• Home
  • »
  • News
  • »
  • national-international
  • »
  • ವರ್ಷದ ಬಳಿಕ ಕಾಶ್ಮೀರದಲ್ಲಿ ಇಂಟರ್ನೆಟ್ ಭಾಗ್ಯ; ಆ. 16ರಿಂದ ಕಣಿವೆ ರಾಜ್ಯದ 2 ಜಿಲ್ಲೆಗಳಲ್ಲಿ 4ಜಿ ಸೇವೆ

ವರ್ಷದ ಬಳಿಕ ಕಾಶ್ಮೀರದಲ್ಲಿ ಇಂಟರ್ನೆಟ್ ಭಾಗ್ಯ; ಆ. 16ರಿಂದ ಕಣಿವೆ ರಾಜ್ಯದ 2 ಜಿಲ್ಲೆಗಳಲ್ಲಿ 4ಜಿ ಸೇವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ವರ್ಷ ಸಂವಿಧಾನದಿಂದ 370ನೇ ವಿಧಿ ರದ್ದಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಈಗ ಕೋರ್ಟ್ ಸೂಚನೆ ಮೇರೆಗೆ ಆ. 16ರಿಂದ 2 ಕಡೆ ಪ್ರಾಯೋಗಿಕವಾಗಿ ಸೇವೆ ಮರುಪ್ರಾರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • News18
  • Last Updated :
  • Share this:

    ನವದೆಹಲಿ(ಆ. 11): ಕಳೆದ ಹಲವು ತಿಂಗಳುಗಳಿಂದ ಜಮ್ಮು-ಕಾಶ್ಮೀರದಲ್ಲಿ ನಿಷ್ಕ್ರಿಯಗೊಂಡಿದ್ದ 4G ಇಂಟರ್ನೆಟ್ ಸೇವೆಯನ್ನು ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಮರುಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆಗಸ್ಟ್ 16ರಿಂದ ಜಮ್ಮು ವಿಭಾಗದ ಒಂದು ಜಿಲ್ಲೆ ಮತ್ತು ಕಾಶ್ಮೀರ ವಿಭಾಗದ ಒಂದು ಜಿಲ್ಲೆಯಲ್ಲಿ 4ಜಿ ಸೇವೆಗೆ ಶುರುವಾಗಲಿದೆ.


    ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಈ ವಿಚಾರವನ್ನು ಇಂದು ಸುಪ್ರೀಂ ಕೋರ್ಟ್​ಗೆ ತಿಳಿಸಿದರು. ಆಗಸ್ಟ್ 16ರಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಸೀಮಿತವಾಗಿ ಹೈಸ್ಪೀಡ್ ಇಂಟರ್ನೆಟ್ ಒದಗಿಸಲು ವಿಶೇಷ ಸಮಿತಿ ನಿರ್ಧರಿಸಿದೆ ಎಂದು ಅಟಾರ್ನಿ ಜನರಲ್ ಮಾಹಿತಿ ನೀಡಿದರು.


    ಜಮ್ಮು-ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರಳಿಸಲು ಪರಿಸ್ಥಿತಿ ಅವಲೋಕನೆಗೆ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಈ ವಿಶೇಷ ಸಮಿತಿ ರಚಿಸಲಾಗಿತ್ತು.


    ಇದನ್ನೂ ಓದಿ: ಹಿಂದೂ ಕುಟುಂಬದ ಹೆಣ್ಣುಮಕ್ಕಳಿಗೆ ಅಪ್ಪನ ಆಸ್ತಿ ಹಕ್ಕು ಎಲ್ಲಾ ಕಾಲಕ್ಕೂ ಅನ್ವಯ: ಸುಪ್ರೀಂ ತೀರ್ಪು


    “4ಜಿ ಇಂಟರ್ನೆಟ್ ಸೇವೆಯನ್ನು ಯಾವ ಜಿಲ್ಲೆಗಳಲ್ಲಿ ಹಾಗೂ ಪ್ರದೇಶಗಳಲ್ಲಿ ಒದಗಿಸಬೇಕು ಎಂಬುದನ್ನು ಮೊದಲು ನಿರ್ಧರಿಸಬೇಕಿದೆ. ಆದರೆ, ಗಡಿ ಪ್ರದೇಶಗಳಲ್ಲಿ ಮಾತ್ರ ಹೈಸ್ಪೀಡ್ ಇಂಟರ್ನೆಟ್ ಇರುವುದಿಲ್ಲ. ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕವಷ್ಟೇ ಪ್ರದೇಶಗಳ ಆಯ್ಕೆಯಾಗಲಿದೆ” ಎಂದು ನ್ಯಾ| ಎನ್.ವಿ. ರಮಣ ಅವರಿರುವ ಸುಪ್ರೀಂ ನ್ಯಾಯಪೀಠಕ್ಕೆ ವೇಣುಗೋಪಾಲ್ ಹೇಳಿದರು.


    ಜಮ್ಮು-ಕಾಶ್ಮೀರದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಸೀಮಿತ ವ್ಯಾಪ್ತಿಯಲ್ಲಿ ಒದಗಿಸಲು ಯೋಚಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ಬಾರಿಯ ವಿಚಾರಣೆಯ ವೇಳೆ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ ಸೂಚಿಸಿತ್ತು. ಆದರೆ, ಕೋರ್ಟ್ ಸೂಚನೆಯನ್ನು ಕೇಂದ್ರ ಸರ್ಕಾರ ಪಾಲಿಸುತ್ತಿಲ್ಲ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಅರ್ಜಿಯ ವಿಚಾರಣೆಯ ವೇಳೆ ಇವತ್ತು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಅವರು ಕೋರ್ಟ್​ಗೆ ಸ್ಪಷ್ಟನೆ ನೀಡಿದರು.


    “ಜಮ್ಮು ಮತ್ತು ಕಾಶ್ಮೀರದಲ್ಲಿ ಅಪಾಯದ ಪರಿಸ್ಥಿತಿ ಮುಂದುವರಿದಿದೆ. ಆದರೆ, 4ಜಿ ಇಂಟರ್ನೆಟ್ ಸೇವೆಯ ನಿರ್ಬಂಧಗಳಿಂದ ವೈದ್ಯಕೀಯ ವ್ಯವಸ್ಥೆ, ಶಿಕ್ಷಣ ಹಾಗೂ ವ್ಯವಹಾರಗಳಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಎಲ್ಲೆಡೆಯೂ 4ಜಿ ಸೇವೆ ಒದಗಿಸುವಷ್ಟು ಪರಿಸ್ಥಿತಿ ತಿಳಿಗೊಂಡಿಲ್ಲ” ಎಂದು ಅಟಾರ್ನಿ ಜನರಲ್ ತಿಳಿಸಿದರು.


    ಇದನ್ನೂ ಓದಿ: ಸುಶಾಂತ್‌ ಸಿಂಗ್ ಪ್ರಕರಣ; ರಾಜಕೀಯ ಒತ್ತಡದಿಂದಾಗಿ ಮುಂಬೈನಲ್ಲಿ ಎಫ್‌ಐಆರ್‌ ದಾಖಲಾಗಿಲ್ಲ: ಸುಪ್ರೀಂ ಎದುರು ಬಿಹಾರದ ವಾದ


    ಇದಾದ ಬಳಿಕ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರದ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಜಾಗೊಳಿಸಿತು. ಆದರೆ, ವಿಶೇಷ ಸಮಿತಿಯ ಸೂಚನೆ ಮೇರೆಗೆ 4ಜಿ ಇಂಟರ್ನೆಟ್ ಸೇವೆ ಮರುಸ್ಥಾಪನೆಯ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ಕೇಂದ್ರ ಸರ್ಕಾರ ಎರಡು ವಾರದಲ್ಲಿ ಉತ್ತರಿಸಬೇಕು ಎಂದು ಆದೇಶಿಸಿದೆ. ಎರಡು ವಾರಗಳ ಬಳಿಕ ಕೋರ್ಟ್​ನಲ್ಲಿ ಮತ್ತೊಮ್ಮೆ ವಿಚಾರಣೆ ನಡೆಯಲಿದೆ.




    ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಕಳೆದ ವರ್ಷ ರದ್ದು ಮಾಡಿತ್ತು. ಆ ರಾಜ್ಯವನ್ನು ಇಬ್ಭಾಗ ಮಾಡಿ ಜಮ್ಮು-ಕಾಶ್ಮೀರದಿಂದ ಲಡಾಖ್ ಅನ್ನು ಪ್ರತ್ಯೇಕಗೊಳಿಸಲಾಯಿತು. ಎರಡೂ ಪ್ರದೇಶಗಳನ್ನ ಕೇಂದ್ರಾಡಳಿತ ಪ್ರದೇಶಗಳಾಗಿ ಘೋಷಸಲಾಯಿತು. ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸ್ಥಿತಿ ಸೂಕ್ಷ್ಮವಿದ್ದ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆ ರದ್ದುಗೊಳಿಸಲಾಯಿತು. ಇದೇ ಜನವರಿಯಲ್ಲಿ ಅಲ್ಲಿ 2ಜಿ ಇಂಟರ್ನೆಟ್ ಸೇವೆಯನ್ನು ಮಾತ್ರ ಚಾಲೂಗೊಳಿಸಲಾಯಿತು.

    Published by:Vijayasarthy SN
    First published: