ಅಮಿತ್ ಶಾ ಕೋಲ್ಕತ್ತಾ ರ‍್ಯಾಲಿಯಲ್ಲೂ ಮಾರ್ದನಿಸಿದ ‘ಗೋಲಿ ಮಾರೊ..’ ಘೋಷಣೆ; ಮತ್ತೆ ವಿವಾದದಲ್ಲಿ ಬಿಜೆಪಿ

ದೆಹಲಿಯಲ್ಲಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದೇ ರೀತಿಯ ಘೋಷಣೆ ಕೂಗುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗ ಠಾಕೂರ್ ಅವರಿಗೆ ಚುನುವಣಾ ಪ್ರಚಾರದಿಂದ 72 ಗಂಟೆಗಳ ಕಾಲ ನಿಷೇಧ ಹೇರಿತ್ತು.

ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಅಮಿತ್ ಶಾ ಸಮಾವೇಶ.

ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಅಮಿತ್ ಶಾ ಸಮಾವೇಶ.

  • Share this:
ಕೋಲ್ಕತ್ತಾ (ಮಾರ್ಚ್ 01); ದೆಹಲಿಯಲ್ಲಿ ಹೊತ್ತಿರುವ ಕೋಮು ಗಲಭೆಯ ಕಿಚ್ಚು ಆರುವ ಮುನ್ನವೇ ಇಂದು ಕೋಲ್ಕತ್ತಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಂಡ ಬಿಜೆಪಿ ರ‍್ಯಾಲಿಯಲ್ಲೂ ಮತ್ತೊಮ್ಮೆ “ಗೋಲಿ ಮಾರೋ, "ದೇಶ್ ಕೆ ಗಡ್ಡಾರನ್ ಕೋ, ಗೋಲಿ ಮಾರೊ (ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಂದುಬಿಡಿ) ಎಂಬ ವಿವಾದಾತ್ಮಕ ಘೋಷಣೆಗಳು ಮಾರ್ದನಿಸಿವೆ.

ಕೇಂದ್ರ ಗೃಹ ಸಚಿವ ಒಂದು ದಿನದ ಪ್ರವಾಸಕ್ಕಾಗಿ ಇಂದು ಕೋಲ್ಕತ್ತಾಗೆ ತೆರಳಿದ್ದರು. ಈ ವೇಳೆ ಮಧ್ಯಾದ್ನ 1.15ರ ಸುಮಾರಿಗೆ ಅಮಿತ್ ಶಾ ರ‍್ಯಾಲಿ ಸಂದರ್ಭದಲ್ಲಿ ಬಿಜೆಪಿ ಧ್ವಜ ಹಿಡಿದಿದ್ದ ಬಿಜೆಪಿ ಬೆಂಬಲಿಗರ ಗುಂಪು “ದೇಶದ್ರೋಹಿಗಳಿಗೆ ಗುಂಡಿಕ್ಕಿ”, "ಕಿಸ್ಕೊ ಚಾಹಿಯೆ ಆಜಾದಿ ... ಹಮ್ ಡೆಂಗೆ ಆಜಾದಿ (ಯಾರು ಸ್ವಾತಂತ್ರ್ಯವನ್ನು ಬಯಸುತ್ತಾರೆ, ನಾವು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇವೆ)" ಎಂದು ಘೋಷಣೆ ಕೂಗುತ್ತಿರುವುದು ಕಂಡು ಬಂದಿದೆ. ಅಲ್ಲದೆ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೆಹಲಿಯಲ್ಲಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದೇ ರೀತಿಯ ಘೋಷಣೆ ಕೂಗುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಚುನಾವಣಾ ಆಯೋಗ ಠಾಕೂರ್ ಅವರಿಗೆ ಚುನುವಣಾ ಪ್ರಚಾರದಿಂದ 72 ಗಂಟೆಗಳ ಕಾಲ ನಿಷೇಧ ಹೇರಿತ್ತು.

ಇದನ್ನೂ ಓದಿ : ದೆಹಲಿ ಕೋಮು ಗಲಭೆ ಪೂರ್ವ ನಿಯೋಜಿತವೇ?; ಗೃಹ ಸಚಿವ ಅಮಿತ್ ಶಾ ವಿರುದ್ಧ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್

ಅನುರಾಗ್ ಠಾಕೂರ್ ಅಲ್ಲದೆ, ಅನೇಕ ಬಿಜೆಪಿ ನಾಯಕರು ಇಂತಹದ್ದೇ ಘೋಷಣೆ ಕೂಗಿದ್ದರು. ದೆಹಲಿ ಕೋಮುಗಲಭೆಗೆ ಬಿಜೆಪಿ ನಾಯಕರ ಈ ಪ್ರಚೋಧನಾಕಾರಿ ಘೋಷಣೆಗಳೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಇಂತವರ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ದೆಹಲಿ ಪೊಲೀಸರಿಗೆ ತಾಕೀತು ಮಾಡಿದ್ದರು.

ದೆಹಲಿ ಕೋಮು ಗಲಭೆ ಬೆನ್ನಿಗೆ ಇಂದು ಕೋಲ್ಕತ್ತಾದಲ್ಲೂ ಸಹ ಇದೇ ರೀತಿಯ ಪ್ರಚೋಧನಾಕಾರಿ ಘೋಷಣೆಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯ್ದಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, “ಬಿಜೆಪಿ ತನ್ನ ಕೋಮು ದಳ್ಳುರಿಯ ಮೂಲಕ ಕೋಲ್ಕತ್ತಾವನ್ನೂ ದೆಹಲಿಯಂತೆ ಕೋಮು ಗಲಭೆ ಪೀಡಿತ ಪ್ರದೇಶವನ್ನಾಗಿಸಲು ಪ್ರಯತ್ನಿಸುತ್ತಿದೆ, ಈ ಕುರಿತು ನಾವು ಸಂಸತ್ನಲ್ಲಿ ಪ್ರಶ್ನಿಸಲಿದ್ದೇವೆ” ಎಂದು ಕಿಡಿಕಾರಿದ್ದಾರೆ.

ವಿವಾದಾತ್ಮಕ ಘೋಷಣೆಗಳನ್ನೊಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಕೋಲ್ಕತ್ತಾ ಪೊಲೀಸರು ಕಾರ್ಯೋನ್ಮುಖರಾಗಿದ್ದು ತನಿಖೆಗೆ ಮುಂದಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಾವು ಘಟನೆ ಸಂಬಂಧ ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕುತ್ತಿದ್ದೇವೆ. ದೇಶದ್ರೋಹಿಗಳಿಗೆ ಗುಂಡು ಹಾರಿಸಿ ಎಂದು ವಿವಾದಾತ್ಮಕ ಘೋಷಣೆ ಕೂಗಿದವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ.

ಅಲ್ಲದೆ, ನಗರದಲ್ಲಿ ಕೋಮು ಉದ್ವೇಗಕ್ಕೆ ಕಾರಣವಾಗುವಂತಹ ಘೋಷಣೆಗಳನ್ನು ಜನ ಕೂಗಬಾರದು ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಯಾವ ವಿಚಾರವನ್ನೂ ಹಂಚಿಕೊಳ್ಳಬಾರದು. ನಿಯಮ ಉಲ್ಲಂಘಿಸಿ ಸಮಾಜದ ಶಾಂತಿ ಕದಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವುದನ್ನು ನೋಡಲು ಅನೇಕರು ಕಾತರರಾಗಿದ್ದಾರೆ; ಶಶಿ ತರೂರ್​
First published: