ಸರ್ಕಾರಿ ಶಾಲೆ ಶಿಕ್ಷಕನಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಅಪ್ರಾಪ್ತೆಗೆ ಅಶ್ಲೀಲ ಸಂದೇಶಗಳನ್ನೂ ಕಳಿಸಿದ್ದ ಕಾಮುಕ

Crime News Today: ವಿದ್ಯಾರ್ಥಿನಿಯ ಹೇಳಿಕೆಯ ಪ್ರಕಾರ ಅಕ್ಟೋಬರ್​ 5ರಂದು ತರಗತಿಗಳು ಮುಗಿದ ನಂತರ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ ಶಾಲೆಯ ಕೋಣೆಯೊಂದರಲ್ಲಿ ಅತ್ಯಾಚಾರ ಮಾಡಿದ್ದಾನೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಜೈಪುರ: 31 ವರ್ಷದ ಸರ್ಕಾರಿ ಶಾಲಾ ಶಿಕ್ಷಕನೊಬ್ಬ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಹೈಪುರದ ಜುಂಝುನು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಶಿಕ್ಷಕ ಅಶ್ಲೀಲ ಸಂದೇಶಗಳನ್ನು, ಫೋಟೊಗಳನ್ನು ಮತ್ತು ವಿಡಿಯೋಗಳನ್ನು ಕಳಿಸಿದ್ದನಂತೆ. ಅದಾದ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ, ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದಾನೆ. ಆದರೆ ಸಂತ್ರಸ್ತೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ಮೇಲಾದ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಆಕೆಯ ಶಾಲಾ ಪುಸ್ತಕದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ನಮೂದಾಗಿದ್ದು, ಅದಕ್ಕೆ ಕರೆ ಮಾಡಿ ನೋವು ಹಂಚಿಕೊಂಡಿದ್ದಾಳೆ. ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

  ವಿದ್ಯಾರ್ಥಿನಿಯ ಹೇಳಿಕೆಯ ಪ್ರಕಾರ ಅಕ್ಟೋಬರ್​ 5ರಂದು ತರಗತಿಗಳು ಮುಗಿದ ನಂತರ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ ಶಾಲೆಯ ಕೋಣೆಯೊಂದರಲ್ಲಿ ಅತ್ಯಾಚಾರ ಮಾಡಿದ್ದಾನೆ. ಕೃತ್ಯದ ನಂತರ ಈ ವಿಚಾರವನ್ನು ಯಾರಿಗೂ ಹೇಳುವಂತಿಲ್ಲ, ಹೇಳಿದರೆ ಸಾಯಿಸಿ ಬಿಡುತ್ತೀನಿ ಎಂದು ಹೆದರಿಸಿದ್ದ ಎನ್ನಲಾಗಿದೆ. ಶಿಕ್ಷಕನ ಬೆದರಿಕೆಗೆ ಹೆದರಿದ ಹುಡುಗಿ ಕೃತ್ಯ ನಡೆದು ಒಂಭತ್ತು ದಿನವಾದರೂ ಯಾರಿಗೂ ವಿಚಾರ ತಿಳಿಸಿರಲಿಲ್ಲ. ಆದರೆ ಅಕ್ಟೋಬರ್​ 15ರಂದು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಅದಾದ ನಂತರ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಹುಡುಗಿಯ ಮನೆಗೆ ಹೋಗಿ ಮಾತನಾಡಿದ್ದಾರೆ. ನಂತರ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  ಅಶ್ಲೀಲ ಚಿತ್ರ ಕಳಿಸುತ್ತಿದ್ದ ಕಾಮುಕ:

  ಆರೋಪಿ ಶಿಕ್ಷಕ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶಗಳನ್ನು ಮತ್ತು ಚಿತ್ರಗಳನ್ನು ಆಗಾಗ ಕಳಿಸುತ್ತಿದ್ದ. ಆದರೆ ಅತ್ಯಾಚಾರ ಮಾಡಿದ ನಂತರ ವಿದ್ಯಾರ್ಥಿನಿ ಮೊಬೈಲ್​ನಿಂದ ಆತ ಕಳಿಸಿದ್ದ ಮೆಸೇಜ್​​ಗಳನ್ನು ಡಿಲೀಟ್​ ಮಾಡಿದ್ದಾನೆ. ಯಾವುದೇ ಸಾಕ್ಷ್ಯ ಸಿಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾನೆ ಆದರೆ ಡಿಲೀಟ್​ ಮಾಡಿರುವ ಸಂದೇಶಗಳನ್ನು ರಿಟ್ರೀವ್​ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

  ಮನೆಯಲ್ಲೆಲ್ಲರೂ ಶಿಕ್ಷಕರೇ:

  ಪ್ರಕರಣ ಸಿಂಘಾನ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಅಲ್ವಾರ್​ ಜಿಲ್ಲೆಯ ಆತನ ಮನೆಯಲ್ಲಿ ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ ಆತನ ಕುಟುಂಬದಲ್ಲಿ ಹಲವರು ಶಿಕ್ಷಕ ವೃತ್ತಿಯಲ್ಲಿದ್ದಾರೆ. ಆತನಿಗೆ ಮದುವೆಯಾಗಿದ್ದು, ಹೆಂಡತಿ ಮತ್ತೊಂದು ಜಿಲ್ಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

  ಇದನ್ನೂ ಓದಿ: ಸಹೋದ್ಯೋಗಿ ಮೇಲೆ ಆತ್ಯಾಚಾರವೆಸಗಿದ ಆರೋಪ; AIIMS ವೈದ್ಯನ ವಿರುದ್ಧ ಪ್ರಕರಣ ದಾಖಲು

  ಉತ್ತರ ಪ್ರದೇಶದಲ್ಲಿ ಇಂತದ್ದೇ ಇನ್ನೊಂದು ಪ್ರಕರಣ ನಡೆದಿತ್ತು, ಮುಜಾಫರ್​ ನಗರದಲ್ಲಿ 17 ವರ್ಷದ ಅಪ್ರಾಪ್ತ ಯುವತಿಯ ಮೇಲೆ ಗನ್​ ತೋರಿಸಿ ಬೆದರಿಸಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಪ್ರಕರಣದ ಬಗ್ಗೆ ಸಂತ್ರಸ್ತೆಯ ತಂದೆ ನೀಡಿದ ದೂರಿನನ್ವಯ ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡಿದ್ದು ಮೂವರು ಆರೋಪಿಗಳಿಗೆ ಹುಡುಕಾಟ ಮಾಡಲಾಗುತ್ತಿದೆ. ತಂದೆ ನೀಡಿದ ದೂರಿನ ಪ್ರಕಾರ, ಮೂವರು ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು ಯುವತಿಗೆ ಗನ್​ ತೋರಿಸಿ ಮನೆ ಮುಂದಿನಿಂದಲೇ ಅಪಹರಿಸಿದ್ದಾರೆ. ನಂತರ ಯಾವುದೋ ಕಾಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

  ಇದನ್ನೂ ಓದಿ: ರೈತರ ಪ್ರತಿಭಟನಾ ಸ್ಥಳವಾದ ಸಿಂಘು ಗಡಿಯಲ್ಲಿ ಕೈ-ಕಾಲುಗಳು ಇಲ್ಲದ ಶವ ಪತ್ತೆ!

  ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳು ಪದೇ ಪದೇ ಕೇಳಿ ಬರುತ್ತಿವೆ. ಅದರಲ್ಲೂ ಕೇಂದ್ರ ರಾಜಧಾನಿ ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಕೇಳಿ ಬರುತ್ತಿವೆ. ಆದರೆ ಉತ್ತರ ಭಾರತದಲ್ಲಿ ನಡೆಯುವ ಪ್ರಕರಣಗಳಲ್ಲಿ ಪೊಲೀಸರು ನಿಧಾನಗತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ. ಪ್ರಕರಣ ಸಂಬಂಧ ಪ್ರತಿಭಟನೆಗಳು ನಡೆದಾಗ ಅಥವಾ ಸಾಮಾಜಿಕ ಜಾಲತಾಣದಲ್ಲಿ ವಿಷಯ ಕೇಳಿ ಬಂದ ನಂತರ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಇದರಿಂದಲೇ ದುಷ್ಕೃತ್ಯ ಮಾಡುವವರ ಸಂಖ್ಯೆಯೂ ಉತ್ತರ ಭಾರತದಲ್ಲಿ ದಕ್ಷಿಣ ಭಾರತಕ್ಕಿಂತ ಹೆಚ್ಚು.
  Published by:Sharath Sharma Kalagaru
  First published: