ಜಿಎಸ್​ಟಿ 21ನೇ ಶತಮಾನದ ಅತಿದೊಡ್ಡ ಹುಚ್ಚುತನ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

ಭಾರತದಲ್ಲಿ ಆಗಾಗ್ಗೆ ಶೇ. 8ರ ದರದಲ್ಲಿ ಆರ್ಥಿಕ ಅಭಿವೃದ್ಧಿ ಹೊಂದಲು ಪಿ.ವಿ. ನರಸಿಂಹ ರಾವ್ ಅವರು ತಂದ ಸುಧಾರಣಾ ಕ್ರಮಗಳೇ ಕಾರಣ. ಇದಕ್ಕಾಗಿ ಅವರಿಗೆ ಭಾರತ ರತ್ನ ಕೊಡಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ಧಾರೆ.

Vijayasarthy SN | news18
Updated:February 19, 2020, 6:34 PM IST
ಜಿಎಸ್​ಟಿ 21ನೇ ಶತಮಾನದ ಅತಿದೊಡ್ಡ ಹುಚ್ಚುತನ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
  • News18
  • Last Updated: February 19, 2020, 6:34 PM IST
  • Share this:
ಹೈದರಾಬಾದ್(ಫೆ. 19): ಮೋದಿ ಸರ್ಕಾರದ ಪ್ರಮುಖ ಸುಧಾರಣಾ ಕ್ರಮಗಳಲ್ಲಿ ಒಂದೆನಿಸಿರುವ ಜಿಎಸ್​ಟಿ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಿಎಸ್​ಟಿ ಜಾರಿಗೊಳಿಸಿತ್ತು. ಆದರೆ, ಸುಬ್ರಮಣಿಯನ್ ಸ್ವಾಮಿ ಅವರು ಈ ಜಿಎಸ್​ಟಿಯನ್ನು 21ನೇ ಶತಮಾನದ ಅತಿದೊಡ್ಡ ಹುಚ್ಚುತನದ ಕ್ರಮ ಎಂದು ಬಣ್ಣಿಸಿದ್ದಾರೆ. ಹಾಗೆಯೇ, ಇನ್ನತ್ತು ವರ್ಷದಲ್ಲಿ ಭಾರತ ಆರ್ಥಿಕವಾಗಿ ಸೂಪರ್​ಪವರ್ ದೇಶವಾಗಲು ಸಾಧ್ಯವಿದೆ ಎಂದೂ ಹೇಳಿದರು.

“ಬಂಡವಾಳ ಹೂಡುವವರನ್ನು ಉತ್ತೇಜಿಸಬೇಕು. ಅವರಿಗೆ ಆದಾಯ ತೆರಿಗೆ, ಜಿಎಸ್​ಟಿ ಮೂಲಕ ಭಯ ಹುಟ್ಟಿಸಬಾರದು. ಈ ಜಿಎಸ್​ಟಿ ಎಂಬುದು 21ನೇ ಶತಮಾನದ ಅತಿದೊಡ್ಡ ಹುಚ್ಚುತನವಾಗಿದೆ. ಇದು ಎಷ್ಟು ಸಂಕೀರ್ಣವಾಗಿದೆ ಎಂದರೆ ಯಾವ ಫಾರ್ಮ್ ಅನ್ನು ಎಲ್ಲಿ ಭರ್ತಿ ಮಾಡಬೇಕೆಂದು ಯಾರಿಗೂ ಗೊತ್ತಿಲ್ಲ.

“ಈ ಜಿಎಸ್​ಟಿ ಫಾರ್ಮ್ ಅನ್ನು ಕಂಪ್ಯೂಟರ್​ಗೆ ಅಪ್​ಲೋಡ್ ಮಾಡಬೇಕೆಂದು ಹೇಳುತ್ತಾರೆ. ರಾಜಸ್ಥಾನದ ಬಾರ್ಮರ್ ಪ್ರದೇಶದಿಂದ ಬಂದವರೊಬ್ಬರು ತಮ್ಮಲ್ಲಿ ವಿದ್ಯುತ್ ಇಲ್ಲ, ಹೇಗೆ ಅಪ್​ಲೋಡ್ ಮಾಡೋದು ಎಂದು ಕೇಳುತ್ತಾರೆ? ನಿಮ್ಮ ತಲೆಗೆ ಅಪ್​ಲೋಡ್ ಮಾಡಿಕೊಂಡು ಪ್ರಧಾನ ಮಂತ್ರಿ ಬಳಿ ಹೋಗಿ ಹೇಳಿ ಎಂದು ನಾನು ಹೇಳಿದೆ” ಎಂದು ಸುಬ್ರಮಣಿಯನ್ ಸ್ವಾಮಿ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟರು.

ಇದನ್ನೂ ಓದಿ: ಅಮೆರಿಕವನ್ನು ನೀವು ಉತ್ತಮವಾಗಿ ನಡೆಸಿಕೊಂಡಿಲ್ಲ: ಭಾರತ ಭೇಟಿಗೂ ಮೊದಲು ಡೊನಾಲ್ಡ್​ ಟ್ರಂಪ್​ ಅಸಮಾಧಾನ

ಪ್ರಜ್ಞಾ ಭಾರತಿ ಸಂಸ್ಥೆ ಆಯೋಜಿಸಿದ “ಇಂಡಿಯಾ – ಆ್ಯನ್ ಎಕನಾಮಿಕ್ ಸೂಪರ್​ಪವರ್ ಬೈ 2030” ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು 2030ರಷ್ಟರಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಬೇಕಾದರೆ ಶೇ. 10ರ ವೇಗದಲ್ಲಿ ಜಿಡಿಪಿ ವೃದ್ಧಿಯಾಗಬೇಕು ಎಂದರು.

“ಭಾರತ ಸೂಪರ್ ಪವರ್ ದೇಶವಾಗಬೇಕಾದರೆ ಮುಂದಿನ ಹತ್ತು ವರ್ಷ ನಮ್ಮ ಆರ್ಥಿಕತೆ ಶೇ. 10ರ ವಾರ್ಷಿಕ ದರದಲ್ಲಿ ಬೆಳೆಯಬೇಕಿದೆ. ಆಗ ಚೀನಾವನ್ನು ಹಿಂದಿಕ್ಕಬಹುದು. ಹಾಗೇ ಅದನ್ನು ಮುಂದುವರಿಸಿದರೆ ಮುಂದಿನ 50 ವರ್ಷದಲ್ಲಿ ಅಮೆರಿಕವನ್ನೂ ಹಿಂದಿಕ್ಕಿ ವಿಶ್ವದ ನಂಬರ್ ಒನ್ ಆರ್ಥಿಕ ಶಕ್ತ ದೇಶವಾಗಬಹುದು” ಎಂದು ಮಾಜಿ ಜನತಾ ಪಕ್ಷ ಅಧ್ಯಕ್ಷರೂ ಆದ ಅವರು ಅಭಿಪ್ರಾಯಪಟ್ಟರು.

ಪಿ.ವಿ. ನರಸಿಂಹರಾವ್​ಗೆ ಭಾರತ ರತ್ನ ಕೊಡಿ:ಈ ವಿಚಾರ ಸಂಕಿರಣದಲ್ಲಿ ಸುಬ್ರಮಣಿಯನ್ ಸ್ವಾಮಿ ಅವರು ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹ ರಾವ್ ಅವರನ್ನು ಬಹುವಾಗಿ ಪ್ರಶಂಸಿಸಿದರು. ಅವರಿಗೆ ಭಾರತ ರತ್ನ ಪ್ರಶಸ್ತಿ ಸಂದಾಯವಾಗಬೇಕು ಎಂದೂ ಆಗ್ರಹಿಸಿದರು.

ಇದನ್ನೂ ಓದಿ: ಸಿಎಂ ಕೇಜ್ರಿವಾಲ್​​​-ಅಮಿತ್​​ ಶಾ ಮೊದಲ ಭೇಟಿ: ದೆಹಲಿ ಅಭಿವೃದ್ದಿಗೆ ಒಟ್ಟಾಗಿ ಕೆಲಸ ಮಾಡುವ ಶಪಥ

ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ಧಾಗ ಮತ್ತು ಅವರ ಅವಧಿಯಲ್ಲಿ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದಾಗ ಸಾಕಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗಿತ್ತು. ಆಗಿನಿಂದ ಭಾರತದ ಆರ್ಥಿಕತೆ ಆಗಾಗ್ಗೆ ಶೇ. 8ರ ವೇಗದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ಅವರ ನಂತರ ಭಾರತದಲ್ಲಿ ಸುಧಾರಣೆಗಳು ಮುಂದುವರಿಯಲಿಲ್ಲ ಎಂದು ಸ್ವಾಮಿ ವಿಷಾದಿಸಿದರು.

“ನರಸಿಂಹ ರಾವ್ ಆಡಳಿತದ ನಂತರ ನಾನು ಆಗಾಗ್ಗೆ ಶೇ. 8ರಂತೆ ಬೆಳವಣಿಗೆ ಸಾಧಿಸುತ್ತಿದ್ಧೇವೆ. ಆದರೆ, ಪಿವಿಎನ್ ತಂದ ಸುಧಾರಣೆಗಳನ್ನ ಬಲಪಡಿಸಲು ನಾವು ವಿಫಲರಾಗಿದ್ಧೇವೆ. ಈ ಕೆಲಸವನ್ನು ಈಗ ಮಾಡಬೇಕಿದೆ. ಇನ್ನು 10 ವರ್ಷದಲ್ಲಿ ನಾವು ಆರ್ಥಿಕವಾಗಿ ಸೂಪರ್ ಪವರ್ ಆಗಬಹುದಾ ಎಂದು ಪ್ರಶ್ನೆ ಮಾಡುತ್ತೀರಿ. ಖಂಡಿತವಾಗಿ ಇದು ಸಾಧ್ಯವಿದೆ” ಎಂದು ಹೇಳಿದರು.

ದೇಶದಲ್ಲಿ ಹಣದ ಚಲಾವಣೆಯೇ ಕಡಿಮೆಯಾಗಿರುವುದು ಭಾರತದ ಆರ್ಥಿಕ ಮುಗ್ಗಟ್ಟಿಗೆ ಪ್ರಮುಖ ಕಾರಣವಾಗಿದೆ ಎಂಬುದು ಬಿಜೆಪಿ ಸಂಸದರ ವಿಶ್ಲೇಷಣೆ. ಹಾಗೆಯೆ, ನೀರಾವರಿ ಸೌಲಭ್ಯ ಇಲ್ಲದಿರುವುದು ಕೃಷಿ ಉತ್ಪಾದನೆ ಕುಸಿಯಲು ಕಾರಣ ಎಂದು ಅವರು ಹೇಳಿದ್ಧಾರೆ.

(ವರದಿ: ಪಿಟಿಐ ಸುದ್ದಿ ಸಂಸ್ಥೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading