ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿರುವ ಹಿನ್ನೆಲೆ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಪರಿಣಾಮ ಬಜೆಟ್ 2020 ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಕುಸಿತದತ್ತ ಸಾಗುತ್ತಿರುವ ದೇಶದ ಆರ್ಥಿಕತೆಗೆ ಆಮ್ಲಜನಕ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಿದೆ ತೆರಿಗೆ ನೀತಿಯಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಅಂದಾಜಿಸಲಾಗಿತ್ತು.
ಆದಗ್ಯೂ ಕೆಲವು ಹೊಸ ಯೋಜನೆಗಳನ್ನು ಘೋಷಿಸಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ನೀಡಿದರೆ, ಉದ್ಯಮಿಗಳಿಗೆ ಕಹಿಯಾಗಿ ಪರಿಣಮಿಸಿದೆ. ಅಲ್ಲದೆ, ದೇಶದ ಬಹುತೇಕ ಸಾರ್ವಜನಿಕ ಉದ್ಯಮವನ್ನು ಖಾಸಗಿ ಕಂಪೆನಿಗಳಿಗೆ ಧಾರೆ ಎರೆಯಲು ಮುಂದಾಗಿರುವ ಬಜೆಟ್ನಿಂದಾಗಿ ಇಂದು ಷೇರು ಮಾರುಕಟ್ಟೆಯೂ ನೆಲ ಕಚ್ಚಿದೆ.
ಹಾಗಾದರೆ ಇಂದಿನ ಬಜೆಟ್ನಲ್ಲಿ ಘೋಷಣೆ ಮಾಡಲಾಗಿರುವ ಪ್ರಮುಖ ಯೋಜನೆಗಳು ಯಾವುವು? ತೆರಿಗೆ ನೀತಿಯಲ್ಲಿ ಯಾರಿಗೆ ಲಾಭ? ಯಾರಿಗೆ ನಷ್ಟ? ಭವಿಷ್ಯದಲ್ಲಿ ಖಾಸಗೀಕರಣಕ್ಕೆ ಒಳಗಾಗಲಿರುವ ಕ್ಷೇತ್ರಗಳು ಯಾವುದು? ಬಜೆಟ್ನಲ್ಲಿ ರಾಜ್ಯಕ್ಕೆ ಸಿಹಿ ಎಷ್ಟು? ಕಹಿ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.
ವ್ಯಯಕ್ತಿಕ ಆದಾಯದಲ್ಲಿ ತೆರಿಗೆ ಕಡಿತ; ಮಧ್ಯಮ ವರ್ಗಕ್ಕೆ ಸಿಹಿ:
ವೈಯಕ್ತಿಕ ಆದಾಯ ತೆರಿಗೆಯಲ್ಲಿ ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಆದಾಯ ತೆರಿಗೆ ಸ್ಲ್ಯಾಬ್ಗಳ ಸಂಖ್ಯೆಯನ್ನು ಹೆಚ್ಚಿಸಿ ವಿವಿಧ ಹಂತಗಳಿಗೆ ವಿವಿಧ ತೆರಿಗೆ ದರ ವಿಧಿಸಿದೆ.
5 ಲಕ್ಷದವರೆಗಿನ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ. 5 ರಿಂದ 7.5 ಲಕ್ಷದ ವರೆಗೆ ಆದಾಯ ಪಡೆಯುತ್ತಿರುವವರಿಗೆ ವಿಧಿಸಲಾಗುತ್ತಿದ್ದ ಶೇ. 20ರಷ್ಟು ತೆರಿಗೆಯಲ್ಲಿ ಕಡಿತ ಮಾಡಿ ಶೇ. 10ಕ್ಕೆ ಇಳಿಸಲಾಗಿದೆ. 7.5ರಿಂದ 10 ಲಕ್ಷದವರೆಗಿನ ಆದಾಯ ಇರುವವರಿಗೆ ಶೇ. 15 ತೆರಿಗೆಯನ್ನು ನಿಗದಿ ಪಡಿಸಲಾಗಿದೆ. ಈ ಹಿಂದೆ 5ರಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ. 20ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
ಹಾಗೆಯೇ, 10-12.5 ಲಕ್ಷ ಆದಾಯಗಳಿಗೆ ಈ ಮುಂಚೆ ವಿಧಿಸಲಾಗುತ್ತಿದ್ದ ಶೇ. 30ರಷ್ಟು ತೆರಿಗೆಯನ್ನು ಶೇ 20ಕ್ಕೆ ಇಳಿಕೆ ಮಾಡಲಾಗಿದೆ. 12.5-15 ಲಕ್ಷದವರೆಗಿನ ಆದಾಯಕ್ಕೆ ತೆರಿಗೆಯನ್ನು ಶೇ. 25ಕ್ಕೆ ಇಳಿಸಲಾಗಿದೆ. ಈ ಮೊದಲು 10-15 ಲಕ್ಷ ಆದಾಯಕ್ಕೆ ಶೇ. 30 ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು 15 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರಿಗೆ ಶೇ. 30 ತೆರಿಗೆ ಮುಂದುವರೆಯಲಿದೆ.
ಇದನ್ನೂ ಓದಿ : Union Budget 2020: ಬಜೆಟ್ ನಂತರ ವಿವಿಧ ವಸ್ತುಗಳ ಬೆಲೆ ಏರಿಕೆ-ಇಳಿಕೆ ಪಟ್ಟಿ
ಕೃಷಿ ಮತ್ತು ರೈತರ ಸಂಕಷ್ಟ ನೀಗಿಸಲು 16 ಅಂಶಗಳ ಯೋಜನೆ:
ಕೇಂದ್ರದ ಆರ್ಥಿಕ ಅಭಿವೃದ್ಧಿ ಗುರಿಗೆ ಪ್ರಮುಖ ಹಿನ್ನಡೆ ತಂದಿರುವ ಕ್ಷೇತ್ರಗಳಲ್ಲಿ ಕೃಷಿಯೂ ಪ್ರಮುಖವಾದುದು. ಕೃಷಿ ಕ್ಷೇತ್ರದ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಪುಷ್ಟಿ ನೀಡಲು ಕೆಲ ಪ್ರಮುಖ ಕ್ರಮಗಳನ್ನು ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 16 ಅಂಶಗಳ ಯೋಜನೆ ಪ್ರಕಟಿಸಿದ್ಧಾರೆ. ಅವುಗಳೆಂದರೆ,
1) ಮಾದರಿ ಕೃಷಿ ಕಾನೂನುಗಳನ್ನು ಅಳವಡಿಸಲು ರಾಜ್ಯಗಳಿಗೆ ಉತ್ತೇಜನ
2) ಅತೀವ ಜಲಕ್ಷಾಮ ಇರುವ 100 ಜಿಲ್ಲೆಗಳ ಸಂಕಷ್ಟ ನೀಗಿಸಲು ಸಮಗ್ರ ಕ್ರಮ
3) ಸೀಮೆ ಎಣ್ಣೆಯ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೌರ ವಿದ್ಯುತ್ ಬಳಕೆಗೆ ಉತ್ತೇಜಿಸಲು ಪ್ರಧಾನಿ ಕುಸುಮ್ ಯೋಜನೆ
4) ಸಮತೋಲಿತವಾಗಿ ರಸಗೊಬ್ಬರ ಬಳಕೆಗೆ ಉತ್ತೇಜನ
5) ಕೃಷಿ ಮಳಿಗೆ, ಕೋಲ್ಡ್ ಸ್ಟೋರೇಜ್ ಇತ್ಯಾದಿ ಸಂಗ್ರಹಗಾರಗಳನ್ನು ಮ್ಯಾಪಿಂಗ್ ಮಾಡಲು ಅಥವಾ ಪರಸ್ಪರ ಕೊಂಡಿ ಏರ್ಪಡಿಸಲು ನಬಾರ್ಡ್ ಕ್ರಮ ಕೈಗೊಳ್ಳಲಿದೆ.
6) ಗ್ರಾಮ ಸಂಗ್ರಹ ಯೋಜನೆ – ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸಿಡಲು ಅನುಕೂಲವಾಗುತ್ತದೆ. ಗ್ರಾಮದ ಮಹಿಳೆಯರಿಗೆ ಇದರ ಜವಾಬ್ದಾರಿ ನೀಡಲಾಗುತ್ತದೆ.
7) ನಾಗರಿಕ ವಿಮಾನ ಯಾನ ಸಚಿವಾಲಯದಿಂದ ಕೃಷಿ ಉಡಾನ್ ಯೋಜನೆ ಪ್ರಾರಂಭ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ವಿಮಾನ ಯೋಜನೆಯ ಅಳವಡಿಕೆ ಇರುತ್ತದೆ.
8) ತೋಟಗಾರಿಕೆ ವಲಯದಲ್ಲಿ ಆಗುತ್ತಿರುವ ಉತ್ಪಾದನೆಯು ಆಹಾರ ಧಾನ್ಯಗಳ ಉತ್ಪನ್ನ ಪ್ರಮಾಣವನ್ನು ಮೀರಿಸಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ರೀತಿಯಲ್ಲಿ ಇದನ್ನು ಮಾರ್ಪಡಿಸಲಾಗುತ್ತದೆ.
9) ಕೃಷಿ ಸಂಗ್ರಹಗಾರಗಳ ಸ್ವೀಕೃತಿಗಳನ್ನು ಇತರ ಇ-ಸೇವೆಗಳೊಂದಿಗೆ ಜೋಡಿಸಲಾಗುವುದು
10) ಕೃಷಿ ಕ್ಷೇತ್ರಕ್ಕೆ 2021ರವರೆಗೆ 15 ಲಕ್ಷ ಕೋಟಿ ಹಣ ಮೀಸಲಿಡಲಾಗುತ್ತದೆ.
11) ಕುರಿ ಮತ್ತು ಮೇಕೆಗಳನ್ನು ಬಾಧಿಸುವ ಕಾಲುಬಾಯಿ ರೋಗವನ್ನು 2025ರಲ್ಲಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕ್ರಮ
12) 2025ರಷ್ಟರಲ್ಲಿ ಹಾಲಿನ ಉತ್ಪನ್ನವನ್ನು 53.5 ದಶಲಕ್ಷ ಮೆಟ್ರಿಕ್ ಟನ್ನಿಂದ 103 ಮೆಟ್ರಿಲ್ ದಶಲಕ್ಷ ಟನ್ಗಳಿಗೆ ಹೆಚ್ಚಿಸುವ ಗುರಿ
13) ಮೀನುಗಾರಿಕೆ ವಲಯದಲ್ಲಿ ಯುವ ಸಮುದಾಯವನ್ನು ಭಾಗಿಯಾಗಿಸಲು ಕ್ರಮ. ಗ್ರಾಮೀಣ ಯುವಕರು ಸಾಗರ್ ಮಿತ್ರರಾಗಿ ಕಾರ್ಯ ನಿರ್ವಹಿಸುವ ಆಶಯ ಇದೆ. ಮೀನು ರೈತ ಸಂಘದ ಸ್ಥಾಪನೆಗೆ ಕ್ರಮ.
14) ದೀನದಯಾಳ್ ಅಂತ್ಯೋದಯ ಯೋಜನೆಯನ್ನು ಬಲಗೊಳಿಸಲಾಗುವುದು
15) ಕೃಷಿಗೆ 2.83 ಲಕ್ಷ ಕೋಟಿ ವಿನಿಯೋಗ
16) ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೆ 1.23 ಲಕ್ಷ ಕೋಟಿ ರೂ ವಿನಿಯೋಗ
ಮಹಿಳಾ ಅಭಿವೃದ್ಧಿಗೆ 28,600 ಕೋಟಿ ರೂ; ಮಕ್ಕಳ ಕಲ್ಯಾಣಕ್ಕೂ ಹೆಚ್ಚಿನ ಆದ್ಯತೆ:
ಬಜೆಟ್ ಮಂಡನೆಯ ಆರಂಭದಲ್ಲೇ ಯುವಜನರ ಉದ್ಯೋಗ, ಮಹಿಳೆಯರ ಸಬಲೀಕರಣ, ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡಿರುವುದಾಗಿ ಘೋಷಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಕಲ್ಯಾಣಕ್ಕಾಗಿ 28,600 ಕೋಟಿ ರೂ. ಮೀಸಲಿಟ್ಟಿದ್ದಾರೆ.
ಈ ಬಾರಿಯ ಕೇಂದ್ರದ ಬಜೆಟ್ನಲ್ಲಿ ಮಹಿಳಾ ಕಲ್ಯಾಣ ಇಲಾಖೆಗೆ 28,600 ಕೋಟಿ ರೂ. ಮೀಸಲಿಡಲಾಗಿದೆ. ಗರ್ಭಿಣಿಯರ ಸಾವನ್ನು ತಡೆಗಟ್ಟಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಹೊಸ ಟಾಸ್ಕ್ಫೋರ್ಸ್ ರಚಿಸಲಾಗುವುದು, ಅಂಗನವಾಡಿಗಳ ಮೂಲಕ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಿಸಲಾಗುವುದು ಎಂದು ಬಜೆಟ್ನಲ್ಲಿ ವಿತ್ತ ಸಚಿವೆ ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲೂ ವಿದೇಶಿ ಬಂಡವಾಳದ ನೇರ ಹೂಡಿಕೆ:
ದೇಶದ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 99,300 ಕೋಟಿ ಹಾಗೂ ಕೌಶಲ್ಯ ಅಭಿವೃದ್ಧಿಗೆ 3,000 ಕೋಟಿ ಅನುದಾನ ನೀಡಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ಎಂದು ಬಜೆಟ್ 2020 ಭಾಷಣದ ವೇಳೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಿಮಾ ನಿಗಮ ಖಾಸಗೀಕರಣ:
ಅಭಿವೃದ್ಧಿ ಕಾರ್ಯಕ್ಕೆ ಹಣ ಕ್ರೋಢೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ವಿವಿಧ ಆಯಾಮಗಳಲ್ಲಿ ಹಣವನ್ನು ಒಟ್ಟುಗೂಡಿಸಲು ಮುಂದಾಗಿದೆ. ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಿ ವಿಮಾ ಕಂಪೆನಿ ಎಲ್ಐಸಿ ಷೇರುಗಳ ಮಾರಾಟಕ್ಕೆ ಮುಂದಾಗಿದೆ.
ಎಲ್ಐಸಿ ಷೇರುಗಳ ಅಲ್ಪ ಪ್ರಮಾಣದ ಮಾರಾಟಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಭವಿಷ್ಯದಲ್ಲಿ ಎಲ್ಐಸಿಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಸಾಧ್ಯತೆಯನ್ನೂ 2020 ಬಜೆಟ್ ತೆರೆದಿಟ್ಟಿದೆ.
ಎಸ್ಸಿ-ಎಸ್ಟಿ ಸಮಾಜದ ಕಲ್ಯಾಣಕ್ಕಾಗಿ 1.38 ಲಕ್ಷ ಕೋಟಿ ಅನುದಾನ:
ಮಹತ್ವದ ಕೇಂದ್ರ ಬಜೆಟ್ 2020ರಲ್ಲಿ ಸಮಾಜದಲ್ಲಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಬಲೀಕರಣಕ್ಕಾಗಿ 1.38 ಲಕ್ಷ ಕೋಟಿ ಅನುದಾನ ಘೋಷಿಸಲಾಗಿದೆ.
2021ರ ಆರ್ಥಿಕ ವರ್ಷದಲ್ಲಿ ಎಸ್ಎಸಿ(ಪರಿಶಿಷ್ಟ ಜಾತಿ) ಅಥವಾ ಒಬಿಸಿ(ಇತರೆ ಹಿಂದುಳಿದ ವರ್ಗ) ಸಮುದಾಯ ಅಭಿವೃದ್ಧಿಗೆ 85 ಸಾವಿರ ಕೋಟಿ ಹಾಗೂ ಎಸ್ಟಿ (ಪರಿಶಿಷ್ಟ ಪಂಗಡ) ಸಮುದಾಯದ ಅಭಿವೃದ್ಧಿಗೆ 53,700 ಕೋಟಿ ಅನುದಾನವನ್ನು ನೀಡಲು ಉದ್ದೇಶಿಸಲಾಗಿದೆ. ಇದಲ್ಲದೆ, ಹಿರಿಯ ನಾಗರೀಕರ ಯೋಗಕ್ಷೇಮವನ್ನೂ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದಕ್ಕೆಂದು ವಿಶೇಷವಾಗಿ 9,500 ಕೋಟಿ ಅನುದಾನ ನೀಡಲಿದೆ" ಎಂದು ಅವರು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇದನ್ನೂ ಓದಿ : Union Budget - ಪರ್ಸನಲ್ ಟ್ಯಾಕ್ಸ್ ದರದಲ್ಲಿ ಭಾರೀ ಇಳಿಕೆ; ಇಲ್ಲಿದೆ ವಿವಿಧ ಸ್ಲ್ಯಾಬ್ಗಳ ತೆರಿಗೆ ವಿವರ
ಕುಸಿತ ಕಂಡ ಮುಂಬೈ ಷೇರುಪೇಟೆ:
ಸಂಸತ್ನಲ್ಲಿ 2020ರ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮ್ ಎಲ್ಐಸಿ ಜೀವ ವಿಮಾ ನಿಗಮದ ಅಲ್ಪ ಪ್ರಮಾಣ ಷೇರುಗಳನ್ನು ಸರ್ಕಾರ ಮಾರಾಟ ಮಾಡಲು ನಿರ್ಧರಿಸಿದೆ. ಸಾರ್ವಜನಿಕರೂ ಸಹ ಈ ಷೇರುಗಳನ್ನು ಖರೀದಿ ಮಾಡಬಹುದು ಎಂದು ತಿಳಿದರು. ಅಲ್ಲದೆ, ಭವಿಷ್ಯದಲ್ಲಿ ಸರ್ಕಾರಿ ವಿಮಾ ನಿಗಮ ಸಂಪೂರ್ಣ ಖಾಸಗೀಕರಣವಾಗುವ ಸಾಧ್ಯತೆ ಇದೆ ಎಂಬ ಸೂಚನೆಯನ್ನೂ ನೀಡಿದರು.
ಸದನದಲ್ಲಿ ಹಣಕಾಸು ಸಚಿವೆ ವಿಮಾ ನಿಗಮದ ಷೇರು ಮಾರಾಟದ ಕುರಿತು ಉಲ್ಲೇಖಿಸುತ್ತಿದ್ದಂತೆ ಹೆಚ್ಡಿಎಫ್ಸಿ ಲೈಫ್, ಐಸಿಐಸಿಐ ಪ್ರುಡೆನ್ಶಿಯಲ್ ಹಾಗೂ ಎಸ್ಬಿಐ ಲೈಫ್ ಕಂಪೆನಿಗಳು ದಾಖಲೆಯ ಕುಸಿತ ಕಾಣಲು ಆರಂಭಿಸಿವೆ. ಬಜೆಟ್ ಮಂಡನೆಗೂ ಮುನ್ನವೇ 100 ಅಂಕಗಳ ಕುಸಿತದೊಂದಿಗೆ ಮಾರುಕಟ್ಟೆ ವಹಿವಾಟು ಆರಂಭಿಸಿದ ಭಾರತೀಯ ಷೇರುಪೇಟೆ ಮಧ್ಯಾಹ್ನದ ವೇಳೆಗೆ ಖಾಸಗಿ ವಿಮಾ ಕಂಪೆನಿಗಳ ಪಾಲಿಗೆ ಮತ್ತಷ್ಟು ನಷ್ಟವನ್ನು ಉಂಟು ಮಾಡಿದೆ.
ಇದಲ್ಲದೆ, ಟೆಕ್ ಮಹೀಂದ್ರಾ, ಪವರ್ಗ್ರೀಡ್, ಟಾಟಾ ಸ್ಟೀಲ್, ಎನ್ಟಿಪಿಸಿ, ಕೊಟಕ್ ಬ್ಯಾಂಕ್ ಮತ್ತು ಹೆಚ್ಸಿಎಲ್ ಟೆಕ್ ಕಂಪೆನಿಗಳ ಆದಾಯದಲ್ಲೂ ಶೇ. 3 ರಷ್ಟು ಕುಸಿತ ಉಂಟಾಗಿದೆ. ಒಟ್ಟಾರೆ ಇಂದಿನ ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ 680 ಅಂಕಗಳಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ 200 ಅಂಕಗಳನ್ನು ಕಳೆದುಕೊಂಡಿದೆ.
ಇವು 2020 ಬಜೆಟ್ನ ಕೆಲವು ಪ್ರಮುಖ ಅಂಶಗಳು. ಒಟ್ಟಾರೆಯಾಗಿ ಈ ಬಜೆಟ್ನಲ್ಲಿ ರಾಜ್ಯಕ್ಕೆ ಸಬ್ ಅರ್ಬನ್ ರೈಲು ಮಂಜೂರಾಗಿದೆ ಎಂಬುದನ್ನು ಬಿಟ್ಟರೆ ಸಂತಸ ಪಡಲು ಬೇರೆ ಯಾವ ಕಾರಣಗಳೂ ಇಲ್ಲ. ಇನ್ನೂ ಆದಾಯ ತೆರಿಗೆಯಲ್ಲಿ ಅಲ್ಪ ಪ್ರಮಾಣದ ಕಡಿತ ಮಾಡಿರುವುದು ಮಧ್ಯಮ ವರ್ಗ ಸಿಹಿ ನೀಡಬಹುದೇನೋ. ಆದರೆ, ಉದ್ಯಮ ವಲಯಕ್ಕೆ ಉತ್ತೇಜನ ನೀಡುವ ಯಾವ ಅಂಶವೂ ಈ ಬಜೆಟ್ನಲ್ಲಿ ಇಲ್ಲ ಹೀಗಾಗಿ ಇದು ಉದ್ಯಮಿಗಳಿಗೆ ಕಹಿಯಾಗಲಿರುವ ಬಜೆಟ್ ಎನ್ನಲಾಗುತ್ತಿದೆ.
ಇನ್ನೂ ಐಟಿಬಿಟಿ ಹಬ್ ಎನಿಸಿಕೊಂಡಿರುವ ಬೆಂಗಳೂರು, ಹೈದರಾಬಾದ್ನಂತಹ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಹೆಚ್ಚಿನ ತೆರಿಗೆ ವಿನಾಯಿತಿ ನೀಡುವ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಯುವಕರಿಗೆ ಸಹಾಯ ಮಾಡುವ ದೂರದೃಷ್ಟಿಯ ಯೋಜನೆಗಳ ನಿರೀಕ್ಷೆ ಇತ್ತು. ಆದರೆ, ಈ ಎಲ್ಲಾ ನಿರೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹುಸಿಗೊಳಿಸಿದ್ದಾರೆ ಎಂಬುದು ಆರ್ಥಿಕ ವಿಶ್ಲೇಷಕರ ಅಭಿಮತ.
ಇದನ್ನೂ ಓದಿ : Union Budget 2020: ಕೇಂದ್ರ ಬಜೆಟ್ ಮಂಡನೆ ದಿನವೇ ಭಾರತೀಯ ಷೇರುಪೇಟೆ ಕುಸಿತ; ನಷ್ಟ ದಾಖಲಿಸಿದ ಖಾಸಗಿ ವಿಮಾ ಕಂಪೆನಿಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ