ರಫೇಲ್ ಒಪ್ಪಂದಕ್ಕೆ ಮುನ್ನ ಪ್ರಮುಖ ನಿಯಮಗಳನ್ನೇ ಕೈಬಿಡಲಾಗಿತ್ತಾ? ಇನ್ನಷ್ಟು ಸಂಕಷ್ಟದಲ್ಲಿ ಮೋದಿ ಸರಕಾರ

ಕೇಂದ್ರ ಸರಕಾರವು ಭ್ರಷ್ಟಾಚಾರ ನಿಗ್ರಹಕ್ಕೆ ಆಸ್ಪದವಿಲ್ಲದಂತೆ ನಿಯಮಗಳನ್ನ ತಿದ್ದುಪಡಿ ಮಾಡಿತು; ಬ್ಯಾಂಕ್ ಗ್ಯಾರಂಟಿ ಪಡೆಯದೇ ಹಣ ಸಂದಾಯಿಸಿತು ಎಂದು ದ ಹಿಂದೂ ಪತ್ರಿಕೆ ವರದಿ ಮಾಡಿದೆ.

Vijayasarthy SN | news18
Updated:February 11, 2019, 5:16 PM IST
ರಫೇಲ್ ಒಪ್ಪಂದಕ್ಕೆ ಮುನ್ನ ಪ್ರಮುಖ ನಿಯಮಗಳನ್ನೇ ಕೈಬಿಡಲಾಗಿತ್ತಾ? ಇನ್ನಷ್ಟು ಸಂಕಷ್ಟದಲ್ಲಿ ಮೋದಿ ಸರಕಾರ
ರಫೇಲ್ ಜೆಟ್
Vijayasarthy SN | news18
Updated: February 11, 2019, 5:16 PM IST
ನವದೆಹಲಿ(ಫೆ. 11): ರಫೇಲ್ ಒಪ್ಪಂದದ ವಿಚಾರದಲ್ಲಿ ಪ್ರಧಾನಿ ಕಾರ್ಯಾಲಯದ ನಿರ್ಧಾರದ ಬಗ್ಗೆ ರಕ್ಷಣಾ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರೆಂದು ನಿನ್ನೆ ವರದಿ ಮಾಡಿದ್ದ ದ ಹಿಂದೂ ಪತ್ರಿಕೆ ಇವತ್ತು ಮತ್ತೊಂದು ರಫೇಲ್ ಶಾಕ್ ಕೊಟ್ಟಿದೆ. ರಫೇಲ್ ಯುದ್ಧವಿಮಾನಗಳ ಖರೀದಿಗಾಗಿ ಫ್ರಾನ್ಸ್ ಜೊತೆ ಸರಕಾರ ಮಟ್ಟದ ಒಪ್ಪಂದ ಮಾಡಿಕೊಳ್ಳುವ ಮುನ್ನ ಕೇಂದ್ರ ಸರಕಾರವು ಒಪ್ಪಂದದ ನಿಯಮಾವಳಿಯಲ್ಲಿ ಕೆಲ ಪ್ರಮುಖ ಮಾರ್ಪಾಡುಗಳನ್ನ ಮಾಡಿದ್ದ ವಿಚಾರವನ್ನು ಅದು ಬೆಳಕಿಗೆ ಬಂದಿದೆ. ಭ್ರಷ್ಟಾಚಾರ ವಿರೋಧಿ ದಂಡ ವಿಧಿಸುವ ಕೆಲ ನಿಯಮಗಳನ್ನ ಕೇಂದ್ರವು ಕೈಬಿಟ್ಟಿದೆ. ಹಾಗೆಯೇ, ಷರತ್ತುಬದ್ಧವಾಗಿ ಹಣ ಪಾವತಿಯ ವ್ಯವಸ್ಥೆ ಮಾಡಬೇಕೆಂಬ ಸಲಹೆಯನ್ನೂ ಕೇಂದ್ರವು ಗಾಳಿಗೆ ತೂರಿತು ಎಂದು ದ ಹಿಂದೂ ಪತ್ರಿಕೆ ಇವತ್ತು ವರದಿ ಮಾಡಿದೆ. ಮೋದಿ ವಿರುದ್ಧ ನಿರಂತರವಾಗಿ ರಫೇಲ್ ದಾಳಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಈ ವರದಿ ಇನ್ನಷ್ಟು ಬಲ ತಂದಿದೆ.

ರಕ್ಷಣಾ ಸಾಮಗ್ರಿ ಖರೀದಿಗೆ ಕಠಿಣವಾದ ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರೊಸೀಜರ್ ಎಂಬ ನಿಯಮಾವಳಿಗಳಿವೆ. ಅನಗತ್ಯ ಪ್ರಭಾವ ಬಳಕೆ, ಏಜೆಂಟ್ ಅಥವಾ ಏಜೆನ್ಸಿ ಕಮಿಷನ್ ಹಾಗೂ ಕಂಪನಿ ಖಾತೆಗಳ ಬಳಕೆ ವಿಚಾರದಲ್ಲಿ ನಿಯಮಗಳನ್ನ ಕೈಬಿಡಲಾಗಿತ್ತು. ರಫೇಲ್ ಒಪ್ಪಂದಕ್ಕೆ ಸಹಿ ಹಾಕುವ ಕೆಲ ದಿನಗಳ ಮೊದಲು ಉನ್ನತ ಮಟ್ಟದಲ್ಲಿ ರಾಜಕೀಯ ಹಸ್ತಕ್ಷೇಪವಾಗಿದ್ದರಿಂದ ಈ ನಿಯಮಗಳನ್ನ ಗಾಳಿಗೆ ತೂರಿಲಾಯಿತೆನ್ನಲಾಗಿದೆ.

ಇದನ್ನೂ ಓದಿ: ರಫೇಲ್ ಲೂಟಿಗೆ ಬಾಗಿಲು ತೆರೆದಿದ್ದೇ ಪ್ರಧಾನಿ ಮೋದಿ; ರಾಹುಲ್ ಗಾಂಧಿ ವಾಗ್ದಾಳಿ

2016ರ ಆಗಸ್ಟ್ 24ರಂದು ಪ್ರಧಾನಿ ಮೋದಿ ನೇತೃತ್ವದ ಭದ್ರತಾ ಸಂಸದೀಯ ಸಮಿತಿ(ಸಿಸಿಎಸ್)ಇಂದ ಈ ದಾಖಲೆಗಳಿಗೆ ಅನುಮೋದನೆ ಸಿಗುತ್ತದೆ. ಮರು ತಿಂಗಳೇ ಆಗಿನ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ನೇತೃತ್ವದಲ್ಲಿ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್(ಡಿಎಸಿ) ಈ ಒಪ್ಪಂದ ನಿಯಮಾವಳಿಯನ್ನು ಸಡಿಲಿಸುತ್ತದೆ ಎಂದು ದ ಹಿಂದೂ ಪತ್ರಿಕೆಯ ವರದಿಯಲ್ಲಿ ಆರೋಪಿಸಲಾಗಿದೆ.

ಫ್ರಾನ್ಸ್​ನ ವಾಣಿಜ್ಯ ಕಂಪನಿಗಳಾದ ಡಾಸ್ಸೋ ಮತ್ತು ಎಂಬಿಡಿಎ ಜೊತೆ ನೇರವಾಗಿ ವ್ಯವಹರಿಸುವುದರಿಂದ ಪ್ರಮುಖ ನಿಯಮಾವಳಿಗಳನ್ನ ಕೈಬಿಡುವುದು ಉಚಿತವಲ್ಲ ಎಂದು ಒಪ್ಪಂದಲ್ಲಿ ಭಾಗಿಯಾದ ತಂಡದ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕೇಂದ್ರ ಸರಕಾರವು ಇದನ್ನು ನಿರ್ಲಕ್ಷಿಸಿತೆನ್ನಲಾಗಿದೆ.

ಇದನ್ನೂ ಓದಿ: ಟ್ವಿಟ್ಟರ್​ಗೆ ಅಡಿ ಇಟ್ಟ ಪ್ರಿಯಾಂಕಾ ಗಾಂಧಿ; ಒಂದು ಟ್ವಿಟ್ ಮಾಡುವ ಮುನ್ನವೇ ಸಾವಿರಾರು ಫಾಲೋಯರ್ಸ್
Loading...

ಇದರ ಜೊತೆಗೆ, ಕೇಂದ್ರ ಸರಕಾರ ಮತ್ತೊಂದು ತಪ್ಪು ಎಸಗಿತು ಎಂದು ದ ಹಿಂದೂ ಪತ್ರಿಕೆಯ ವರದಿ ಹೇಳುತ್ತದೆ. ಫ್ರಾನ್ಸ್​ನಿಂದ ಬ್ಯಾಂಕ್ ಗ್ಯಾರಂಟಿ ಪಡೆಯುವ ಬದಲು ಕೇಂದ್ರ ಸರಕಾರವು ಫ್ರಾನ್ಸ್ ಪ್ರಧಾನಿಯಿಂದ ಭರವಸೆಯ ಪತ್ರವನ್ನಷ್ಟೇ (ಲೆಟರ್ ಆಫ್ ಕಂಫರ್ಟ್) ಪಡೆಯಿತು. ಬ್ಯಾಂಕ್ ಗ್ಯಾರೆಂಟಿ ಪಡೆದಿದ್ದರೆ, ಒಪ್ಪಂದದ ಆಶಯದಂತೆ ಉತ್ಪನ್ನ ತಯಾರಾಗಿದ್ದರೆ ಮಾತ್ರ ಹಣ ನೀಡಬಹುದಿತ್ತು. ಪ್ರಧಾನಿಯಿಂದ ಪಡೆದ ಲೆಟರ್ ಆಫ್ ಕಂಫರ್ಟ್​ಗೆ ಯಾವುದೇ ಕಾನೂನು ಸಿಂಧುತ್ವ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಡಾಸ್ಸೋ ಮತ್ತು ಎಂಬಿಡಿಎ ಕಂಪನಿಗಳು ಸರಬರಾಜು ಮಾಡುವ ರಫೇಲ್ ಯುದ್ಧವಿಮಾನಗಳ ಗುಣಮಟ್ಟ ನಿಯಂತ್ರಿಸುವ ಯಾವ ಅಧಿಕಾರವೂ ಸರಕಾರಕ್ಕೆ ಇಲ್ಲದಂತಾಗುತ್ತದೆ. ಅಂದರೆ, ಸರಕಾರದ ಕೈಗೆ ಯಾವ ಮೂಗುದಾರವೂ ಇರುವುದಿಲ್ಲ ಎಂದು ದ ಹಿಂದು ಪತ್ರಿಕೆಯ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...