ಚೀನಾದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಭಾರತ ಸರ್ಕಾರ; ಕಾರಣವೇನು ಗೊತ್ತಾ?

Indo-China Conflict: ಈವರೆಗೆ ಭಾರತ-ಚೀನಾ ಸೈನಿಕರು ಗಡಿಯಲ್ಲಿ ಸಂಘರ್ಷ ನಡೆಸಿದ್ದರೂ ಸಹ ಎಂದಿಗೂ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿರಲಿಲ್ಲ. ಹೀಗಾಗಿ ಎರಡೂ ದೇಶದ ಸೈನಿಕರ ನಡುವೆ ಹಲವು ಬಾರಿ ಕೈಕೈ ಗುದ್ದಾಟಗಳು ಸಹ ನಡೆದಿರುವ ಸಾಕಷ್ಟು ಉದಾಹರಣೆಗಳಿವೆ. ಜೂನ್‌.15ರಂದು ನಡೆದದ್ದು ಸಹ ಇಂತಹದ್ದೇ ಒಂದು ಸಂಘರ್ಷ.

MAshok Kumar | news18-kannada
Updated:June 29, 2020, 10:50 PM IST
ಚೀನಾದ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಭಾರತ ಸರ್ಕಾರ; ಕಾರಣವೇನು ಗೊತ್ತಾ?
ಸಾಂದರ್ಭಿಕ ಚಿತ್ರ.
  • Share this:
ನವ ದೆಹಲಿ; ಭಾರತ ಮತ್ತು ಚೀನಾ ನಡುವಿನ ವೈಷಮ್ಯಕ್ಕೆ ದಶಕಗಳ ಇತಿಹಾಸ ಇದೆ. 1960 ರಿಂದ ಚೀನಾ ಸತತವಾಗಿ ಭಾರತದ ಮೇಲೆ ಒಂದಲ್ಲಾ ಒಂದು ಕಾರಣಕ್ಕೆ ಕೆಂಡ ಕಾರುತ್ತಲೇ ಇದೆ. ಪರಿಣಾಮ 1962ರಲ್ಲಿ ಎರಡೂ ದೇಶಗಳ ನಡುವೆ ಯುದ್ಧವೂ ನಡೆದಿತ್ತು. ಆದರೆ, ಈ ಯುದ್ಧದ ನಂತರ ಭಾರತ ಮತ್ತು ಚೀನಾ ನಡುವಿನ ಜಿದ್ದಾಜಿದ್ದಿ ಮತ್ತೊಮ್ಮೆ ತಾರಕಕ್ಕೆ ಏರಿದ್ದು ಗಾಲ್ವಾನ್‌ ಕಣಿವೆ ಸಂಘರ್ಷದಲ್ಲೇ. ಈ ಸಂಘರ್ಷದಲ್ಲಿ ಭಾರತದ 20 ಸೈನಿಕರನ್ನು ಕೊಲ್ಲಲಾಗಿತ್ತು. 

ಜೂನ್‌. 15 ರಂದು ಗಾಲ್ವಾನ್ ಕಣಿವೆಯಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತದ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಸಂಘರ್ಷದಲ್ಲಿ ಭಾರತದ ಸುಮಾರು 20 ಸೈನಿಕರನ್ನು ಅಮಾನವೀಯವಾಗಿ ಕೊಲ್ಲಲಾಗಿತ್ತು. ಅಂದಿನಿಂದ ಬ್ಯಾನ್‌ಚೀನಾ ಎಂಬ ಘೋಷವಾಕ್ಯ ಭಾರತದ ಎಲ್ಲೆಡೆ ಮೊಳಗಿತ್ತು. ಆದರೆ, ಕೇಂದ್ರ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ಇಂದು ಕೊನೆಗೂ ಚೀನಾದ ಎಲ್ಲಾ ಆ್ಯಪ್‌ಗಳನ್ನು ಬ್ಯಾನ್ ಮಾಡುವ ಮೂಲಕ ಕೇಂದ್ರ ಸರ್ಕಾರ ಚೀನಾಗೆ ಸ್ಪಷ್ಟ ಉತ್ತರವನ್ನು ರವಾನಿಸಿದೆ.

1962ರ ಒಪ್ಪಂದವನ್ನು ಮುರಿದ ಚೀನಾ:

ಭಾರತ ಮತ್ತು ಚೀನಾ ನಡುವೆ ಎರಡೂ ದೇಶಗಳ ಗಡಿಯನ್ನು ವಿಭಜಿಸುವ ನಮ್ಕಾಚು ನದಿ ತೀರದಲ್ಲಿ 1962ರಲ್ಲಿ ಎರಡೂ ದೇಶಗಳ ನಡುವೆ ಯುದ್ಧ ನಡೆದಿತ್ತು. ಈ ಯುದ್ದದಲ್ಲಿ ಚೀನಾ ಗೆಲುವು ಸಾಧಿಸಿದ್ದರೂ ಸಹ ಅಂದಿನ ಪ್ರಧಾನಿ ಜವಹರ್‌ಲಾಲ್‌ ನೆಹರು ಚೀನಾದ ಅಂದಿನ ಅಧ್ಯಕ್ಷ ಮಾಓ ಜೆಡಾಂಗ್ ನಡುವೆ ಒಪ್ಪಂದ ಏರ್ಪಟ್ಟಿತ್ತು. ಈ ಒಪ್ಪಂದದಂತೆ ಭಾರತ ಚೀನಾ ಗಡಿಯಲ್ಲಿ ಸೈನಿಕರು ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ.

ಈವರೆಗೆ ಭಾರತ-ಚೀನಾ ಸೈನಿಕರು ಗಡಿಯಲ್ಲಿ ಸಂಘರ್ಷ ನಡೆಸಿದ್ದರೂ ಸಹ ಎಂದಿಗೂ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿರಲಿಲ್ಲ. ಹೀಗಾಗಿ ಎರಡೂ ದೇಶದ ಸೈನಿಕರ ನಡುವೆ ಹಲವು ಬಾರಿ ಕೈಕೈ ಗುದ್ದಾಟಗಳು ಸಹ ನಡೆದಿರುವ ಸಾಕಷ್ಟು ಉದಾಹರಣೆಗಳಿವೆ. ಜೂನ್‌.15ರಂದು ನಡೆದದ್ದು ಸಹ ಇಂತಹದ್ದೇ ಒಂದು ಸಂಘರ್ಷ.

ಈ ಸಂಘರ್ಷದಲ್ಲಿ ಎರಡೂ ದೇಶದ ಸೈನಿಕರು ಕೈಗೆ ಸಿಕ್ಕ ಕಲ್ಲು ಕಟ್ಟಿಗೆಯಲ್ಲಿ ಬಡಿದಾಡಿಕೊಂಡಿದ್ದಾರೆ. ಚೀನಾದ ಸೈನಿಕರು ಭಾರತದ ಸೈನಿಕರನ್ನು ಹೊಡೆದು ನದಿಯಲ್ಲಿ ಎಸೆದಿದ್ದಾರೆ. ಮೈನಸ್‌ ಡಿಗ್ರಿ ಚಳಿಯಲ್ಲಿ ನದಿಗೆ ಬಿದ್ದ ಸೈನಿಕರು ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಚೀನಾದ ಸೈನಿಕರೂ ಮೃತಪಟ್ಟಿದ್ದಾರಾದರೂ ಆ ದೇಶ ಈವರೆಗೆ ಮೃತರ ಸಂಖ್ಯೆಯನ್ನು ತಿಳಿಸಿಲ್ಲ.

1962ರ ಯುದ್ಧದ ನಂತರ ಎರಡೂ ದೇಶಗಳ ನಡುವೆ ಇಂತಹ ಸಂಘರ್ಷಗಳು ಈವರೆಗೆ ನಡೆದಿರಲಿಲ್ಲ. ಇದೇ ಕಾರಣಕ್ಕೆ ಭಾರದಲ್ಲಿ ಚೀನಾ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಚೀನಾ ವಸ್ತುಗಳನ್ನು ಬ್ಯಾನ್ ಮಾಡಿ ಎಂಬ ಘೋಷವಾಕ್ಯ ಮೊಳಗಿತ್ತು.ಇತ್ತೀಚೆಗೆ ಕೋಲ್ಕತ್ತಾದ ಜೊಮೋಟೋ ಉದ್ಯೋಗಿಗಳು ತಮ್ಮ ಕಂಪೆನಿಯಲ್ಲಿ ಚೀನಾ ಹಣ ಹೂಡಿದೆ ಎಂಬ ಕಾರಣಕ್ಕೆ ಕಂಪೆನಿಯ ಟೀ ಶರ್ಟ್‌ ಅನ್ನು ಸುಟ್ಟು ಪ್ರತಿಭಟಿಸಿದ್ದರು. ಇದರ ಬೆನ್ನಿಗೆ ಇಂದು ಕೇಂದ್ರ ಸರ್ಕಾರ ಚೀನಾದ ಎಲ್ಲಾ ಆಪ್‌ಗಳನ್ನು ಬ್ಯಾನ್ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ, ಪ್ರಶ್ನೆ ಇರುವುದು ಚೀನಾದಿಂದ ಆಮದಾಗುತ್ತಿದ್ದ ವಸ್ತುಗಳನ್ನೂ ಕೇಂದ್ರ ಬ್ಯಾನ್ ಮಾಡುತ್ತದೆಯೇ ? ಎಂಬುದು.

ಟ್ರೇಡ್‌ ವಾರ್‌ ಸಾಧ್ಯವೇ?

ಚೀನಾ ದೇಶದ ಮಟ್ಟಿಗೆ ಭಾರತ ಅತಿದೊಡ್ಡ ಅನುಬೋಗ ರಾಷ್ಟ್ರ. ಮಕ್ಕಳ ಆಟಿಕೆಯಿಂದ ಎಲೆಕ್ಟ್ರಾನಿಕ್ಸ್‌ ಗೂಡ್ಸ್‌ ವರೆಗೆ ಬಾರತದ ಜನ ಚೀನಾ ದೇಶವನ್ನು ಅವಲಂಭಿಸಿದ್ದಾರೆ. ಚೀನಾದ ವುಹಾನ್‌ ಪ್ರಾಂತ್ಯವನ್ನು ವಿಶ್ವದ ಎಲೆಕ್ಟ್ರಾನಿಕ್ಸ್‌ ವಸ್ತುಗಳ ರಾಜಧಾನಿ ಎನ್ನಲಾಗುತ್ತದೆ. ಭಾರತ ಮಾತ್ರವಲ್ಲ ವಿಶ್ವದ ಅನೇಕ ರಾಷ್ಟ್ರಗಳಿಗೆ ಇಲ್ಲಿಂದ ವಿವಿಧ ಎಲೆಕ್ಟ್ರಾನಿಕ್ಸ್‌ ವಸ್ತುಗಳು ರಫ್ತಾಗುತ್ತದೆ.

ಭಾರತೀಯರು ಉಪಯೋಗಿಸುವ ಟಿವಿ, ಎಸಿ, ರೆಫ್ರಿಜರೇಟರ್‌, ಮಿಕ್ಸಿ, ವಾಷಿಂಗ್ ಮೆಷಿನ್, ಕಂಪ್ಯೂಟರ್‌-ಲ್ಯಾಪ್‌ಟಾಪ್ ಬಿಡಿ ಭಾಗಗಳು, ಎಲ್ಲಾ ಬಗೆಯ ಮೊಬೈಲ್‌ಗಳು, ಕನಿಷ್ಟ ವಾಟರ್‌ ಪ್ಯೂರಿಫೈರ್‌, ಫ್ಯಾನ್ ಸಹ ಭಾರತಕ್ಕೆ ಚೀನಾದಿಂದಲೇ ಆಮದಾಗುತ್ತದೆ. ಈ ವಸ್ತುಗಳನ್ನು ಉಪಯೋಗಿಸದ ಭಾರತೀಯರನ್ನು ಹುಡುಕುವುದು ಸಹ ಕಷ್ಟ.

ಆದರೆ, ಚೀನಾ ಮೇಲೆ ನೇರವಾಗಿ ಮುನಿಸಿಕೊಂಡಿರುವ ಭಾರತ ಸರ್ಕಾರ ಇಂದು ಚೀನಾ ದೇಶದ ಎಲ್ಲಾ ಬಗೆಯ ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಇದರಿಂದ ಚೀನಾ ದೇಶದ ವಿವಿಧ ಕಂಪೆನಿಗಳಿಗೆ ಸಾವಿರಾರು ಕೋಟಿ ನಷ್ಟವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ವಾಸ್ತವದಲ್ಲಿ ಇವುಗಳನ್ನು ಉಪಯೋಗಿಸದೆಯೂ ಭಾರತೀಯರು ಬದುಕಬಹುದು. ಏಕೆಂದರೆ ಇವು ಬದುಕಿನ ಅನಿವಾರ್ಯ ಅಂಶವೇನಲ್ಲ.

ಇದನ್ನೂ ಓದಿ : ಟಿಕ್ ಟಾಕ್ ಸೇರಿ ಚೀನಾದ 59 ಆ್ಯಪ್​ಗಳಿಗೆ ನಿಷೇಧ; ಇಲ್ಲಿದೆ ನಿಷೇಧಿತ ಆ್ಯಪ್​ಗಳ ಪಟ್ಟಿ

ಆದರೆ, ಚೀನಾದಿಂದ ಆಮದಾಗುತ್ತಿರುವ ಎಲ್ಲಾ ಬಗೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಭಾರತ ಬ್ಯಾನ್ ಮಾಡುತ್ತಾ? ಈ ಮೂಲಕ ಚೀನಾ ವಿರುದ್ಧ ಟ್ರೇಡ್‌ ವಾರ್‌ ಘೋಷಿಸುತ್ತಾ? ಚೀನಾದ ಲಕ್ಷಾಂತರ ಕೋಟಿ ಆದಾಯಕ್ಕೆ ನೇರಾ ನೇರ ಕತ್ತರಿ ಹಾಕುತ್ತಾ? ಎಂಬುದು ಯಕ್ಷ ಪ್ರಶ್ನೆ. ಆದರೆ, ಕೇಂದ್ರ ಸರ್ಕಾರ ಇಂದು ತೆಗೆದುಕೊಂಡಿರುವ ನಿರ್ಧಾರಗಳು ಕೇವಲ ಆ್ಯಪ್‌ಗಳಿಗೆ ಮಾತ್ರವೇ ಸೀಮಿತವೇ? ಅಥವಾ ಚೀನಾದಿಂದ ಆಮದನ್ನೂ ನಿಲ್ಲಿಸಲಾಗುತ್ತಾ? ಎಂಬ ಈ ಪ್ರಶ್ನೆಗೆ ಕೇಂದ್ರ ಸರ್ಕಾರವೇ ಉತ್ತರಿಸಬೇಕಿದೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading