ಮುಂಬೈ(ಆ.10): ನಮ್ಮ ಸುತ್ತ-ಮುತ್ತಲೂ ಅನೇಕ ಭಯಾನಕ ಘಟನೆಗಳು ನಡೆಯುತ್ತಿರುತ್ತವೆ. ಕ್ಷುಲ್ಲಕ ಕಾರಣಕ್ಕೆ ಜಗಳ, ಆ ಜಗಳ ಅತಿರೇಕಕ್ಕೆ ಹೋದರೆ ಕೊಲೆ. ಹೀಗೆ ಇಂತಹ ಘಟನೆಗಳು ನಮ್ಮ ಕಣ್ಮುಂದೆ ನಡೆಯುತ್ತವೆ. ಮಹಾನಗರಿ ಮುಂಬೈನಲ್ಲಿ ಮಗಳು ತನ್ನ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಇದು ನಿಜಕ್ಕೂ ಎಲ್ಲರಿಗೂ ಶಾಕಿಂಗ್ ಸುದ್ದಿಯಾಗಿದೆ. 15 ವರ್ಷದ ಹುಡುಗಿ ಈ ಹೀನ ಕೃತ್ಯ ಎಸಗಿದ್ದಾಳೆ.
ಓದುವ ವಿಚಾರಕ್ಕೆ ಅಮ್ಮ-ಮಗಳ ನಡುವೆ ಜಗಳ ಶುರುವಾಗಿತ್ತು. ಮೊದಲು ಮಾತಿಗೆ ಮಾತು ಬೆಳೆದು ಬಳಿಕ ಜಗಳಕ್ಕೆ ತಿರುಗಿತು. ಈ ಜಗಳ ಇನ್ನೂ ಅತಿರೇಕಕ್ಕೆ ಹೋಯಿತು. ಆಗ ಮಗಳು ಕರಾಟೆ ಬೆಲ್ಟ್ನಿಂದ ತಾಯಿಯನ್ನು ಕತ್ತು ಬಿಗಿದು ಸಾಯಿಸಿದ್ದಾಳೆ. ಕೊಲೆ ಮಾಡಿದ ಬಳಿಕ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾಳೆ.
ಈ ಘಟನೆ ಜುಲೈ 30ರಂದು ನವಿ ಮುಂಬೈನ ಐರೋಲಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಮೆಡಿಕಲ್ ಕೋರ್ಸ್ಗೆ ಸಂಬಂಧಪಟ್ಟಂತೆ ತಾಯಿ-ಮಗಳ ನಡುವೆ ಜಗಳ ನಡೆಯುತ್ತಿತ್ತು. ತಾಯಿಗೆ ತನ್ನ ಮಗಳು ವೈದ್ಯಕೀಯ ಕೋರ್ಸ್ ಮಾಡಬೇಕೆಂಬ ಆಸೆ ಇತ್ತು. ಆದರೆ ಮಗಳಿಗೆ ಓದಲು ಇಷ್ಟವಿರಲಿಲ್ಲ. ಹೀಗಾಗಿ ಇದೇ ವಿಷಯಕ್ಕೆ ಅಮ್ಮ-ಮಗಳ ನಡುವೆ ಜಗಳಗಳಾಗುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Explained: ಒಬಿಸಿ ಪಟ್ಟಿಯಲ್ಲಿ ಬದಲಾವಣೆ ನಡೆಸಲು ಕಾರಣವೇನು? ಮಸೂದೆ ಅಂಗೀಕಾರವಾದರೆ ನಡೆಯುವ ಬದಲಾವಣೆಗಳೇನು?
ಕಳೆದ ತಿಂಗಳು ಸಹ ಮಗಳು ತನ್ನ ತಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಬಳಿಕ ಪೊಲೀಸರು ಆಕೆಯ ಕುಟುಂಬಸ್ಥರನ್ನು ಕರೆದು ಕೌನ್ಸೆಲಿಂಗ್ ನಡೆಸಿದ್ದರು. ಜುಲೈ 30ರಂದು ಹುಡುಗಿ ಪೊಲೀಸರಿಗೆ ಕರೆ ಮಾಡಿ ನನ್ನ ತಾಯಿ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ ಎಂದು ಹೇಳಿದಳು. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಬಳಿಕ ಮಹಿಳೆಯ ಮೃತದೇಹವನ್ನು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಿದರು. ಆಗ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವರದಿ ಬಂತು.
ಪೊಲೀಸರು ಮಹಿಳೆಯ ಮಗಳನ್ನು ಕರೆದು ವಿಚಾರಣೆ ನಡೆಸಿದಾಗ ಆಕೆಯೇ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿತು. ಕರಾಟೆ ಬೆಲ್ಟ್ನ್ನು ತನ್ನ ಅಮ್ಮನ ಕತ್ತಿಗೆ ಬಿಗಿದು ಸಾಯಿಸಿದ್ದಾಳೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ:ನೀರಜ್ ಚೋಪ್ರಾ ಜೊತೆ ರೂಮ್ ಶೇರಿಂಗ್ ಎಂದರೆ ನನಗೆ ಭಯ‘..! ಗೆಳೆಯ ತೇಜಸ್ವಿನ್ ಹೀಗೇಕೆ ಹೇಳಿದರು?
ಸದ್ಯ ಆರೋಪಿತ ಹುಡುಗಿ ಪೊಲೀಸರ ವಶದಲ್ಲಿದ್ದು, ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ