ಕೋಸ್ಟರಿಕಾ: ವಿಶ್ವದಾದ್ಯಂತ ಪ್ರಖ್ಯಾತವಾಗಿರುವ ಗೋಲ್ಡ್ಸ್ ಜಿಮ್ನ ಮಾಲೀಕ (Gold's Gym owner), ಜರ್ಮನಿಯ ಪ್ರಸಿದ್ಧ ಉದ್ಯಮಿ (famous German businessman) ರೈನರ್ ಸ್ಕಾಲರ್ (Rainer Schaller) ವಿಮಾನ ಅಪಘಾತದಲ್ಲಿ (plane crash) ಸಾವನ್ನಪ್ಪಿದ್ದಾರೆ. ರೈನರ್ ಸ್ಕಾಲರ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಇನ್ನೂ 5 ಮಂದಿ ಇದ್ದರು. ಆದರೆ ಎಲ್ಲರೂ ಕಣ್ಮರೆಯಾಗಿದ್ದರು. ಇದೀಗ ಅವರ ವಿಮಾನ ಅಪಘಾತಕ್ಕೆ ಒಳಗಾಗಿದೆ ಎನ್ನಲಾಗಿದ್ದು, ರೈನರ್ ಸ್ಕಾಲರ್ ಸೇರಿದಂತೆ ವಿಮಾನದಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿದ್ದಾಗಿ ಮೂಲಗಳು ತಿಳಿಸಿವೆ. ಮೆಕ್ಸಿಕೊದಿಂದ (Mexico) ಕರಾವಳಿ ಪ್ರವಾಸಿ ಪಟ್ಟಣವಾದ ಲಿಮೋನ್ಗೆ (Limón) ತೆರಳುವಾಗ ವಿಮಾನವು ರಾಡಾರ್ನಿಂದ ಕಣ್ಮರೆಯಾಯಿತು, ಈ ವಿಮಾನದಲ್ಲಿ ಜರ್ಮನಿಯ ಉದ್ಯಮಿ ರೈನರ್ ಸ್ಕಾಲರ್ ವಿಮಾನದಲ್ಲಿದ್ದರು. ಬಳಿಕ ಕೋಸ್ಟರಿಕಾದ ಕರಾವಳಿಯಲ್ಲಿ ಕೆರಿಬಿಯನ್ ಸಮುದ್ರಕ್ಕೆ (Caribbean Sea) ಆ ವಿಮಾನ ಅಪ್ಪಳಿಸಿತು, ಅದರಲ್ಲಿದ್ದ ಎಲ್ಲಾ ಆರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದೆ.
ಮೊದಲು ಸಂಪರ್ಕ ಕಳೆದುಕೊಂಡ ವಿಮಾನ
ಜರ್ಮನಿಯ ಉದ್ಯಮಿ ರೈನರ್ ಸ್ಕಾಲರ್ ಮತ್ತು ಅವರ ಮಕ್ಕಳು ಕೋಸ್ಟಾ ರಿಕಾಗೆ ತೆರಳುವಾಗ ವಿಮಾನದಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ. ಖಾಸಗಿ ವಿಮಾನದಲ್ಲಿ ರೈನರ್ ಸ್ಕಾಲರ್, ಕ್ರಿಸ್ಟಿಯಾನೆ ಸ್ಕಿಕೋರ್ಸ್ಕಿ ಮತ್ತು ಅವರ ಮಕ್ಕಳು ಮತ್ತು ಫಿಟ್ನೆಸ್ ತರಬೇತುದಾರರು ಇದ್ದರು. ಅವರೆಲ್ಲ ಕೋಸ್ಟಾ ರಿಕಾಗೆ ಪ್ರಯಾಣಿಸುವಾಗ ನಾಪತ್ತೆಯಾಗಿದ್ದರು. ಕೆರಿಬಿಯನ್ನಲ್ಲಿರುವ ಬಾರ್ರಾ ಡೆಲ್ ಪ್ಯಾರಿಸ್ಮಿನಾ ಮೂಲಕ ಹಾದುಹೋಗುವಾಗ ವಿಮಾನವು ನಿಯಂತ್ರಣ ಗೋಪುರದೊಂದಿಗೆ ಸಂಪೂರ್ಣ ಸಂಪರ್ಕವನ್ನು ಕಳೆದುಕೊಂಡಿತು ಎನ್ನವಾಗಿದೆ.
ಐವರು ಜರ್ಮನ್, ಓರ್ವ ಸ್ವಿಸ್ ಪ್ರಜೆ
ಎಲ್ಲಾ ಐದು ಪ್ರಯಾಣಿಕರು ಜರ್ಮನ್ ಪ್ರಜೆಗಳು ಎಂದು ಊಹಿಸಲಾಗಿದೆ. ಇನ್ನು ಪೈಲಟ್ ಸ್ವಿಸ್ ಪ್ರಜೆಯಾಗಿದ್ದರು. ನಾಪತ್ತೆಯಾದ ಅವಳಿ-ಎಂಜಿನ್ ಟರ್ಬೊಪ್ರಾಪ್ ವಿಮಾನದ ತುಣುಕುಗಳು ಹಿಂದಿನ ದಿನ ಸಾಗರದಲ್ಲಿ ಪತ್ತೆಯಾಗಿವೆ ಎಂದು ಕೋಸ್ಟರಿಕಾದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇದನ್ನೂ ಓದಿ: Mercy Killing: ಮಲಮಗನಿಂದ ಅತ್ಯಾಚಾರ, ಗರ್ಭಿಣಿಯಾದ ಮಲತಾಯಿ! ದಯಾಮರಣಕ್ಕಾಗಿ ರಾಷ್ಟ್ರಪತಿಗೆ ಪತ್ರ
ಭದ್ರತಾ ಸಚಿವರು ಹೇಳಿದ್ದೇನು?
ಇದು ವಿಮಾನ ಎಂದು ಸೂಚಿಸುವ ತುಣುಕುಗಳು ಕಂಡುಬಂದಿವೆ ಅಂತ ಭದ್ರತಾ ಸಚಿವ ಜಾರ್ಜ್ ಟೊರೆಸ್ ಹೇಳಿದ್ದಾರೆ. "ಇಲ್ಲಿಯವರೆಗೆ ನಾವು ಯಾವುದೇ ಶವಗಳನ್ನು ಅಥವಾ ವಿಮಾನದಲ್ಲಿದ್ದ ವ್ಯಕ್ತಿಗಳನ್ನು ಜೀವಂತವಾಗಿ ಕಂಡುಕೊಂಡಿಲ್ಲ" ಎಂದೂ ಸಹ ಅವರು ಹೇಳಿದ್ದಾರೆ. ಆದರೆ ಕೋಸ್ಟಾ ರಿಕನ್ ಕೋಸ್ಟ್ ಗಾರ್ಡ್ ಅವರು ಹಲವಾರು ವಿಮಾನ ಅವಶೇಷಗಳು ಮತ್ತು ಕನಿಷ್ಠ ಎರಡು ದೇಹಗಳನ್ನು ಕಂಡುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಹುಡುಕಾಟಕ್ಕೆ ಅಡ್ಡಿಯಾದ ಹವಾಮಾನ ವೈಪರಿತ್ಯ
"ಮಧ್ಯಾಹ್ನ ಆರು ಗಂಟೆಗೆ ನಾವು ಮೆಕ್ಸಿಕೋದಿಂದ ಲಿಮನ್ ವಿಮಾನ ನಿಲ್ದಾಣಕ್ಕೆ ಐದು ಜರ್ಮನ್ ಪ್ರಯಾಣಿಕರನ್ನು ಹೊತ್ತೊಯ್ಯುವ ವಿಮಾನದ ಬಗ್ಗೆ ಎಚ್ಚರಿಕೆಯನ್ನು ಸ್ವೀಕರಿಸಿದ್ದೇವೆ" ಎಂದು ಸಚಿವ ಟೊರೆಸ್ ಹೇಳಿದರು. ಪ್ರತಿಕೂಲ ಹವಾಮಾನದ ಪರಿಣಾಮವಾಗಿ, ಹುಡುಕಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು ಅಂತ ಅವರು ಸ್ಪಷ್ಟಪಡಿಸಿದ್ದಾರೆ.
17 ಮೈಲಿ ದೂರದಲ್ಲಿ ಅವಶೇಷ ಪತ್ತೆ
ಲಿಮನ್ ವಿಮಾನ ನಿಲ್ದಾಣದಿಂದ 17 ಮೈಲಿ ದೂರದಲ್ಲಿರುವ ಸಾಗರದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿರುವುದಾಗಿ ಕೋಸ್ಟರಿಕನ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಎರಡು ಶವಗಳು, ಸಾಮಾನು ಸರಂಜಾಮುಗಳನ್ನು ವಶಪಡಿಸಿಕೊಳ್ಳಲಾಗಿದೆ . ಆದರೆ ಮೃತದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ.
ಇದನ್ನೂ ಓದಿ: Madhya Pradesh High Court: ಅತ್ಯಾಚಾರ ಮಾಡಿದ್ದಾನೆ, ಆದರೆ ಕೊಂದಿಲ್ಲ! ಆರೋಪಿಯ ಶಿಕ್ಷೆ ಕಡಿತಗೊಳಿಸಿದ ನ್ಯಾಯಪೀಠ!
ಉದ್ಯಮಿ ರೈನರ್ ಸ್ಕಾಲರ್ ಯಾರು
ರೈನರ್ ಸ್ಕಾಲರ್ ಅವರು ಜರ್ಮನಿಯ ಉದ್ಯಮಿ. ಅವರು RSG ಗ್ರೂಪ್ನ CEO ಮತ್ತು ಸಂಸ್ಥಾಪಕರಾಗಿದ್ದಾರೆ, ಇದು ಗೋಲ್ಡ್ಸ್ ಜಿಮ್, ಮ್ಯಾಕ್ಫಿಟ್, ಜಾನ್ ರೀಡ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ ಪ್ರಖ್ಯಾತ ಜಿಮ್ಗಳ ಸರಣಿಯನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ