ವಿಶ್ವಸಂಸ್ಥೆಯಲ್ಲಿ ಅಮೆರಿಕ ಅಧ್ಯಕ್ಷರ ಎದುರು ನಿಂತು ನನ್ನ ಬಾಲ್ಯವನ್ನೇ ಕಸಿದುಬಿಟ್ಟಿರಿ ಎಂದು ಕಣ್ಣೀರಿಟ್ಟ ಈ 16ರ ಪೋರಿ ಗ್ರೇಟಾ ಥನ್ಬರ್ಗ್​ ಯಾರ್ ಗೊತ್ತಾ?

ಸ್ವೀಡನ್ ದೇಶದ ಸಾಧಾರಣ ಶಾಲಾ ವಿದ್ಯಾರ್ಥಿನಿಯಾಗಿದ್ದ ಈಕೆ ಇಂದು ಪರಿಸರ ಹೋರಾಟಗಾರ್ತಿಯಾಗಿ ವಿಶ್ವ ಮಟ್ಟಕ್ಕೆ ಬೆಳೆದ ದಾರಿಯ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಎಂಥವರಿಗೂ ಅಚ್ಚರಿ ಮೂಡದೆ ಇರದು. ಅಷ್ಟಕ್ಕೂ ಯಾರೀ ಗ್ರೇಟಾ ಥನ್ಬರ್ಗ್? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಗ್ರೇಟಾ ಥನ್ಬರ್ಗ್​.

ಗ್ರೇಟಾ ಥನ್ಬರ್ಗ್​.

  • Share this:
ಕೇವಲ 15ನೇ ವಯಸ್ಸಿನಲ್ಲೇ ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ದ್ವನಿ ಎತ್ತಿ 2012ರಲ್ಲಿ ಉಗ್ರರ ಗುಂಡಿನ ರುಚಿ ಉಂಡು ಸಾವಿನ ಕದ ತಟ್ಟಿ ನೋಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವಳು ಪಾಕಿಸ್ತಾನ ಮೂಲದ ಮಲಾಲ. ನಂತರ ಈಕೆಯನ್ನು ಇಡೀ ವಿಶ್ವವೇ ಕೊಂಡಾಡಿದ್ದು ಇಂದು ಇತಿಹಾಸ. ಸರಿಯಾಗಿ 7 ವರ್ಷದ ನಂತರ ಈಕೆಯಂತೆಯೇ ಹೋರಾಟದ ಜಾಡನ್ನು ಹಿಡಿದು ಇಂದು ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ್ದಾಳೆ ಮತ್ತೋರ್ವ ಬಾಲಕಿ. ಆಕೆಯ ಹೆಸರು ಗ್ರೇಟಾ ಥನ್ಬರ್ಗ್. ವಯಸ್ಸು 16. ಪ್ರವೃತ್ತಿ ಪರಿಸರ ಹೋರಾಟಗಾರ್ತಿ.

ಸ್ವೀಡನ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಎಂಬ ಪೋರಿಯ ಕುರಿತು ನಿನ್ನೆಯವರೆಗೆ ಸ್ವತಃ ಸ್ವೀಡನ್ ದೇಶದವರಿಗೆ ಪರಿಚಯ ಇರಲಿಲ್ಲ. ಆದರೆ, ಇಂದು ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಆಕೆ ಮಾಡಿದ ಒಂದೇ ಒಂದು ಭಾಷಣ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಎದುರೇ ಎದ್ದು ನಿಂತು "ನೀವು ನಿಮ್ಮ ಖಾಲಿ ಮಾತುಗಳಿಂದ ಅಮೂಲ್ಯವಾದ ನನ್ನ ಬಾಲ್ಯವನ್ನು ಕಸಿದು ಬಿಟ್ಟಿರಿ” ಎಂದು ಅಳುತ್ತಲೇ ದಿಟ್ಟತನದಿಂದ ಹೇಳಿದ 16ರ ಈ ಪೋರಿಯ ಥೈರ್ಯಕ್ಕೆ ಇಂದು ಇಡೀ ವಿಶ್ವವೇ ತಲೆದೂಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಕೆಯ ಭಾಷಣ ಇದೀಗ ವೈರಲ್​ ಆಗುತ್ತಿದೆ.

ಕಳೆದ ಒಂದು ಶತಮಾನದಿಂದ ನಿಸರ್ಗದ ಮೇಲೆ ಮಾನವ ನಡೆಸಿರುವ ದೌರ್ಜನ್ಯ ಕಲ್ಪನೆಗೂ ನಿಲುಕದಷ್ಟು ಕ್ರೂರ. ಇದರ ಪರಿಣಾಮವನ್ನು ಇಂದು ಇದೇ ಮನುಕುಲ ಅನುಭವಿಸುತ್ತಿದೆ. ಭೂಮಿಯ ಮೇಲೆ ಹಸಿರು ಕಣ್ಮರೆಯಾಗುತ್ತಿದೆ, ಆಮ್ಲಜನಕದ ಪ್ರಮಾಣ ಕುಸಿಯುತ್ತಿದೆ. ಪರಿಣಾಮ ದಿನೇ ದಿನೇ ಏರುತ್ತಿರುವ ಭೂ ತಾಪಮಾನ ಇಂದು ಇಡೀ ವಿಶ್ವವನ್ನೇ ಕಾಡುತ್ತಿರುವ ಅತಿದೊಡ್ಡ ಸಮಸ್ಯೆಯಾಗಿ ವಿಶ್ವರೂಪ ತಳೆದಿದೆ. ಇದಕ್ಕೆ ಪರಿಹಾರ ಕಂಡುಹಿಡಿಯುವ ಸಲುವಾಗಿ ಪ್ರತಿವರ್ಷ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯನ್ನು ನಡೆಸುತ್ತಲೇ ಇದೆಯಾದರೂ ಇದರಿಂದ ಯಾವುದೇ ಲಾಭವಿಲ್ಲ.

ಪ್ರತಿವರ್ಷದಂತೆ ಸೆಪ್ಟೆಂಬರ್.24 ಅಂದರೆ ಇಂದು ಸಹ ವಿಶ್ವಸಂಸ್ಥೆ ನ್ಯೂಯಾರ್ಕ್ ನಗರದಲ್ಲಿ ವಿಶ್ವ ಹವಾಮಾನ ಶೃಂಗಸಭೆ ಆಯೋಜಿಸಿತ್ತು. ಈ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವಸಂಸ್ಥೆಯಲ್ಲಿನ ಸದಸ್ಯ ರಾಷ್ಟ್ರದ ಎಲ್ಲಾ ಪ್ರಧಾನಿಗಳು, ಅಧ್ಯಕ್ಷರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಏರುತ್ತಿರುವ ತಾಪಮಾನ ಹಾಗೂ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಿದರು. ಆದರೆ, ಕೊನೆಯಲ್ಲಿ ಮಾತನಾಡಿದ ಆ 16ರ ಪೋರಿ ತಮಗೆ ಇಷ್ಟು ದೊಡ್ಡ ಆಘಾತವನ್ನು ನೀಡುತ್ತಾಳೆ ಎಂದು ಯಾರೆಂದರೆ ಯಾರೂ ಸಹ ಊಹಿಸಿರಲಿಲ್ಲ.

2019ರ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯಲ್ಲಿ ಮಾತನಾಡಿದ ಗ್ರೇಟಾ ಥನ್ಬರ್ಗ್ ಮಾತು ಆರಂಭಿಸುತ್ತಿದ್ದಂತೆ, “ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಕನಸುಗಳನ್ನು, ನನ್ನ ಬಾಲ್ಯವನ್ನು ಕಸಿದುಕೊಂಡು ಬಿಟ್ಟಿರಿ. ಇಡೀ ಪರಿಸರದ ವ್ಯವಸ್ಥೆ ಇಂದು ಕುಸಿಯುತ್ತಿದೆ. ಜನರು ಸಾಯುತ್ತಿದ್ದಾರೆ, ನಾವೆಲ್ಲರೂ ಸಾಮೂಹಿಕವಾಗಿ ಅಳಿವಿನ ಅಂಚಿನ ಆರಂಭದಲ್ಲಿದ್ದೇವೆ. ಆದರೆ, ನೀವಿನ್ನೂ ಹಣ, ಶಾಶ್ವತ ಆರ್ಥಿಕತೆ ಎಂಬ ಪೊಳ್ಳು ಖಾಲಿ ಮಾತುಗಳನ್ನೇ ಆಡುತ್ತಿದ್ದೀರಿ.

ಕಳೆದ 30 ವರ್ಷದಿಂದ ವಿಜ್ಞಾನ ಈ ಪರಿಸರವನ್ನು ಹಾಳು ಮಾಡಿದ್ದು ಸಾಕು. ಇದು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಎಲ್ಲವೂ ಕೈಮೀರಿ ಹೋಗಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ರಾಜಕೀಯವನ್ನು ನಿಲ್ಲಿಸಿ ಎಲ್ಲರೂ ಒಟ್ಟಾಗಿ ಪರಿಸರವನ್ನು ಉಳಿಸಲು ಮುಂದಾಗಿ” ಎಂದು ಆಕೆ ಇಡೀ ವಿಶ್ವಕ್ಕೆ ಕೇಳುವಂತೆ ಮೊರೆ ಇಟ್ಟಿದ್ದಾಳೆ.ಈಕೆಯೆ ಭಾಷಣಕ್ಕೆ ಇಡೀ ವಿಶ್ವವೇ ಇಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಈಕೆಯ ಭಾಷಣಕ್ಕೆ ಸ್ವತಃ ಟ್ವೀಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಈಕೆಯ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು. ಈಕೆಗೆ ಉತ್ತಮ ಭವಿಷ್ಯದ ಇದೆ” ಎಂದಿದ್ದಾರೆ. ಇನ್ನೂ ಹಾಲಿವುಡ್ ಖ್ಯಾತ ನಟ ಲಿಯೋನಾರ್ಡ್ ಡಿಕ್ಯಾಪ್ರಿಯೋ ಅವರಿಂದ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವರೆಗೆ ಎಲ್ಲರೂ ಈಕೆಯ ಮಾತಿಗೆ ಮೆಚ್ಚುಗೆ ಹಾಗೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ಸ್ವೀಡನ್ ದೇಶದ ಸಾಧಾರಣ ಶಾಲಾ ವಿದ್ಯಾರ್ಥಿನಿಯಾಗಿದ್ದ ಈಕೆ ಇಂದು ಪರಿಸರ ಹೋರಾಟಗಾರ್ತಿಯಾಗಿ ವಿಶ್ವ ಮಟ್ಟಕ್ಕೆ ಬೆಳೆದ ದಾರಿಯ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಎಂಥವರಿಗೂ ಅಚ್ಚರಿ ಮೂಡದೆ ಇರದು. ಅಷ್ಟಕ್ಕೂ ಯಾರೀ ಗ್ರೇಟಾ ಥನ್ಬರ್ಗ್? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಯಾರೀ ಗ್ರೇಟಾ ಥನ್ಬರ್ಗ್?

ಜನವರಿ 3, 2003 ರಂದು ಸ್ಟಾಕ್​ಹೋಮ್​ನಲ್ಲಿ ಜನಿಸಿದ ಗ್ರೇಟಾ ಥನ್ಬರ್ಗ್ ಒಪೆರಾ ಗಾಯಕಿ ಮಾಲೆನಾ ಎರ್ಮನ್ ಮತ್ತು ನಟ ಸ್ವಾಂಟೆ ಥನ್ಬರ್ಗ್ ಅವರ ಮಗಳು. ಈಕೆಯ ಅಜ್ಜ ಓಲೋಪ್ ಥನ್ಬರ್ಗ್ ಸಹ ಓರ್ವ ರಂಗಭೂಮಿ ನಟ ಮತ್ತು ನಿರ್ದೇಶಕ.

ವಿಶ್ವದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹಲವಾರು ಮಕ್ಕಳು ಸಮಸ್ಯೆಗೆ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಹೀಗೆ ಅನಾರೋಗ್ಯಕ್ಕೆ ಈಡಾದವರ ಪೈಕಿ ಗ್ರೇಟಾ ಥನ್ಬರ್ಗ್ ಸಹ ಒಬ್ಬರು. ಈಕೆ 2011ರಲ್ಲಿ 8 ವರ್ಷದವರಿದ್ದಾಗ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದ ಪರಿಣಾಮ ಮ್ಯೂಟಿಸಂ, ಆಸ್ಪರ್ಜರ್ ಸಿಂಡ್ರೋಮ್ ಹಾಗೂ ಕಂಪಲ್ಸೀವ್ ಡಿಸಾರ್ಡರ್ ನಂತಹ ಮೆದುಳಿನ ಖಾಯಿಲೆಗೆ ತುತ್ತಾಗಿದ್ದರು. ಸಾಮಾನ್ಯವಾಗಿ ಮಕ್ಕಳಲ್ಲಿ ಮೆದುಳಿಗೆ ಸೂಕ್ತ ಪ್ರಮಾಣದ ಆಮ್ಲಜನಕ ಸರಬರಾಜಾಗದಿದ್ದಾಗ ಕಾಣಿಸಿಕೊಳ್ಳುವ ಖಾಯಿಲೆ ಇದು.

ಇಂತಹ ಖಾಲೆಗೆ ತುತ್ತಾಗುವ ಮಕ್ಕಳು ಊಟ ಮಾಡದೆ ಯಾರೊಂದಿಗೂ ಮಾತನಾಡದೆ ಏಕಾಂತದಲ್ಲಿ ಇರಲು ಬಯಸುತ್ತಾರೆ. ಇಂತಹ ಪರಿಸ್ಥಿತಿ ಅವರನ್ನೂ ಮತ್ತಷ್ಟು ಖಿನ್ನತೆಗೆ ದೂಡುತ್ತದೆ. ಇದು ಮಕ್ಕಳ ಮಾನಸಿಕ ಸ್ಥಿಮಿತತೆಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಇಂತಹ ಖಾಯಿಲೆಯಿಂದ ಬಳಲುತ್ತಿದ್ದ ಗ್ರೇಟಾ ಥನ್ಬರ್ಗ್ ಅವರನ್ನು ಸಮಸ್ಯೆಯಿಂದ ಹೊರತರಲು ಅವರ ಪೋಷಕರು ಸಾಕಷ್ಟು ಶ್ರಮವಹಿಸಿದ್ದಾರೆ.2018 ಆಗಸ್ಟ್ ತಿಂಗಳಲ್ಲಿ ಈಕೆಯ ಶಾಲೆಯ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಸ್ವೀಡನ್ ಸಂಸತ್ ಎದುರು ಹವಾಮಾನ ವೈಪರೀತ್ಯದ ಕುರಿತು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇಲ್ಲಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ವಿಶ್ವದ ನಾನಾ ಕಡೆ ಸಂಚರಿಸಿರುವ ಗ್ರೇಟಾ ಥನ್ಬರ್ಗ್​ ಪರಿಸರದ ಮಹತ್ವದ ಕುರಿತು ಅಸಂಖ್ಯಾತ ಭಾಷಣ ಮಾಡಿದ್ದಾರೆ. ಶಾಲ ಮಕ್ಕಳಿಗೆ ಈ ಕುರಿತು ಅರಿವು ಮೂಡಿಸಿ, ವಿದ್ಯಾರ್ಥಿಗಳನ್ನೇ ಒಟ್ಟಾಗಿಸಿ ಸಾಕಷ್ಟು ಪ್ರತಿಭಟನೆಯನ್ನು ದಾಖಲು ಮಾಡಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಯುರೋಪ್ ಖಂಡದಲ್ಲಿ ಮಾತ್ರ ಈಕೆಯ ಮುಂದಾಳತ್ವದಲ್ಲಿ ಹವಾಮಾನ ವೈಪರೀತ್ಯದ ಕುರಿತಾಗಿ ಸರಾಸರಿಯಾಗಿ ವಾರಕ್ಕೆ 2 ಪ್ರತಿಭಟನೆಗಳು ದಾಖಲಾಗಿವೆ ಎಂದು ವಿಶ್ವ ಪ್ರಸಿದ್ಧ ಮ್ಯಾಗಜೀನ್ ವರದಿ ಮಾಡಿದೆ. ತನ್ನ ಹೋರಾಟದಿಂದಲೇ ಈಕೆ ಹಲವಾರು ಬಾರಿ ಮ್ಯಾಗಜೀನ್​ ಸೇರಿದಂತೆ ಯುರೋಪ್ ಖಂಡದ ಹಲವಾರು ಪತ್ರಿಕೆಗಳ ಮುಖಪುಟವನ್ನು ಅಲಂಕರಿಸಿದ್ದಾಳೆ. ಇದೇ ಕಾರಣಕ್ಕೆ 2018ರ ವಿಶ್ವಸಂಸ್ಥೆ ಹವಾಮಾನ  ಶೃಂಗಸಭೆಯಲ್ಲೂ ಈಕೆಗೆ ಪಾಲ್ಗೊಳ್ಳುವ ಅವಕಾಶ ಒದಗಿ ಬಂದಿತ್ತು. ಆದರೆ, ಮಾತನಾಡುವ ಅವಕಾಶ ಲಭಿಸಿದ್ದು ಮಾತ್ರ ಇಂದು ನ್ಯೂಯಾರ್ಕ್​ನಲ್ಲಿ ನಡೆದ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯಲ್ಲಿ.

ಈ ಶೃಂಗಸಭೆಯಲ್ಲಿ ತಾನು ಮಾಡಿದ ಮೊದಲ ಭಾಷಣದಲ್ಲೇ ಈಕೆ ಇಡೀ ವಿಶ್ವದ ಗಮನ ಸೆಳೆದಿದ್ದಾಳೆ. ಮಾನವ ತನ್ನ ದುರಾಸೆಯಿಂದಾಗಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿ ತನ್ನಂತೆ ಕೋಟ್ಯಾಂತರ ಮಕ್ಕಳ ಭವಿಷ್ಯ, ಬಾಲ್ಯ ಹಾಗೂ ಕನಸನ್ನು ಕಸಿದಿದ್ದಾನೆ ಎಂದು ಆಕೆ ದೂರಿದ್ದಾಳೆ. ಅಲ್ಲದೆ, ಪರಿಸರ ಸಂರಕ್ಷಣೆ ಕುರಿತು ತನ್ನ ಹೋರಾಟ ಮುಂದುವರೆಯಲಿದೆ ಎಂಬ ವಿಚಾರವನ್ನೂ ವಿಶ್ವ ನಾಯಕರ ಎದುರು ದಾಖಲಿಸಿದ್ದಾಳೆ. ಇಡೀ ವಿಶ್ವವೇ ಈಕೆಯನ್ನು ಭವಿಷ್ಯದ ನಾಯಕಿ ಎಂದು ಇಡೀಗ ಕೊಂಡಾಡುತ್ತಿದೆ. ಆದರೆ, ಮಾನವನ ದುರಾಸೆಯ ವಿರುದ್ಧ ಆಕೆಯ ಹೋರಾಟ ಗೆಲುವು ಸಾಧಿಸುತ್ತಾ? ಎಂಬುದು ಮಾತ್ರ ಮಿಲಿಯನ್ ಡಾಲರ್​ ಪ್ರಶ್ನೆ?
First published: