ಪೆಗಾಸಸ್ ಮೂಲಕ ಭಾರತದ ಪತ್ರಕರ್ತರು, ರಾಜಕಾರಣಿಗಳ ಫೋನ್ ಹ್ಯಾಕ್ ಮಾಡಲಾಗಿತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2018-2019ರ ಅವಧಿಯಲ್ಲಿ ಭೀಮಾ ಕೋರೆಗಾಂವ್ ಹೋರಾಟಗಾರರು, ಹಲವು ಪತ್ರರ್ತರು, ರಾಜಕಾರಣಿಗಳ ಫೋನ್​ಳನ್ನ ಪೆಗಾಸಸ್ ಎಂಬ ಸ್ಪೈವೇರ್ ಮೂಲಕ ಹ್ಯಾಕ್ ಮಾಡಲಾಗಿತ್ತು ಎಂಬಂತಹ ವರದಿಗಳು ಬಂದಿವೆ. ಕೇಂದ್ರ ಸರ್ಕಾರ ಇದನ್ನ ಅಲ್ಲಗಳೆದಿದೆ.

  • News18
  • 3-MIN READ
  • Last Updated :
  • Share this:

ನವದೆಹಲಿ(ಜುಲೈ 19): ಇಸ್ರೇಲ್ ದೇಶದ ಕಂಪನಿಯೊಂದು ರೂಪಿಸಿರುವ ಪೆಗಾಸಸ್ (Pegasus) ಎಂಬ ಗೂಢಚರ್ಯೆ ತಂತ್ರಾಂಶ (Spy Ware) ಬಳಸಿ ಭಾರತದ ಕೆಲ ಪತ್ರಕರ್ತರು, ರಾಜಕಾರಣಿಗಳು ಹಾಗು ಆಂದೋಲನಕಾರರ ಮೊಬೈಲ್ ಫೋನ್​ಗಳನ್ನ ಹ್ಯಾಕ್ (Phone Hacking) ಮಾಡಲಾಗಿತ್ತು ಎಂಬಂತಹ ಸ್ಫೋಟಕ ಸುದ್ದಿ ಹೊರಬಂದಿದೆ. “ಪೆಗಾಸಸ್ ಪ್ರಾಜೆಕ್ಟ್” (Pegasus Project) ಹೆಸರಿನಲ್ಲಿ 17 ಅಂತರರಾಷ್ಟ್ರೀಯ ಮಾಧ್ಯಮ ಸಂಘಟನೆಗಳು ಸೇರಿ ಈ ವಿಚಾರದ ಬಗ್ಗೆ ತನಿಖೆ ಮಾಡಿವೆ ಎಂದು ದಿ ವೈರ್ (The Wire Website) ಜಾಲತಾಣದಲ್ಲಿ ವರದಿಯಾಗಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ಫೋನ್​ಗಳ ಹ್ಯಾಕಿಂಗ್ ನಡೆದಿದೆ ಎನ್ನಲಾಗಿದೆ. ಆದರೆ, ಕೇಂದ್ರ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದೆ. ಈ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪೂರ್ವಗ್ರಹಪೀಡಿತ ಅಭಿಪ್ರಾಯಗಳು ಇದರಲ್ಲಿ ವ್ಯಕ್ತವಾಗಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.


2019ರಲ್ಲೇ ಪೆಗಾಸಸ್ ಹೆಸರು ಮುನ್ನೆಲೆಗೆ ಬಂದಿತ್ತು. ಗೂಢಚಾರಿಗಳು ಪೆಗಾಸಸ್ ಸ್ಪೈ ವೇರ್ ಮೂಲಕ ವಿಶ್ವಾದ್ಯಂತ 1,400 ಜನರ ಫೋನ್ ​ಗಳನ್ನ ಹ್ಯಾಕ್ ಮಾಡಿದ್ದರು. ಇದರಲ್ಲಿ 121 ಭಾರತೀಯರ ಫೋನ್​ಗಳೂ ಸೇರಿವೆ ಎಂದು ಹೇಳಲಾಗಿತ್ತು. ಈಗ ಪೆಗಾಸಸ್ ಪ್ರಾಜೆಕ್ಟ್ ಹೆಸರಿನಲ್ಲಿ ಮಾಧ್ಯಮಗಳು ನಡೆಸಿದ ತನಿಖೆಯಲ್ಲಿ ಕೆಲ ಸ್ಪೋಟಕ ವಿಚಾರಗಳು ಹೊರಬಂದಿವೆ. ಭಾರತದಲ್ಲಿ ಹ್ಯಾಕ್ ಮಾಡಲಾದ ವ್ಯಕ್ತಿಗಳನ್ನ ಗಮನಿಸಿದರೆ ಇದನ್ನ ಸರ್ಕಾರವೇ ಅಧಿಕೃತವಾಗಿ ಮಾಡಿಸಿದ ಹ್ಯಾಕಿಂಗ್​ನಂತಿದೆ ಎಂದು ದಿ ವೈರ್ ಅನುಮಾನಿಸಿದೆ. ವಿವಿಧ ಮಾಧ್ಯಮಗಳಿಗೆ ಸೇರಿದ 40 ಅಗ್ರಮಾನ್ಯ ಪತ್ರಕರ್ತರ ಫೋನ್​ಗಳನ್ನ ಟಾರ್ಗೆಟ್ ಮಾಡಲಾಗಿದೆ. ಕೆಲ ವಿಪಕ್ಷ ನಾಯಕರು, ಹೋರಾಟಗಾರರ ಮೊಬೈಲ್ ಫೋನ್​ಗಳನ್ನ ಪೆಗಾಸಸ್ ಸ್ಪೈ ವೇರ್ ಮೂಲಕ ಹ್ಯಾಕ್ ಮಾಡಲಾಗಿದೆ. 2018 ಮತ್ತು 2019ರ ಅವಧಿಯಲ್ಲಿ ಈ ಕೆಲಸ ಆಗಿದೆ ಎಂಬುದು ದಿ ವೈರ್ ಜಾಲತಾಣದ ವರದಿಯಲ್ಲಿ ವ್ಯಕ್ತವಾಗಿರುವ ಆರೋಪ.


ಇದನ್ನೂ ಓದಿ: Navjot Singh Sidhu - ನವಜೋತ್ ಸಿಂಗ್ ಸಿಧು ಪಂಜಾಬ್​ ಕಾಂಗ್ರೆಸ್​ ಅಧ್ಯಕ್ಷ: ಅಧಿಕೃತ ಘೋಷಣೆ ಮಾಡಿದ ಕಾಂಗ್ರೆಸ್​ ಹೈ ಕಮಾಂಡ್​


ಪೆಗಾಸಸ್ ಸ್ಪೈ ವೇರ್ ಮಾರಾಟ ಮಾಡುವ ಇಸ್ರೇಲ್​ನ ಎನ್​ಎಸ್​ಒ ಗ್ರೂಪ್ ಎಂಬ ಕಂಪನಿಯು ಈ ಆರೋಪದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ಕೊಟ್ಟಿಲ್ಲ. ವಿಶ್ವಾಸಾರ್ಹ ರಾಷ್ಟ್ರಗಳಿಗೆ ಮಾತ್ರ ತನ್ನ ಸ್ಪೈವೇರ್ ಮಾರಾಟ ಮಾಡುವುದಾಗಿ ಇಸ್ರೇಲೀ ಕಂಪನಿ ಹೇಳಿದೆ. ಆದರೆ, ಯಾವ್ಯಾವ ರಾಷ್ಟ್ರಗಳಿಗೆ ಪೆಗಾಸಸ್ ತಂತ್ರಾಂಶವನ್ನು ಮಾರಾಟ ಮಾಡಲಾಗಿದೆ ಎಂಬ ವಿವರವನ್ನು ಎನ್​ಎಸ್​ಒ ಗ್ರೂಪ್ ಗೌಪ್ಯವಾಗಿಟ್ಟಿದೆ.


ಇದೇ ವೇಳೆ ಭಾರತ ಸರ್ಕಾರ ತನ್ನಿಂದ ಅನಧಿಕೃತವಾಗಿ ಯಾವುದೇ ಮೊಬೈಲ್ ಫೋನ್ ಹ್ಯಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ದಿ ವೈರ್​ನಲ್ಲಿ ಪ್ರಕಟವಾದ ಸುದ್ದಿ ಕಪೋಲಕಲ್ಪಿತವಾಗಿದೆ. ದೂರವಾಣಿ ಕದ್ದಾಲಿಕೆಗೆ ಭಾರತದಲ್ಲಿ ಬಿಗಿನಿಯಮ ಇದೆ. ಸರಿಯಾದ ಪ್ರೊಟೋಕಾಲ್ ಮೂಲಕವೇ ಫೋನ್ ಟ್ಯಾಪಿಂಗ್ ಅಥವಾ ಇಂಟರ್ಸೆಪ್ಷನ್ (Interception) ಮಾಡಲಾಗುತ್ತದೆ. ವರದಿಯಲ್ಲಿರುವಂತೆ ಅನಧಿಕೃತವಾಗಿ ಯಾವುದೇ ಫೋನ್ ಹ್ಯಾಕ್ ಆಗಿಲ್ಲ ಎಂದು ಕೇಂದ್ರ ಐಟಿ ಸಚಿವಾಲಯ ತಿಳಿಸಿದೆ.


ಇದನ್ನೂ ಓದಿ: ಭಾರತ ನಿರ್ಮಿತ ಸ್ವತ್ತುಗಳನ್ನು ನಾಶಪಡಿಸಿ: ತಾಲಿಬಾನ್‌ಗೆ ಆದೇಶಿಸಿದ ಪಾಕಿಸ್ತಾನದ ಐಎಸ್‌ಐ


(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

Published by:Vijayasarthy SN
First published: