ಆಂಧ್ರ ಪ್ರದೇಶ(ಮೇ 22): ಡೆಡ್ ಸ್ಪರ್ಮ್ ವೇಲ್ಸ್ಗಳು ಸಮುದ್ರದಲ್ಲಿ ಕಾಣಿಸಿಕೊಳ್ಳುವುದು ಜಗತ್ತಿನಾದ್ಯಂತ ಸಾಮಾನ್ಯವಾಗಿ ಕಂಡು ಬರುವ ಸಂಗತಿಯಾಗಿದೆ. ತೀರಾ ಇತ್ತೀಚೆಗೆ ಆಂಧ್ರಪ್ರದೇಶದ ಮೀನುಗಾರರ ತಂಡವೊಂದು ಬಂಗಾಳಕೊಲ್ಲಿ ನೀರಿನಲ್ಲಿ ಕೆಲವು ಮೀಟರ್ ದೂರದಲ್ಲಿ ತೇಲುತ್ತಿರುವ ದೈತ್ಯ ಸಮುದ್ರ ಜೀವಿಯನ್ನು ಕಂಡು ಬೆರಗಾಗಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯ ಅಂತರ್ವೇದಿ ಕರಾವಳಿಯಲ್ಲಿದ್ದ ಮೀನುಗಾರರ ಗುಂಪು ಎಂದಿನಂತೆ ತಮ್ಮ ದಿನಚರಿಗೆ ತೆರಳಿದ್ದಾರೆ. ತಮ್ಮ ದೋಣಿಗಳ ಮೂಲಕ ಸಮುದ್ರಕ್ಕೆ ಇಳಿದು ಸತ್ತ ಸಮುದ್ರ ಜೀವಿಗಳನ್ನು ಕಂಡುಹಿಡಿದಿದ್ದಾರೆ. ಈ ಹಿನ್ನಲೆಯಲ್ಲಿ ಆ ಜೀವಿಗಳ ಪ್ರಭೇದಗಳ ಬಗ್ಗೆ ಅವರಿಗೆ ಯಾವುದೇ ನಿಖರತೆ ಇಲ್ಲದಿದ್ದರೂ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಸ್ತನಿಗಳನ್ನು ದಡಕ್ಕೆ ತಂದಿದ್ದಾರೆ.
ಇನ್ನೂ ಈ ಬೆಳವಣಿಗೆಯ ನಂತರ ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಕಡಲ ಜೀವಿಗಳ ಪ್ರಭೇದಗಳನ್ನು ಪತ್ತೆಹಚ್ಚಲು ಕ್ಷೇತ್ರ ಸಿಬ್ಬಂದಿಯ ತಂಡವನ್ನು ತಕ್ಷಣವೇ ನಿಯೋಜನೆ ಮಾಡಿದ್ದಾರೆ. ಈ ಸಮುದ್ರ ಜೀವಿಯು ಡೆಡ್ ವೇಲ್ ಎನ್ನುವುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಸೂಕ್ಷ್ಮವಾಗಿ ಪರೀಕ್ಷಿಸಿದ ನಂತರ ಈ ಜೀವಿಯು ಎರಡು ದಿನಗಳ ಹಿಂದೆ ಸಾವನ್ನಪ್ಪಿರಬೇಕು ಎನ್ನುವುದನ್ನು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಜೀವಿಯ ಸಾವಿಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಇದೇ ಸಂದರ್ಭದಲ್ಲಿ ವಿಭಾಗೀಯ ಅರಣ್ಯ ಅಧಿಕಾರಿ ಸಿ ಸೆಲ್ವನ್ ಮಾತನಾಡಿ, 'ತಮ್ಮ ತಂಡವು ಸಮುದ್ರ ಜೀವಿಗಳ ಚಿತ್ರಗಳನ್ನು ಎಲ್ಲಾ ಕೋನಗಳಿಂದ ತೆಗೆದಿದ್ದು, ಈ ಕಡಲ ಜೀವಿಯ ಸಾವಿಗೆ ಕಾರಣವೇನೆಂದು ಪರೀಕ್ಷಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಇದರ ಅಸ್ಥಿಪಂಜರವನ್ನು ಸಂರಕ್ಷಿಸುವ ಸಾಧ್ಯತೆಗಳಲ್ಲೂ ತಮ್ಮ ತಂಡ ಕಾರ್ಯ ನಿರ್ವಹಿಸಲಿದೆ' ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಇಲ್ಲಿ ವೇಲ್ಗಳು ಕಂಡು ಬರುತ್ತಿರುವುದು ಇದೇ ಮೊದಲೇನಲ್ಲ. '2010 ರಿಂದ ಶ್ರೀಕಾಕುಲಂ ಮತ್ತು ಮಚಿಲಿಪಟ್ನಂ ಮತ್ತು ಕೃಷ್ಣಾ ನದಿ ತೀರದಲ್ಲಿ ಡೆಡ್ ಸ್ಪರ್ಮ್ ವೇಲ್ಗಳು ಸಾವನ್ನಪ್ಪಿರುವ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ' ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಕುಂಪತ್ಲಾ ಬಾಲಾಜಿ ಅವರು ಹೇಳಿದರು.
ಆದರೆ 'ಬಂಗಾಳಕೊಲ್ಲಿಯಲ್ಲಿ ಪ್ರಸ್ತುತ ಮೀನುಗಾರಿಕೆ ನಿಷೇಧಿಸಿರುವುದರ ಪರಿಣಾಮ ಮೀನು ಮತ್ತು ಹಡಗು ಅಪಘಾತಗಳು ಈ ಸಾವಿಗೆ ಕಾರಣವಿರಬಹುದು' ಎಂದು ಅಧಿಕಾರಿ ಅನುಮಾನ ವ್ಯಕ್ತಪಡಿಸಿದ್ದಾರೆ.ಕಳೆದ ವರ್ಷ ನವೆಂಬರ್‌ನಲ್ಲಿ, ಮುಂಬೈನ ಜುಹು ಬೀಚ್‌ನಲ್ಲಿ 30 ಅಡಿ ಸತ್ತ ತಿಮಿಂಗಿಲ ತೀರದಲ್ಲಿ ಕಂಡು ಬಂದಿತ್ತು. ತಮಿಳುನಾಡಿನ ಟುಟಿಕೊರಿನ್‌ನಲ್ಲಿ 15 ಕಿ.ಮೀ ದೂರದಲ್ಲಿರುವ 45 ಶಾರ್ಟ್ ಫಿನ್ ಪೈಲಟ್ ತಿಮಿಂಗಿಲಗಳು ಸಿಕ್ಕಿಬಿದ್ದ ಕೆಲವೇ ವಾರಗಳ ನಂತರ ಈ ಘಟನೆ ವರದಿಯಾಗಿತ್ತು.
2019 ರಲ್ಲಿ 42 ಅಡಿ ಉದ್ದದ ಬ್ಲೂ ವೇಲ್ ಜೀವ ಸಹಿತ ಕಂಡು ಬಂದಿತ್ತು. ನೆರೆಯ ರಾಯಗಢ ಜಿಲ್ಲೆಯ ಅಲಿಬಾಗ್‌ನಿಂದ ದಕ್ಷಿಣಕ್ಕೆ 17 ಕಿ.ಮೀ ದೂರದಲ್ಲಿರುವ ರೇವಂಡ ಕರಾವಳಿಯಲ್ಲಿ ಬದುಕಲು ಪ್ರಯತ್ನ ನಡೆಸಿ ಕಡೆಗೆ ಸಾವನ್ನಪ್ಪಿತ್ತು. ಸಾಗರ ಜೀವಿಗಳು ಪ್ಲಾಸ್ಟಿಕ್ನಿಂದ , ಮನುಷ್ಯನ ಆಕ್ರಮಣದಿಂದ ನಿರಂತರವಾಗಿ ಬವಣೆಗೆ ಸಿಲುಕುತ್ತಿವೆ. ಈ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಬಹಳ ಅನಿವಾರ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ