RIL AGM 2020 - ಗೂಗಲ್​ನಿಂದ ಜಿಯೋದಲ್ಲಿ 33,737 ಕೋಟಿ ರೂ ಹೂಡಿಕೆ

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

Google Investment in Jio: ಜಿಯೋದಲ್ಲಿ ಗೂಗಲ್ ಶೇ. 7.7ರಷ್ಟು ಪಾಲು ಹೊಂದುವ ಮೂಲಕ 33,000 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್​ ಚೇರ್ಮನ್ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

  • News18
  • 3-MIN READ
  • Last Updated :
  • Share this:

ನವದೆಹಲಿ: ಕಳೆದ ಮೂರು ತಿಂಗಳಿಂದ ರಿಲಾಯನ್ಸ್ ಜಿಯೋದಲ್ಲಿ 13 ಹೊಸ ಹೂಡಿಕೆಗಳಾಗಿವೆ. ಈಗ ಗೂಗಲ್ ಸಂಸ್ಥೆ ಹೂಡಿಕೆ ಮಾಡುತ್ತಿದೆ. ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಗೂಗಲ್ ಸಂಸ್ಥೆ 33,000 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. ನಿನ್ನೆ ರಿಲಾಯನ್ಸ್​ ಇಂಡಸ್ಟ್ರೀಸ್​ ಸಂಸ್ಥೆಯ 43ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಯಲ್ಲಿ ಮಾತನಾಡುತ್ತಾ, ಮುಕೇಶ್ ಅಂಬಾನಿ ಈ ಹೊಸ ಒಪ್ಪಂದವನ್ನು ಘೋಷಿಸಿದ್ದಾರೆ. ರಿಲಾಯನ್ಸ್​ ಇಂಡಸ್ಟ್ರೀಸ್​ನ ಭಾಗವಾಗಿರುವ ಜಿಯೋದಲ್ಲಿ ಗೂಗಲ್ ಶೇ. 7.7ರಷ್ಟು ಪಾಲು ಖರೀದಿಸುವ ಮೂಲಕ 33,000 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.


ಈ ಕುರಿತು ಗೂಗಲ್ ಮತ್ತು ರಿಲಾಯನ್ಸ್​ ಕಂಪನಿಗಳ ನಡುವೆ ಕೆಲವು ದಿನಗಳಿಂದ ಚರ್ಚೆ ನಡೆದಿತ್ತು. ಇದೀಗ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಈಗಾಗಲೇ ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಫೇಸ್​ಬುಕ್, ಕ್ವಾಲ್​ಕಾಮ್ ವೆಂಚರ್ಸ್​ ಮುಂತಾದ 12ಕ್ಕೂ ಹೆಚ್ಚು ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಿವೆ. ಭಾರತದಲ್ಲಿ 1.3 ಶತಕೋಟಿ ಜನರಿಗೆ ಉದ್ಯೋಗಾವಕಾಶ ನೀಡುವುದಷ್ಟೇ ಅಲ್ಲದೆ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಕಾರ್ಯರೂಪಕ್ಕಿಳಿಸುವುದು ರಿಲಯನ್ಸ್​ ಇಂಡಸ್ಟ್ರೀಸ್​ನ ಉದ್ದೇಶ. ಈ ಹಿನ್ನೆಲೆಯಲ್ಲಿ ಜಿಯೋ ವೇದಿಕೆಯನ್ನು ಬಂಡವಾಳ ಹೂಡಿಕೆಗೆ ಮುಕ್ತವಾಗಿಸಲಾಗಿದೆ.


ಇದನ್ನೂ ಓದಿ: RIL AGM 2020 - ರಿಲಾಯನ್ಸ್ ಎಜಿಎಂ; ಮೊದಲ ಬಾರಿಗೆ ಆನ್​ಲೈನ್​ನಲ್ಲಿ ಮಹಾಸಭೆ; Chatbot ಪ್ರಯೋಗ


ವಾರ್ಷಿಕ ಸಭೆಯಲ್ಲಿ ಜಿಯೋದಿಂದ ಹೊಸ ಮಾದರಿಯ ಮೊಬೈಲ್ ಫೋನ್​ಗಳನ್ನು ಕೂಡ ಪರಿಚಯಿಸಲಾಗಿದೆ. 2017ರ ಜುಲೈ 21ರಂದು ನಡೆದಿದ್ದ ರಿಲಯನ್ಸ್ ಜಿಯೋ ಎಜಿಎಂನಲ್ಲಿ ಜಿಯೋ ಫೋನ್ ಬಿಡುಗಡೆಯಾಗಿತ್ತು. ನಂತರ 2018ರ ಜುಲೈ 31ರಂದು ಜಿಯೋ ಫೋನ್ 2 ಅನ್ನು 2,999 ರೂ.ಗೆ ಬಿಡುಗಡೆ ಮಾಡಲಾಗಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಷೇರುದಾರರು ಸೇರಿದಂತೆ ಜಾಗತಿಕ ಹೂಡಿಕೆದಾರರು ಈ ಸಭೆಯಲ್ಲಿ ಆನ್​ಲೈನ್ ಮೂಲಕ ಪಾಲ್ಗೊಳ್ಳಲು ಸಾಧ್ಯವಾಗುವಂತೆ Chatbot‌ ತಂತ್ರಜ್ಞಾನ ಅಳವಡಿಸಲಾಗಿತ್ತು.


ಇನ್ನು, ಆರ್​ಐಎಲ್ ಛೇರ್ಮನ್ ಮುಕೇಶ್ ಅಂಬಾನಿ ಈಗಾಗಲೇ ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವದ ಟಾಪ್​ 10 ಶ್ರೀಮಂತರ ಪಟ್ಟಿಯಲ್ಲಿರುವ ಏಷ್ಯಾದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ. ಭಾರತದ ಶ್ರೀಮಂತರ ಪೈಕಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.

top videos
    First published: