ಬಹುಕೋಟಿ ಗುಟ್ಕಾ ಹಗರಣ; ತಮಿಳುನಾಡಿನ ಸಚಿವ, ಡಿಜಿಪಿ ಮನೆ ಮೇಲೆ ಸಿಬಿಐ ದಾಳಿ

news18
Updated:September 5, 2018, 1:54 PM IST
ಬಹುಕೋಟಿ ಗುಟ್ಕಾ ಹಗರಣ; ತಮಿಳುನಾಡಿನ ಸಚಿವ, ಡಿಜಿಪಿ ಮನೆ ಮೇಲೆ ಸಿಬಿಐ ದಾಳಿ
news18
Updated: September 5, 2018, 1:54 PM IST
-ನ್ಯೂಸ್​ 18 ಕನ್ನಡ

ಚೆನ್ನೈ,(ಸೆ.05): ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಡಿಜಿಪಿ ಟಿ.ಕೆ.ರಾಜೇಂದ್ರನ್ ಹಾಗೂ ಆರೋಗ್ಯ ಸಚಿವ ವಿಜಯ ಭಾಸ್ಕರ್ ಮನೆಗಳ ಮೇಲೆ ಬುಧವಾರ ಸಿಬಿಐ ದಾಳಿ ಮಾಡಿದೆ.

ಏಕಕಾಲದಲ್ಲಿ 32 ಕಡೆ ದಾಳಿ ನಡೆಸಲಾಗಿದ್ದು, ಹಿರಿಯ ಪೊಲೀಸ್​ ಅಧಿಕಾರಿಗಳು ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ಮಾಡಲಾಗಿದೆ. ಈ ಸಂದರ್ಭ ಕಡತ ಮತ್ತು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಗುಟ್ಕಾ ಹಗರಣ ಬೆಳಕಿಗೆ ಬಂದಿದ್ದು 2017 ರ ಜು.8 ರಂದು. ಅಂದು ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ತಮಿಳುನಾಡಿನ ಪಾನ್​ ಮಸಾಲಾ ಮತ್ತು ಗುಟ್ಕಾ ಉತ್ಪಾದಕರ ಗೋದಾಮು, ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ 250 ಕೋಟಿ ರೂ. ತೆರಿಗೆ ವಂಚನೆ ಹಗರಣವನ್ನು ಬಯಲುಗೊಳಿಸಿದ್ದರು. ದಾಳಿಯ ವೇಳೆ ಸಿಕ್ಕ ಡೈರಿಯೊಂದರಲ್ಲಿ ಯಾವೆಲ್ಲಾ ಉನ್ನತ ಅಧಿಕಾರಿಗಳಿಗೆ, ಸಚಿವರಿಗೆ ಲಂಚದ ಹಣ ಪಾವತಿಯಾಗಿದೆ ಎಂಬ ವಿವರಗಳು ಇದ್ದವು ಎನ್ನಲಾಗಿದೆ.

ಬಹುಕೋಟಿ ಗುಟ್ಕಾ ಹಗರಣವನ್ನು ಸಿಬಿಐಗೆ ವಹಿಸುವಂತೆ ಕಳೆದ ಏಪ್ರಿಲ್​ನಲ್ಲಿ ಮದ್ರಾಸ್​ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅಂತೆಯೇ ತಮಿಳುನಾಡು ಸರ್ಕಾರ ಸಿಬಿಐ ತನಿಖೆ ಆರಂಭಿಸಿ, ಕೇಂದ್ರ ಅಬಕಾರಿ ಇಲಾಖೆ ಮತ್ತು ಆಹಾರ ಭದ್ರತೆ ಇಲಾಖೆಯ ಅಪರಿಚಿತ ಅಧಿಕಾರಿಗಳ ವಿರುದ್ಧ ಮೇ ತಿಂಗಳಲ್ಲಿ ಎಫ್​ಐಆರ್​ ದಾಖಲಿಸಿತ್ತು.

2013 ರಲ್ಲಿ ತಮಿಳುನಾಡು ಸರ್ಕಾರವು ಗಟ್ಕಾ ಮತ್ತು ಪಾನ್ ಮಸಾಲಾ ಸೇರಿದಂತೆ ತಂಬಾಕಿನ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿತ್ತು. ಆದರೂ ಅಕ್ರಮವಾಗಿ ಗುಟ್ಕಾ ಮಾರಾಟ ಮಾಡಲಾಗುತ್ತಿತ್ತು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ