ಗೋವಾ(ಮೇ 14): ದೇಶದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸಂಭವಿಸುತ್ತಿರುವ ದುರಂತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಪ್ರಾಣವಾಯು ಸಿಗದೆ ಜನರು ಉಸಿರು ಚೆಲ್ಲುತ್ತಿದ್ದಾರೆ. ಇಂತಹ ದುರಂತಗಳ ಸಾಲಿಗೆ ಗೋವಾ ರಾಜ್ಯ ಕೂಡ ಹೊರತಾಗಿಲ್ಲ. ಕಳೆದ ಮೂರು ದಿನಗಳಿಂದ ಗೋವಾದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕೊರೋನಾ ಸೋಂಕಿತರು ಸಾವನ್ನಪ್ಪುತ್ತಲೇ ಇದ್ದಾರೆ. ಇಂದು 13ಕ್ಕೂ ಹೆಚ್ಚು ಜನರು ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾಣವಾಯು ಸಿಗದೆ ಪ್ರಾಣ ತೆತ್ತಿದ್ದಾರೆ. ಇದರ ಜೊತೆಗೆ ಸಾವಿನ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.
ನಿನ್ನೆ ತಾನೇ ಇದೇ ಆಸ್ಪತ್ರೆಯಲ್ಲಿ 15 ಕೊರೋನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದಾಗಿ ಅಸುನೀಗಿದ್ದರು. ಇದರ ಜೊತೆಗೆ ಇಂದು 13 ಮಂದಿ ಪ್ರಾಣವಾಯು ಸಿಗದೆ ಮೃತಪಟ್ಟಿದ್ದಾರೆ. ಕಳೆದ ಮಂಗಳವಾರದಿಂದ ಒಟ್ಟು 74 ಮಂದಿ ಆಕ್ಸಿಜನ್ ಕೊರತೆಯಿಂದ ಮೃತಪಟಿಟದ್ದಾರೆ.
ಬುಧವಾರ 20 ಕೊರೋನಾ ಸೋಂಕಿತರು ಹಾಗೂ ಮಂಗಳವಾರ 26 ಕೊರೋನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಉಸಿರು ಚೆಲ್ಲಿದ್ದರು. ಇದಾದ ಬಳಿಕ ಇಂದು 13ಕ್ಕೂ ಹೆಚ್ಚು ಮಂದಿ ಅಸುನೀಗಿರುವ ದುರಂತ ನಡೆದಿದೆ.
ಅಲ್ಲಿ ಮೋದಿ, ಇಲ್ಲಿ ಯಡಿಯೂರಪ್ಪ ನಿದ್ರಾವಸ್ಥೆಯಲ್ಲಿದ್ದಾರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ
ಗೋವಾ ವಿಭಾಗೀಯ ಪೀಠವು ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಸಂಭವಿಸಿದ ಈ ಸರಣಿ ಸಾವುಗಳ ಕುರಿತಾಗಿ ಇಂದು ವಿಚಾರಣೆ ನಡೆಸಿತು.
ಗುರುವಾರ ಆಕ್ಸಿಜನ್ ಕೊರತೆಯಿಂದಾಗಿ ಸಂಭವಿಸಿದ 15 ಸಾವುಗಳು ಮಧ್ಯರಾತ್ರಿ 2ಗಂಟೆಯಿಂದ 6 ಗಂಟೆಯೊಳಗೆ ಸಂಭವಿಸಿವೆ ಎಂದು ಗೋವಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜೊತೆಗೆ ಕೇಂದ್ರ ಸರ್ಕಾರವು ಗೋವಾಗೆ ಅಗತ್ಯವಿರುವ ಆಕ್ಸಿಜನ್ನ್ನು ಪೂರೈಕೆ ಮಾಡಬೇಕು. ಇಲ್ಲೇ ಅತೀ ಹೆಚ್ಚು ಪಾಸಿಟಿವಿಟಿ ದರ ಇದೆ ಎಂದು ಹೈಕೋರ್ಟ್ ಹೇಳಿದೆ.
ಗುರುವಾರ ಗೋವಾದಲ್ಲಿ ಸುಮಾರು 2,491 ಹೊಸ ಪ್ರಕರಣಗಳು ಪತ್ತೆಯಾಗಿವೆ. 63 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಕರಾವಳಿ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,30,130ಕ್ಕೆ ಏರಿಕೆಯಾಗಿದ್ದರೆ, ಸಾವನ್ನಪ್ಪಿದವರ ಸಂಖ್ಯೆ 1,937ಕ್ಕೆ ಏರಿಕೆಯಾಗಿದೆ.ಸುಮಾರು 95,240 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 32,953 ಸಕ್ರಿಯ ಪ್ರಕರಣಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ