news18 Updated:February 16, 2021, 4:15 PM IST
ಪ್ರಾತಿನಿಧಿಕ ಚಿತ್ರ
- News18
- Last Updated:
February 16, 2021, 4:15 PM IST
ನವದೆಹಲಿ(ಫೆ. 16): ನಿಮ್ಮ ಮೊಬೈಲ್ಗೆ ಅಪರಿಚಿತರಿಂದ ಅನಗತ್ಯ ಕರೆಗಳು ಮತ್ತು ವಂಚನೆಯ ಕರೆಗಳು ಬರುವುದು ಹೆಚ್ಚುತ್ತಿವೆಯೇ? ಯಾವುದೋ ದುರ್ಬಲ ಕ್ಷಣದಲ್ಲಿ ಸ್ಪ್ಯಾಮ್ ಕರೆಗಳನ್ನ ಸ್ವೀಕರಿಸಿ ಸುಳ್ಳು ಆಫರ್ಗಳನ್ನ ನಂಬಿ ವಂಚನೆಗೊಳಗುತ್ತಿದ್ದೀರಾ? ನೀವೊಬ್ಬರೇ ಅಲ್ಲ, ಇಂಥ ಸ್ಪ್ಯಾಮ್ ಕರೆ ಮತ್ತು ಮೆಸೇಜ್ಗಳಿಂದ ಹೈರಾಣಾಗಿ ಹೋಗಿರುವ ಬಹಳ ಮಂದಿ ಈ ದೇಶದಲ್ಲಿದ್ದಾರೆ. ಕೇಂದ್ರ ಸರ್ಕಾರ ಇದೀಗ ಇಂಥ ವಂಚನೆಗಳಿಗೆ ಕಡಿವಾಣ ಹಾಕಲು ಯೋಜನೆ ಹಾಕಿದೆ. ಫೋನ್ ಕಾಲ್ ಮತ್ತು ಟೆಕ್ಸ್ಟ್ ಮೆಸೇಜ್ ಮೂಲಕ ಸ್ಪ್ಯಾಮ್ ಮಾಡುವ ಹಾಗೂ ಹಣಕಾಸು ವಂಚನೆ ಮಾಡುವವರನ್ನ ಮಟ್ಟಹಾಕಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಕೇಂದ್ರ ಸಂವಹನ ಸಚಿವಾಲಯ ಹೇಳಿಕೆ ನೀಡಿದೆ.
ಅನಪೇಕ್ಷಿತ ಕರೆ ಮತ್ತು ಸಂದೇಶಗಳನ್ನ ಫ್ಲ್ಯಾಗ್ ಮಾಡಲು ಜನರಿಗೆ ಅವಕಾಶ ಕೊಡುವ ಪ್ಲಾಟ್ಫಾರ್ಮ್ ನಿರ್ಮಿಸಲಾಗುವುದು. ಹೊಸ ಡಾಟಾ ಇಂಟೆಲಿಜೆನ್ಸ್ ಘಟಕ ಸ್ಥಾಪಿಸಲಾಗುವುದು. ಸಿಬಿಐ, ಇಡಿಯಂತಹ ಕಾನೂನು ಜಾರಿ ಸಂಸ್ಥೆಗಳು, ಬ್ಯಾಂಕ್ ಮತ್ತು ಸರ್ವಿಸ್ ಪ್ರೊವೈಡರ್ಗಳ ಜೊತೆ ಸೇರಿ ಡಾಟಾ ಇಂಟೆಲಿಜೆನ್ಸ್ ಯೂನಿಟ್ನ ಸಿಬ್ಬಂದಿ ಈ ವಂಚಕರನ್ನ ಮಟ್ಟಹಾಕುವ ಕೆಲಸ ಮಾಡಲಿದ್ದಾರೆ. ಇದು ಕೇಂದ್ರ ಸರ್ಕಾರದ ಮನಸ್ಸಿನಲ್ಲಿರುವ ತಂತ್ರವಾಗಿದೆ.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್: ಜೀವನ ನಿರ್ವಹಣೆಗೆ ಚಿನ್ನವನ್ನೇ ಮಾರಾಟ ಮಾಡಿದ ಖಾಸಗಿ ಶಾಲೆ ಶಿಕ್ಷಕರು!
ಈಗಂತೂ Vishing ಎಂದು ಕರೆಯಲಾಗುವ ಹೊಸ ಮಾದರಿಯ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡುವ ವಂಚಕರು ಜನರಿಂದ ಪಾಸ್ವರ್ಡ್ ಹಾಗೂ ಅಕೌಂಟ್ ವಿವರ ಪಡೆದು ಹಣಕಾಸು ವಂಚನೆ ಮಾಡುವುದು ವಿಶಿಂಗ್ ವಂಚನೆ. ಇಂಥ ಅನಪೇಕ್ಷಿತ ಕರೆ ಮತ್ತು ಮೆಸೇಜ್ಗಳು ಹೆಚ್ಚುತ್ತಿರುವುದು ಹಾಗೂ ವಿಶಿಂಗ್ ಎಂದು ಕರೆಯುವ ಹೊಸ ಹಣಕಾಸುವ ವಂಚನೆ ವಿಧಾನದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರು ನಿನ್ನೆ ಸಭೆ ನಡೆಸಿ ಚರ್ಚಿಸಿದ್ದಾರೆ. ಆ ಬಳಿಕ, ಈ ವಂಚಕರನ್ನ ಮಟ್ಟಹಾಕುವ ಯೋಜನೆಯ ಪ್ರಸ್ತಾವವನ್ನು ಮಾಧ್ಯಮಗಳ ಮುಂದಿಟ್ಟಿದ್ಧಾರೆ.
ಸ್ಪ್ಯಾಮ್ ಮೂಲಕ ವಂಚನೆ ಎಸಗುವ ಕೆಲಸ ಜಾರ್ಖಂಡ್ನ ಜಮ್ತಾರ ಮತ್ತು ಹರಿಯಾಣದ ಮೇವಾತ್ ಪ್ರದೇಶಗಳಿಂದಲೇ ಹೆಚ್ಚಾಗಿ ನಡೆಸಲಾಗುತ್ತಿದೆ. ಇವೆರಡೂ ಕೂಡ ಇಂಥ ವಂಚಕರ ಹಾಟ್ ಸ್ಪಾಟ್ಗಳಾಗಿವೆ ಎಂದು ಅಧಿಕಾರಿಯೊಬ್ಬರು ನ್ಯೂಸ್18ಗೆ ತಿಳಿಸಿದ್ದಾರೆ.
ಈ ಕಾರ್ಯದಲ್ಲಿ ಡಿಜಿಟಲ್ ಅಥವಾ ಡಾಟಾ ಇಂಟೆಲಿಜೆನ್ಸ್ ಯೂನಿಟ್ ಒಂದು ನೋಡಲ್ ಸಂಸ್ಥೆಯಾಗಿ ಇರಲಿದೆ. ಇದು ಕಾನೂನು ಜಾರಿ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಮತ್ತು ಟೆಲಿಕಾಂ ಸೇವೆ ಕಂಪನಿಗಳೊಂದಿಗೆ ಸೇರಿ ವಂಚಕರನ್ನ ಪತ್ತೆ ಹಚ್ಚುವ ಕೆಲಸ ಮಾಡಲಿದೆ ಎಂದು ಕೇಂದ್ರ ಸಂವಹನ ಇಲಾಖೆ ತಿಳಿಸಿದೆ.
Published by:
Vijayasarthy SN
First published:
February 16, 2021, 4:15 PM IST