ಮುಂಬೈ(ಜುಲೈ 1): ಎರಡು ದಶಕಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಬೀಳಿಸಿದ್ದ ಟಿ-ಸೀರೀಸ್ ಮ್ಯೂಸಿಕ್ ಕಂಪನಿ ಮುಖ್ಯಸ್ಥ ಗುಲ್ಷನ್ ಕುಮಾರ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಅಬ್ದುಲ್ ರೌಫ್ ಮರ್ಚೆಂಟ್ ಅವರು ಅಪರಾಧಿ ಎಂಬುದನ್ನು ಬಾಂಬೆ ಹೈಕೋರ್ಟ್ ಕೂಡ ತೀರ್ಮಾನಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತನೆನಿಸಿದ್ದ ಹಾಗೂ ಶಾರ್ಪ್ ಶೂಟರ್ ಕೂಡ ಆಗಿರುವ ಅಬ್ದುಲ್ ರೌಫ್ನಿಗೆ 2002ರಲ್ಲೇ ಟ್ರಯಲ್ ಕೋರ್ಟ್ನಿಂದ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಈತ ಪರೋಲ್ ಮೇಲೆ ಹೊರಬಂದು ತಪ್ಪಿಸಿಕೊಂಡು ಹೋಗಿದ್ದ. ಅಷ್ಟೇ ಅಲ್ಲ, ಭೂಗತವಾಗಿಯೇ ತನ್ನ ಅಪರಾಧ ಕೃತ್ಯಗಳನ್ನ ನಡೆಸಿಕೊಂಡು ಬರುತ್ತಿದ್ಧಾನೆ. ಇದೇ ವೇಳೆ, 2016ರಲ್ಲಿ ಬಾಂಗ್ಲಾದೇಶದ ಗಡಿಭಾಗದಲ್ಲಿ ಈತ ಮತ್ತೆ ಬಂಧಿತನಾದರೂ ಮತ್ತೆ ತಪ್ಪಿಸಿಕೊಂಡು ಹೋಗಿದ್ದ. ಈತನ ಕ್ರಿಮಿನಲ್ ಹಿನ್ನೆಲೆ ಹಾಗೂ ವರ್ತನೆಯನ್ನು ಬಾಂಬೆ ಹೈಕೋರ್ಟ್ ಪೀಠ ತರಾಟೆಗೆ ತೆಗೆದುಕೊಂಡಿದೆ. ಅಬ್ದುಲ್ ರೌಫ್ ಮರ್ಚೆಂಟ್ಗೆ ಶಿಕ್ಷೆಯಲ್ಲಿ ಹೆಚ್ಚು ವಿನಾಯಿತಿ ನೀಡಲು ಆಗುವುದಿಲ್ಲ ಎಂದು ನ್ಯಾ ಎಸ್ ಎಸ್ ಜಾಧವ್ ಮತ್ತು ಎನ್ ಆರ್ ಬೋರ್ಕಾ ಅವರಿಬ್ಬರಿರುವ ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಆದರೆ, ದರೋಡೆ, ಕಳ್ಳತನ ಕೃತ್ಯ ಎಸಗಿದ ಆರೋಪಕ್ಕೆ ಐಪಿಸಿ ಸೆಕ್ಷನ್ಗಳಾದ 392 ಮತ್ತು 397ರ ಅಡಿಯಲ್ಲಿ ಈತನಿಗೆ ನೀಡಲಾಗಿದ್ದ ಶಿಕ್ಷೆಯಿಂದ ಮಾತ್ರ ವಿನಾಯಿತಿ ನೀಡಲಾಗಿದೆ.
ಅಬ್ದುಲ್ ಮರ್ಚೆಂಟ್ ಸೆಷೆನ್ಸ್ ಕೋರ್ಟ್ ಅಥವಾ ಡಿಎನ್ ನಗರ್ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಬೇಕು. ತನ್ನ ಪಾಸ್ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸಬೇಕು. ಒಂದು ವೇಳೆ ಶರಣಾಗತಿ ಆಗದಿದ್ದರೆ ಸೆಷೆನ್ಸ್ ಕೋರ್ಟ್ನಿಂದ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗುತ್ತದೆ ಎಂದು ಬಾಂಬೆ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠ ಎಚ್ಚರಿಸಿದೆ.
ಇದನ್ನೂ ಓದಿ: Abhimanyu Mishra - ಅಭಿಮನ್ಯು ಮಿಶ್ರಾ ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್
ಇನ್ನು, ಬಾಂಬೆ ಹೈಕೋರ್ಟ್ ನ್ಯಾಯಪೀಠದ ತೀರ್ಪಿನಲ್ಲಿರುವ ಮತ್ತೊಂದು ಹೈಲೈಟ್ ಎಂದರೆ ಗುಲ್ಷನ್ ಕುಮಾರ್ ಅವರ ವ್ಯಾವಹಾರಿಕ ಪ್ರತಿಸ್ಪರ್ಧಿ ಟಿಪ್ಸ್ ಮ್ಯೂಸಿಕ್ ಕಂಪನಿಯ ಮುಖ್ಯಸ್ಥ ರಮೇಶ್ ತೌರಣಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದು. ಇವರನ್ನ ಕೆಳಗಿನ ಕೋರ್ಟ್ ಖುಲಾಸೆಗೊಳಿಸಿತ್ತು. ಇದನ್ನು ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಆದರೆ ಟಿಪ್ಸ್ ಮಾಲೀಕನ ನಿರ್ದೋಷಿ ಎಂಬುದನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪುನರುಚ್ಚರಿಸಿದೆ.
ಟಿ-ಸೀರೀಸ್ ಆಡಿಯೋ ಕಂಪನಿಯ ಮಾಲೀಕರಾಗಿದ್ದ ಗುಲ್ಷನ್ ಕುಮಾರ್ ಅವರನ್ನ 1997, ಆಗಸ್ಟ್ 12ರಂದು ಮುಂಬೈನ ಅಂಧೇರಿ ವೆಸ್ಟ್ನಲ್ಲಿದ್ದ ದೇವಸ್ಥಾನವೊಂದರ ಬಳಿ ಹತ್ಯೆಗೈಯಲಾಗಿತ್ತು. ಮೂವರು ವ್ಯಕ್ತಿಗಳು ದಾಳಿ ಮಾಡಿ ಗುಲ್ಷನ್ ಕುಮಾರ್ ದೇಹದ ಮೇಲೆ 16 ಬುಲೆಟ್ಗಳನ್ನ ಹೊಡೆದಿದ್ದರು. ಪರಿಣಾಮ ಗುಲ್ಷನ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರು. ಶಾರ್ಪ್ ಶೂಟರ್ ಆಗಿದ್ದ ಅಬ್ದುಲ್ ರೌಫ್ ಮರ್ಚೆಂಟ್ ಸೇರಿ 26 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದರು. ಇದರಲ್ಲಿ ಟಿಪ್ಸ್ ಮಾಲೀಕ ರಮೇಶ್ ತೌರಣಿ, ಸಂಗೀತ ನಿರ್ದೇಶಕ ನದೀಮ್ ಅಖ್ತರ್ ಸೈಫೀ ಮೊದಲಾದವರ ಹೆಸರಿತ್ತು. ನದೀಮ್ ತಪ್ಪಿಸಿಕೊಂಡು ಬ್ರಿಟನ್ ದೇಶಕ್ಕೆ ಹಾರಿಹೋದರು. ತೌರಣಿಯನ್ನು ಪೊಲೀಸರು ಬಂಧಿಸಿದರು. 2002ರಲ್ಲಿ ಟ್ರಯಲ್ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿತು. ಅದರಲ್ಲಿ ಅಬ್ದುಲ್ ರೌಫ್ ಮರ್ಚೆಂಟ್ ಅನ್ನು ಮಾತ್ರ ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಉಳಿದ ಆರೋಪಿಗಳನ್ನ ಖುಲಾಸೆಗೊಳಿಸಿತು.
ಇದನ್ನೂ ಓದಿ: ಕೋವಾಕ್ಸಿನ್-ಕೋವಿಶೀಲ್ಡ್ ಲಸಿಕೆ ಪಡೆದವರಿಗೂ ಯುರೋಪ್ ಪ್ರಯಾಣಕ್ಕೆ ಅವಕಾಶ ನೀಡಿ; ಭಾರತ ಒತ್ತಾಯ
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ