ಲಖನೌ (ಜೂನ್ 16); ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ಕೆಲವು ರಾಮ ಭಕ್ತರು ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಮುಸ್ಲೀಂ ವ್ಯಕ್ತಿಯನ್ನು ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಥಳಿಸಿದ್ದರು. ಈ ಘಟನೆಯನ್ನು ಅಸಾದುದ್ದೀನ್ ಓವೈಸಿ, ರಾಹುಲ್ ಗಾಂಧಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಟೀಕಿಸಿದ್ದರು. ಇಂತಹ ಘಟನೆಗಳು ಸಮಾಜ ಮತ್ತು ಧರ್ಮ ಎರಡಕ್ಕೂ ಕಳಂಕ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಇದೀಗ ಘಟನೆಯ ಕುರಿತು ಟ್ವೀಟ್ ಮಾಡಿ ಕೋಮು ಪ್ರಚೋದನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪತ್ರಕರ್ತರು ಹಾಗೂ ಟ್ವಿಟರ್ ಸೇರಿದಂರೆ ಒಟ್ಟು 9 ಹೆಸರುಗಳ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಜೂನ್ 5ರಂದು ಅಬ್ದುಲ್ ಸಮದ್ ಎಂಬ ಹಿರಿಯ ವ್ಯಕ್ತಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದರು. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಅವರ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಅವನ್ನು ಎಳೆದುಕೊಂಡ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಕಿಡಿಗೇಡಿಗಳು ಅವರಿಗೆ ಜೈ ಶ್ರೀರಾಮ್ , ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ ಹೊಡೆದಿದ್ದಾರೆ. ಅಲ್ಲದೇ ಮರದ ಕಟ್ಟಿಗೆಯಿಂದ ಮನಬಂದಂತೆ ಥಳಿಸಿದ್ದರು.
ಅಷ್ಟೇ ಅಲ್ಲದೇ, ಆ ವ್ಯಕ್ತಿಯನ್ನು ಪಾಕಿಸ್ತಾನಿ ಗೂಢಚಾರಿ ಎಂದು ಆರೋಪಿಸಿದ್ದಾರೆ. ದಾಳಿಕೋರರ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿಯೊಬ್ಬ ಸಮದ್ ಅವರ ಗಡ್ಡ ಕತ್ತರಿಸುವ ಪ್ರಯತ್ನ ನಡೆಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಮದ್, ತಮ್ಮನ್ನು ಬಿಟ್ಟು ಬಿಡುವಂತೆ ಯುವಕರಲ್ಲಿ ಪರಿಪರಿಯಾಗಿ ಬೇಡಿಕೊಂಡರೂ ಸಹ ಅವರನ್ನು ಹಿಂಸಿಸಲಾಗಿತ್ತು. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿತ್ತು.
ಘಟನೆಯ ನಂತರ ಅಳುತ್ತಲೇ ಪ್ರತಿಕ್ರಿಯಿಸಿದ್ದ ವೃದ್ಧ, "ನನ್ನ ಹೆಸರು ಚೌದರಿ ಅಬ್ದುಲ್ ಸಮದ್ ಎಂದಾಗಿದ್ದು, ದೆಹಲಿ ಗಡಿಯ ಗಾಝಿಯಾಬಾದ್‌ನ ಲೋನಿಯಲ್ಲಿ ನನ್ನ ಮೇಲೆ ದಾಳಿ ನಡೆದಿದೆ. ಅಲ್ಲಿ ಇಬ್ಬರು ಆಟೋದವರು ನನ್ನ ಮುಖಕ್ಕೆ ರುಮಾಲನ್ನು ಮುಚ್ಚಿ ಕರೆದುಕೊಂಡು ಹೋದರು. ಬಳಿಕೆ ನನಗೆ ಹೊಡೆಯಲು ಪ್ರಾರಂಭಿಸಿದರು. ಅಲ್ಲಿಂದ ನನ್ನ ಕಾಡಿಗೆ ಕರೆದುಕೊಂಡುಹೋಗಿ ಒಂದು ಕೋಣೆಯಲ್ಲಿಟ್ಟರು.
ಅವರು ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು. ನಾನು ಯಾ ಅಲ್ಲಾಹ್ ಎಂದು ಕೂಗಿದರೆ ಹೊಡೆಯುತ್ತಿದ್ದರು. ಪಿಸ್ತೂಲ್ ಹಣೆಗೆ ಇಟ್ಟಿದ್ದು, ನನ್ನ ಮೇಲೆ ಭೀಕರ ಹಲ್ಲೆ ನಡೆಸಿದರು. ಅಲ್ಲದೆ, ನಾವು ಅನೇಕ ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ್ದೇವೆ ಎಂದು ಅವರು ತಿಳಿಸಿದ್ದಾಗಿ" ಹೇಳಿದ್ದರು.
ತದನಂತರ ಈ ಘಟನೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದ ನಂತರ ಗಾಜಿಯಾಬಾದ್ ಪೊಲೀಸರು ಕಣಕ್ಕೆ ಇಳಿದಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು, ಘಟನೆಯಲ್ಲಿ ಯಾವುದೇ "ಕೋಮು ಆಯಾಮ" ಇಲ್ಲ. ಇದೊಂದು ಸುಳ್ಳು ವಿಡಿಯೋ. ಆದರೆ, ಕೆಲವರು ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮುಸ್ಲೀಂ ವ್ಯಕ್ತಿಯ ಮೇಲಿನ ಹಲ್ಲೆ ಸಮಾಜ ಮತ್ತು ಧರ್ಮ ಎರಡಕ್ಕೂ ನಾಚಿಕೆಗೇಡಿನ ಸಂಗತಿ; ರಾಹುಲ್ ಗಾಂಧಿ
ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿ, ಗಾಜಿಯಾಬಾದ್ ಪೊಲೀಸರು ಪತ್ರಕರ್ತರಾದ ಮೊಹಮ್ಮದ್ ಜುಬೈರ್, ರಾಣಾ ಆಯೂಬ್, ಸಬಾ ನಖ್ವಿ, ಡಿಜಿಟಲ್ ಮಾಧ್ಯಮ ಸಂಸ್ಥೆಯಾದ ದಿ ವೈರ್, ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ, ಶಮಾ ಮೊಹಮ್ಮದ್ ಮತ್ತು ಟ್ವಿಟರ್ ಇಂಕ್ ಮತ್ತು ಟ್ವಿಟರ್ ಇಂಡಿಯಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಘಟನೆಯ ಬಗೆಗಿನ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ, ಕೋಮು ಬಣ್ಣವನ್ನು ಹಚ್ಚಿ ಟ್ವೀಟ್ ಮಾಡಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹಾಕಲಾಗಿದೆ. "ಕೋಮು ಭಾವನೆಗಳನ್ನು ಪ್ರಚೋದಿಸುವ ಸ್ಪಷ್ಟ ಉದ್ದೇಶದಿಂದ ಟ್ವೀಟ್‌ಗಳನ್ನು ಹಂಚಿಕೊಳ್ಳಲಾಗಿದೆ" ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳು ಜಾರಿಗೆ ಬಂದ ನಂತರ ಸಾಮಾಜಿಕ ಜಾಲತಾಣವೊಂದರ ವಿರುದ್ದ ದಾಖಲಾದ ಮೊದಲ ಪ್ರಕರಣ ಇದಾಗಿದ್ದು, ಟ್ವಿಟರ್ ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ಬುಧವಾರ ತಿಳಿಸಿದೆ.
What happened in UP was illustrative of Twitter’s arbitrariness in fighting fake news. While Twitter has been over enthusiastic about its fact checking mechanism, it’s failure to act in multiple cases like UP is perplexing & indicates its inconsistency in fighting misinformation.
— Ravi Shankar Prasad (@rsprasad) June 16, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ