news18 Updated:September 24, 2020, 2:15 PM IST
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
- News18
- Last Updated:
September 24, 2020, 2:15 PM IST
ನವದೆಹಲಿ(ಸೆ. 24): ಕೃಷಿ ಮಸೂದೆಯಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಳ್ಳಿಹಾಕಿದ್ದಾರೆ. ರೈತರ ಬೆಳೆಗೆ ನೀಡಲಾಗುತ್ತಿದ್ದ ಕನಿಷ್ಠ ಬೆಂಬಲ ಬೆಲೆ ಈ ಮುಂಚೆಯೂ ಕಡ್ಡಾಯವಾಗಿರಲಿಲ್ಲ. ಈಗಲೂ ಅದು ಕಡ್ಡಾಯವಾಗಿಲ್ಲ. ಆದರೂ ಕೂಡ ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಬದ್ಧವಾಗಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದ್ದಾರೆ. ವಿಪಕ್ಷಗಳ ವಿರೋಧದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಎಂಎಸ್ಪಿಯನ್ನು ಕಾನೂನಿನ ಭಾಗವನ್ನಾಗಿ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ಧಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿ ಮಾಡಿದೆ.
“…ನಾನು ವಿಪಕ್ಷಗಳಿಗೆ ಒಂದು ಮಾತು ಕೇಳಬೇಕು. ನೀವು ಹಲವು ವರ್ಷಗಳ ಕಾಲ ಆಡಳಿತ ನಡೆಸಿದಿರಿ. ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸಿ ಕಾನೂನು ರೂಪಿಸುವುದು ಅಷ್ಟು ಅಗತ್ಯ ಆಗಿದ್ದರೆ ನೀವು ಯಾಕೆ ಮಾಡಲಿಲ್ಲ? ಎಂಎಸ್ಪಿ ಆಗಲೂ ಕಾನೂನಾಗಿರಲಿಲ್ಲ, ಈಗಲೂ ಅದು ಕಾನೂನಾಗಿಲ್ಲ” ಎಂದು ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಇದನ್ನೂ ಓದಿ: LPG Free Connection - ಎಲ್ಪಿಜಿ ಗ್ಯಾಸ್ ಕನೆಕ್ಷನ್ ಉಚಿತ ಪಡೆಯಲು ಕೆಲವೇ ದಿನ ಬಾಕಿ
ಕನಿಷ್ಠ ಬೆಂಬಲ ಬೆಲೆ ಕೇಂದ್ರ ಸರ್ಕಾರದ ಆಡಳಿತಾತ್ಮಕ ನಿರ್ಧಾರವಾಗಿದ್ದು ಅದೇ ಕಾರಣಕ್ಕೆ ರೈತರಿಂದ ಬೆಳೆ ಖರೀದಿ ಮಾಡುತ್ತದೆ. ಮೋದಿ ಸರ್ಕಾರ ರೈತರಿಗೆ ಬೆಳೆ ವೆಚ್ಚದ ಮೇಲೆ ಶೇ. 50ರಷ್ಟು ಲಾಭ ಸೇರಿಸಿ ಎಂಎಸ್ಪಿಯನ್ನು ನಿರ್ಧಾರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ವಿಪಕ್ಷಗಳ ಕೂಗಿಗೆ ಸರ್ಕಾರ ಜಗ್ಗುವ ಸಾಧ್ಯತೆ ಇಲ್ಲ ಎಂಬ ಸುಳಿವನ್ನು ಅವರು ಸ್ಪಷ್ಟವಾಗಿ ನೀಡಿದ್ದಾರೆ. ಹಾಗೆಯೇ, ದೇಶದ ಹಿತದ ದೃಷ್ಟಿಯಿಂದ ಸರ್ಕಾರ ಕೃಷಿ ಮಸೂದೆಗಳನ್ನ ಹೊರತಂದಿದೆ. ಇದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ದೇಶದ ಹಿತಾಸಕ್ತಿಗೆ ಸಹಾಯವಾಗುತ್ತದೆ ಎಂದಾದರೆ ಮೋದಿ ಸರ್ಕಾರ ವೋಟ್ ಚಿಂತೆ ಬಿಟ್ಟು ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಬದ್ಧವಾಗಿದೆ. ಈ ಕೃಷಿ ಮಸೂದೆಗಳಿಂದ ದೇಶದ ಕೃಷಿ ವಲಯ ಮತ್ತು ರೈತರಿಗೆ ಭಾರೀ ಅನುಕೂಲ ಮಾಡಿಕೊಡುತ್ತದೆ ಎಂಬುದು ನಿಶ್ಚಿತ” ಎಂದು ನರೇಂದ್ರ ಸಿಂಗ್ ತೋಮರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Business Ideas: ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದೀರಾ?; ಗ್ರಾಮೀಣ ಭಾಗದ ಯುವಕರಿಗೆ ಕೆಲವೊಂದು ಬ್ಯುಸಿನೆಸ್ ಟಿಪ್ಸ್
ವಿಪಕ್ಷಗಳ ವಿರೋಧದ ಮಧ್ಯೆಯೂ ಸರ್ಕಾರ ಕೃಷಿ ಮಸೂದೆಗಳನ್ನ ಎರಡೂ ಸದನಗಳಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆದಿದೆ. ರೈತರ ಬೆಳೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ವ್ಯವಸ್ಥೆ) ಮಸೂದೆ-2020, ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗೆ ರೈತರ ಒಪ್ಪಿಗೆ (ಸಬಲೀಕರಣ ಮತ್ತು ರಕ್ಷಣೆ) ಮಸೂದೆ ಹಾಗೂ ಅಗತ್ಯ ವಸ್ತು ತಿದ್ದುಪಡಿ ಮಸೂದೆ 2020, ಈ ಮೂರು ಮಸೂದೆಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆಯಾಗಿ ಅನುಮೋದನೆ ಹೊಂದಿವೆ. ಈಗ ಇದು ರಾಷ್ಟ್ರಪತಿಗಳ ಅಂಗಳದಲ್ಲಿದ್ದು, ಅವರು ಸಮ್ಮತಿ ಕೊಟ್ಟ ಬಳಿಕ ಶಾಸನವಾಗಿ ರೂಪುಗೊಳ್ಳುತ್ತದೆ.ಆದರೆ, ಬಹುತೇಕ ವಿಪಕ್ಷಗಳು ಈ ಕೃಷಿ ಮಸೂದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೇಂದ್ರದ ಎನ್ಡಿಎ ಸರ್ಕಾರದ ಅಂಗವಾಗಿರುವ ಶಿರೋಮಣಿ ಅಕಾಲಿ ದಳ ಪಕ್ಷ ಕೂಡ ವಿರೋಧಿಸಿದ್ದು, ಆ ಪಕ್ಷದ ಏಕೈಕ ಸಚಿವೆ ಹರಸಿಮ್ರತ್ ಬಾದಲ್ ರಾಜೀನಾಮೆ ನೀಡಿ ಸರ್ಕಾರದಿಂದ ಹೊರಬಂದರು. ರಾಜ್ಯಸಭೆಯಲ್ಲಿ ಈ ಮಸೂದೆ ವಿಚಾರವಾಗಿ ಭಾನುವಾರ ಗದ್ದಲ ಏರ್ಪಟ್ಟು ಸಭಾಪತಿ ವೆಂಕಯ್ಯ ನಾಯ್ಡು ಎಂಟು ಸದಸ್ಯರನ್ನ ಕೆಲ ದಿನಗಳ ಕಾಲ ಅಮಾನತುಗೊಳಿಸಿದರು.
ಇದೇ ವೇಳೆ, ದೇಶಾದ್ಯಂತ ಹಲವು ರೈತ ಸಂಘಟನೆಗಳು ಈ ಮಸೂದೆಯನ್ನ ವಿರೋಧಿಸಿವೆ. ನಾಳೆ ಭಾರತ್ ಬಂದ್ಗೆ ಕರೆ ನೀಡಲಾಗಿದೆ.
Published by:
Vijayasarthy SN
First published:
September 24, 2020, 12:47 PM IST