Haiti Earthquake: ಭೀಕರ ಭೂಕಂಪಕ್ಕೆ ತತ್ತರಿಸಿದ ಹೇತಿ; ಸಾವಿನ ಸಂಖ್ಯೆ 1200ಕ್ಕೆ ಏರಿಕೆ, 5700 ಮಂದಿಗೆ ಗಾಯ

ಈ ಭಯಾನಕ ಭೂಕಂಪದಿಂದಾಗಿ ಹೇತಿ ದೇಶ ಅಕ್ಷರಶಃ ತತ್ತರಿಸಿ ಹೋಗಿದೆ. ಸುಮಾರು 13,600 ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದರೆ, 13,700 ಮನೆಗಳು ಹಾನಿಯಾಗಿವೆ. ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು ಚರ್ಚ್​ಗಳು ಸಹ ಭೂಕಂಪದ ಹೊಡೆತಕ್ಕೆ ಸಿಕ್ಕಿ ನೆಲಸಮಗೊಂಡಿವೆ.

ಹೇತಿಯಲ್ಲಿ ಸಂಭವಿಸಿದ ಭೂಕಂಪದ ದೃಶ್ಯ

ಹೇತಿಯಲ್ಲಿ ಸಂಭವಿಸಿದ ಭೂಕಂಪದ ದೃಶ್ಯ

 • Share this:
  ಹೇತಿ ದೇಶದಲ್ಲಿ ಭಾನುವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬರೋಬ್ಬರಿ 1200ಕ್ಕೆ ಏರಿಕೆಯಾಗಿದೆ. ರಿಕ್ಟರ್​ ಮಾಪನದಲ್ಲಿ 7.2 ತೀವ್ರತೆ ದಾಖಲಾಗಿದೆ. ಪ್ರಬಲವಾದ ಭೂಕಂಪದಿಂದಾಗಿ ಸುಮಾರು 5700 ಮಂದಿ ಗಾಯಗೊಂಡಿದ್ದಾರೆ. ನೂರಾರು ಮನೆಗಳು, ಕಟ್ಟಡಗಳು ಉರುಳಿಬಿದ್ದಿವೆ. ಹಲವಾರು ಮಂದಿ ಕಾಣೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಹೀಗಾಗಿ, ಸಾವಿನ ಸಂಖ್ಯೆ ಇನ್ನೂ ಬಹಳಷ್ಟು ಹೆಚ್ಚಿರುವ ಸಾಧ್ಯತೆ ಇದೆ.

  ಹೇತಿ ದೇಶದ ನಾಗರಿಕ ರಕ್ಷಣಾ ಏಜೆನ್ಸಿ ನೀಡಿದ ಮಾಹಿತಿ ಪ್ರಕಾರ, ಭಾರತೀಯ ಕಾಲಮಾನದಲ್ಲಿ ಶನಿವಾರ ರಾತ್ರಿ ಈ ಪ್ರಬಲ ಭೂಕಂಪ ಸಂಭವಿಸಿದೆ. ಇನ್ನೂ ಸಹ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ಹೊರತೆಗೆದು ರಕ್ಷಿಸುತ್ತಿದ್ದಾರೆ. 2010ರಲ್ಲಿ ಇದೇ ರೀತಿ ಭಯಾನಕ ಭೂಕಂಪ ಹೇತಿ ದೇಶದಲ್ಲಿ ಸಂಭವಿಸಿತ್ತು. ಇನ್ನೂ ಆ ಅವಘಡದಿಂದ ಚೇತರಿಕೆ ಕಾಣುತ್ತಿರುವಾಗಲೇ ಮತ್ತೊಂದು ಭೀಕರ ಭೂಕಂಪ ಸಂಭವಿಸಿದೆ.

  ಅಮೆರಿಕದ ಭೂಸರ್ವೇಕ್ಷಣಾ ವಿಭಾಗ ನೀಡಿರುವ ಮಾಹಿತಿ ಪ್ರಕಾರ ಕೆರಿಬಿಯನ್ ದ್ವೀಪ ಸಮೂಹದ ಭಾಗವಾಗಿರುವ ಹೇತಿ ದೇಶದ ರಾಜಧಾನಿ ಪೋರ್ಟ್ ಔ ಪ್ರಿನ್ಸ್ (Port-au-Prince) ನಗರದಿಂದ ಪಶ್ಚಿಮಕ್ಕೆ 125 ಕಿಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು. ಭಾರತೀಯ ಕಾಲಮಾನದಲ್ಲಿ ಶನಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಶನಿವಾರದ ಆರಂಭಿಕ ವರದಿ ಪ್ರಕಾರ 29 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತಾದರೂ, ಭಾನುವಾರ ಸಿಕ್ಕ ಮಾಹಿತಿ ಪ್ರಕಾರ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಸದ್ಯದ ವರದಿ ಪ್ರಕಾರ, ಹೇತಿ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬರೋಬ್ಬರಿ 1200ಕ್ಕೆ ಏರಿಕೆಯಾಗಿದೆ. ಒಟ್ಟಾರೆ 5700 ಜನರು ಭೂಕಂಪದ ಹೊಡೆತಕ್ಕೆ ಸಿಕ್ಕಿ ಗಾಯಗೊಂಡಿದ್ದಾರೆ.

  ಇದನ್ನೂ ಓದಿ:Petrol Price Today: ಕಳೆದೊಂದು ತಿಂಗಳಿಂದ ಬದಲಾಗದ ಪೆಟ್ರೋಲ್​-ಡೀಸೆಲ್ ಬೆಲೆ; ಇಂದಿನ ದರ ಹೀಗಿದೆ

  ಚರ್ಚ್​​ಗಳು, ದೈತ್ಯಾಕಾರದ ಕಟ್ಟಡಗಳು, ಶಾಲೆಗಳು, ಮನೆಗಳು ಭೂಕಂಪದಿಂದಾಗಿ ನೆಲಸಮಗೊಂಡಿವೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ನೂರಾರು ಮಂದಿಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ ಮಾಹಿತಿ ನೀಡಿದೆ.

  ಈ ಭಯಾನಕ ಭೂಕಂಪದಿಂದಾಗಿ ಹೇತಿ ದೇಶ ಅಕ್ಷರಶಃ ತತ್ತರಿಸಿ ಹೋಗಿದೆ. ಸುಮಾರು 13,600 ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದರೆ, 13,700 ಮನೆಗಳು ಹಾನಿಯಾಗಿವೆ. ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು ಚರ್ಚ್​ಗಳು ಸಹ ಭೂಕಂಪದ ಹೊಡೆತಕ್ಕೆ ಸಿಕ್ಕಿ ನೆಲಸಮಗೊಂಡಿವೆ.

  ಹೇತಿ ದೇಶದಲ್ಲಿ 2010ರಲ್ಲಿ ಸಂಭವಿಸಿದ ಭೂಕಂಪ ದುರಂತವನ್ನು ಯಾವತ್ತೂ ಮರೆಯುವಂತಿಲ್ಲ. ಆ ವರ್ಷ ಸಂಭವಿಸಿದ ಭೂಕಂಪ 7.0 ತೀವ್ರತೆ ಇತ್ತಾದರೂ 2 ಲಕ್ಷಕ್ಕೂ ಹೆಚ್ಚು ಮಂದಿಯನ್ನ ಬಲಿ ತೆಗೆದುಕೊಂಡಿತ್ತು. ಹೇತಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ನಗರವನ್ನು ಬಹುತೇಕ ನೆಲಸಮಗೊಳಿಸಿಬಿಟ್ಟಿತ್ತು. ಇನ್ನೂ ಕೆಲ ನಗರಗಳೂ ಕೂಡ ತತ್ತರಿಸಿದ್ದವು. ಆ ದುರಂತದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಆ ಮಹಾ ದುರಂತದಿಂದ ಹೇತಿ ದೇಶ ಇನ್ನೂ ಚೇತರಿಕೆ ಕಂಡಿಲ್ಲ, ಆಗಲೇ ಮತ್ತೊಂದು ಭೂಕಂಪ ಅಪ್ಪಳಿಸಿದೆ.

  ಅಮೆರಿಕದ ಸಮೀಪ ಇರುವ ಹೇತಿ ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಮೆರಿಕ ಈಗಾಗಲೇ ನೆರವಿನ ಪ್ಯಾಕೇಜ್ ಪ್ರಕಟಿಸಿದ್ದಾರೆ. “ಕಷ್ಟದ ಪರಿಸ್ಥಿತಿಯಲ್ಲಿರುವ ಹೇತಿ ದೇಶಕ್ಕೆ ಈಗ ಭೂಕಂಪದ ಪೆಟ್ಟು ಬಿದ್ದಿರುವುದು ನನಗೆ ನೋವು ತಂದಿದೆ. ಈ ಸಂದರ್ಭದಲ್ಲಿ ಹೇತಿ ದೇಶಕ್ಕೆ ಅಮೆರಿಕ ನೆರವು ನೀಡುತ್ತದೆ” ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ಹೇತಿ ಪ್ರಧಾನಿ ಏರಿಯಲ್ ಹೆನ್ರಿ ಅವರು ಹೆಲಿಕಾಪ್ಟರ್ ಮೂಲಕ ಹಾನಿಗೀಡಾದ ಪ್ರದೇಶದ ಸರ್ವೇಕ್ಷಣೆ ಮಾಡಿದ್ದಾರೆ. ಒಂದು ತಿಂಗಳ ಕಾಲ ತುರ್ತು ಸ್ಥಿತಿ ಘೋಷಿಸಿರುವ ಅವರು ತಮ್ಮ ದೇಶದ ಜನತೆಗೆ ಆತಂಕಕ್ಕೊಳಗಾಗದೇ ಧೈರ್ಯದಿಂದ ಪರಿಸ್ಥಿತಿ ಎದುರಿಸುವಂತೆ ಕರೆ ನೀಡಿದ್ದಾರೆ.

  ಇದನ್ನೂ ಓದಿ:Karnataka Weather Today: ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

  ಭೂಕಂಪ ಭಾರೀ ತೀವ್ರತೆ ಇದ್ದರಿಂದ ಸುನಾಮಿ ಏಳುವ ಅಪಾಯ ಇತ್ತು. ಹೇತಿಯ ಕರಾವಳಿ ತೀರಕ್ಕೆ 10 ಅಡಿ ಎತ್ತರದ ದೈತ್ಯ ಅಲೆಗಳು ಅಪ್ಪಳಿಸಬಹುದು ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ ಎಚ್ಚರಿಕೆಯನ್ನೂ ನೀಡಿತ್ತು. ಆದರೆ, ಅದೃಷ್ಟಕ್ಕೆ ಸುನಾಮಿ ಸೃಷ್ಟಿಯಾಗಲಿಲ್ಲ.
  Published by:Latha CG
  First published: