ಕಾಂಗ್ರೆಸ್ ಬಿಟ್ಟು ಕಮಲ ಮುಡಿದಿದ್ದ ಹಾರ್ದಿಕ್ ಪಟೇಲ್ ಒಂದಲ್ಲ ಎರಡಲ್ಲ, ಬರೋಬ್ಬರಿ 50 ಸಾವಿರ ಮತಗಳಿಂದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat Election Result 2022) ಜಯಭೇರಿ ಬಾರಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ (Bhupendra Patel) ಪದಗ್ರಹಣ ನಡೆಸುತ್ತಾರೆ ಎಂದು ಈಗಾಗಲೇ ಬಿಜೆಪಿ ಸ್ಪಷ್ಟಪಡಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ನಂತರ ಗುಜರಾತ್ನಲ್ಲಿ ಹಾರ್ದಿಕ್ ಪಟೇಲ್ ಎಂಬ ಯುವ ನಾಯಕತ್ವಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಮೋದಿ ನಂತರ ಗುಜರಾತ್ಗೆ ಹಾರ್ದಿಕ್ ಪಟೇಲ್ (Hardik Patel) ದೊಡ್ಡ ಮಟ್ಟದ ನಾಯಕರಾಗಿ ಹೊರಹೊಮ್ಮುವರೇ ಎಂಬ ಆಯಾಮಗಳೂ ವ್ಯಕ್ತವಾಗುತ್ತಿವೆ.
ಗುಜರಾತ್ನಲ್ಲಿ ಬಿಜೆಪಿ ಮೇಲೆ ಪಾಟೀದಾರ್ ಸಮುದಾಯ ಮುನಿಸಿಕೊಂಡಿತ್ತು. ಆದರೆ ಪಾಟೀದಾರ್ ಸಮುದಾಯದ ಮತ ಪಡೆಯುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಆದರೆ ಪಾಟೀದಾರ್ ಮತ ಬ್ಯಾಂಕ್ನ್ನು ಬಿಜೆಪಿ ಬುಟ್ಟಿಗೆ ಹಾಕಿದ್ದು ಇದೇ ಹಾರ್ದಿಕ್ ಪಟೇಲ್. ಅವರು ಬಿಜೆಪಿ ಸೇರಿದ್ದೂ ಒಂಥರಾ ವಿಚಿತ್ರವೇ!
ಮೋದಿ ಕಂಡರೆ ಕೆಂಡ ಕಾರುತ್ತಿದ್ದ ಹಾರ್ದಿಕ್
ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದಿದ್ದ ಪಾಟೀದಾರ್ ನಾಯಕ ಹಾರ್ದಿಕ್, ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅವರ ಬಿಜೆಪಿ ಸೇರ್ಪಡೆಗೆ ಸ್ವತಃ ಬಿಜೆಪಿಯ ಮೂಲ ಕಾರ್ಯಕರ್ತರಿಂದಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಸೇರ್ಪಡೆಗೂ ಮುನ್ನ ಹಾರ್ದಿಕ್ ಪಟೇಲ್ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರನ್ನೂ ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು.
ಯುವ ನಾಯಕ ಎಂದೇ ಬಿಂಬಿತರಾಗಿದ್ರು
ಪಾಟೀದಾರ್ ಮೀಸಲಾತಿ ಚಳವಳಿಯಿಂದ ಮುನ್ನೆಲೆಗೆ ಬಂದವರು ಹಾರ್ದಿಕ್ ಪಟೇಲ್. ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ನಡೆಸಿದ್ದ ಹೋರಾಟದಿಂದ ಹಾರ್ದಿಕ್ ಭಾರೀ ಹೆಸರು ಗಳಿಸಿದ್ದರು. ಈ ಹೋರಾಟದಿಂದ ಗುಜರಾತ್ನ ಯುವ ಸಮುದಾಯದ ನಾಯಕ ಎಂದೇ ರಾಷ್ಟ್ರದಾದ್ಯಂತ ಬಿಂಬಿತವಾಗಿದ್ದರು.
ಕಾಂಗ್ರೆಸ್ನಲ್ಲೇ ಮೂಲೆಗುಂಪು
ಈ ಚಳವಳಿಯ ಮೂಲಕ ರಾಜಕೀಯಕ್ಕೆ ಜಿಗಿದ ಹಾರ್ದಿಕ್ ಪಟೇಲ್ ಮೊದಲು ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್ನ ನಾಯಕತ್ವದ ಜೊತೆ ಅವರಿಗೆ ಹೊಂದಾಣಿಕೆ ಆಗಲಿಲ್ವಂತೆ. ಅಲಲ್ದೇ ಕಾಂಗ್ರೆಸ್ ನಾಯಕರಿಂದಲೇ ಅವರು ಮೂಲೆಗುಂಪಾಗಿದ್ದರು. ಇದೇ ಕಾರಣದಿಂದ ಕಾಂಗ್ರೆಸ್ನಿಂದ ಬಿಜೆಪಿಗೆ ಜಿಗಿದ ಹಾರ್ದಿಕ್ಗೆ ಭಾರೀ ಸ್ವಾಗತ ಸಿಕ್ಕಿತು. ಆದರೆ ಅವರಿಗೆ ಬಿಜೆಪಿಯ ಮೂಲ ಕಾರ್ಯಕರ್ತರಿಂದ ಅಸಮಧಾನದ ಹೊಗೆ ಎದ್ದಿತ್ತು.
ಬಿಜೆಪಿಯಿಂದ ಭರ್ಜರಿ ಆಫರ್!
ನಂತರ ಗುಜರಾತ್ನಲ್ಲಿ ಚುನಾವಣಾ ಕಾವು ನಿಧಾನವಾಗಿ ಹೆಚ್ಚುತ್ತಾ ಸಾಗಿತ್ತು. ಹಾರ್ದಿಕ್ ಪಟೇಲ್ರನ್ನು ಪಾಟೀದಾರ ಸಮುದಾಯದ ಮತಬೇಟೆ ನಡೆಸಲೆಂದೇ ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ ಎಂಬುದು ಆಗೆಲ್ಲ ಖಚಿತವಾಗಿತ್ತು. ಅಲ್ಲದೇ ಬಿಜೆಪಿ ಹಾರ್ದಿಕ್ ಪಟೇಲ್ ಅವರಿಗೆ ವಿರಾಮಗಾಂ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಹ ಘೋಷಿಸಿತ್ತು.
ವಿವಿಧ ಭರವಸೆ ನೀಡಿದ್ದ ಹಾರ್ದಿಕ್ ಪಟೇಲ್
ಚುನಾವಣಾ ಪ್ರಚಾರದ ವೇಳೆ ಹಾರ್ದಿಕ್ ಪಟೇಲ್ ವಿರಾಮಗಾಂ ಜಿಲ್ಲೆಯ ಸ್ಥಾನಮಾನ ನೀಡುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಅಷ್ಟೇ ಅಲ್ಲ, ಆಧುನಿಕ ಕ್ರೀಡಾ ಸಂಕೀರ್ಣ, ಶಾಲೆಗಳು, ಮಂಡಲ್ ತಾಲೂಕು, ನಲ್ ಸರೋವರದ ಬಳಿ ತಲಾ 50 ಹಾಸಿಗೆಗಳ ಆಸ್ಪತ್ರೆಗಳು, ವಿರಾಮಗಾಂ ಪಟ್ಟಣದಲ್ಲಿ ಸರ್ಕಾರದ ವತಿಯಿಂದ 1,000 ಮನೆಗಳು, ಕೈಗಾರಿಕಾ ವಸಾಹತು, ಉದ್ಯಾನಗಳು ಇತ್ಯಾದಿಗಳನ್ನು ನಿರ್ಮಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ಬಿಜೆಪಿ ಗೆಲುವಿಗೆ ಇದೆ ಹತ್ತಾರು ಕಾರಣ
ಗುಜರಾತ್ ಐತಿಹಾಸಿಕ ಗೆಲುವಿಗೆ ಹತ್ತಾರು ಕಾರಣಗಳಿವೆ. ಬಿಜೆಪಿಯ ಪ್ರತಿಹೆಜ್ಜೆಯಲ್ಲೂ ಗೆಲುವಿನ ಲೆಕ್ಕಾಚಾರ ಹಾಕಿತ್ತು. ಹೋರಾಟದ ಮೂಲಕವೇ ಮೇಲೆ ಬಂದ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ಗೆ ಮಣೆ ಹಾಕಿತ್ತು. ಸೌರಾಷ್ಟ್ರ ಭಾಗದಲ್ಲಿ ಎಎಪಿ ಎಂಟ್ರಿಯಿಂದ ಕಾಂಗ್ರೆಸ್ ಬಲ ಕಳೆದುಕೊಂಡಿದ್ದು, ಬಿಜೆಪಿಗೆ ವರವಾಯ್ತು.
ನರೇಂದ್ರ ಮೋದಿ ಆಧುನಿಕ ಗುಜರಾತ್ನ ನಿರ್ಮಾತೃ ಎಂಬ ಸಂದೇಶ ವರ್ಕೌಟ್ ಆಯ್ತು. ಬಿಜೆಪಿ ಸಂಘಟನೆ, ದೊಡ್ಡಮಟ್ಟದ ಪ್ರಚಾರದ ಮೆರವಣಿಗೆಗಳು, ಕಾಂಗ್ರೆಸ್ನಲ್ಲಿ ಪ್ರಚಾರದ ಕೊರತೆ, ಚುನಾವಣೆ ಮರೆತು ಭಾರತ್ ಜೋಡೋ ಯಾತ್ರೆ ನಡೆಸಿದ್ದು, ಬಿಜೆಪಿ ಸಕ್ಸಸ್ಗೆ ಕಾರಣವಾಯ್ತು. ಅದರಲ್ಲೂ ಮೋದಿಗೆ ರಾವಣನ ಜೊತೆ ಹೋಲಿಕೆ ಮಾಡಿದ್ದು ಕಾಂಗ್ರೆಸ್ಗೆ ಪೆಟ್ಟು ಕೊಟ್ಟಿತು.
ಹಾರ್ದಿಕ್ಗೆ ಸಿಗುತ್ತಾ ಬಿಜೆಪಿ ಚುಕ್ಕಾಣಿ?
ಆದರೆ ಬಿಜೆಪಿ ತಾನು ಕಾರ್ಯಕರ್ತರ ಪಕ್ಷ ಎಂಬುದನ್ನು ಗುಜರಾತ್ನಲ್ಲೂ ಸಾರಿದೆ. ಹಲವು ಘಟಾನುಘಟಿ ನಾಯಕರಿಗೆ ಟಿಕೆಟ್ ನಿರಾಕರಿಸಿ ಸ್ಪಷ್ಟ ಸಂದೇಶ ರವಾನಿಸಿತ್ತು. ಹೀಗಾಗಿ ಬಿಜೆಪಿಯಿಂದ ಹಾರ್ದಿಕ್ ಪಟೇಲ್ ಗೆದ್ದರೇ ವಿನಃ, ಸ್ವತಃ ಹಾರ್ದಿಕ್ ಪಟೇಲ್ಗೆ ಬಿಜೆಪಿ ಚುಕ್ಕಾಣಿ ನೀಡುವ ಕುರಿತು ಅನುಮಾನಗಳಿದ್ದೇ ಇದೆ. ಆದರೆ ಹಾರ್ದಿಕ್ ಪಟೇಲ್ಗೆ ಸಚಿವ ಸಂಪುಟದಲ್ಲಿ ಉನ್ನತ ಜವಾಬ್ದಾರಿ ಸಿಗುವುದಂತೂ ಬಹುತೇಕ ಖಚಿತಗೊಂಡಿದೆ.
ಇಷ್ಟು ದೊಡ್ಡ ಗೆಲುವಿನ ನಂತರವೂ ಹಾರ್ದಿಕ್ ಪಟೇಲ್ ಜಯಭೇರಿ ಇದೀಗ ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಸ್ವಲ್ಪ ಅಸಮಾಧಾನವನ್ನೂ ಉಂಟುಮಾಡಿದೆ ಎನ್ನಲಾಗುತ್ತಿದೆ. ಇದಕ್ಕೆಲ್ಲ ಕಾರಣ ಹುಡುಕಿ ಹೊರಟರೆ ಸ್ವತಃ ಹಾರ್ದಿಕ್ ಪಟೇಲ್ ಅವರೇ ಎದುರು ನಿಲ್ಲುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ