ದೇಶದಲ್ಲಿ ಹೊಸ ರಾಷ್ಟ್ರೀಯ ಪಕ್ಷವೊಂದರ ಉಗಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಹೌದು, ಇಂದಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತಬೇಟೆಯ (Gujarat Election Result 2022) ಮೂಲಕ ಆಮ್ ಆದ್ಮಿ ಪಕ್ಷ (AAP) ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲು ಸಿದ್ಧತೆ ನಡೆಸಿದೆ. ಎಎಪಿ ರಾಷ್ಟ್ರೀಯ ಪಕ್ಷದ (National Party) ಸ್ಥಾನಮಾನವನ್ನು ಪಡೆಯಲು ಗುಜರಾತ್ನಲ್ಲಿ ಕನಿಷ್ಠ ಶೇಕಡಾ 6 ರಷ್ಟು ಮತ ಗಳಿಸಬೇಕಿದೆ. ಜೊತೆಗೆ ಗುಜರಾತ್ನಲ್ಲಿ (Gujarat Elections) ಕನಿಷ್ಠ ಎರಡು ಸ್ಥಾನಗಳನ್ನು ಗೆಲ್ಲುವ ಅಗತ್ಯವಿದೆ.
ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಪ್ರಕಾರ ಲೇಟೆಸ್ಟ್ ಮಾಹಿತಿಯಂತೆ ಗುಜರಾತ್ನಲ್ಲಿ ಎಎಪಿ ಸುಮಾರು 12% ಮತಗಳನ್ನು ಪಡೆದುಕೊಂಡಿದೆ. ಜೊತೆಗೆ 12.20 ಕ್ಕೆ ಬಂದ ಮಾಹಿತಿ ಪ್ರಕಾರ ಗುಜರಾತ್ ಅಸೆಂಬ್ಲಿಯ 182 ಸ್ಥಾನಗಳ ಪೈಕಿ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಗುಜರಾತ್ನ ಎಲ್ಲ 182 ವಿಧಾನಸಭಾ ಕ್ಷೇತ್ರಗಳಲ್ಲೂ ತನ್ನ ಸ್ಪರ್ಧಿಗಳನ್ನು ಕಣಕ್ಕಿಳಿಸಿದ್ದ ಆಮ್ ಆದ್ಮಿ, ಬಿಜೆಪಿಯನ್ನೇ ಟಾರ್ಗೆಟ್ ಮಾಡಿ ಪ್ರಚಾರ ನಡೆಸಿತ್ತು.
2012ರಲ್ಲಿ ಹುಟ್ಟಿದ್ದ ಆಮ್ ಆದ್ಮಿ ಪಕ್ಷ ಕೇವಲ 10 ವರ್ಷಗಳಲ್ಲಿ ಈ ಸಾಧನೆ ಮಾಡಿದಂತಾಗಿದೆ.
ಮನೀಷ್ ಸಿಸೋಡಿಯಾ ಹೇಳಿದ್ದೇನು?
ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸುದ್ದಿಗಾರರ ಜೊತೆ ಮಾತನಾಡಿ, ಗುಜರಾತ್ನಲ್ಲಿ ಗಳಿಸುವ ಮತಗಳಿಂದ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುವ ಭರವಸೆ ವ್ಯಕ್ತಪಡಿಸಿದ್ದರು.
ರಾಷ್ಟ್ರೀಯ ಪಕ್ಷವಾಗಲು ಅಗತ್ಯ ಅರ್ಹತೆಗಳೇನು?
ಯಾವುದೇ ಒಂದು ಪಕ್ಷ ರಾಷ್ಟ್ರೀಯ ಪಕ್ಷವಾಗಲು ಮೂರು ಷರತ್ತುಗಳನ್ನು ಚುನಾವಣಾ ಆಯೋಗ ಮುಂದಿಡುತ್ತದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಗಳಿಸಲು, ಒಂದು ರಾಜಕೀಯ ಪಕ್ಷವು ಕನಿಷ್ಟ ನಾಲ್ಕು ರಾಜ್ಯಗಳಲ್ಲಿ ಗುರುತಿಸಲ್ಪಡಬೇಕು.
ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಮತ್ತು ಶೇ. 6 ರಷ್ಟು ಮತಗಳನ್ನು ಆಯಾ ಪಕ್ಷವು ಪಡೆಯಬೇಕು. ಶೇ. 3ರಷ್ಟು ವಿಧಾನಸಭಾ ಸ್ಥಾನಗಳನ್ನು ಅಥವಾ 3 ವಿಧಾನಸಭಾ ಸ್ಥಾನಗಳಲ್ಲಿ ಯಾವುದು ಹೆಚ್ಚೋ ಅದನ್ನು ಗೆಲ್ಲಬೇಕು. ಇನ್ನೂ ಒಂದು ಷರತ್ತೆಂದರೆ ಶೇ. 8ಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಬೇಕು. ಆಗ ಮಾತ್ರ ಪಕ್ಷವೊಂದು ರಾಷ್ಟ್ರೀಯ ಸ್ಥಾನಮಾನವನ್ನು ಪಡೆಯಬಹುದು.
ಗುಜರಾತ್ ಫಲಿತಾಂಶದ ವಿವರ ಇಲ್ಲಿದೆ ನೋಡಿ
ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಚಿತ್ರಣ ನಿಚ್ಚಳವಾಗಿದ್ದು, ಭಾರತೀಯ ಜನತಾ ಪಕ್ಷ ಏಳನೇ ಬಾರಿಗೆ ಗೆಲುವು ಸಾಧಿಸುವ ಲಕ್ಷಣ ಕಾಣುತ್ತಿದೆ. ಇಲ್ಲಿಯವರೆಗಿನ ಚುನಾವಣಾ ಫಲಿತಾಂಶಗಳ ಪ್ರಕಾರ, ಗುಜರಾತ್ನಲ್ಲಿ ಬಿಜೆಪಿ ಬಹುಮತ ಪಡೆದಿದ್ದು, ಪಕ್ಷ ಈಗ ಸರ್ಕಾರ ರಚನೆಯ ಕಸರತ್ತಿನಲ್ಲಿ ತೊಡಗಿದೆ. ಇದೇ ವೇಳೆ ಗುಜರಾತ್ನಲ್ಲಿ ಡಿ.12ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಭೂಪೇಂದ್ರಭಾಯಿ ಪಟೇಲ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಘೋಷಿಸಿದ್ದಾರೆ.
ಇದನ್ನೂ ಓದಿ: Gujarat Election Result 2022: ಈ 10 ಜನಪ್ರಿಯ ನಾಯಕರ ಪ್ರತಿಷ್ಠೆ ಕಣಕ್ಕೆ, ಫಲಿತಾಂಶದಿಂದ ಭವಿಷ್ಯ ನಿರ್ಧಾರ
ಬಿಜೆಪಿ ಮೇಲೆ ಅಚಲವಾದ ನಂಬಿಕೆ ಎಂದ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್
ಮತ್ತೊಂದೆಡೆ ಗುಜರಾತ್ ವಿಧಾನಸಭೆ ಚುನಾವಣೆಗೆ ಜನಾದೇಶ ಸ್ಪಷ್ಟವಾಗಿದೆ ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಎರಡು ದಶಕಗಳಿಂದ ನಡೆಯುತ್ತಿರುವ ಗುಜರಾತ್ನ ಈ ಅಭಿವೃದ್ಧಿ ಯಾತ್ರೆಯನ್ನು ಮುಂದುವರಿಸಲು ಇಲ್ಲಿನ ಜನರು ಮನಸ್ಸು ಮಾಡಿದ್ದಾರೆ. ಇಲ್ಲಿನ ಜನತೆ ಮತ್ತೊಮ್ಮೆ ಬಿಜೆಪಿ ಮೇಲೆ ಅಚಲವಾದ ನಂಬಿಕೆ ಇಟ್ಟಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರ ಶ್ರಮಕ್ಕೆ ಸಂದ ಜಯ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ