ಗುಜರಾತ್: ಪ್ರಪಂಚ ಎಷ್ಟೇ ಮುಂದುವರಿದರೂ ಕೆಲವು ಜನರಲ್ಲಿ ಮೂಢನಂಬಿಕೆ (Superstition) ಇನ್ನೂ ಗಾಢವಾಗಿ ಬೇರೂರಿದೆ. ವಿಜ್ಞಾನ, ತಂತ್ರಜ್ಞಾನ (Science, Technology) ಸಾಕಷ್ಟು ಪ್ರಗತಿ ಕಂಡಿರುವ ಈ ಕಾಲದಲ್ಲಿ ಆರೋಗ್ಯ ಸಮಸ್ಯೆಗಳಿಗೆ (Health Issues), ಕಾಯಿಲೆಗೆ ಪರಿಹಾರಕ್ಕಾಗಿ ಮಾಟ ಮಂತ್ರ ಅಂತೆಲ್ಲಾ ಹೋಗುವವರೂ ಇನ್ನೂ ಇದ್ದಾರೆ. ಅಲ್ಲದೆ ನಿಧಿ ಆಸೆಗಾಗಿಯೂ ನರಬಲಿ ಕೊಟ್ಟ ಹಲವು ಉದಾಹರಣೆ ನಮ್ಮ ಮುಂದಿದೆ. ಆದರೆ ಮೂಢನಂಬಿಕೆಗೆ ಒಳಗಾಗಿ ತಾವೇ ತಮ್ಮ ರುಂಡ ಕತ್ತರಿಸಿಕೊಂಡಿರುವ ಅಘಾತಕಾರಿ ಘಟನೆ (Horrific Incident) ಗುಜರಾತ್ನ ರಾಜ್ಕೋಟ್ನಲ್ಲಿ (Gujarat’s Rajkot) ಬೆಳಕಿಗೆ ಬಂದಿದೆ.
ರಾಜ್‌ಕೋಟ್ ಜಿಲ್ಲೆಯ ವಿಂಚಿಯಾ ಗ್ರಾಮದ ತೋಟದ ಮನೆಯೊಂದರಲ್ಲಿ ಈ ದಾರುಣ ಘಟನೆ ನಡೆದಿದ್ದು, ಹೇಮುಭಾಯ್ ಮತ್ತು ಹನ್ಸಾಬೆನ್ ಎಂಬ ದಂಪತಿ ತಮ್ಮ ತಲೆಯನ್ನೇ ಕತ್ತರಿಸಿಕೊಂಡು ಸಾವನ್ನಪ್ಪಿದ್ದಾರೆ. ಈ ದಂಪತಿ ಕಳೆದ ಒಂದು ವರ್ಷದಿಂದ ತಮ್ಮ ಗುಡಿಸಿಲಿನಲ್ಲೇ ಪ್ರತಿದಿನವೂ ದೇವರ ಪೂಜೆ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ಭಾಗವಾಗಿ ದಂಪತಿ ದೇವರನ್ನು ಮೆಚ್ಚಿಸುವುದಕ್ಕೆ ತಮ್ಮ ಶಿರಚ್ಛೇದನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆ ಪತ್ರ ಪತ್ತೆ
ಈ ದಂಪತಿ ಸಾವನ್ನಪ್ಪಿರುವ ಸ್ಥಳದಲ್ಲಿ ಪೊಲೀಸರಿಗೆ ಪತ್ರವೊಂದು ದೊರೆತಿದೆ. ಅದರಲ್ಲಿ ತಾವೂ ದೇವರಿಗಾಗಿ ತಮ್ಮ ಜೀವವನ್ನು ಅರ್ಪಿಸುತ್ತಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆ ಕತ್ತರಿಸಿಕೊಂಡಿದ್ದು ಹೇಗೆ?
ದಂಪತಿ ತಮ್ಮ ತಲೆಯನ್ನು ಕತ್ತರಿಸಿಕೊಳ್ಳಲು ಜಿಲೋಟಿನ್ (Guillotine) ಯಂತ್ರದಂತಹ ಸಾಧನವನ್ನು ಸಿದ್ಧಪಡಿಸಿಕೊಂಡಿದ್ದಾರೆ. ಇದರ ಕೆಳಗೆ ಹೋಮಕುಂಡವನ್ನು ಸಿದ್ಧಪಡಿಸಿದ್ದಾರೆ. ಯಂತ್ರಕ್ಕೆ ಹಗ್ಗವನ್ನು ಕಟ್ಟಿ ಅದನ್ನು ಎಳೆದು ಬಿಟ್ಟ ತಕ್ಷಣ ತಮ್ಮ ಇಬ್ಬರ ರುಂಡಗಳು ದೇಹದಿಂದ ಬೇರ್ಪಟ್ಟು ನೇರವಾಗಿ ಹೋಮಕುಂಡಕ್ಕೆ ಹೋಗಿ ಬೀಳುವಂತೆ ಯೋಜನೆ ರೂಪಿಸಿಕೊಂಡಿದ್ದರು ಎಂದು ವಿಂಚಿಯಾ ಸನ್ ಇನ್ಸ್ಪೆಕ್ಟರ್ ಶಂಕಿಸಿದ್ದಾರೆ.
ಅಗ್ನಿಕುಂಡದಲ್ಲಿ ಬಿದ್ದಿದ್ದ ಒಂದು ರುಂಡ
ಇನ್ನೂ ಈ ದಂಪತಿ ಮಾಡಿಕೊಂಡಿದ್ದ ಯೋಜನೆಯಂತೆ ತಮ್ಮನ್ನು ತಾವೂ ಬಲಿಕೊಟ್ಟುಕೊಂಡಿದ್ದಾರೆ. ಆದರ ಸ್ಥಳ ಪರಿಶೀಲನೆ ವೇಳೆ ಮಹಿಳೆ ತಲೆ ಮಾತ್ರ ಅಗ್ನಿಕುಂಡದಲ್ಲಿ ಪತ್ತೆಯಾಗಿದೆ. ಪತಿಯ ರುಂಡ ಗುಡಿಸಿಲಿನ ಒಂದು ಮೂಲೆಯಲ್ಲಿ ಬಿದ್ದಿದೆ. ಈ ಘಟನೆ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯಾಹ್ನದ ಮಧ್ಯೆ ನಡೆದಿದೆ ಎನ್ನಲಾಗಿದೆ.
ಒಂದು ವರ್ಷದಿಂದ ಪೂಜೆಯಲ್ಲಿ ತೊಡಗಿದ್ದ ಕುಟುಂಬ
ದಂಪತಿ ಕಳೆದ ಒಂದು ವರ್ಷದಿಂದ ಊರನ್ನು ಬಿಟ್ಟು ಹೊಲದಲ್ಲಿನ ಗುಡಿಸಿಲಿನಲ್ಲಿ ವಾಸವಾಗಿದ್ದರು. ಈ ವೇಳೆ ಪ್ರತಿದಿನವೂ ಹೋಮ ಹವನ ಮಾಡುತ್ತಿದ್ದರು ಎಂದು ಸ್ಥಳೀಯರ ಮಾಹಿತಿ ನೀಡಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ತಮ್ಮ ಜೀವವನ್ನು ಬಲಿಕೊಟ್ಟಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಗಿಲೋಟಿನ್ ಯಂತ್ರ ಎಂದರೇನು?
ಫ್ರೆಂಚ್ ಕ್ರಾಂತಿಯ ಸಮಯದಲ್ಲಿ (1789) ಶಿರಚ್ಛೇದನ ದಂಡನೆಯನ್ನು ಕಾರ್ಯಗತಗೊಳಿಸಲು ಬಳಸುತ್ತಿದ್ದ ಒಂದು ಯಂತ್ರ. ಮೊದಲಿಗೆ ಈ ಯಂತ್ರವನ್ನು ಲೋಹದ ತಗಡು, ಲೋಹದ ಸರಳು, ಕಾಗದದ ರಟ್ಟು ಮುಂತಾದುವನ್ನು ಕತ್ತರಿಸಲು ಬಳಸಲಾಗುತ್ತಿತ್ತು. ಇದಕ್ಕೆ ಕೊಯ್ಯುವ ಯಂತ್ರ (ಷಿಯರಿಂಗ್ ಮಷೀನ್) ಅಥವಾ ಕೊಯ್ಲುಒತ್ತಗೆ (ಷಿಯಾರಿಂಗ್ ಪ್ರೆಸ್) ಎಂಬ ಹೆಸರುಗಳೂ ಇದ್ದವು. ಇದನ್ನು ಶಿರಚ್ಛೇದನಕ್ಕೋಸ್ಕರ ಬಳಸಬಹುದೆಂದು ಜೋಸೆಫ್ ಇಗ್ನೇಸ್ ಗಿಲೋಟೀನ್ ಎಂಬ ಪ್ರೆಂಚ್ ವೈದ್ಯ ಸಲಹೆ ನೀಡಿದ್ದ ಎಂದು ತಿಳಿದುಬಂದಿದೆ. ಮರಣದಂಡನೆಯ ಸಂದರ್ಭದಲ್ಲಿ ಅಪರಾಧಿಗಳಿಗೆ ಸಾಧ್ಯವಾದಷ್ಟು ಕಡಿಮೆ ನೋವು ಉಂಟಾಗಲಿ ಎನ್ನುವುದು ಸಲಹೆಯ ಉದ್ದೇಶವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ