HOME » NEWS » National-international » GIRLS SHOULD NOT BE GIVEN PHONES AS IT LEADS TO RAPES SAYS WOMENS COMMISSION MEMBER KVD

ಹೆಣ್ಣುಮಕ್ಕಳಿಗೆ ಮೊಬೈಲ್ ಕೊಟ್ಟಿರುವುದರಿಂದಲೇ ರೇಪ್​​ಗಳು ಆಗುತ್ತಿವೆ: ಮಹಿಳಾ ಆಯೋಗದ ಸದಸ್ಯೆ ವಿವಾದ

ಯುವತಿಯರು ಮೊಬೈಲ್​ ಮೂಲಕ ಯುವಕರ ಸಂಪರ್ಕಕ್ಕೆ ಸಿಗುತ್ತಾರೆ, ನಂತರ ಅವರೊಂದಿಗೆ ಓಡಿ ಹೋಗುತ್ತಾರೆ. ಅತ್ಯಾಚಾರ ಪ್ರಕರಣಗಳಿಗೆ ಯುವತಿಯ ಪೋಷಕರೇ ಕಾರಣ ಎಂದು ದೂರಿದ್ದಾರೆ.

Kavya V | news18-kannada
Updated:June 10, 2021, 3:24 PM IST
ಹೆಣ್ಣುಮಕ್ಕಳಿಗೆ ಮೊಬೈಲ್ ಕೊಟ್ಟಿರುವುದರಿಂದಲೇ ರೇಪ್​​ಗಳು ಆಗುತ್ತಿವೆ: ಮಹಿಳಾ ಆಯೋಗದ ಸದಸ್ಯೆ ವಿವಾದ
ಸಾಂದರ್ಭಿಕ ಚಿತ್ರ
  • Share this:
ಲಖನೌ: ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಹೆಣ್ಣನ್ನೇ ದೂರುವ ಪ್ರಮಾದ ಮತ್ತೆ ನಡೆದಿದೆ. ಯುವತಿಯರ ಕೈಗೆ ಮೊಬೈಲ್​​ ಕೊಟ್ಟಿರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಮಹಿಳಾ ಆಯೋಗದ ಸದಸ್ಯೆಯೇ ಹೇಳಿರುವುದು ವಿವಾದಕ್ಕೆ ಎಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಳಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಸದಸ್ಯೆ ಮೊಬೈಲ್​​ನಿಂದಲೇ ಅತ್ಯಾಚಾರ ಹೆಚ್ಚಾಗಿದೆ ಎಂದಿದ್ದಾರೆ. ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ಎಂಬುವರ ಹೇಳಿಕೆ ಸದ್ಯ ತೀವ್ರ ಟೀಕೆಗೆ ಗುರಿಯಾಗಿದೆ.

ಅಲಿಘಡ್​ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮೀನಾ ಕುಮಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯುವತಿಯರು ಮೊಬೈಲ್​ ಮೂಲಕ ಯುವಕರ ಸಂಪರ್ಕಕ್ಕೆ ಸಿಗುತ್ತಾರೆ, ನಂತರ ಅವರೊಂದಿಗೆ ಓಡಿ ಹೋಗುತ್ತಾರೆ. ಅತ್ಯಾಚಾರ ಪ್ರಕರಣಗಳಿಗೆ ಯುವತಿಯ ಪೋಷಕರೇ ಕಾರಣ ಎಂದು ದೂರಿದ್ದಾರೆ. ತಮ್ಮ ಹೆಣ್ಣು ಮಗಳನ್ನು ಮೊಬೈಲ್​ನಿಂದ ದೂರ ಇಡುವ ಕೆಲಸವನ್ನು ಪೋಷಕರು ಮಾಡಬೇಕು. ಅಪ್ರಾಪ್ತ ಹೆಣ್ಣು ಮಕ್ಕಳ ಕೈಗೆ ಮೊಬೈಲ್​​ ಕೊಡುವುದನ್ನು ಹೆತ್ತವರು ಮೊದಲು ನಿಲ್ಲಸಬೇಕು ಎಂದು ಅಸಂಬದ್ಧ ಸಲಹೆಯನ್ನೂ ನೀಡಿದ್ದಾರೆ.

ಮೀನಾ ಕುಮಾರಿ ಅವರ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದಂತೆ ಉತ್ತರ ಪ್ರದೇಶ ಮಹಿಳಾ ಆಯೋಗ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಮೀನಾ ಅವರ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಆಯೋಗ ಒಪ್ಪುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಆಯೋಗದ ಉಪಾಧ್ಯಕ್ಷೆ ಅಂಜು ಚೌದರಿ ಅವರು ಮೀನಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಹೆಣ್ಣುಮಕ್ಕಳನ್ನು ಮೊಬೈಲ್​​ನಿಂದ ದೂರವಿಡುವುದು ಅತ್ಯಾಚಾರ ಹೆಚ್ಚಳ ಸಮಸ್ಯೆಗೆ ಪರಿಹಾರವಲ್ಲ ಎಂದಿದ್ದಾರೆ.

ಇದನ್ನೂ ಓದಿ: Crime News: ಮಗನಿಗೆ ತಿಳಿಯದಂತೆ ಸೊಸೆಯನ್ನೇ ಮಾರಾಟ ಮಾಡಿದ ಮಾವ; ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ಮೊಬೈಲ್​​ ನೀಡಬಾರದು ಎನ್ನುವುದಕ್ಕಿಂತ ಸರಿಯಾಗಿ ಬಳಕೆ ಮಾಡುವ ಕುರಿತು ಯುವತಿಯರಲ್ಲಿ ಅರಿವು ಮೂಡಿಸಬೇಕು. ಮೊಬೈಲ್​​ನಿಂದ ಹೇಗೆಲ್ಲಾ ಮೋಸದ ಜಾಲಕ್ಕೆ ಬೀಳಬಹುದು ಎಂಬ ಬಗ್ಗೆ ಜಾಗೃತಿ ಮೂಡಿಸಬೇಕು. ಅಪರಿಚಿತರ ಜೊತೆ ಚಾಟ್​​​ ಮಾಡಬಾರದು ಎಂಬುವುದನ್ನು ತಿಳಿಸಿಕೊಡಬೇಕು. ಸುರಕ್ಷಿತವಾಗಿ ಮೊಬೈಲ್​​ ಬಳಕೆ ಬಗ್ಗೆ ತಿಳಿ ಹೇಳಬೇಕು ಎಂದು ಅಂಜು ಚೌದರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಹೇಳಿಕೆ ವಿವಾದಕ್ಕೊಳಗಾಗುತ್ತಲೇ ಮೀನಾ ಕುಮಾರಿ ಅವರು ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಹಳ್ಳಿಯಲ್ಲಿರುವ ಯುವತಿಯರಿಗೆ ಮೊಬೈಲ್​ ಬಳಕೆ ಬಗ್ಗೆ ಹೆಚ್ಚಿನ ಜ್ಞಾನವಿರುವುದಿಲ್ಲ. ಮೊಬೈಲ್​ ಮೂಲಕ ಅಪರಿಚಿತ ಪುರುಷರ ಸಂಪರ್ಕಕ್ಕೆ ಬಂದು ಅವರೊಂದಿಗೆ ಓಡಿ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದೆ, ಮೊಬೈಲ್​ ಕೊಡಲೇಬಾರದು ಎಂಬರ್ಥದಲ್ಲಿ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಹರೆಯದ ಯುವಕ-ಯುವತಿಯರು ಮೊಬೈಲ್​ ಮೂಲಕ ಅಶ್ಲೀಲ ವಿಡಿಯೋ ವೀಕ್ಷಣೆ ಚಟಕ್ಕೆ ಬೀಳುವ ಸಾಧ್ಯತೆಗಳು ಹೆಚ್ಚಾಗಿದೆ ಎಂದ ಮೀನಾ ಕುಮಾರಿಗೆ ಮರುಪ್ರಶ್ನೆ ಹಾಕಲಾಗಿದೆ. ಮೊಬೈಲ್​ ವೀಕ್ಷಣೆಗೂ ಅತ್ಯಾಚಾರಕ್ಕೂ ಹೇಗೆ ಸಂಬಂಧ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ಉತ್ತರಿಸಿರುವ ಅವರು ನಿತ್ಯ 20 ಪ್ರಕರಣಗಳು ಆಯೋಗದ ಗಮನಕ್ಕೆ ಬರುತ್ತೆ. ಅದರಲ್ಲಿ ಬಹುತೇಕ ಪ್ರಕರಣಗಳಿಗೆ ಮೊಬೈಲ್​ ಸಂಪರ್ಕವೇ ಕಾರಣವಾಗಿರುತ್ತೆ ಎಂದಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 10, 2021, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories