ಜಿಎಸ್‌ಟಿ ಬಿಕ್ಕಟ್ಟು: ಕೊನೆಗೂ ರಿಸರ್ವ್​ ಬ್ಯಾಂಕ್​ನಿಂದ 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಕೇಂದ್ರ!

ರಾಜ್ಯಗಳ ಜಿಎಸ್​ಟಿ ಪಾಲನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಇದೀಗ ರಿಸರ್ವ್​ ಬ್ಯಾಂಕ್​ನಿಂದ 1.1 ಲಕ್ಷ ಕೋಟಿ ರೂ ಹಣವನ್ನು ಸಾಲವನ್ನಾಗಿ ಪಡೆದರೂ ಸಹ ಇನ್ನೂ 1.25 ಲಕ್ಷ ಕೋಟಿ ರೂ ಬಾಕಿಯಾಗಿಯೇ ಉಳಿಯಲಿದೆ ಎನ್ನಲಾಗುತ್ತಿದೆ.

news18-kannada
Updated:October 17, 2020, 8:16 AM IST
ಜಿಎಸ್‌ಟಿ ಬಿಕ್ಕಟ್ಟು: ಕೊನೆಗೂ ರಿಸರ್ವ್​ ಬ್ಯಾಂಕ್​ನಿಂದ 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಒಪ್ಪಿದ ಕೇಂದ್ರ!
ನಿರ್ಮಲಾ ಸೀತಾರಾಮನ್.
  • Share this:
ನವ ದೆಹಲಿ; ಕೊರೋನಾ ಮತ್ತು ಲಾಕ್​ಡೌನ್ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ರಾಜ್ಯಗಳಿಗೆ ಕೇಂದ್ರದಿಂದ ಸಲ್ಲಬೇಕಾಗಿದ್ದ ನ್ಯಾಯಯುತವಾದ ಜಿಎಸ್​ಟಿ ಪಾಲಿನ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಈ ಕುರಿತು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದ ಹೇಳಿಕೆ ಸಹ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಕೇರಳ, ಪಶ್ಚಿಮ ಬಂಗಾಳ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳು ತಮ್ಮ ಪಾಲಿನ ಜಿಎಸ್​ಟಿ ಹಣಕ್ಕಾಗಿ ಪಟ್ಟುಹಿಡಿದಿದ್ದವು. ಹೀಗಾಗಿ ರಾಜ್ಯಗಳ ಒತ್ತಾಯಕ್ಕೆ ಕೊನೆಗೂ ಮಣಿದಿರುವ ಕೇಂದ್ರ ಸರ್ಕಾರ ಭಾರತೀಯ ರಿಸರ್ವ್​ ಬ್ಯಾಂಕಿನ ವಿಶೇಷ ಅಗತ್ಯತೆಗಳ ಅಡಿಯಲ್ಲಿ 1.1 ಲಕ್ಷ ಕೋಟಿ ಹಣವನ್ನು ಸಾಲವನ್ನಾಗಿ ಪಡೆಯಲು ಮುಂದಾಗಿದೆ. ಅಲ್ಲದೆ, ಈ ಹಣದ ಮೂಲಕ ರಾಜ್ಯಗಳ ಜಿಎಸ್​ಟಿ ಪಾಲನ್ನೂ ನೀಡಲಿದೆ ಎಂದು ವರದಿಯಾಗಿದೆ. ಕೇಂದ್ರ ಹಣಕಾಸು ಇಲಾಖೆ ಅಧಿಕಾರಿಗಳು ಸಹ ಶುಕ್ರವಾರ ಸಂಜೆ ವೇಳೆಗೆ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ಈ ಸಂಬಂಧ ರಾಜ್ಯಗಳಿಗೆ ಪತ್ರವನ್ನು ಬರೆದ್ದಾರೆ ಎನ್ನಲಾಗಿದೆ.

ರಾಜ್ಯಗಳ ಜಿಎಸ್​ಟಿ ಪಾಲನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಇದೀಗ ರಿಸರ್ವ್​ ಬ್ಯಾಂಕ್​ನಿಂದ 1.1 ಲಕ್ಷ ಕೋಟಿ ರೂ ಹಣವನ್ನು ಸಾಲವನ್ನಾಗಿ ಪಡೆದರೂ ಸಹ ಇನ್ನೂ 1.25 ಲಕ್ಷ ಕೋಟಿ ರೂ ಬಾಕಿಯಾಗಿಯೇ ಉಳಿಯಲಿದೆ. ಹೀಗಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್ ಮುಂದಿನ ಕೆಲವು ತಿಂಗಳುಗಳಲ್ಲಿ ಆದಾಯದ ಹರಿವಿನ ಆಧಾರದ ಮೇಲೆ ಮತ್ತೆ ರಿಸರ್ವ್​ ಬ್ಯಾಂಕಿನಿಂದ ಸಾಲ ಪಡೆಯುವ ಪ್ರಮಾಣವನ್ನು ಪರಿಶೀಲಿಸಬಹುದು ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಸಲಿಗೆ ಜಿಎಸ್‌ಟಿ ಪರಿಹಾರ ನೀಡಲು ಹಣಕಾಸಿನ ಕೊರತೆಯಿದೆ ಎಂದಿದ್ದ ಕೇಂದ್ರವು, ರಾಜ್ಯ ಸರ್ಕಾರಗಳಿಗೆ ಮಾರುಕಟ್ಟೆ ಸಾಲಗಳನ್ನು ಪಡೆಯಲು ಸೂಚಿಸಿದ್ದವು. ಇದಕ್ಕೆ ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳು ಒಪ್ಪಿತ್ತಾದರೂ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು ಅಸಮಧಾನಗೊಂಡಿದ್ದವು. ಹೀಗಾಗಿ ಬಿಜೆಪಿಯೇತರ ಸರ್ಕಾರಗಳ ಸತತ ಒತ್ತಡಕ್ಕೆ ಮಣಿದಿರುವ ಕೇಂದ್ರವು, ರಾಜ್ಯ ಸರಕಾರಗಳ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಪ್ರಯತ್ನಿಸಿದೆ.

ಪ್ರಸ್ತುತ ಕೇಂದ್ರ ಸರಕಾರವು ರಾಜ್ಯಗಳಿಗೆ ಅನುದಾನ ಸೆಸ್ ಬಿಡುಗಡೆಯಡಿ ನೀಡಲಿದೆ. ಹಾಗಾಗಿ ಕೇಂದ್ರ ಸರಕಾರವು ಸಾಲದ ಹಣವನ್ನು ರಾಜ್ಯಗಳಿಗೆ ನೀಡುವ ಅನುದಾನದ ರೂಪದಲ್ಲಿ ತೋರಿಸಲಿದೆ.

ಸಮಸ್ಯೆಯನ್ನು ಬಗೆಹರಿಸಲು ರಚನಾತ್ಮಕ ಸಹಕಾರವನ್ನು ನೀಡಿರುವುದಕ್ಕಾಗಿ ರಾಜ್ಯಗಳಿಗೆ ಕೃತಜ್ಞತೆ ಸಲ್ಲಿಸಿರುವ ನಿರ್ಮಲಾ ಸೀತಾರಾಮನ್, “ಕೇಂದ್ರ ಸರಕಾರ ಕಂತುಗಳಲ್ಲಿ ಅಗತ್ಯವಿರುವ ಸಾಲವನ್ನು ಪಡೆದುಕೊಳ್ಳಲಿವೆ ಹಾಗೂ ಅದನ್ನು ರಾಜ್ಯಗಳಿಗೆ ಒಂದಾದ ಬಳಿಕ ಒಂದರಂತೆ ಸಾಲಗಳನ್ನು ವರ್ಗಾಯಿಸಲಿವೆ. ಇದರಿಂದಾಗಿ ಸಮನ್ವಯತೆ ಹಾಗೂ ಸರಳವಾದ ಸಾಲ ದೊರೆಯುವಿಕೆ ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ ಅನುಕೂಲಕರವಾದ ಬಡ್ಡಿದರವೂ ಕೂಡಾ ಲಭ್ಯವಾಗಲಿದೆ” ಎಂದು ಹೇಳಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತೆಲಂಗಾಣದ ಹಣಕಾಸು ಸಚಿವ ಟಿ. ಹರೀಶ್ ರಾವ್, ಸಾಲದ ಹಣವನ್ನು ಅನುದಾನದ ರೂಪದಲ್ಲಿ ತೋರಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂದು ಹೇಳಿದ್ದಾರೆ. ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಕೂಡಾ ಅಸಮಧಾನ ವ್ಯಕ್ತಪಡಿಸಿದ್ದು, ”2023ರಲ್ಲಿ ರಾಜ್ಯಗಳಿಗೆ ಎಷ್ಟು ಜಿಎಸ್‌ಟಿ ಪರಿಹಾರ ನೀಡಲಾಗುವುದೆಂಬ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು” ಎಂದು ಕೇಳಿದ್ದಾರೆ.

ಈ ನಡುವೆ ಕೇಂದ್ರದ ಗುರುವಾರ ನಿರ್ಧಾರವನ್ನು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, "ಕೇಂದ್ರ ಸರ್ಕಾರದ ನಿರ್ಧಾರ ಉತ್ತಮ ಬೆಳವಣಿಗೆ. ಆದರೆ,  ಇನ್ನೂ ಒಂದು ಸಮಸ್ಯೆಯನ್ನು ಕೇಂದ್ರ ಬಗೆಹರಿಸಬೇಕಾಗಿದೆ. 2023 ಕ್ಕೆ ಎಷ್ಟು ಪರಿಹಾರವನ್ನು ಮುಂದೂಡಬೇಕು? ಈ ವಿಷಯದ ಬಗ್ಗೆ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಿ ಒಮ್ಮತವನ್ನು ಸಾಧಿಸಬೇಕಿದೆ”ಎಂದು ತಿಳಿಸಿದ್ದಾರೆ.ಇದನ್ನೂ ಓದಿ : ಕೊರೋನಾ ನಿರ್ವಹಣೆ-ಆರ್ಥಿಕ ಚೇತರಿಕೆಯಲ್ಲಿ ಭಾರತಕ್ಕಿಂತ ಪಾಕಿಸ್ತಾನ ಅಫ್ಘಾನಿಸ್ತಾನ ಮುಂದಿದೆ; ರಾಹುಲ್ ಗಾಂಧಿ ಕಿಡಿ

ಅಕ್ಟೋಬರ್ 5 ರಂದು ನಡೆದಿದ್ದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಪರಿಹಾರ ಸೆಸ್ ವಿಧಿಸುವುದನ್ನು ಜೂನ್ 2022 ರ ನಂತರ ಸರ್ವಾನುಮತದಿಂದ ವಿಸ್ತರಿಸಲಾಗಿತ್ತು. ಜುಲೈ 2017 ರಲ್ಲಿ ಹೊಸ ತೆರಿಗೆ ಆಡಳಿತವನ್ನು ಪರಿಚಯಿಸಿದ ಸಮಯದಲ್ಲಿ, ಜಿಎಸ್​ಟಿ ಕಾನೂನು ರಾಜ್ಯಗಳಿಗೆ ತಮ್ಮ ವಾರ್ಷಿಕ ಆದಾಯದಲ್ಲಿ ಐದು ವರ್ಷಗಳವರೆಗೆ ಶೇ.14ರಷ್ಟು ಹೆಚ್ಚಳವನ್ನು ಭರವಸೆ ನೀಡಿತು (ಜೂನ್ 30, 2022 ರವರೆಗೆ).

ಐಷಾರಾಮಿ ಮತ್ತು ಮದ್ಯ, ಸಿಗರೇಟ್, ವಾಹನಗಳು, ಕಲ್ಲಿದ್ದಲು ಮತ್ತು ಇತರ ತಂಬಾಕು ಉತ್ಪನ್ನಗಳಿಗೆ ವಿಧಿಸುವ ಪರಿಹಾರ ಸೆಸ್ ಮೂಲಕ ಯಾವುದೇ ಆದಾಯದ ಕೊರತೆಯನ್ನು ಉತ್ತಮಗೊಳಿಸಬೇಕು ಎಂಬ ನಿರ್ಣಯವನ್ನೂ ತೆಗೆದುಕೊಳ್ಳಲಾಗಿತ್ತು.
Published by: MAshok Kumar
First published: October 17, 2020, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading