news18-kannada Updated:February 16, 2021, 9:12 AM IST
ಗೂಗಲ್
ಮಾಹಿತಿ ತಂತ್ರಜ್ಞಾನದ ದೈತ್ಯ ಸರ್ಚ್ ಇಂಜಿನ್ ಗೂಗಲ್ ಸಂಸ್ಥೆಗೆ ಮತ್ತೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಹೋಟೆಲ್ ರ್ಯಾಂಕಿಂಗ್ ಬಗ್ಗೆ ತನ್ನ ಗ್ರಾಹಕರಿಗೆ ಗೂಗಲ್ ತಪ್ಪು ಮಾಹಿತಿ ನೀಡಿರುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆ ಬರೋಬ್ಬರಿ 1.1 ಮಿಲಿಯನ್ ಯುರೋ (1.34 ಮಿಲಿಯನ್ ಡಾಲರ್) ದಂಡ ವಿಧಿಸಲಾಗಿದೆ.
ಅಮೆರಿಕ ಮೂಲದ ಅತಿದೊಡ್ಡ ಸರ್ಚ್ ಇಂಜಿನ್ ಗೂಗಲ್ ತನ್ನ ಗ್ರಾಹಕರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಲಾಗಿತ್ತು. ಹೋಟೆಲ್ ರ್ಯಾಂಕಿಂಗ್ ನೀಡುವ ವಿಚಾರದಲ್ಲಿ ಗೂಗಲ್ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿತ್ತು. ಈ ಬಗ್ಗೆ ಫ್ರಾನ್ಸ್ ಮತ್ತು ಐರ್ಲೆಂಡ್ ತನಿಖೆ ಕೈಗೊಂಡಿದ್ದವು. ಗೂಗಲ್ ತಪ್ಪು ಎಸಗಿರುವುದು ಸಾಬೀತಾದ ಹಿನ್ನೆಲೆ ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗಿದೆ. ತಾನು ಮಾಡಿರುವ ತಪ್ಪಿಗೆ ವಿಧಿಸಿರುವ ದಂಡದ ಮೊತ್ತವನ್ನು ಪಾವತಿಸುವುದಾಗಿ ಗೂಗಲ್ ಐರ್ಲೆಂಡ್ ಮತ್ತು ಗೂಗಲ್ ಫ್ರಾನ್ಸ್ ಒಪ್ಪಿಕೊಂಡಿವೆ ಎಂದು ಫ್ರಾನ್ಸ್ ನ ಹಣಕಾಸು ಸಚಿವಾಲಯ ಮತ್ತು ಫ್ರಾಡ್ ವಾಚ್ಡಾಗ್ ಸೋಮವಾರ ತಿಳಿಸಿವೆ.
ಗೂಗಲ್ 2019ರಿಂದ ಹೋಟೆಲ್ ಗಳಿಗೆ ನೀಡುವ ಶ್ರೇಯಾಂಕವನ್ನು ತಿದ್ದುಪಡಿ ಮಾಡಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹಿಂದೆಯೂ ಅನೇಕ ಬಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಗೂಗಲ್ ಗೆ ಭಾರಿ ಮೊತ್ತದ ದಂಡ ವಿಧಿಸಲಾಗಿತ್ತು.
Published by:
Harshith AS
First published:
February 16, 2021, 9:12 AM IST