ಲಕ್ನೋ: ನವ ವಧುವೊಬ್ಬಳು (Bride) ಮದುವೆ ಮುಗಿಸಿ ವರನ ಮನೆಗೆ ಹೋಗುತ್ತಿದ್ದ ವೇಳೆ ಆತನ ಕುಟುಂಬ ಸದಸ್ಯರಿಗೆ ಮತ್ತು ಬರಿಸಿ ಚಿನ್ನಾಭರಣದೊಂದಿಗೆ ಎಸ್ಕೇಪ್ (Robbery Case) ಆಗಿರುವ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಸಿನಿಮಾ ಸ್ಟೈಲ್‌ನಲ್ಲಿ ಈ ಘಟನೆ ನಡೆದಿದ್ದು, ತನ್ನ ಗಂಡನ ಮನೆಯವರ ಬಳಿ ಇದ್ದ ಎಲ್ಲ ಹಣ ಮತ್ತು ಚಿನ್ನಾಭರಣದೊಂದಿಗೆ (Gold Theft) ಕಿಲಾಡಿ ವಧು ಪರಾರಿಯಾಗಿದ್ದಾಳೆ.
ರಾಜಸ್ಥಾನದ ಅಜ್ಮೇರ್ ನಿವಾಸಿಯಾಗಿರುವ ಅಂಕಿತ್ ಮಹೇಶ್ವರಿ ಎಂಬಾತನ ಮದುವೆ ಉತ್ತರ ಪ್ರದೇಶದ ಗೋರಖ್‌ಪುರದ ಗುಡಿಯಾ ಯಾದವ್ ಜತೆ ಕಳೆದ ಫೆಬ್ರವರಿ 5ರಂದು ನಡೆದಿತ್ತು. ರಾಜಸ್ಥಾನದಿಂದ ಕುಟುಂಬದ ಸದಸ್ಯರ ಜತೆ ಬಂದಿದ್ದ ಅಂಕಿತ್, ಉತ್ತರ ಪ್ರದೇಶದ ಚಾಂದೌಲಿ ಜಿಲ್ಲೆಯ ಬಲುವಾ ಪ್ರದೇಶದ ಮಟಿಯಾರಾ ಗ್ರಾಮದಲ್ಲಿರುವ ಪರಿಚಿತರ ಮನೆಯಲ್ಲಿ ಸಂಪ್ರದಾಯ ಬದ್ಧವಾಗಿ ವಿವಾಹ ನಡೆದಿತ್ತು.
ಇದನ್ನೂ ಓದಿ: Bengaluru: ಲೈವ್ ಬ್ಯಾಂಡ್ನಲ್ಲಿ ಯುವತಿಯರ ಡ್ಯಾನ್ಸ್ ನೋಡಲು ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಗ್ಯಾಂಗ್ ಅಂದರ್
ವಿವಾಹ ನಡೆದ ಮರುದಿನ ನವ ದಂಪತಿ ಹಾಗೂ ವರನ ಕುಟುಂಬದ ಸದಸ್ಯರು ವಧುವಿನ ಸಂಬಂಧಿ ನಾಗಿನಾ ಎಂಬಾಕೆ ಜತೆಗೆ ವಾರಾಣಸಿಗೆ ತೆರಳಿದ್ದರು. ಅಲ್ಲಿ ಸುತ್ತಾಡಿದ ನಂತರ ವರನ ಮನೆಗೆ ತೆರಳಲು ವಾರಾಣಸಿ ರೈಲ್ವೆ ನಿಲ್ದಾಣದಿಂದ ಅಜ್ಮೇರ್ ರೈಲು ಹಿಡಿದಿದ್ದರು. ಮಾರ್ಗ ಮಧ್ಯೆಯಲ್ಲಿ ವಧು ಗುಡಿಯಾಳ ಮತ್ತೊಬ್ಬ ಪರಿಚಿತ ಛೋಟು ಖಟ್ಕಾನಾ ಎಂಬಾತ ರೈಲು ಹತ್ತಿದ್ದ. ರೈಲು ಏರುವಾಗಲೇ ಪ್ಲ್ಯಾನ್ ಮಾಡಿಕೊಂಡಿದ್ದ ಛೋಟು, ವರ ಹಾಗೂ ಆತನ ಕುಟುಂಬದ ಎಲ್ಲ ಸದಸ್ಯರಿಗೂ ಅಮಲು ಪದಾರ್ಥ ಬೆರೆಸಿದ್ದ ಒಣ ಹಣ್ಣು ಮತ್ತು ಟೀ ನೀಡಿದ್ದ. ಆದರೆ ಛೋಟು, ಗುಡಿಯಾ ಆಕೆಯ ಸಂಬಂಧಿ ಮಾತ್ರ ಅವುಗಳನ್ನು ಸೇವಿಸಿರಲಿಲ್ಲ.
ಮತ್ತು ಬರಿಸಿ ಕೃತ್ಯ
ಕುಟುಂಬದವರೆಲ್ಲರೂ ಪ್ರಜ್ಞಾಹೀನರಾದ ಬಳಿಕ, ಅದಕ್ಕಾಗಿ ಕಾಯುತ್ತಿದ್ದ ಮೂವರೂ ವರನ ಕುಟುಂಬದವರ ಬಳಿ ಇದ್ದ ಎಲ್ಲ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಕಾನ್ಪುರ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದಾರೆ. ಉತ್ತರ ಪ್ರದೇಶದಿಂದ ಜೈಪುರಕ್ಕೆ ಹೊರಟಿದ್ದ ಮರುಧಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನವ ವಧು, ತನ್ನ ಪತಿ ಹಾಗೂ ಆತನ ಕುಟುಂಬದ ಸದಸ್ಯರಿಗೆ ಮತ್ತು ಬರಿಸಿ ಈ ಕೃತ್ಯ ಎಸಗಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: Bengaluru: ಉಂಡ ಮನೆಗೆ ಕನ್ನ ಹಾಕಿ ನೇಪಾಳಕ್ಕೆ ಜೋಡಿ ಜೂಟ್; ಸೆಕ್ಯುರಿಟಿಯಿಂದಲೇ ಕಳ್ಳತನ
ಆಕೆಗೆ ಮೊದಲ ಮದುವೆಯಲ್ಲ ಇದು!
ಮತ್ತಿನ ನಶೆ ಇಳಿದ ಬಳಿಕ ವರನ ಮನೆಯವರಿಗೆ ಎಚ್ಚರವಾದಾಗ ಕೃತ್ಯ ನಡೆದಿರೋದು ಬೆಳಕಿಗೆ ಬಂದಿದ್ದು, ತಮ್ಮಲ್ಲಿದ್ದ ನಗದು ಮತ್ತು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳೆದುಕೊಂಡ ಕುಟುಂಬ ಆಘಾತಕ್ಕೆ ಒಳಗಾಗಿದೆ. ತಕ್ಷಣ ವರನ ಮನೆಯವರು ಎಟಾವಾದಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ವೇಳೆ ಯುವತಿಗೆ ಇದು ಎರಡನೇ ಮದುವೆ ಎನ್ನುವುದು ಗೊತ್ತಾಗಿದೆ. ಅಲ್ಲದೇ, ಮೊದಲ ಗಂಡನಿಗೂ ಆಕೆ ಇದೇ ರೀತಿ ವಂಚಿಸಿದ್ದಳು ಎನ್ನಲಾಗಿದೆ.
ದೂರು ಪಡೆದ ಬೆನ್ನಲ್ಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಖತರ್ನಾಕ್ ಆರೋಪಿಗಳಾದ ಗುಡಿಯಾ ಮತ್ತು ನಾಗಿನಾರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಛೋಟು ಎಸ್ಕೇಪ್ ಆಗಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ