ಗುರುಗ್ರಾಮ (ಫೆ. 10): ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಅನುಮಾನದಲ್ಲಿ ಹೆಂಡತಿಗೆ ಗುಂಡು ಹಾರಿಸಿ, ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಮೃತ ಮಹಿಳೆ ಬಿಜೆಪಿ ನಾಯಕಿಯಾಗಿದ್ದು, ಸಾಯುವ ಮುನ್ನ ತನ್ನ ತಂಗಿಗೆ ಫೋನ್ನಲ್ಲಿ ನಡೆದ ವಿಷಯ ತಿಳಿಸಿ ಪ್ರಾಣ ಬಿಟ್ಟಿದ್ದಾರೆ.
ಹರಿಯಾಣದ ಬಿಜೆಪಿ ಕಿಸಾನ್ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿದ್ದ ಮುನೇಶ ಮಹಿಳೆ ತನ್ನ ಗಂಡನಿಂದಲೇ ಕೊಲೆಯಾಗಿದ್ದಾರೆ. ಕೌಟುಂಬಿಕ ವೈಮನಸ್ಸಿನಿಂದಾಗಿ ಗಂಡನಿಂದ ಬೇರೆಯಾಗಿ ವಾಸಿಸುತ್ತಿದ್ದ ಬಿಜೆಪಿ ನಾಯಕಿ ಮಕ್ಕಳನ್ನು ತನ್ನ ಜೊತೆಗೇ ಕರೆದುಕೊಂಡುಬಂದಿದ್ದರು. ಮಾಜಿ ಸೇನಾಧಿಕಾರಿಯಾಗಿದ್ದ ಆಕೆಯ ಗಂಡ ಸುನಿಲ್ ಗೊದಾರ್ಗೆ ತನ್ನ ಹೆಂಡತಿಯ ಮೇಲೆ ಅನುಮಾನ ಶುರುವಾಗಿತ್ತು.
ಶನಿವಾರ ರಾತ್ರಿ 9.30ಕ್ಕೆ ಆಕೆ ಅಡುಗೆಮನೆಯಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಆಗ ಆಕೆಯ ಮನೆಗೆ ಬಂದಿದ್ದ ಗಂಡ ಸುನಿಲ್ ಆಕೆ ಯಾರೋ ಪುರುಷರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಗಲಾಟೆ ಮಾಡಿದ್ದ. ಇಬ್ಬರ ನಡುವೆ ಇದೇ ವಿಷಯಕ್ಕೆ ಜಗಳ ನಡೆದಿದೆ. ಅದೇ ಕೋಪದಲ್ಲಿ ಸುನಿಲ್ ತನ್ನ ಸರ್ವಿಸ್ ರಿವಾಲ್ವರ್ ತೆಗೆದು ಹೆಂಡತಿಗೆ ಶೂಟ್ ಮಾಡಿದ್ದಾನೆ. ಈ ವೇಳೆ ತನಗೆ ಗಂಡ ಶೂಟ್ ಮಾಡಿದ್ದಾಗಿ ತಂಗಿಗೆ ಹೇಳಿದ ಮುನೇಶ್ ಅಲ್ಲೇ ಕುಸಿದುಬಿದ್ದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದ ಹೆಂಡತಿ!
ಈ ಬಗ್ಗೆ ಮೃತ ಮಹಿಳೆಯರ ಅಪ್ಪ ದಿಲೀಪ್ ಸಿಂಗ್ ಹೇಳಿಕೆ ನೀಡಿದ್ದು, ರಾಜಕೀಯದಲ್ಲಿ ತೊಡಗಿಸಿಕೊಂಡ ನಂತರ ತನ್ನ ಹೆಂಡತಿಯ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಸುನಿಲ್ ಹೇಳುತ್ತಿದ್ದ. ಆಕೆಗೆ ಬಂಟಿ ಗುಜ್ಜಾರ್ ಎಂಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಸುನಿಲ್ ಅನುಮಾನಪಟ್ಟಿದ್ದ ಎಂದು ತಿಳಿಸಿದ್ದಾರೆ.
ಘಟನೆ ನಡೆದ ವೇಳೆ ಅವರ ಮಕ್ಕಳು ಕೂಡ ಮನೆಯಲ್ಲೇ ಇದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹೆಂಡತಿಯನ್ನು ಶೂಟ್ ಮಾಡಿದ ನಂತರ ಕೈಯಲ್ಲಿ ಗನ್ ಹಿಡಿದು ಹೊರನಡೆದ ಸುನಿಲ್ ಸೆಕ್ಯುರಿಟಿ ಗಾರ್ಡ್ಗಳನ್ನೂ ಹೆದರಿಸಿದ್ದಾನೆ. ಆತ ಗೇಟಿನಿಂದ ಹೊರಹೋದ ನಂತರ ಸೆಕ್ಯುರಿಟಿಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಸುನಿಲ್ ಕಾರಿನಲ್ಲಿ ಪರಾರಿಯಾಗಿದ್ದ.
ಇದನ್ನೂ ಓದಿ: ಬೀದಿಗೆ ಬಂತು ಐಪಿಎಸ್ ಅಧಿಕಾರಿಗಳ ಕೌಟುಂಬಿಕ ಕಲಹ; ಹೆಂಡತಿ ಮನೆ ಮುಂದೆ ಧರಣಿ ಕುಳಿತ ಗಂಡನ ಮನವೊಲಿಕೆ ಯಶಸ್ವಿ
ಬಿಜೆಪಿ ನಾಯಕಿಯ ತಂದೆ ದಿಲೀಪ್ ಸಿಂಗ್ ನೀಡಿದ ದೂರಿನ ಆಧಾರದಲ್ಲಿ ಸುನಿಲ್, ಬಂಟಿ ಗುಜ್ಜಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 2001ರಲ್ಲಿ ಸುನಿಲ್ ಮತ್ತು ಮುನೇಶಾ ಮದುವೆಯಾಗಿದ್ದರು. ಬಂಟಿ ಗುಜ್ಜಾರ್ ಜೊತೆಗೆ ಆಕೆಗೆ ಸಂಬಂಧವಿದೆ ಎಂದು ತಿಳಿದ ನಂತರ ಸುನಿಲ್ ಜಗಳವಾಡಲು ಶುರುಮಾಡಿದ್ದ. ಆದರೆ, ಗುಜ್ಜಾರ್ ಜೊತೆಗೆ ತನಗೆ ಯಾವುದೇ ಅಕ್ರಮ ಸಂಬಂಧವೂ ಇಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದರು. ಇದನ್ನು ನಂಬದ ಸುನಿಲ್ ಅನುಮಾನದಿಂದ ಆಕೆಯ ಪ್ರಾಣ ತೆಗೆದಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ