ಚೆನ್ನೈ: ಏಳು ವರ್ಷದ ಪುಟ್ಟ ಮಗುವಿನ ಮೇಲೆ ಸ್ವಂತ ತಾತ, ಮಾವ ಮತ್ತು ಅಣ್ಣನಿಂದಲೇ ಲೈಂಗಿಕ ಕಿರುಕುಳ ನಡೆದಿರುವ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ಹಲವು ಬಾರಿ, ಪ್ರತ್ಯೇಕವಾಗಿ ಮೂವರೂ ಮಗುವಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂಬ ದೂರಿನ ಮೇಲೆ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ಥ ಬಾಲಕಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಮಗುವನ್ನು ತಾತ, ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾಗ ಈ ಕೃತ್ಯ ನಡೆದಿದೆ.
ಬಾಲಕಿಯ ಅಜ್ಜನಿಗೆ 62 ವರ್ಷ. ಆತ ತನ್ನ ಕುಟುಂಬದೊಂದಿಗೆ ಮದಿಪಕ್ಕಮ್ ಬಳಿಯ ಮನೆಯವಲ್ಲಿ ವಾಸವಿದ್ದ. ಮೊಮ್ಮಗಳನ್ನು ಮಗಳ ಮನೆಯಿಂದ ಇತ್ತೀಚೆಗೆ ಕರೆದುಕೊಂಡು ಹೋಗಿದ್ದ. ಮಗಳಿಗೆ ಆಫೀಸ್ ಕೆಲಸ ಇದ್ದುದರಿಂದ, ಮಗಳನ್ನು ನೋಡಿಕೊಳ್ಳಲು ಕಷ್ಟವಾಗುತ್ತಿತ್ತು. ಕೊರೋನಾದಿಂದ ಶಾಲೆಗಳು ಕೂಡ ಇಲ್ಲದಿರುವ ಹಿನ್ನೆಲೆ, ಮಗಳನ್ನು ನೋಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ತಂದೆಯ ಬಳಿ ಹೇಳಿದ್ದಾರೆ. ನಂತರ ಮನೆಗೆ ಕರೆದುಕೊಂಡು ಹೋದ ಅಜ್ಜ, ಮೊಮ್ಮಗಳನ್ನು ಪ್ರೀತಿಯಿಂದ ನೋಡುವ ಬದಲು ಚಪಲದಿಂದ ನೋಡಿದ್ದಾನೆ ಎಂದು ಆರೋಪಿಸಲಾಗಿದೆ. Work From Home ಜೊತೆ ಮಗಳನ್ನು ನೋಡಿಕೊಳ್ಳಲು ಕಷ್ಟ ಎಂದು ತಂದೆಯ ಮನೆಗೆ ಕಳಿಸಿದ ತಪ್ಪಿಗೆ ತಾಯಿಯೀಗ ಶಪಿಸಿಕೊಳ್ಳುತ್ತಿದ್ದಾರೆ.
ಬಾಲಕಿ ಮಲಗಿದ್ದಾಗ ಲೈಂಗಿಕ ದೌರ್ಜನ್ಯ:
ತಾಯಿ ಒಪ್ಪಿದ ಬಳಿಕ ಮೊಮ್ಮಗಳನ್ನು ಮನೆಗೆ ಕರೆತಂದಿದ್ದ. ಮುದುಕನ ಮಗ, ಅಂದರೆ ಬಾಲಕಿಯ ಮಾವ ಕೂಡ ಅದೇ ಮನೆಯಲ್ಲಿ ವಾಸವಿದ್ದ. ಆಗಸ್ಟ್ 2ರಂದು ಬಾಲಕಿ ಮಲಗಿದ್ದ ವೇಳೆ ಖಾಸಗಿ ಭಾಗಗಳನ್ನು 62 ವರ್ಷದ ಅಜ್ಜ ಮುಟ್ಟಿದ್ದಾನೆ. ಈ ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಮರುದಿನ ಬಾಲಕಿ ಅಜ್ಜನೊಂದಿಗೆ ಮಲಗಲು ನಿರಾಕರಿಸಿ, 42 ವರ್ಷದ ಮಾವನ ಜೊತೆ ರಾತ್ರಿ ನಿದ್ದೆ ಮಾಡಲು ಮಲಗಿಕೊಂಡಿದ್ದಳು. ಆಕೆ ಗಾಬರಿ ಗೊಂಡಿದ್ದರಿಂದ, ಆಕೆಯನ್ನು ಸಲಹುವ ನೆಪ ಮಾಡಿ, ಮಾವ ಕೂಡ ಸಂತ್ರಸ್ಥ ಬಾಲಕಿಯ ಮೇಲೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೇ, ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಇದಾದ ನಂತರ, 16 ವರ್ಷದ ಅಣ್ಣನ ಜೊತೆ ಇದ್ದಾಗ, ಆ ಹುಡುಗಲೂ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ ಎಂದು ದೂರಲಾಗಿದೆ. ಒಟ್ಟಿನಲ್ಲಿ, ತಾಯಿಯ ಜೊತೆ ಹೇಗೋ ಖುಷಿಯಾಗಿದ್ದ ಪುಟ್ಟ ಮಗು ತಾತನ ಮನೆಗೆ ಹೋಗಿ ಕ್ರೌರ್ಯದ ಕರಾಳ ರೂಪವನ್ನು ನೋಡಿದ್ದಾಳೆ. 7 ವರ್ಷದ ಮುಗ್ಧ ಮಗುವಿನ ಮೇಲೆ ಈ ಸರಣಿ ಘಟನೆಗಳು ಯಾವ ರೀತಿ ಪ್ರಭಾವ ಬೀರಿರಬಹುದು ಎಂಬುದನ್ನು ಊಹಿಸಲೂ ಅಸಾಧ್ಯ.
ಇದನ್ನೂ ಓದಿ: ಹೆಂಡತಿ ಜೊತೆ ಅಕ್ರಮ ಸಂಬಂಧ; ರೊಚ್ಚಿಗೆದ್ದು ಲವರ್ಗೆ ಗತಿ ಕಾಣಿಸಿದ ಗಂಡ!
ಬಾಲಕಿ ಆಸ್ಪತ್ರೆಗೆ, ಆರೋಪಿಗಳು ಜೈಲಿಗೆ:
ಕಳೆದ ಭಾನುವಾರ ಮಗಳನ್ನು ನೋಡಲು ತಾಯಿ ತವರು ಮನೆಗೆ ಬಂದಿದ್ದಾಳೆ. ಹಲವು ದಿನಗಳು ಮಗಳನ್ನು ಬಿಟ್ಟು ಇದ್ದಿದ್ದರಿಂದ, ಮಗಳನ್ನು ನೋಡುವ ತವಕದಿಂದ ಬಂದ ತಾಯಿಗೆ ಆಘಾತವಾಗಿತ್ತು. ಮಗಳ ಆರೋಗ್ಯ ಹದಗೆಟ್ಟಿತ್ತು. ಮಗಳಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಮಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯರು
ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಸಮಾಧಾನದಿಂದ ತಾಯಿ ಮಗಳನ್ನು ಏನಾಯಿತು ಎಂಬುದನ್ನು ಕೇಳಿದಾಗ, ಆಕೆ ಎಲ್ಲವನ್ನೂ ಹೇಳಿದ್ದಾಳೆ. ಅಜ್ಜ, ಮಾವ ಕಡೆಗೆ ಅಣ್ಣ ಕೂಡ ಹೇಗೆ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬುದನ್ನು ಹುಡುಗಿ ಹೇಳಿದ್ದಾಳೆ.
ಇದನ್ನೂ ಓದಿ: ದೆಹಲಿ ಪೂಜಾರಿಯಿಂದ ದಲಿತ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ; ಪೊಲೀಸರಿಂದ ಮತ್ತೊಂದು ಚಾರ್ಜ್ಶೀಟ್!
ಇದಾದ ಬಳಿಕ, ತಾಯಿ ತನ್ನ ಅಪ್ಪ, ಅಣ್ಣ ಮತ್ತು ಅಣ್ಣನ ಮಗನ ಮೇಲೆ ದೂರು ದಾಖಲಿಸಿದ್ದಾರೆ. ಮದಿಪಕ್ಕಮ್ ಮಹಿಳಾ ಪೊಲೀಸ್ ಠಾಣೆಯಲ್ಲಿ Protection of Children from Sexual Offences Act (
POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಲಕಿಯನ್ನು ಸರ್ಕಾರಿ ಮಕ್ಕಳ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪರೀಕ್ಷೆ ಮಾಡಿಸಿದ್ದಾರೆ. ಅಲ್ಲಿ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ನಿಜ ಎಂದು ವೈದ್ಯರು ದೃಢೀಕರಿಸಿದ್ದಾರೆ. ಅಜ್ಜ ಮತ್ತು ಮಾವನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೊಬ್ಬ ಅಪ್ರಾಪ್ತನಾಗಿರುವ ಹಿನ್ನೆಲೆ, ಮನಃಪರಿವರ್ತನಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ