ಕೃಷಿ ಸುಧಾರಣೆ ಇನ್ನೂ ಆಗಬೇಕೆಂದ ಕೇಂದ್ರ; ಎಂಎಸ್ಪಿ ಕಾನೂನು ರೂಪಿಸುವಂತೆ ರೈತರ ಹಠ
ಸರ್ಕಾರ ಮತ್ತು ಪ್ರತಿಭಟನಾನಿರತ ರೈತ ಸಂಘಟನೆಗಳ ಮಧ್ಯೆ ಈಗಾಗಲೇ 5 ಸುತ್ತಿನ ಮಾತುಕತೆ ನಡೆದು ವಿಫಲವಾಗಿದೆ. ಕೇಂದ್ರದ ಕೃಷಿ ಕಾಯ್ದೆಗಳನ್ನ ಹಿಂಪಡೆಯಬೇಕೆಂದು ಬೇಡಿಕೆ ಇಟ್ಟಿರುವ ರೈತರು ಆರನೇ ಸುತ್ತಿನ ಮಾತುಕತೆಗೆ ಎಂಎಸ್ಪಿ ಭರವಸೆಯ ಷರತ್ತನ್ನ ಮುಂದಿಟ್ಟಿದ್ದಾರೆ.
ನವದೆಹಲಿ(ಡಿ. 24): ಕೇಂದ್ರದ ಸರ್ಕಾರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ರೈತರ ಜೊತೆ ಸಂಧಾನ ನಡೆಸಲು ಸರ್ಕಾರದ ಪ್ರಯತ್ನ ಕೂಡ ಮುಂದುವರಿದಿದೆ. ಆದರೆ, ಕಾಯ್ದೆ ಸಂಪೂರ್ಣ ಹಿಂಪಡೆಯಬೇಕೆಂದು ಹಠ ತೊಟ್ಟಿರುವ ರೈತ ಸಂಘಟನೆಗಳು ಸರ್ಕಾರದ ಜೊತೆ ಮತ್ತೊಂದು ಸುತ್ತಿನ ಮಾತುಕತೆಗೆ ಷರತ್ತು ವಿಧಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಾದ ಎಂಎಸ್ಪಿಯನ್ನು ಕಾನೂನಾಗಿ ರೂಪಿಸಬೇಕೆಂಬುದು ರೈತರ ಷರತ್ತಾಗಿದೆ. ಎಂಎಸ್ಪಿ ಲೀಗಲೈಸ್ ಮಾಡಿ ಘೋಷಣೆ ಹೊರಡಿಸಿದರೆ ಮಾತ್ರ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿ ಸಂಘಟನೆಗಳು ಹೇಳಿವೆ. ರೈತರ ಪ್ರತಿಭಟನೆಗಳ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾದ ಈ ಹೇಳಿಕೆಯನ್ನು ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್ ನಿನ್ನೆ ತಿಳಿಸಿದ್ದಾರೆ. ಸರ್ಕಾರ ತನ್ನ ಕೃಷಿ ಕಾಯ್ದೆಗಳಿಗೆ ಅರ್ಥವಿಲ್ಲದ ತಿದ್ದುಪಡಿಗಳನ್ನ ಮಾಡಿ ಥೇಪೆ ಹಚ್ಚುವ ಕೆಲಸ ಮಾಡುವುದು ವ್ಯರ್ಥ. ಇದನ್ನ ರೈತರು ಈಗಾಗಲೇ ತಿರಸ್ಕರಿಸಿದ್ದಾರೆ. ಈಗೇನಿದ್ದರೂ ಎಂಎಸ್ಪಿ ವಿಚಾರದಲ್ಲಿ ರೈತರ ಬೇಡಿಕೆಯನ್ನ ಮೊದಲ ಈಡೇರಿಸಿ ಆನಂತರ ಮಾತುಕತೆಗೆ ಬರಲಿ ಎಂದು ಯಾದವ್ ತಿಳಿಸಿದ್ದಾರೆ. ಹಾಗೆಯೇ, ಪ್ರತಿಭಟನೆಯಲ್ಲಿ ಇಲ್ಲದ ಕೆಲ ರೈತ ಸಂಘಟನೆಗಳ ಜೊತೆ ಸರ್ಕಾರ ಮಾತುಕತೆ ನಡೆಸುವುದರಿಂದಲೂ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಪ್ರತಿಭಟನೆಗಳಿಗೆ ಸಂಬಂಧವಿಲ್ಲದ ಸಂಘಟನೆಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಸರ್ಕಾರ ರೈತರ ಆಂದೋಲನವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದೆ. ನಮಗೆ ಅಮೂಲಾಗ್ರ ಪ್ರಸ್ತಾಪ ಸರ್ಕಾರದ ಕಡೆಯಿಂದ ಬಂದಿಲ್ಲ. ಡಿಸೆಂಬರ್ 5ರಂದು ಸರ್ಕಾರ ಮೌಖಿಕವಾಗಿ ನೀಡಿದ ವಾಗ್ದಾನವನ್ನು ಲಿಖಿತ ರೂಪದಲ್ಲಿ ಮಾತ್ರ ಪ್ರಸ್ತಾಪ ಮಾಡಿದೆ. ಸರ್ಕಾರದ ಅಂದಿನ ಭರವಸೆಯನ್ನು ನಾವು ಈಗಾಗಲೇ ತಿರಸ್ಕರಿಸಿದ್ದೇವೆ. ಮೂರು ಕೃಷಿ ಕಾಯ್ದೆಗಳನ್ನ ಸಂಪೂರ್ಣವಾಗಿ ರದ್ದು ಮಾಡಬೇಕೆಂಬ ನಮ್ಮ ಬೇಡಿಕೆಗೆ ಈಗಲೂ ಬದ್ಧವಾಗಿದ್ದೇವೆ. ಎಂಎಸ್ಪಿ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ಭರವಸೆ ಬಂದಿಲ್ಲ. ಎಂಎಸ್ಪಿಗೆ ಕಾನೂನು ವ್ಯಾಪ್ತಿಯನ್ನ ನೀಡಿಲ್ಲ. ಎಂಎಸ್ಪಿ ಕಾನೂನು ರೂಪಿಸಿದರೆ ನಾವು ಒಪ್ಪುತ್ತೇವೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಹೇಳಿಕೆಯನ್ನು ಉಲ್ಲೇಖಿಸಿ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ವಲಯದಲ್ಲಿ ಸುಧಾರಣೆಗೆ ಸರ್ಕಾರದ ಪ್ರಯತ್ನ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದು ರೈತರು ಮಾತುಕತೆ ಮೂಲಕ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
“ರೈತರ ಒಕ್ಕೂಟಗಳು ಚರ್ಚೆ ನಡೆಸಲು ಮುಂದಾಗುತ್ತಾರೆಂಬ ಆಶಯ ಇಟ್ಟುಕೊಂಡಿದ್ದೇವೆ. ಅವರೇ ಒಂದು ಸಮಯ ಗೊತ್ತುಪಡಿಸಿದರೆ ಮುಂದಿನ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧವಿದೆ. ಸಮಸ್ಯೆ ಇತ್ಯರ್ಥಕ್ಕೆ ಅವರು ಆಸಕ್ತರಾಗುತ್ತಾರೆಂದು ಆಶಿಸಿದ್ದೇವೆ” ಎಂದು ಕೇಂದ್ರ ಕೃಷಿ ಸಚಿವರು ಹೇಳಿಕೆ ನೀಡಿದ್ದಾರೆ.
ಪ್ರತಿಭಟನಾನಿರತ ರೈತ ಸಂಘಟನೆಗಳು ಮತ್ತು ಸರ್ಕಾರದ ಮಧ್ಯೆ ಈವರೆಗೆ ಐದು ಸುತ್ತುಗಳ ಮಾತುಕತೆ ನಡೆದಿವೆ. ಅಷ್ಟೂ ಮಾತುಕತೆ ಸ್ವಲ್ಪವೂ ಫಲಪ್ರದವಾಗಿಲ್ಲ. ಸರ್ಕಾರ ತನ್ನ ಮೂರು ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರದ ಅಮೂಲಾಗ್ರ ಸುಧಾರಣಾ ಕ್ರಮದ ಭಾಗವಾಗಿವೆ. ಈ ಕಾಯ್ದೆಗಳು ರೈತರಿಗೆ ಮಾರಕವಾಗದೇ ಅನುಕೂಲ ಮಾಡಿಕೊಡುತ್ತವೆ ಎಂಬುದು ಸರ್ಕಾರದ ವಾದ.
ಆದರೆ, ಸರ್ಕಾರ ಕೃಷಿ ಕ್ಷೇತ್ರವನ್ನು ಖಾಸಗಿಯವರ ಸುಪರ್ದಿಗೆ ಒಪ್ಪಿಸಲು ಷಡ್ಯಂತ್ರ ರೂಪಿಸಿದೆ. ರೈತರ ಹಕ್ಕುಗಳನ್ನ ಕಸಿಯಲು ಹೊರಟಿದೆ ಎಂಬು ಪ್ರತಿಭಟನಾಕಾರರ ವಾದವಾಗಿದೆ. ಇದೇ ವೇಳೆ, ಕೆಲವು ರೈತ ಸಂಘಟನೆಗಳು ಸರ್ಕಾರದ ಕೃಷಿ ಕಾಯ್ದೆ ಮತ್ತು ಸುಧಾರಣಾ ಪ್ರಯತ್ನಗಳನ್ನ ಸ್ವಾಗತಿಸಿವೆ. ಸರ್ಕಾರ ತನ್ನ ಪ್ರಯತ್ನದಿಂದ ಕಿಂಚಿತ್ತೂ ವಿಮುಖರಾಗಬಾರದು ಎಂದು ಈ ಸಂಘಟನೆಗಳು ಒತ್ತಾಯಿಸಿವೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ