ಲಕ್ನೋ: ಮೂರನೇ ಮದುವೆಯಾದರೂ (Marriage) 2ನೇ ಪತಿಯೊಂದಿಗೆ (Husband) ಸಂಬಂಧ ಹೊಂದಿದ್ದರಿಂದ ಕೋಪಗೊಂಡ 3ನೇ ಪತಿ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಗಾಜಿಯಾಬಾದ್ನಲ್ಲಿ (Ghaziabad) ನಡೆದಿದೆ. 2022ರ ಡಿಸೆಂಬರ್ 26ರಂದು ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮೃತ ಮಹಿಳೆಯನ್ನು ಭವ್ಯಾ (35) ಎಂದು ಗುರುತಿಸಲಾಗಿದೆ. ಈ ಸಂಬಂಧ ತನಿಖೆ ವೇಳೆ 3ನೇ ಪತಿ ವಿನೋದ್ ಶರ್ಮಾ ಭವ್ಯಾಳನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಎರಡನೇ ಪತಿ ಅನೀಸ್ ಜೊತೆ ಭವ್ಯಾಳನ್ನು ನೋಡಿದ ವಿನೋದ್ ಆಕ್ರೋಶಗೊಂಡು ಪತ್ನಿ ಹತ್ಯೆಗೈದಿದ್ದಾನೆ. ಇದೀಗ ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದು, ಮೃತ ಮಹಿಳೆ ಹಿಂದೆ ಧರ್ಮ (Religion) ಬದಲಿಸಿಕೊಂಡು ಮೂರು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಭವ್ಯಾ ಆಗಿದ್ದ ಮೂರು ಮದುವೆಯೂ ಲವ್ ಮ್ಯಾರೇಜ್
ಭವ್ಯಾ ಆದ ಮೂರು ಮದುವೆಯಲ್ಲಿ ಇಬ್ಬರು ಹಿಂದೂಗಳಾಗಿದ್ದು, ಮತ್ತೋರ್ವ ಮುಸ್ಲಿಂ ಆಗಿದ್ದಾನೆ. ಈ ಮೂರು ಕೂಡ ಲವ್ ಮ್ಯಾರೇಜ್ ಆಗಿದೆ. ಅಲ್ಲದೇ ಈ ಮದುವೆಗಳಿಗಾಗಿ ಭವ್ಯಾ ಮೂರು ಬಾರಿ ಕೂಡ ಧರ್ಮ ಬದಲಾಯಿಸಿಕೊಂಡಿದ್ದಾಳೆ. ಮೂಲತಃ ಭವ್ಯಾ ಬಿಹಾರದ ಸೀತಾಮರ್ಹಿಯವಳಾಗಿದ್ದು, ನಂತರ ಆಕೆಯ ಕುಟುಂಬ ಗಾಜಿಯಾಬಾದ್ನ ಸಿದ್ಧಾರ್ಥ್ ವಿಹಾರ್ಗೆ ಬಂದು ನೆಲೆಸಿದ್ದರು.
ಅನೀಸ್ ಜೊತೆಗೆ ಸಂಬಂಧ ತೊಡೆದುಕೊಂಡು ಮೂರನೇ ಮದುವೆಯಾಗಿದ್ದಳು
ಅಂಜಲಿಯಾಗಿ 2004ರಲ್ಲಿ ದೆಹಲಿಯ ನಿವಾಸಿ ಯೋಗೇಂದ್ರ ಕುಮಾರ್ ಅವರನ್ನು ಭವ್ಯಾ ಮದುವೆಯಾಗಿದ್ದ ಭವ್ಯಾಗೆ ಒಂದು ಗಂಡು ಮಗು ಜನಿಸಿತು. ನಂತರ 2017 ರಲ್ಲಿ ಅನೀಸ್ ಅವರನ್ನು ಮದುವೆಯಾಗಲು ಅಫ್ಸಾನಾ ಎಂದು ಹೆಸರು ಬದಲಿಸಿಕೊಂಡಳು. ನಂತರ ಈ ದಂಪತಿಗೆ ಆದಿಲ್ ಎಂಬ ಮಗ ಜನಿಸಿದ. ಕೊನೆಗೆ ಕಾರಣಾಂತರಗಳಿಂದ ಅನೀಸ್ ಜೊತೆಗೆ ಸಂಬಂಧ ತೊಡೆದುಕೊಂಡು 2019 ರಲ್ಲಿ ಗುರುಗ್ರಾಮ್ನ ವಿನೋದ್ ಶರ್ಮಾರನ್ನು ಮೂರನೇ ಬಾರಿಗೆ ವಿವಾಹವಾದಳು. ಅಲ್ಲದೇ ಎರಡನೇ ಗಂಡನ ಜೊತೆಗಿದ್ದ ವೇಳೆ ಜನಿಸಿದ ಆದಿಲ್ನನ್ನು ತನ್ನ ಜೊತೆಗೆ ಇಟ್ಟುಕೊಂಡಿದ್ದಳು. ಭವ್ಯ ಶರ್ಮಾ, ಆದಿಲ್ ಮತ್ತು ವಿನೋದ್ ಶರ್ಮಾ ಮೂವರು ಕೂಡ ಒಟ್ಟಿಗೆ ವಾಸಿಸುತ್ತಿದ್ದರು.
ಆದರೆ, ಡಿಸೆಂಬರ್ 26 ರಂದು ಗಾಜಿಯಾಬಾದ್ನ ಸಿದ್ಧಾರ್ಥ್ ವಿಹಾರ್ನ ವೃಂದಾವನ ಎನ್ಕ್ಲೇವ್ನಲ್ಲಿ ಭವ್ಯಾ ಶವ ಪತ್ತೆಯಾಗಿತ್ತು. ಈ ಹಿನ್ನೆಲೆ ಪೊಲೀಸರು 3ನೇ ಪತಿ ವಿನೋದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಪೊಲೀಸರಿಗೆ ದಾರಿ ತಪ್ಪಿಸಿದ್ದಾನೆ.
ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಬೆಳಕಿಗೆ
ಡಿಸೆಂಬರ್ 25 ರಂದು ಇಂದೋರ್ನಿಂದ ವಾಪಸ್ ಆಗಿದ್ದ ಭವ್ಯಾ, ವಿನೋದ್ ಇಬ್ಬರೂ ರಾತ್ರಿ ಒಟ್ಟಿಗೆ ಮದ್ಯ ಸೇವಿಸಿದ್ದರು. ಆದರೆ ಡಿಸೆಂಬರ್ 26ರಂದು ಭವ್ಯಾ ಹಾಸಿಗೆ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ. ನಂತರ ಭವ್ಯಾ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಹೊಟ್ಟೆ ಕೆಳಭಾಗ ಚಾಕುವಿನಿಂದ ಇರಿದಿರುವ ಗುರುತನ್ನು ಪತ್ತೆ ಹಚ್ಚಿದ ಪೊಲೀಸರು, ಮತ್ತೆ ವಿನೋದ್ ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಪೊಲೀಸರ ಡ್ರಿಲ್ಗೆ ಗಾಬರಿಗೊಂಡ ಆರೋಪಿ ವಿನೋದ್ ತಾನೇ ಭವ್ಯಾಳನ್ನು ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಭವ್ಯಾ ನೀಡುತ್ತಿದ್ದ ಹಣದಿಂದ ಮನೆಯ ಖರ್ಚನ್ನು ನೋಡಿಕೊಳ್ಳುತ್ತಿದ್ದಾಗಿ ವಿನೋದ್ ಪೊಲೀಸರಿಗೆ ತಿಳಿಸಿದ್ದಾನೆ.
2ನೇ ಪತಿ ಜೊತೆಗಿರುವುದು ವೀಡಿಯೋ ಕಾಲ್ನಲ್ಲಿ ಬಯಲಿಗೆ
ಭವ್ಯಾ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಆದಿಲ್ನನ್ನು ಶಾಲೆಗೆ ಬಿಡುವುದರಿಂದ ಹಿಡಿದು ಮನೆಯ ಎಲ್ಲಾ ಕೆಲಸಗಳನ್ನು ನಾನೇ ಮಾಡುತ್ತಿದ್ದೆ. ಆದರೆ ಡಿಸೆಂಬರ್ 24ರಂದು ರಾತ್ರಿ ಭವ್ಯಾಗೆ ವೀಡಿಯೋ ಕಾಲ್ ಮಾಡಿದ್ದೆ. ಈ ವೇಳೆ ಭವ್ಯಾ ಎರಡನೇ ಪತಿ ಅನೀಸ್ ಜೊತೆ ನೋಡಿದೆ. ಅಲ್ಲದೇ ಗಾಜಿಯಾಬಾದ್ ಬಿಟ್ಟು ಹೋಗುವಂತೆ ಅನೀಸ್ ನನಗೆ ಬೆದರಿಕೆಯೊಡ್ಡಿದ್ದ, ಇಲ್ಲದಿದ್ದರೆ ಕೊಲ್ಲುವುದಾಗಿ ತಿಳಿಸಿದ್ದ ಎಂದಿದ್ದಾನೆ.
ಇದನ್ನೂ ಓದಿ: Viral News: ಪ್ರಯಾಣದ ಮಧ್ಯೆ ಟಾಯ್ಲೆಟ್ಗೆ ಹೋದ ಪತ್ನಿಯನ್ನೇ ಮರೆತು ಬಿಟ್ಟು ಮುಂದೆ ಹೋದ ಪತಿ, ಮುಂದೇನಾಯ್ತು ಗೊತ್ತೇ?
ಇದರಿಂದ ಕೋಪಗೊಂಡ ವಿನೋದ್ ಭವ್ಯಾಳನ್ನು ಕೊಲ್ಲಲು ಮೊದಲೇ ಪ್ಲಾನ್ ಮಾಡಿ ಮನೆಗೆ ಹಿಂದಿರುಗಿದಾಗ ಆಕೆಯ ಕೊಲೆ ಮಾಡಿದ್ದಾನೆ. ಅಲ್ಲದೇ ಈ ವೇಳೆ ಅದಿಲ್ನನ್ನು ಮಾರುಕಟ್ಟೆಗೆ ಕಳುಹಿಸಿ, ಆತ ಬರುವಷ್ಟರಲ್ಲಿ ಕೃತ್ಯವೆಸಗಿರುವಾಗಿ ಹೇಳಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ