ವಿಮಾನ ಹಾರಾಟ ಸಂಖ್ಯೆ ಹೆಚ್ಚಿಸಲು ಗಂಭೀರ ಚಿಂತನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಕಷ್ಟದಲ್ಲಿರುವ ವಿಮಾನಯಾನ ಕಂಪನಿಗಳು ಹಾರಾಟ ಪ್ರಮಾಣ ಹೆಚ್ಚಿಸಲು ಅವಕಾಶ ನೀಡುವಂತೆ ಮಾಡಿರುವ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣಿಯುವ ಸಾಧ್ಯತೆ ಇದೆ.

  • Share this:

ನವದೆಹಲಿ(ಅ. 8): ಕೊರೋನಾ ಬಂದು ಲಾಕ್​ಡೌನ್ ಶುರುವಾದ ಬಳಿಕ‌ ಅತ್ಯಂತ ಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ವಿಮಾನಯಾನವೂ ಒಂದು. ಈಗ ಬೇರೆಲ್ಲಾ ಉದ್ಯಮಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿವೆ. ಆದರೆ ಇಂದಿಗೂ ವಿಮಾನ ಹಾರಾಟ ಆಗುತ್ತಿರುವುದು ಶೇಕಡಾ 50ರಷ್ಟು ಮಾತ್ರ. ಈ‌ ಹಿನ್ನೆಲೆಯಲ್ಲಿ ಈಗ ವಿಮಾನಯಾನ ಇಲಾಖೆ ವಿಮಾನಗಳ ಹಾರಾಟದ ಪ್ರಮಾಣವನ್ನು ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಸದ್ಯ ಶೇ. 50ರಷ್ಟು ವಿಮಾನ ಹಾರಾಟವನ್ನು ಮುಂದಿನ ಎರಡು ತಿಂಗಳಲ್ಲಿ ಶೇ. 80ರಷ್ಟಕ್ಕೆ ಹೆಚ್ಚಿಸಲು ವಿಮಾನಯಾನ ಇಲಾಖೆ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿರುವ ವಿಮಾನಯಾನ ಇಲಾಖೆಯು ಶೀಘ್ರವೇ ವಿಮಾನಯಾನ ಸಂಸ್ಥೆಗಳ ಸಭೆಯನ್ನು ನಡೆಸಲಿದೆ. ಸಭೆಯಲ್ಲಿ ವಿಮಾನ ಹಾರಾಟ ಹೆಚ್ಚಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿದುಬಂದಿದೆ.


ಈಗ ಹಬ್ಬಗಳ ಸೀಜನ್ ಶುರುವಾಗುತ್ತಿರುವುದರಿಂದ ಹಾಗೂ ಬೇರೆಲ್ಲಾ ಕ್ಷೇತ್ರಗಳು ಎಂದಿನಂತೆ ಕೆಲಸ ಮಾಡುತ್ತಿರುವುದರಿಂದ ವಿಮಾನಗಳ ಹಾರಾಟವನ್ನೂ ಹೆಚ್ಚಿಸಬೇಕೆಂದು ಯೋಚನೆ ಮಾಡಲಾಗುತ್ತಿದೆ. ಪ್ರತಿದಿನ ದೇಶದಲ್ಲಿ ಸರಿ ಸುಮಾರು 2 ಲಕ್ಷ ಜನ ವಿಮಾನಯಾನ ಮಾಡಲಿದ್ದು ಅವರ ಅನುಕೂಲಕ್ಕೆ ತಕ್ಕಂತೆ ವಿಮಾನ ಪ್ರಯಾಣ ಆರಂಭಿಸುವ ಬಗ್ಗೆ ಚರ್ಚೆಯಾಗುತ್ತಿದೆ.


ಇದನ್ನೂ ಓದಿ: ರಿಪಬ್ಲಿಕ್ ಟಿವಿ ಸೇರಿ ಮೂರು ಸುದ್ದಿ ವಾಹಿನಿಗಳಿಂದ ಟಿಆರ್​ಪಿ ಗೋಲ್ಮಾಲ್: ಮುಂಬೈ ಪೊಲೀಸ್ ಆರೋಪ


ಮಾರ್ಚ್ 24ರ ಮಧ್ಯರಾತ್ರಿಯಿಂದ ಲಾಕ್​ಡೌನ್ ಜಾರಿಗೊಳಿಸಲಾಯಿತು. ಅಂದಿ‌ನಿಂದಲೇ ವಿಮಾನ ಹಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಆಗ ದಿಢೀರನೆ ಲಾಕ್​ಡೌನ್ ಘೋಷಣೆ ಮಾಡಿದ್ದರಿಂದ ದೇಶದಲ್ಲಿ 13 ಸಾವಿರ ವಿಮಾನ ಯಾತ್ರಿಗಳು ಸಂಕಷ್ಟವನ್ನು ಎದುರಿಸಬೇಕಾಯಿತು. ಒಟ್ಟು 5.5 ಲಕ್ಷ ಪ್ರಯಾಣಿಕರು ಬುಕ್ ಮಾಡಿದ್ದ ವಿಮಾನ ಪ್ರಯಾಣದ ಟಿಕೆಟ್ ಹಣವನ್ನು ವಾಪಸ್ ಕೊಡುವ ವ್ಯವಸ್ಥೆ ಆಗುತ್ತಿದೆ.


ಮೊದಲೇ ಸಂಕಷ್ಟದಲ್ಲಿದ್ದ ವಿಮಾನಯಾನ ಸಂಸ್ಥೆಗಳು ತಮ್ಮ ವೆಚ್ಛ ಕಡಿಮೆ ಮಾಡಿಕೊಳ್ಳಲು ವೇತನ ಕಡಿಮೆ ಮಾಡಿದವು. ನೌಕರರನ್ನು ಕೆಲಸದಿಂದ ತೆಗೆದವು. ಸುಪ್ರೀಂ ಕೋರ್ಟ್ ಮುಂದೆ ಕೂಡ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದಲ್ಲಿ ಹಣ ವಾಪಸ್ ಮಾಡಲು ಸಾಧ್ಯವಿಲ್ಲ ಎಂದು ಅಲವತ್ತುಕೊಂಡವು. ಹೀಗೆ ತೀವ್ರ ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳು ಈಗ ವಿಮಾನ ಹಾರಾಟದ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಿವೆ.


ಇದನ್ನೂ ಓದಿ: Maha Kumbha Mela - ಮುಂದಿನ ವರ್ಷ ಸಿಂಧೂ ನದಿ ದಡದ ಮೇಲೆ ಮಹಾ ಕುಂಭಮೇಳ


ಕೇಂದ್ರ ಗೃಹ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳ ನಡುವೆಯೇ ವಿಮಾನಯಾನದ ಪ್ರಮಾಣವನ್ನು ಹೆಚ್ಚಿಸಬೇಕೆಂಬುದು ವಿಮಾನಯಾನ ಇಲಾಖೆ ಹಾಗೂ ವಿಮಾನಯಾನ ಸಂಸ್ಥೆಗಳ ಯೋಚನೆಯಾಗಿದೆ.


ವರದಿ: ಧರಣೀಶ್ ಬೂಕನಕೆರೆ

top videos
    First published: