ಕೇಂದ್ರ ಸರ್ಕಾರದ ಜನ ಧನ- ಆಯುಷ್ಮಾನ್ ಭಾರತ ಯೋಜನೆಗಳು ಉತ್ತಮವಾದವು: ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

ಈ ಬಾರಿ ಅರ್ಥಶಾಸ್ತ್ರದಲ್ಲಿ ಮೂವರಿಗೆ ನೊಬೆಲ್ ಪಾರಿತೋಷಕ ನೀಡಲಾಗಿದೆ. ಭಾರತ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮತ್ತವರ ಎರಡನೇ ಪತ್ನಿ ಎಸ್ತೆರ್ ಡುಫ್ಲೋ ಅವರೂ ಇದರಲ್ಲಿದ್ದಾರೆ.

news18-kannada
Updated:October 19, 2019, 11:40 PM IST
ಕೇಂದ್ರ ಸರ್ಕಾರದ ಜನ ಧನ- ಆಯುಷ್ಮಾನ್ ಭಾರತ ಯೋಜನೆಗಳು ಉತ್ತಮವಾದವು: ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ
ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ
  • Share this:
ನವದೆಹಲಿ(ಅ.19): "ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ಧನ ಮತ್ತು ಆಯುಷ್ಮಾನ್ ಭಾರತ್ ರೀತಿಯ ಯೋಜನೆಗಳು ತುಂಬಾ ಉತ್ತಮವಾದವು" ಎಂದು 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಪುರಸ್ಕೃತ  ಅಭಿಜಿತ್‌ ಬ್ಯಾನರ್ಜಿಯವರು ಹೇಳಿದ್ದಾರೆ.

ಶನಿವಾರ(ಅ.19) ಮಧ್ಯಾಹ್ನ ತನ್ನ ಹಳೆಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ, ಮಾಧ್ಯಮದವರೊಂದಿಗೆ ಮಾತಾಡಿದರು. ಈ ವೇಳೆ ಪ್ರಧಾನಿ ಮೋದಿ ಸರ್ಕಾರದ ಜನ ಧನ, ಆಯುಷ್ಮಾನ್​​ ಭಾರತ್, ಪ್ರಧಾನ ಮಂತ್ರಿ ಉಜ್ವಲ ಯೋಜನೆಗಳು ತುಂಬಾ ಉತ್ತಮವಾದವು. ಭವಿಷ್ಯದಲ್ಲಿ ಜನರಿಗೆ ಉಪಯೋಗವಾಗಲಿದೆ ಎಂದು ಹೊಗಳಿದರು.

ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಆಯುಷ್ಮಾನ್‌ ಭಾರತ್‌. ಈ ಯೋಜನೆಯಿಂದ 10 ಕೋಟಿ ಕುಟುಂಬಗಳ ಸುಮಾರು 50 ಕೋಟಿ ಜನ ಪ್ರಯೋಜನೆ ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಎಲ್ಲಾ ವರ್ಗದ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ (ಎಲ್​ಪಿಜಿ) ಸಂಪರ್ಕ ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ಜನಧನ' ಯೋಜನೆಯೂ ದೇಶದ ಹಲವಾರು ಜನ ಖಾತೆ ಹೊಂದುವ ಅವಕಾಶ ನೀಡುವ ಮೂಲಕ ಬ್ಯಾಂಕಿಂಗ್‌ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ಇಂತಹ ಯೋಜನೆಗಳು ಇನ್ನಷ್ಟು ಬರಬೇಕು ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ  ಅಭಿಜಿತ್‌ ಬ್ಯಾನರ್ಜಿಯವರು ಅಭಿಪ್ರಾಯಪಟ್ಟರು.

ಈ ಬಾರಿ ಅರ್ಥಶಾಸ್ತ್ರದಲ್ಲಿ ಮೂವರಿಗೆ ನೊಬೆಲ್ ಪಾರಿತೋಷಕ ನೀಡಲಾಗಿದೆ. ಭಾರತ ಮೂಲದ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮತ್ತವರ ಎರಡನೇ ಪತ್ನಿ ಎಸ್ತೆರ್ ಡುಫ್ಲೋ ಅವರೂ ಇದರಲ್ಲಿದ್ದಾರೆ. ಜಾಗತಿಕವಾಗಿ ಬಡತನ ನಿವಾರಿಸಲು ಈ ಮೂವರು ಮಾಡಿದ ಪ್ರಯೋಗಗಳನ್ನು ಗುರುತಿಸಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಕೋಲ್ಕತಾ ಸಂಜಾತ ಅಭಿಜಿತ್ ಬ್ಯಾನರ್ಜಿ ಅವರಿಗೆ ಅಮೆರಿಕವೇ ಬಹುತೇಕ ಕಾರ್ಯಕ್ಷೇತ್ರವಾಗಿರುವುದರಿಂದ ಭಾರತೀಯರಿಗೆ ಇವರು ಅಷ್ಟೇನೂ ಚಿರಪರಿಚಿತರಲ್ಲ. ಆದರೆ, ಕಳೆದ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ಕನಿಷ್ಠ ಆದಾಯ ಯೋಜನೆ (ನ್ಯಾಯ್) ಹಿಂದಿನ ಮಿದುಳು ಇವರೇ ಆಗಿದ್ದರು ಎಂಬುದು ಗಮನಾರ್ಹ. ಹಾಗೆಯೇ, ಮೋದಿ ಘೋಷಿಸಿದ ನೋಟ್ ಬ್ಯಾನ್ ಕ್ರಮದ ಟೀಕಾಕಾರರೂ ಆಗಿದ್ದರು.

1961ರಲ್ಲಿ ಕೋಲ್ಕತಾದಲ್ಲಿ ಜನಿಸಿದ ಅಭಿಜಿತ್ ಬ್ಯಾನರ್ಜಿ ಅವರ ತಂದೆ ತಾಯಿ ಇಬ್ಬರೂ ಅರ್ಥಶಾಸ್ತ್ರಜ್ಞರೇ. ಜವಾಹರಲಾಲ್ ವಿಶ್ವ ವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಅವರು 1988ರಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ ಪಿಹೆಚ್​ಡಿ ಪೂರ್ಣಗೊಳಿಸಿದರು. ಅರುಂಧತಿ ಬ್ಯಾನರ್ಜಿ ಇವರ ಮೊದಲ ಪತ್ನಿ. ಅವರ ವಿವಾಹ ವಿಚ್ಛೇದನವಾದ ಬಳಿಕ ತಮ್ಮ ಸಹಪಾಠಿ ಹಾಗೂ ಸಹವರ್ತಿ ಎಸ್ತೆರ್ ಡುಫ್ಲೋ ಅವರನ್ನ ನಾಲ್ಕೈದು ವರ್ಷಗಳ ಹಿಂದೆ ವರಿಸಿದರು.

ಇದನ್ನೂ ಓದಿ: ನೊಬೆಲ್ ಪುರಸ್ಕೃತ ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ; ಕಾಂಗ್ರೆಸ್ ‘ನ್ಯಾಯ್’ ಹಿಂದಿನ ಶಕ್ತಿ ಇವರೇ

ಅಮೆರಿಕವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಅಭಿಜಿತ್ ಬ್ಯಾನರ್ಜಿ ಅವರು ತಮ್ಮ ಭಾರತದಲ್ಲೂ ತಮ್ಮ ಪ್ರಯೋಗಗಳನ್ನ ಮಾಡಿದ್ದಾರೆ. ಜಾಗತಿಕವಾಗಿ ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಆರ್ಥಿಕ ಕ್ರಮಗಳನ್ನು ಅನ್ವೇಷಿಸುವ ಮನೋಭಾವ ಹೊಂದಿರುವ ಇವರು ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆ್ಯಕ್ಷನ್ ಲ್ಯಾಬ್ ಎಂಬ ಸಂಸ್ಥೆಯ ಸಹ ಸಂಸ್ಥಾಪಕರೂ ಆಗಿದ್ದಾರೆ. ತಮಿಳುನಾಡು ಮೂಲದ ಸೆಂದಿಲ್ ಮುಲ್ಲೈನಾತನ್ ಮತ್ತು ತಮ್ಮ ಎರಡನೇ ಪತ್ನಿ ಎಸ್ತೆರ್ ಡುಫ್ಲೋ ಅವರ ಜೊತೆ ಸೇರಿ ಈ ಲ್ಯಾಬ್ ಅನ್ನು ಅವರು ಪ್ರಾರಂಭಿಸಿದ್ದರು. ಇದಷ್ಟೇ ಅಲ್ಲದೆ, ಅನೇಕ ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಹಲವು ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದಾರೆ.2016ರಲ್ಲಿ ನರೇಂದ್ರ ಮೋದಿ ಅವರು 500 ಮತ್ತು 1000 ಮುಖಬೆಲೆಯ ನೋಟು ಅಪಮೌಲ್ಯಗೊಳಿಸುವ ನಿರ್ಧಾರ ಪ್ರಕಟಿಸಿದ್ದರು. ಕಪ್ಪು ಹಣ ನಿಗ್ರಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ಧಾಗಿ ಹೇಳಿದ್ದರು. ಸರ್ಕಾರದ ಈ ನೀತಿಯನ್ನು ವಿಶ್ವಾದ್ಯಂತ ಹಲವು ಆರ್ಥಿಕ ತಜ್ಞರು ಟೀಕಿಸಿದ್ದರು. ಇದರಲ್ಲಿ ಅಭಿಜಿತ್ ಬ್ಯಾನರ್ಜಿ ಅವರೂ ಇದ್ದರು. ಎರಡು ವರ್ಷಗಳ ಹಿಂದೆ ನ್ಯೂಸ್18 ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅಭಿಜಿತ್ ಬ್ಯಾನರ್ಜಿ, ತನಗೆ ನೋಟ್ ಬ್ಯಾನ್ ಹಿಂದಿನ ತರ್ಕವೇ ಅರ್ಥವಾಗಿಲ್ಲ ಎಂದು ವ್ಯಂಗ್ಯ ಮಾಡಿದ್ದರು.
----------
First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading