ನಮ್ಮಲ್ಲೇ ಹೆಚ್ಚು ಹಸಿವು..! ಜಾಗತಿಕ ಹಸಿವಿನ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತಲೂ ಹಿಂದುಳಿದ ಭಾರತ

ಹಂಗರ್ ಇಂಡೆಕ್ಸ್​ನಲ್ಲಿ ಭಾರತ 30.3 ಅಂಕ ಹೊಂದಿ 102ನೇ ಸ್ಥಾನದಲ್ಲಿದೆ. 53.6 ಪಾಯಿಂಟ್ ಹೊಂದಿರುವ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ದೇಶ ಕೊನೆಯ ಸ್ಥಾನದಲ್ಲಿದೆ. ಭಾರತೀಯ ಉಪಖಂಡದಲ್ಲಿ ಶ್ರೀಲಂಕಾ 17.1 ಅಂಕದೊಂದಿಗೆ 66ನೇ ಸ್ಥಾನದಲ್ಲಿ ಉತ್ತಮ ಸ್ಥಿತಿಯಲ್ಲಿದೆ.

Vijayasarthy SN | news18
Updated:October 16, 2019, 6:21 PM IST
  • News18
  • Last Updated: October 16, 2019, 6:21 PM IST
  • Share this:
ಈ ವರ್ಷದ ಗ್ಲೋಬಲ್ ಹಂಗರ್ ಇಂಡೆಕ್ಸ್ ಪಟ್ಟಿ ನಿನ್ನೆ ಬಿಡುಗಡೆಯಾಗಿದೆ. ವಿವಿಧ ದೇಶಗಳಲ್ಲಿರುವ ಹಸಿವಿನ ಪ್ರಮಾಣವನ್ನು ತೋರಿಸುವ ಈ ಪಟ್ಟಿಯಲ್ಲಿ ಭಾರತ ತೀರಾ ಹಿಂದುಳಿದಿದೆ. ಸೂಕ್ತ ದಾಖಲೆಗಳು ಲಭ್ಯವಿರುವ ಒಟ್ಟು 117 ರಾಷ್ಟ್ರಗಳ ಪೈಕಿ ಭಾರತ 102ನೇ ಸ್ಥಾನ ಪಡೆದಿದೆ. ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳು ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿವೆ.

ಹಸಿವಿನ ವಿಚಾರದಲ್ಲಿ ಅತೀ ಕಳಪೆ ಸಾಧನೆ ಹೊಂದಿರುವ 25 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಹೊರತುಪಡಿಸಿ ಉಳಿದೆಲ್ಲಾ ದೇಶಗಳು ಆಫ್ರಿಕಾ ಖಂಡದವೇ ಆಗಿರುವುದು ಗಮನಾರ್ಹ. ಹಂಗರ್ ಇಂಡೆಕ್ಸ್​ನಲ್ಲಿ ಭಾರತ 30.3 ಅಂಕ ಹೊಂದಿ 102ನೇ ಸ್ಥಾನದಲ್ಲಿದೆ. 53.6 ಪಾಯಿಂಟ್ ಹೊಂದಿರುವ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ದೇಶ ಕೊನೆಯ ಸ್ಥಾನದಲ್ಲಿದೆ. ಭಾರತೀಯ ಉಪಖಂಡದಲ್ಲಿ ಶ್ರೀಲಂಕಾ 17.1 ಅಂಕದೊಂದಿಗೆ 66ನೇ ಸ್ಥಾನದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಬೆಲಾರಸ್, ಉರುಗ್ವೆ ಸೇರಿದಂತೆ 17 ರಾಷ್ಟ್ರಗಳು 5ಕ್ಕಿಂತ ಕಡಿಮೆ ಅಂಕ ಪಡೆದು ಅಗ್ರಸ್ಥಾನ ಹಂಚಿಕೊಂಡಿವೆ.

ಇದನ್ನೂ ಓದಿ: ಹೇಮಾ ಮಾಲಿನಿ ಕೆನ್ನೆಗಳಂತೆ ರಸ್ತೆಗಳನ್ನು ನಿರ್ಮಿಸುತ್ತೇವೆ: ಮಧ್ಯಪ್ರದೇಶ ಸಚಿವ ಭರವಸೆ

ಭಾರತೀಯ ಉಪಖಂಡ ಹಾಗೂ ಕೆಲ ದಕ್ಷಿಣ ಪೂರ್ವ ಏಷ್ಯನ್ ದೇಶಗಳನ್ನ ಹೊರತುಪಡಿಸಿ ಏಷ್ಯಾ ಖಂಡದ ಬಹುತೇಕ ರಾಷ್ಟ್ರಗಳು ಹಸಿವಿನ ಪಟ್ಟಿಯಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಹಾಗೆಯೇ, ದಕ್ಷಿಣ ಅಮೆರಿಕ ಖಂಡದ ಬಹುತೇಕ ದೇಶಗಳೂ ಕೂಡ ಉತ್ತಮ ಸ್ಥಿತಿಯಲ್ಲಿವೆ. ಆಫ್ರಿಕಾ ಖಂಡದಲ್ಲಿ ಮಾತ್ರವೇ ಅತಿ ಹೆಚ್ಚಿನ ಹಸಿವು ಮನೆ ಮಾಡಿದೆ ಎಂಬುದು ಗ್ಲೋಬಲ್ ಹಂಗರ್ ಇಂಡೆಕ್ಸ್​ನಿಂದ ಗೊತ್ತಾಗುತ್ತದೆ.

ಹಸಿವೆಗೆ ಮಾನದಂಡಗಳೇನು?

ಐದು ವರ್ಷದೊಳಗಿನ ಮಕ್ಕಳ ಆಹಾರವನ್ನು ವಿಶ್ಲೇಷಿಸಿ ಗ್ಲೋಬಲ್ ಹಂಗರ್ ಇಂಡೆಕ್ಸ್ ರೂಪಿಸಲಾಗಿದೆ. ಇದಕ್ಕಾಗಿ ನಾಲ್ಕು ಮಾನದಂಡಗಳನ್ನ ಇಟ್ಟುಕೊಳ್ಳಲಾಗಿದೆ:
1) ಅಂಡರ್​ನೊರಿಶ್ಮೆಂಟ್(ಕುಪೋಷಣೆ): ಮಕ್ಕಳ ಆಹಾರದಲ್ಲಿರುವ ಕ್ಯಾಲೋರಿ ಪ್ರಮಾಣ.2) ಚೈಲ್ಡ್ ವೇಸ್ಟಿಂಗ್: ಪೋಷಕಾಂಶದ ಕೊರತೆ ಎಷ್ಟಿದೆ ಎಂಬುದು. ಅಂದರೆ, ಮಕ್ಕಳು ತಮ್ಮ ಎತ್ತರಕ್ಕೆ ತಕ್ಕಂತಹ ದೇಹತೂಕ ಹೊಂದಿದ್ದಾರೋ ಇಲ್ಲವೋ.
3) ಚೈಲ್ಡ್ ಸ್ಟಂಟಿಂಗ್: ಬೆಳವಣಿಗೆ ಕೊರತೆ; ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ದೈಹಿಕ ಎತ್ತರ ಸಾಧಿಸದೇ ಇರುವುದು.
4) ಚೈಲ್ಡ್ ಮಾರ್ಟಾಲಿಟಿ: ಐದು ವರ್ಷದೊಳಗಿನ ಮಕ್ಕಳು ಅನಾರೋಗ್ಯದಿಂದ ಸಾವನ್ನಪ್ಪುವ ಪ್ರಮಾಣ.

ಇದನ್ನೂ ಓದಿ: ಪಾರ್ಲೆ ಸ್ಟೋರಿ..! ಆರ್ಥಿಕ ಹಿಂಜರಿತ ಎಂದು ಉದ್ಯೋಗ ಕಡಿತ ಮಾಡಲು ಹೊರಟಿದ್ದ ಬಿಸ್ಕತ್ ಕಂಪನಿಗೆ ಈ ವರ್ಷ ಶೇ. 15 ಲಾಭ ಹೆಚ್ಚಳ

ಮೇಲಿನ ಈ ನಾಲ್ಕು ಮಾನದಂಡಗಳನ್ನಿಟ್ಟುಕೊಂಡು ಹಸಿವು ಪಟ್ಟಿ ರೂಪಿಸಲಾಗಿದೆ. ವಿಶ್ವ ಸಂಸ್ಥೆಯ ವಿವಿಧ ಅಂಗಗಳಲ್ಲಿರುವ ದಾಖಲೆ, ಮಾಹಿತಿಯ ನೆರವು ಪಡೆದು ಈ ವಿಶ್ಲೇಷಣೆ ಮಾಡಲಾಗಿದೆ.

ಅಮೆರಿಕ, ಜಪಾನ್, ಇಂಗ್ಲೆಂಡ್, ಆಸ್ಟ್ರೇಲಿಯಾದಂಥ ಕೆಲ ಮುಂದುವರಿದ ರಾಷ್ಟ್ರಗಳಲ್ಲಿ ಮಕ್ಕಳ ಆರೋಗ್ಯ ಸುಸ್ಥಿತಿಯಲ್ಲಿರುವುದರಿಂದ ಅವುಗಳನ್ನು ಈ ಪಟ್ಟಿಯಲ್ಲಿ ಒಳಗೊಳ್ಳಲಾಗಿಲ್ಲ. ಹಾಗೆಯೇ, ಯುದ್ಧ, ಆಂತರಿಕ ಬಿಕ್ಕಟ್ಟುಗಳಿಂದ ಬಳಲುತ್ತಿರುವ ರಾಷ್ಟ್ರಗಳಲ್ಲಿ ಸರಿಯಾದ ಮಾಹಿತಿ ಅಲಭ್ಯವಿರುವುದರಿಂದಲೂ ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಭಾರತದಲ್ಲಿ ಮಕ್ಕಳ ಪೌಷ್ಟಿಕಾಂಶ ಕೊರತೆ ನೀಗಿಸಲು ಕೆಲವಾರು ಯೋಜನೆಗಳನ್ನ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವೂ ಒಂದು. ಕರ್ನಾಟಕದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೂ ಸರ್ಕಾರ ಪೌಷ್ಟಿಕಾಂಶದ ಯೋಜನೆ ಹಾಕಿದೆ. ಈ ಯೋಜನೆಗಳಿಗೆ ಇನ್ನಷ್ಟು ಪುಷ್ಟಿ ಕೊಡಬೇಕಾದ ಅಗತ್ಯ ಇರುವಂತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading