Rani Kamalapati: ಹಬೀಬ್‌ಗಂಜ್ ನಿಲ್ದಾಣ ಈಗ ರಾಣಿ ಕಮಲಾಪತಿ; ಹೆಸರು ಬದಲಾವಣೆ ಹಿಂದಿದೆ ಕಾರಣ

ಮೊಘಲ್‌ ಸರಾಯ್‌ ರೈಲ್ವೆ ಜಂಕ್ಷನ್ ಅನ್ನು ಇತ್ತೀಚೆಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ.

ಹಬೀಬ್‌ಗಂಜ್ ನಿಲ್ದಾಣ ಈಗ ರಾಣಿ ಕಮಲಾಪತಿ

ಹಬೀಬ್‌ಗಂಜ್ ನಿಲ್ದಾಣ ಈಗ ರಾಣಿ ಕಮಲಾಪತಿ

  • Share this:
100 ಕೋಟಿ ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಿದ ಮತ್ತು ವಿಮಾನ ನಿಲ್ದಾಣದಂತಹ ಸೌಕರ್ಯಗಳನ್ನು ಒದಗಿಸಿರುವ ಮಧ್ಯಪ್ರದೇಶದ ಹಬೀಬ್‌ಗಂಜ್ (Habibganj) ನಿಲ್ದಾಣವನ್ನು ಪ್ರಧಾನಿ ಮೋದಿ (PM Modi) ಉದ್ಘಾಟಿಸಲಿದ್ದಾರೆ. ಭೋಪಾಲ್‌ನಲ್ಲಿರುವ (Bhopal) ನಿಲ್ದಾಣವನ್ನು ಗೊಂಡ ಪ್ರದೇಶದ ರಾಣಿ ಕಮಲಾಪತಿಯ (Rani Kamalapati) ಹೆಸರನ್ನು ಮರುನಾಮಕರಣ ಮಾಡಲು ನಿರ್ಧಾರಿಸಲಾಗಿದೆ. ಬಿರ್ಸಾ ಮುಂಡಾ ಸ್ಮರಣಾರ್ಥ ನವೆಂಬರ್ 15 ಅನ್ನು 'ಜಂಜಾಟಿಯ ಗೌರವ್ ದಿವಸ್' ಎಂದು ಆಚರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ನಿಲ್ದಾಣದ ಮರುನಾಮಕರಣವೂ ಆಗಿದೆ. ಅದರಂತೆ ಇನ್ಮುಂದೆ ಹಬೀಬ್‌ಗಂಜ್ ನಿಲ್ದಾಣರಾಣಿ ಕಮಲಾಪತಿ ನಿಲ್ದಾಣವಾಗಿ ಗಮನಸೆಳೆಯಲಿದೆ.

ರಾಣಿ ಕಮಲಾಪತಿ ಯಾರು..?
ರಾಣಿ ಕಮಲಾಪತಿ ಈ ಪ್ರದೇಶದ 18ನೇ ಶತಮಾನದ ಗೊಂಡ ಪ್ರದೇಶದ ರಾಣಿ. ಆಕೆ ಗಿನ್ನೋರ್‌ಗಢದ ಮುಖ್ಯಸ್ಥ ಹಾಗೂ ಗೊಂಡ ದೊರೆ ನಿಜಾಮ್ ಷಾನ ಪತ್ನಿ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಮಹಾರಾಣಿಯ ಯಾವುದೇ ಚಿತ್ರಗಳಿಲ್ಲ, ಅವರ ಸೌಂದರ್ಯವು ದಂತಕಥೆಯ ಸಂಗತಿಯಾಗಿದೆ. ಅವರು 7 ಅಂತಸ್ತಿನ ಕಮಲಾಪತಿ ಅರಮನೆಯನ್ನು ನಿರ್ಮಿಸಿದರು ಎನ್ನಲಾಗಿದ್ದು, ಅದು ಈಗ ASI- ರಕ್ಷಿತ ಸ್ಮಾರಕವಾಗಿದೆ.
ಗೊಂಡ ದಂತಕಥೆಯ ಪ್ರಕಾರ, ಬೆಳದಿಂಗಳ ರಾತ್ರಿಗಳಲ್ಲಿ, ರಾಣಿ ಕಮಲಾಪತಿ ತನ್ನ ನೀರಿನ ಪಕ್ಕದ ಅರಮನೆಯಿಂದ ಹೊರಬಂದು ಸರೋವರದ ಮೇಲೆ ಕಮಲದ ಹೂವಿನ ಮೂಲಕ ತೇಲುತ್ತಿದ್ದರು. ರೋಯಿಂಗ್ ದೋಣಿಗಳಲ್ಲಿ ಅವರನ್ನು ಹಿಂಬಾಲಿಸುತ್ತಾ 500 ಕನ್ಯೆಯರು ಭಾಗವಹಿಸುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗೊಂಡ ಸಮುದಾಯವು 1.2 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಅತಿದೊಡ್ಡ ಬುಡಕಟ್ಟು ಗುಂಪನ್ನು ಒಳಗೊಂಡಿದೆ. ಭಾಷಾಶಾಸ್ತ್ರೀಯವಾಗಿ, ಗೊಂಡರು ದ್ರಾವಿಡ ಭಾಷಾ ಕುಟುಂಬದ ದಕ್ಷಿಣ ಮಧ್ಯ ಶಾಖೆಯ ಗೊಂಡಿ-ಮಂಡ ಉಪಗುಂಪಿಗೆ ಸೇರಿದ್ದಾರೆ.

ಹಬೀಬ್‌ಗಂಜ್ ರೈಲು ನಿಲ್ದಾಣದ ಹೆಸರು ಹೇಗೆ ಬದಲಾಯಿತು..?
ಮಧ್ಯಪ್ರದೇಶ ಸರ್ಕಾರವು ಇತ್ತೀಚೆಗೆ ಮರುಅಭಿವೃದ್ಧಿಪಡಿಸಿದ ಹಬೀಬ್‌ಗಂಜ್ ನಿಲ್ದಾಣವನ್ನು 18ನೇ ಶತಮಾನದ ಗೊಂಡ ರಾಣಿ ಕಮಲಾಪತಿ ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ (MHA) ಪತ್ರ ಬರೆದಿದೆ.

ಬುಡಕಟ್ಟು ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಸ್ಮರಣಾರ್ಥ ನವೆಂಬರ್ 15 ಅನ್ನು 'ಜಂಜಾಟಿಯ ಗೌರವ್ ದಿವಸ್' ಎಂದು ಆಚರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ನಿಲ್ದಾಣವನ್ನು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯ ಸಾರಿಗೆ ಇಲಾಖೆ ಪತ್ರದಲ್ಲಿ ತಿಳಿಸಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿಲ್ದಾಣವನ್ನು ಮರುನಾಮಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದರು. ಬದಲಾದ ಹೆಸರನ್ನು ರಾಣಿ ಕಮಲಾಪತಿ ರೈಲು ನಿಲ್ದಾಣ ಎಂದು ಕರೆಯಲಾಗುವುದು ಎಂದು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಿದೆ. ರಾಣಿ ಕಮಲಾಪತಿಯನ್ನು ಗೊಂಡ ಸಮುದಾಯದ ಹೆಮ್ಮೆ ಮತ್ತು "ಭೋಪಾಲ್‌ನ ಕೊನೆಯ ಹಿಂದೂ ರಾಣಿ" ಎಂದು ಮಧ್ಯಪ್ರದೇಶ ಸಿಎಂ ಶ್ಲಾಘಿಸಿದರು.

ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲು ಸೂಚಿಸಿದ್ದ ಸಂಸದೆ

ಈ ನಿಲ್ದಾಣಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಹೆಸರನ್ನು ಮರುನಾಮಕರಣ ಮಾಡಬೇಕೆಂದು ಭೋಪಾಲ್‌ನ ಬಿಜೆಪಿ ಸಂಸದ ಪ್ರಜ್ಞಾ ಸಿಂಗ್ ಠಾಕೂರ್ ಆಗ್ರಹಿಸಿದ ನಂತರ ಈ ರೈಲು ಠಾಣೆಯನ್ನು ರಾಣಿ ಕಮಲಾಪತಿ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹೊಸ ಭೋಪಾಲ್ ಪ್ರದೇಶದಲ್ಲಿ ಇರುವ ರೈಲ್ವೆ ನಿಲ್ದಾಣದಲ್ಲಿ ಹಳೆಯ ಹೆಸರಿನ ಫಲಕಗಳನ್ನು ಬದಲಾಯಿಸುವ ಕೆಲಸವೂ ಪ್ರಾರಂಭವಾಗಿದೆ.

ಈ ನಿಲ್ದಾಣವನ್ನು 1905ರಲ್ಲಿ ನಿರ್ಮಿಸಲಾಯಿತು ಮತ್ತು ನಂತರ ಅದನ್ನು ಶಹಪುರ್ ಎಂದು ಕರೆಯಲಾಯಿತು ಎಂದು ರಾಜ್ಯದ ಸಾರ್ವಜನಿಕ ಸಂಪರ್ಕ ಇಲಾಖೆ ಟ್ವಿಟ್ಟರ್‌ನಲ್ಲಿ ಸುದ್ದಿ ಕ್ಲಿಪ್ ಅನ್ನು ಹಂಚಿಕೊಂಡಿದೆ. ಇದನ್ನು 1979ರಲ್ಲಿ ವಿಸ್ತರಿಸಿದಾಗ ಹಬೀಬ್‌ಗಂಜ್ ನಿಲ್ದಾಣ ಎಂದು ಹೆಸರಿಸಲಾಯಿತು.

ರೈಲ್ವೆ ನಿಲ್ದಾಣಗಳ ಹೆಸರುಗಳು ಹೇಗೆ ಬದಲಾಗುತ್ತವೆ..?
ಅಲಹಾಬಾದ್ ರೈಲು ನಿಲ್ದಾಣದ ಹೆಸರನ್ನು ಪ್ರಯಾಗ್‌ರಾಜ್‌ ಎಂದು ಬದಲಾಯಿಸಲಾಗಿದೆ,  ಮೊಘಲ್‌ ಸರಾಯ್‌ ರೈಲ್ವೆ ಜಂಕ್ಷನ್ ಅನ್ನು ಇತ್ತೀಚೆಗೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ.

ಇದನ್ನು ಓದಿ: ಎಮ್ಮೆ ಹಾಲು ಕೊಡ್ತಿಲ್ಲ ಅಂತ ಪೊಲೀಸರಿಗೆ ದೂರು ಕೊಟ್ಟ ರೈತ: ಆಮೇಲೆ ಏನಾಯ್ತು?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತೀಯ ರೈಲ್ವೇಯು ನಿಲ್ದಾಣವನ್ನು ಹೊಂದಿದ್ದರೂ, ಅದನ್ನು ಮರುನಾಮಕರಣ ಮಾಡುವಲ್ಲಿ ತೊಡಗುವುದಿಲ್ಲ. ರೈಲು ನಿಲ್ದಾಣದ ಮರುನಾಮಕರಣ ರಾಜ್ಯದ ವಿಷಯವಾಗಿದೆ. ರಾಜ್ಯ ಸರ್ಕಾರಗಳು ಕೇಂದ್ರ ಗೃಹ ಸಚಿವಾಲಯಕ್ಕೆ (MHA)ಗೆ ವಿನಂತಿಗಳನ್ನು ಕಳುಹಿಸುತ್ತವೆ ಮತ್ತು ನಂತರ ಬೆಳವಣಿಗೆಗಳ ಬಗ್ಗೆ ರೈಲ್ವೆ ಸಚಿವಾಲಯಕ್ಕೆ ತಿಳಿಸುವ ನಿರ್ಧಾರವನ್ನು ಸಚಿವಾಲಯ ತೆಗೆದುಕೊಳ್ಳುತ್ತದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಹೊಸ ಹೆಸರಿನೊಂದಿಗೆ ಯಾವುದೇ ನಿಲ್ದಾಣವು ಭಾರತದಲ್ಲಿ ಎಲ್ಲಿಯೂ ಅಸ್ತಿತ್ವದಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.

ಇದನ್ನು ಓದಿ: ಇಂದಿನಿಂದ ಶಬರಿಮಲೆ ದೇಗುಲ ಓಪನ್‌: ಭಕ್ತರಿಗೆ 2 ಡೋಸ್​ ವ್ಯಾಕ್ಸಿನ್​ ಕಡ್ಡಾಯ!

ನಂತರ ಏನು..?

ಹೆಸರು ಬದಲಾವಣೆಯನ್ನು ಅನುಮೋದಿಸಿದ ನಂತರ, ಭಾರತೀಯ ರೈಲ್ವೆ ಹೊಸ ನಿಲ್ದಾಣದ ಕೋಡ್ ಅನ್ನು ನೀಡುವುದು, ಕಟ್ಟಡದಲ್ಲಿ ಬೋರ್ಡ್‌ಗಳನ್ನು ಬದಲಾಯಿಸುವುದು, ಪ್ಲಾಟ್‌ಫಾರ್ಮ್ ಚಿಹ್ನೆಗಳು ಮತ್ತು ಹೊಸ ಹೆಸರನ್ನು ಅದರ ಟಿಕೆಟಿಂಗ್ ವ್ಯವಸ್ಥೆಯಲ್ಲಿ ನಮೂದಿಸುವಂತಹ ಅಗತ್ಯ ಕೆಲಸವನ್ನು ಪ್ರಾರಂಭಿಸುತ್ತದೆ. ಅಲ್ಲದೆ, ವಿವಿಧ ಭಾಷೆಗಳಲ್ಲಿ ಹೆಸರುಗಳು ಮತ್ತು ಅವುಗಳ ಸ್ಪೆಲ್ಲಿಂಗ್‌ ಅನ್ನು ರಾಜ್ಯ ಸರ್ಕಾರದಿಂದ ಅನುಮೋದಿಸಲ್ಪಟ್ಟಿರಬೇಕು.

ಭಾರತೀಯ ರೈಲ್ವೆ ವರ್ಕ್ಸ್ ಮ್ಯಾನುಯಲ್ ಪ್ರಕಾರ, “ನಿಲ್ದಾಣದ ಹೆಸರುಗಳನ್ನು ಈ ಕೆಳಗಿನ ಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ: ಪ್ರಾದೇಶಿಕ ಭಾಷೆ, ಹಿಂದಿ ಮತ್ತು ಇಂಗ್ಲಿಷ್. ಆದರೆ, ತಮಿಳುನಾಡಿನಲ್ಲಿ ವಾಣಿಜ್ಯ ವಿಭಾಗದ ನಿರ್ದೇಶನದಂತೆ ಹಿಂದಿ ಬಳಕೆಯನ್ನು ಪ್ರಮುಖ ನಿಲ್ದಾಣಗಳು ಮತ್ತು ಯಾತ್ರಾ ಕೇಂದ್ರಗಳಿಗೆ ನಿರ್ಬಂಧಿಸಲಾಗುತ್ತದೆ. ಇನ್ನೊಂದೆಡೆ, ಪ್ರಾದೇಶಿಕ ಭಾಷೆ ಹಿಂದಿಯಾಗಿರುವಲ್ಲಿ, ಹೆಸರಿನ ಫಲಕಗಳು ಹಿಂದಿ ಮತ್ತು ಇಂಗ್ಲಿಷ್‌ ಸೇರಿ 2 ಭಾಷೆಗಳಲ್ಲಿರುತ್ತವೆ..."

ಹಿಂದಿಯಲ್ಲಿ ಸ್ಟೇಷನ್ ಹೆಸರುಗಳ ಲಿಪಿಯು ದೇವನಾಗರಿ ಮತ್ತು ಆಯಾ ರಾಜ್ಯ ಸರ್ಕಾರಗಳು ಅಳವಡಿಸಿಕೊಂಡಂತೆ ಇತರ ಭಾಷೆಗಳಲ್ಲಿರುತ್ತದೆ ಎಂದೂ ತಿಳಿದುಬಂದಿದೆ.
First published: