Ashram-3 ವೆಬ್​ ಸೀರಿಸ್ ಚಿತ್ರೀಕರಣದ ವೇಳೆ ಬಜರಂಗದಳ ದಾಳಿ: ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ಸಮರ್ಥನೆ!

ಆಶ್ರಮ್‌ ವೆಬ್‌ ಸೀರೀಸ್‌ ಚಿತ್ರೀಕರಣದ ಮೇಲೆ ಆದ ದಾಳಿಯನ್ನು ಪ್ರೊಡ್ಯೂಸರ್ಸ್ ಗಿಲ್ಡ್‌ ಆಫ್‌ ಇಂಡಿಯಾ ಮತ್ತು ವೆಸ್ಟ್‌ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್‌ ಫೆಡರೇಷನ್‌ (ಎಫ್‌ಡಬ್ಲ್ಯೂಐಸಿಇ) ಖಂಡಿಸಿವೆ. ಈ ದುಷ್ಕೃತ್ಯವನ್ನು ನಡೆಸಲು ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಅಶ್ರಮ್ ವೆಬ್ ಸರಣಿ.

ಅಶ್ರಮ್ ವೆಬ್ ಸರಣಿ.

 • Share this:
  ಭೋಪಾಲ್‌ (ಅಕ್ಟೋಬರ್​ 25): ಪ್ರಕಾಶ್‌ ಝಾ (Prakash Jha) ನಿರ್ದೇಶನದ 'ಆಶ್ರಮ್‌-3' ವೆಬ್‌ ಸೀರೀಸ್‌ (Ashram Web Series 3) ಚಿತ್ರೀಕರಣ (Shooting) ವೇಳೆ ಬಜರಂಗದಳದ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಈ ಘಟನೆಯನ್ನು ದೇಶದಾದ್ಯಂತ ಹಲವರು ಖಂಡಿಸಿದ್ದಾರೆ. ಆದರೆ, ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ (Narottam Mishra) ಈ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ನರೋತ್ತಮ್‌ ಮಿಶ್ರಾ ಅವರು, ಪ್ರಕಾಶ್‌ ಝಾ ಅವರ ನಿರ್ದೇಶನದ ‘ಆಶ್ರಮ್‌’ ವೆಬ್‌ ಸೀರೀಸ್‌ ಅನ್ನು ವಿರೋಧಿಸಿದ್ದು, ಬಲಪಂಥೀಯ ಗುಂಪುಗಳ ಆಗ್ರಹವನ್ನು ಒಪ್ಪಿ ವೆಬ್‌ ಸಿರೀಸ್‌ನ ಹೆಸರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

  ಬಜರಂಗದಳದಿಂದ ದಾಳಿ;

  ಭೋಪಾಲ್‌ನಲ್ಲಿ ವೆಬ್ ಸರಣಿಯೊಂದರ ಚಿತ್ರೀಕರಣ ನಡೆಸುತ್ತಿದ್ದ ನಿರ್ದೇಶಕ, ನಿರ್ಮಾಪಕ ಪ್ರಕಾಶ್ ಝಾ ಅವರ ಮೇಲೆ ಬಿಜೆಪಿ ಬೆಂಬಲಿತ ಗುಂಪಾದ ಬಜರಂಗ ದಳದ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ಭಾನುವಾರ ನಡೆದಿದೆ. ಆದರೆ ಈ ಅಮಾನವೀಯ ಘಟನೆಯನ್ನು ರಾಜ್ಯದ ಗೃಹಸಚಿವರೇ ಸಮರ್ಥಿಸಿಕೊಂಡಿದ್ದಾರೆ. “ಈ ರೀತಿಯ ಟೆಲಿವಿಷನ್‌ ಕಟೆಂಟ್‌ಗಳು ಬಹುಸಂಖ್ಯಾತರನ್ನು ಗುರಿಯಾಗಿಸಿಕೊಂಡಿವೆ" ಎಂದು ಆರೋಪಿಸಿದ್ದಾರೆ.

  ವಿವಾದವನ್ನು ಹುಟ್ಟುಹಾಕಿರುವ ಕರ್ವಾ ಚೌತ್ ಆಚರಿಸುವ ಸಲಿಂಗ ದಂಪತಿಗಳ ಕುರಿತ ಡಾಬರ್‌ ಸಂಸ್ಥೆಯ ಜಾಹೀರಾತಿನ ವಿರುದ್ಧವೂ ರಾಜ್ಯ ಸರ್ಕಾರ ಕ್ರಮ ಜರುಗಿಸಲಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇದನ್ನು ಬೆಂಬಲಿಸುವೆ. ಅವರು ವೆಬ್‌ ಸಿರೀಸ್‌ಗೆ ಆಶ್ರಮ್‌ ಎಂದು ಹೆಸರು ಏಕೆ ಇಟ್ಟಿದ್ದಾರೆ. ಇತರರಿಗೆ (ಇತರ ಧರ್ಮದವರಿಗೆ) ಸಂಬಂಧಿಸಿದ ಹೆಸರು ಇದ್ದಾಗಿದ್ದರೆ ಅವರು (ಪರಿಣಾಮವನ್ನು) ಅರ್ಥ ಮಾಡಿಕೊಳ್ಳುತ್ತಿದ್ದರು. ನಾಲ್ಕು ಜನರನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು. ಆದರೆ ಪ್ರಕಾಶ್ ಝಾ ಸಾಹೇಬರು ತಮ್ಮ ತಪ್ಪಿನ ಕುರಿತೂ ಯೋಚಿಸಬೇಕು" ಎಂದು ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.

  "ವೆಬ್‌ ಸರಣಿಯ ಹೆಸರಲ್ಲಿ ದೀರ್ಘಕಾಲಿಕವಾದ ದಾಳಿಯನ್ನು ಹಿಂದುತ್ವದ ಮೇಲೆ ನಡೆಸಲಾಗಿದೆ. ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಪರಿಗಣಿಸಿ ಆಶ್ರಮ್‌ ಎಂಬ ಹೆಸರನ್ನು ಪ್ರಕಾಶ್ ಝಾ ಬದಲಾಯಿಸಬೇಕು" ಎಂದಿದ್ದಾರೆ.

  "ವಿವಾದ ಹಿನ್ನೆಲೆಯಲ್ಲಿ ಆಶ್ರಮ್‌-3 ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಶಾಶ್ವತ ಮಾರ್ಗಸೂಚಿಯನ್ನು ನೀಡಲು ಮುಂದಾಗಿದ್ದೇವೆ. ಯಾವುದೇ ಧರ್ಮದ ಭಾವನೆಗೆ ಧಕ್ಕೆ ತರುವ ವಿಚಾರಗಳ ಚಿತ್ರೀಕರಣಕ್ಕೆ ಹೋಗುವ ಮುನ್ನ ಆಡಳಿತ ವ್ಯವಸ್ಥೆಯಿಂದ ಅನುಮತಿಯನ್ನು ಪಡೆದು ಅವರು ಮುಂದುವರಿಯಬೇಕಾಗುತ್ತದೆ" ಎಂದಿರುವ ಸಚಿವರು, ಅಭಿವ್ಯಕ್ತಿ ಸ್ವತಂತ್ರವನ್ನು ಮೊಟುಕು ಮಾಡಲು ಹೊರಟಿದ್ದಾರೆ.

  ನರೋತ್ತಮ ಮಿಶ್ರಾ ಪ್ರಚೋಧನಾಕಾರಿ ಹೇಳಿಕೆ:

  "ಹಿಂದೂ ಧರ್ಮದ ಮೇಲಷ್ಟೇ ಏಕೆ ಜಾಹೀರಾತುಗಳು, ಸಿನಿಮಾಗಳು ಮೂಡಿಬರುತ್ತವೆ” ಎಂದು ಕೇಳಿರುವ ನರೋತ್ತಮ್‌ ಮಿಶ್ರಾ, “ಈ ರೀತಿಯ ನಡೆಯನ್ನು ನಾವು ಕಟುವಾಗಿ ವಿರೋಧಿಸುತ್ತೇವೆ. ನಿಮಗೆ ಧೈರ್ಯವಿದ್ದರೆ ಇತರ ಧರ್ಮದವರ ಕುರಿತೂ ಚಿತ್ರೀಕರಿಸಿ" ಎಂದು ಪ್ರಚೋದನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ.

  ಭೋಪಾಲ್‌ನಲ್ಲಿ ವೆಬ್ ಸರಣಿಯೊಂದರ ಚಿತ್ರೀಕರಣ ನಡೆಸುತ್ತಿದ್ದ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಝಾ ಅವರ ಮೇಲೆ ಬಿಜೆಪಿ ಬೆಂಬಲಿತ ಗುಂಪಾದ ಬಜರಂಗ ದಳದ ದುಷ್ಕರ್ಮಿಗಳು ಭಾನುವಾರ ದಾಳಿ ನಡೆಸಿದ್ದರು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  ವಿಡಿಯೊದಲ್ಲಿ, ಚಿತ್ರೀಕರಣದ ಸೆಟ್‌ನಲ್ಲಿನ ಸಿಬ್ಬಂದಿಯನ್ನು ಬೆನ್ನಟ್ಟುತ್ತಿರುವುದನ್ನು ಕಾಣಬಹುದಾದಾಗಿತ್ತು. ಸಿಬ್ಬಂದಿಯೊಬ್ಬರನ್ನು ಹಿಡಿದು ಅವರ ಮೇಲೆ ದುಷ್ಕರ್ಮಿಗಳು ಮೆಟಲ್‌ ಲೈಟ್‌ ಸ್ಟ್ಯಾಂಡ್‌ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದು ವಿಡಿಯೊದಲ್ಲಿ ದಾಖಲಾಗಿದೆ.

  ಬಾಬಿ ಡಿಯೋಲ್ ನಟಿಸಿದ ಪ್ರಕಾಶ್ ಝಾ ಅವರ ವೆಬ್ ಸರಣಿ ‘ಆಶ್ರಮ್‌’ ಹಿಂದೂ ಧರ್ಮದ ಮೇಲಿನ ಆಕ್ರಮಣವಾಗಿದ್ದು, ಶೀರ್ಷಿಕೆಯನ್ನು ಬದಲಾಯಿಸುವವರೆಗೂ ಅದರ ಚಿತ್ರೀಕರಣವನ್ನು ಮಾಡಲು ಬಿಡುವುದಿಲ್ಲ ಎಂದು ಬಜರಂಗ ದಳದ ಕಾರ್ಯಕರ್ತರು ಹೇಳಿದ್ದರು.

  ಭಾನುವಾರ ಸಂಜೆ ಅರೆರಾ ಹಿಲ್ಸ್‌ನಲ್ಲಿನ ಓಲ್ಡ್ ಜೈಲ್ ಆವರಣದಲ್ಲಿರುವ ಸೆಟ್‌ನ ಮೇಲೆ ದಾಳಿ ಮಾಡಿರುವ ಬಜರಂಗ ದಳದ ಸದಸ್ಯರು "ಪ್ರಕಾಶ್ ಝಾ ಮುರ್ದಾಬಾದ್, ಬಾಬಿ ಡಿಯೋಲ್ ಮುರ್ದಾಬಾದ್ ಮತ್ತು ಜೈ ಶ್ರೀ ರಾಮ್" ಎಂದು ಘೋಷಣೆಗಳನ್ನು ಕೂಗಿದ್ದರು.

  "ಅವರು ಆಶ್ರಮ 1, ಆಶ್ರಮ 2 ಅನ್ನು ಮಾಡಿದ್ದಾರೆ. ಇಲ್ಲಿ ಆಶ್ರಮ 3ರ ಚಿತ್ರೀಕರಣ ಮಾಡುತ್ತಿದ್ದರು. ಗುರುಗಳು ಮಹಿಳೆಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಪ್ರಕಾಶ್ ಜಾ ಅದರಲ್ಲಿ ತೋರಿಸಿದ್ದಾರೆ. ಚರ್ಚ್ ಅಥವಾ ಮದ್ರಸದ ಬಗ್ಗೆ ಅಂತಹ ಚಲನಚಿತ್ರವನ್ನು ಮಾಡಲು ಅವರಿಗೆ ಧೈರ್ಯವಿದೆಯೇ?" ಎಂದು ಭಜರಂಗದಳದ ನಾಯಕ ಸುಶೀಲ್ ಸುರ್ಹೆಲೆ ಕೇಳಿದ್ದಾರೆ.

  “ಭಜರಂಗದಳದ ಮೂಲಕ ಅವರಿಗೆ ಸವಾಲು ಹಾಕುತ್ತಿದ್ದೇವೆ. ಈಗ ಪ್ರಕಾಶ್ ಝಾ ಅವರ ಮುಖಕ್ಕೆ ಮಾತ್ರ ಮಸಿ ಬಳಿದಿದ್ದೇವೆ. ನಾವು ಬಾಬಿ ಡಿಯೋಲ್‌ ಅವರನ್ನು ಕೂಡಾ ಹುಡುಕುತ್ತಿದ್ದೇವೆ. ಅವರು ತನ್ನ ಸಹೋದರ ಸನ್ನಿ ಡಿಯೋಲ್‌ ಮೂಲಕ ಆದರೂ ಕಲಿಯಬೇಕು. ಅವರು ಎಂತಹ ದೇಶಭಕ್ತಿಯ ಚಲನಚಿತ್ರಗಳನ್ನು ಮಾಡಿದ್ದಾರೆ” ಎಂದು ಬೆದರಿಕೆ ಹಾಕಿದ್ದರು. ಪ್ರಕಾಶ್ ಝಾ ತಂಡದಿಂದ ಯಾರೊಬ್ಬರೂ ಆರೋಪಗಳನ್ನು ಮಾಡದಿದ್ದರೂ, ಸಂಬಂಧಪಟ್ಟವರನ್ನು ಗುರುತಿಸಿ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  ಚಿತ್ರೀಕರಣದ ಸೆಟ್​ ಆಸ್ತಿ ಧ್ವಂಸ;

  "ಚಿತ್ರೀಕರಣದ ಸೆಟ್‌ ಮೇಲೆ ದಾಳಿ ಮಾಡಿ ಅಲ್ಲಿನ ಆಸ್ತಿಗಳನ್ನು ಧ್ವಂಸ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರನ್ನು ಬಂಧಿಸಲಾಗುವುದು. ಸಾಮಾಜಿಕ ವಿರೋಧಿಗಳು ವಾಹನಗಳನ್ನು ಕೊಂಡೋಯ್ದು ತೊಂದರೆ ಮಾಡಿದ್ದಾರೆ. ಚಿತ್ರ ನಿರ್ಮಾಣಕ್ಕೆ ಭದ್ರತೆ ನೀಡಲಾಗುವುದು ಮತ್ತು ಈ ರೀತಿಯ ಘಟನೆ ಮತ್ತೆ ಸಂಭವಿಸದಂತೆ ನೋಡಿಕೊಳ್ಳಲಾಗುವುದು" ಎಂದು ಹಿರಿಯ ಪೊಲೀಸ್ ಅಧಿಕಾರಿ ಇರ್ಷಾದ್ ವಾಲಿ ಹೇಳಿದ್ದಾರೆ.

  2017ರಲ್ಲಿ, ಮತ್ತೊಂದು ಬಲಪಂಥೀಯ ಗುಂಪಾದ ಕರ್ಣಿ ಸೇನೆಯು ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತ್’ ಚಿತ್ರದ ಸೆಟ್‌ಗಳ ಮೇಲೆ ದಾಳಿ ಮಾಡಿ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಇತರ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿತ್ತು. ಜೊತೆಗೆ ಚಿತ್ರದ ದೃಶ್ಯಗಳನ್ನು ಮಾರ್ಪಡಿಸಲು ಮತ್ತು ಅದರ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು.

  ಇದನ್ನೂ ಓದಿ: ಪಾಕ್ ಪಂದ್ಯದ ವೇಳೆ Black Lives Matter ಗಾಗಿ ಮಂಡಿಯೂರಿದ ಭಾರತೀಯ ಆಟಗಾರರು; ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ!

  ನಿರ್ಮಾಪಕರ ಖಂಡನೆ

  ‘ಆಶ್ರಮ್‌’ ವೆಬ್‌ ಸೀರೀಸ್‌ ಚಿತ್ರೀಕರಣದ ಮೇಲೆ ಆದ ದಾಳಿಯನ್ನು ಪ್ರೊಡ್ಯೂಸರ್ಸ್ ಗಿಲ್ಡ್‌ ಆಫ್‌ ಇಂಡಿಯಾ ಮತ್ತು ವೆಸ್ಟ್‌ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್‌ ಫೆಡರೇಷನ್‌ (ಎಫ್‌ಡಬ್ಲ್ಯೂಐಸಿಇ) ಖಂಡಿಸಿವೆ. ಈ ದುಷ್ಕೃತ್ಯವನ್ನು ನಡೆಸಲು ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

  ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ನಿರ್ಮಾಪಕರ ಸಂಘವು ಆತಂಕ ವ್ಯಕ್ತಪಡಿಸಿದ್ದು, ಚಿತ್ರರಂಗದ ಸಿಬ್ಬಂದಿ ಎದುರಿಸುತ್ತಿರುವ ಹಿಂಸಾಚಾರ, ಕಿರುಕುಳ ಮತ್ತು ವಿಧ್ವಂಸಕ ಕೃತ್ಯಗಳನ್ನು ಬಲವಾಗಿ ಖಂಡಿಸಿದೆ.

  ಇದನ್ನೂ ಓದಿ: Crime News| T-20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲು; ಪಂಜಾಬ್‌ನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ!

  "ಒಂದು ಚಿತ್ರೀಕರಣ ಸ್ಥಳೀಯ ಆರ್ಥಿಕತೆಗಳಿಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಅದಕ್ಕಾಗಿಯೇ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಅಧಿಕರಿ ವರ್ಗವು ನಿರ್ಮಾಪಕರನ್ನು ತಮ್ಮ ಪ್ರದೇಶಗಳಿಗೆ ಆಕರ್ಷಿಸಲು ನೀತಿಗಳನ್ನು ರೂಪಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

  “ಈ ಹಿಂಸಾತ್ಮಕ ಕೃತ್ಯಗಳನ್ನು ಎಸಗಿದವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಅವರನ್ನು ಬಂಧಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
  Published by:MAshok Kumar
  First published: