ನವದೆಹಲಿ (ಜ. 6): ದೇಶದೆಲ್ಲೆಡೆ ಸದ್ಯ ಗೋ ಸಂರಕ್ಷಣೆ ಕುರಿತ ವಿಷಯ ಹೆಚ್ಚು ಪ್ರಚಲಿತದಲ್ಲಿದೆ. ರಾಜ್ಯದಲ್ಲಿಯೂ ಕೂಡ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಗೋ ಹತ್ಯೆ ಮಸೂದೆ ಅನೇಕ ಚರ್ಚೆ ಹುಟ್ಟುಹಾಕಿದೆ. ಈ ನಡುವೆ ಗೋವಿನ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಹಾಗೂ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 'ರಾಷ್ಟ್ರೀಯ ಕಾಮುಧೇನು ಆಯೋಗ' "ಹಸು ವಿಜ್ಞಾನ" (Cow Science) ವಿಷಯಾಧಾರದ ಮೇಲೆ ರಾಷ್ಟ್ರಮಟ್ಟದ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಫೆ 25ರಂದು ದೇಶಾದ್ಯಂತ ಆನ್ಲೈನ್ ಮೂಲಕ ಈ ಪರೀಕ್ಷೆ ನಡೆಯಲಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಈ ರಾಷ್ಟ್ರೀಯ ಕಾಮಧೇನು ಆಯೋಗ ಬರಲಿದ್ದು, ಪ್ರತಿವರ್ಷ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿ 'ಕಾಮಧೇನು ಗೋ ವಿಜ್ಞಾನ ಪ್ರಸಾರ್ ಪರೀಕ್ಷೆ' ನಡೆಯಲಿದೆ ಎಂದು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ತಿಳಿಸಿದರು.
ಹಸುಗಳ ಸಂರಕ್ಷಣೆ, ಅಭಿವೃದ್ಧಿ, ಸಂತತಿ ರಕ್ಷಣೆ ದೃಷ್ಟಿಯಿಂದ ಈ ಪ್ರಕ್ರಿಯೆ ಚಾಲನೆ ನೀಡಲಾಗಿದೆ. ದೇಶದಲ್ಲಿ ಸುಮಾರು 5 ಟ್ರಿಲಿಯನ್ ಆರ್ಥಿಕತೆಯಲ್ಲಿ ಹಸುವಿನ ಪಾತ್ರ ಇದೆ. ಅಲ್ಲದೇ, ಹಸುವು ಸಂಪೂರ್ಣವಾಗಿ ವಿಜ್ಞಾನದ ವಿಷಯಗಳಿಂದ ಆಧಾರಿಸಿದೆ. ಈ ಹಿನ್ನಲೆ ಹಸುವಿನ ಕುರಿತ ತಿಳುವಳಿಕೆ ಕೂಡ ಅವಶ್ಯವಾಗಿದ್ದು, ಈ ಹಿನ್ನಲೆ ಇದೇ ಮೊದಲ ಬಾರಿ ಗೋ ವಿಜ್ಞಾನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಭಾಷೆಯಲ್ಲಿಯೂ ಪರೀಕ್ಷೆ
ಇನ್ನು ಈ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್ ಹೊರತು ಪಡಿಸಿ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತಿದೆ. 100 ಅಂಕಗಳಿಗೆ ಈ ಪರೀಕ್ಷೆಯನ್ನು ನಡೆಸಲಾಗುವುದು. ಅಲ್ಲದೇ ಪರೀಕ್ಷೆಯೂ ಬಹು ಆಯ್ಕೆ ಉತ್ತರವನ್ನು ಒಳಗೊಂಡಿರಲಿದೆ. ನಾಲ್ಕು ವಿಭಾಗಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ಅವಧಿ 1 ಗಂಟೆಯಾಗಿದೆ. ಈ ಪರೀಕ್ಷೆಗೆ ಯಾವುದೇ ಶುಲ್ಕವಿಲ್ಲ.
ನಾಲ್ಕು ವಿಭಾಗದಲ್ಲಿ ಪರೀಕ್ಷೆ
ಪ್ರಾಥಮಿಕ ಹಂತ ಅಂದರೆ 8ನೇ ತರಗತಿವರೆಗೆ, ಎರಡನೇ ಹಂತ- 9ನೇ ತರಗತಿಯಿಂದ 12ನೇ ತರಗತಿವರೆಗೆ ಕಾಲೇಜು ಹಂತ ಅಂದರೆ 12ನೇ ತರಗತಿಯಿಂದ ರಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮತ್ತೊಂದು ಹಂತ ಸಾಮಾನ್ಯ ಜನರಿಗೆ ಇರಲಿದೆ. ಈ ರೀತಿ ನಾಲ್ಕು ವಿಭಾಗದಲ್ಲಿ ಈ ಪರೀಕ್ಷೆ ನಡೆಯಲಿದೆ.
ಏನಿರಲಿದೆ ವಿಷಯ:
ಹಸುಗಳ ಕುರಿತಾದ ಸಾಹಿತ್ಯ, ಗೋ ಉಲ್ಲೇಖದ ಪುಸ್ತಕಗಳಲ್ಲಿನ ಪ್ರಶ್ನಾವಳಿಗಳನ್ನು ಪರೀಕ್ಷೆಗೆ ಕೇಳಲಾಗುವುದು. ಅಲ್ಲದೇ ಪರೀಕ್ಷೆಯ ಪಠ್ಯಕ್ರಮ ರಾಷ್ಟ್ರೀಯ ಕಾಮಧೇನು ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಪ್ರಮಾಣಪತ್ರ ಸಿಗಲಿದೆ
ಪರೀಕ್ಷೆಯನ್ನು ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಡೆಸಲಾಗುವುದು. ಫಲಿತಾಂಶವನ್ನು ಕೂಡ ತಕ್ಷಣವೇ ಘೋಷಿಸಲಾಗುವುದು. ಪರೀಕ್ಷೆ ಹಾಜರಾದವರಿಗೆ ಪ್ರಮಾಣಪತ್ರ ಕೂಡ ಸಿಗಲಿದೆ, ಅರ್ಹ ಅಭ್ಯರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ