪು ಇಲ್ಲವೇ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಅಲ್ಲದೇ ಕಠಿಣ ದೈಹಿಕ ಕೆಲಸವನ್ನು ಮಾಡದಿದ್ದರೂ ಸಹ ಬೆವರುವುದು ಹ್ಯಾಪಿ ಹೈಪೋಕ್ಸಿಯಾದ ಲಕ್ಷಣವಾಗಿರಬಹುದು ಎಂದು ವರದಿ ಮಾಡಲಾಗಿದೆ.
ಹ್ಯಾಪಿ ಹೈಪೋಕ್ಸಿಯಾದ ತೀವ್ರತೆಯನ್ನು ತಡೆಗಟ್ಟಲು ಆಕ್ಸಿಮೀಟರ್‌ನೊಂದಿಗೆ ಆಮ್ಲಜನಕದ ಏರಿಳಿತದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ತಜ್ಞರು ಸೂಚಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ