ನವದೆಹಲಿ(ಜ. 24): ಪ್ರತಿಭಟನಾನಿರತ ಜೆಎನ್ಯು ವಿದ್ಯಾರ್ಥಿಗಳ ಬಗ್ಗೆ ಯೋಗ ಗುರು ಬಾಬಾ ರಾಮದೇವ್ ಹಾಸ್ಯ ಮಾಡಿದ್ಧಾರೆ. ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವುದನ್ನು ನಿಲ್ಲಿಸಿ ಓದು ಮುಂದುವರಿಸಲು ಪೆನ್ಷನ್ ಸ್ಕೀಮ್ ಜಾರಿಗೊಳಿಸಬೇಕು ಎಂದು ಹೇಳಿದ್ಧಾರೆ. ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು ಈ ಮೇಲಿನ ಸಲಹೆಗಳನ್ನು ನೀಡಿ ತಮಾಷೆ ಮಾಡಿದ್ದಾರೆ.
“ಜೆಎನ್ಯುನ ಹಿರಿಯ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಸುಮ್ಮನೆ ಓದಿಕೊಂಡಿರಲು ಪಿಂಚಣಿ ಯೋಜನೆ ಪ್ರಾರಂಭಿಸಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ” ಎಂದು ಬಾಬಾ ರಾಮದೇವ್ ತಿಳಿಸಿದರು.
ಇದನ್ನೂ ಓದಿ: ನೇಪಾಳದ ರೆಸಾರ್ಟ್ನಲ್ಲಿ ಉಸಿರುಗಟ್ಟಿ ಕೇರಳದ 8 ಜನ ಸಾವು; ಇಂದು ಅಂತ್ಯ ಸಂಸ್ಕಾರ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಬಾಬಾ ರಾಮದೇವ್ ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆಯ ಕೆಲಸವನ್ನು ರಾಜಕೀಯ ಪಕ್ಷಗಳಿಗೆ ಬಿಟ್ಟು ನೀವು ಓದಲು ಗಮನ ಕೊಡುವಂತೆ
ಜೆಎನ್ಯು ವಿದ್ಯಾರ್ಥಿಗಳಿಗೆ ಸಲಹೆಯನ್ನೂ ನೀಡಿದರು.
“ಕೆಲ ರಾಜಕೀಯ ಪಕ್ಷಗಳು, ವಿದೇಶೀ ಶಕ್ತಿಗಳು ಹಾಗೂ ಕೆಲ ಕೋಮುವಾದಿ ಶಕ್ತಿಗಳು ಸಿಎಎ ವಿಚಾರದಲ್ಲಿ ಅಲ್ಪಸಂಖ್ಯಾತರದಲ್ಲಿ ಭೀತಿ ಸೃಷ್ಟಿಸಲು ಪ್ರಯತ್ನಿಸುತ್ತಿವೆ” ಎಂದು ಬಾಬಾ ಬೇಸರಪಟ್ಟರು.
ಸಿಎಎ ಕಾಯ್ದೆಯಿಂದ ಯಾರೂ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ವಾದಿಸಿದ ಅವರು, ಸಿಎಎ ವಿರೋಧಿ ಹೋರಾಟಗಾರರು ಹಿಂಸಾಚಾರ ನಡೆಸಬಾರದೆಂದು ಕರೆ ನೀಡಿದರು.
ಇದನ್ನೂ ಓದಿ: FACT CHECK: ಸಿಎಎ ವಿರೋಧಿ ಹೋರಾಟಕ್ಕೆ ಮಸಿ ಬಳಿಯುವ ಸಲುವಾಗಿ ಬಿಜೆಪಿ ಐಟಿ ಸೆಲ್ ಹೀಗಾ ಮಾಡೋದು?
“ಯಾವ ನಾಯಕನಾಗಲೀ, ರಾಜಕೀಯ ಪಕ್ಷವೇ ಆಗಲಿ ಯಾವುದೇ ವ್ಯಕ್ತಿಯಿಂದ ಪೌರತ್ವ ಕಿತ್ತುಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲ ಸಂಘಟನೆಗಳ ಹಿತಾಸಕ್ತಿಗೋಸ್ಕರ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗಲೀ, ಸಾರ್ವಜನಿಕ ಆಸ್ತಿ ನಾಶ ಮಾಡುವುದಾಗಲೀ ಮಾಡಬಾರದು” ಎಂದು ಯೋಗ ಗುರು ಒತ್ತಾಯಿಸಿದರು.
ಇನ್ನು, ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಬೇಕು. ಇಬ್ಬರೇ ಮಕ್ಕಳನ್ನು ಹೊಂದಿರಬೇಕು. ಹೆಚ್ಚು ಮಕ್ಕಳು ಹೊಂದಿದವರನ್ನು ಶಿಕ್ಷಿಸುವಂತಹ ಕಾನೂನು ರೂಪಿಸಬೇಕು ಎಂದು ಸರ್ಕಾರಕ್ಕೆ
ರಾಮದೇವ್ ಸಲಹೆ ನೀಡಿ ವಿವಾದ ಸೃಷ್ಟಿಸಿದರು.
“ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹುಟ್ಟಿಸುವ ತಂದೆಯನ್ನು ಶಿಕ್ಷಿಸಬೇಕು. ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಬೇಕು. ಅವರ ಮೂರನೇ ಮಗುವಿನ ವೋಟಿಂಗ್ ಹಕ್ಕನ್ನೂ ಕಸಿದುಕೊಳ್ಳಬೇಕು” ಎಂದು ರಾಮದೇವ್ ಪ್ರಸ್ತಾವ ಮುಂದಿಟ್ಟರು.
ಇದೇ ವೇಳೆ, ಪತಂಜಲಿ ಆಯುರ್ವೇದ ಸಂಸ್ಥೆಯು ರುಚಿ ಸೋಯಾ ಕಂಪನಿಯನ್ನು ಖರೀದಿಸಿದ ವಿಚಾರವನ್ನು ಈ ಸಂದರ್ಭದಲ್ಲಿ ಬಾಬಾ ರಾಮದೇವ್ ತಿಳಿಸಿದ್ದಾರೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ