ನವ ದೆಹಲಿ (ಅಕ್ಟೋಬರ್ 28); ಭಾರತದ ಮಟ್ಟಿಗೆ ಭ್ರಷ್ಟಾಚಾರ ಎಂಬುದು ರಾಜವಂಶದ ಸಂಪ್ರದಾಯದಂತೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷವಾದ ಕಾಂಗ್ರೆಸ್ ಅನ್ನು ನೇರಾನೇರ ಟೀಕಿಸಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ಆಪತ್ತಿನಲ್ಲಿದೆ ಎಂದು ಸೋಮವಾರ ಆಘಾತ ವ್ಯಕ್ತಪಡಿಸಿದ್ದ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, “ಭಾರತದ ಪ್ರಜಾಪ್ರಭುತ್ವ ಅಡ್ಡ ಹಾದಿಯಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ತಂಭಗಳು ಆಕ್ರಮಣಕ್ಕೆ ಒಳಗಾಗುತ್ತಿವೆ” ಎಂದು ವಿಷಾಧ ವ್ಯಕ್ತಪಡಿಸಿದ್ದರು. ಸೋನಿಯಾ ಗಾಂಧಿ ಅವರ ಅಭಿಪ್ರಾಯಕ್ಕೆ ಒಂದು ದಿನದ ನಂತರ ಪ್ರಧಾನಿ ಮೋದಿ ಟಾಂಗ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಭ್ರಷ್ಟಾಚಾರ ವಿರೋಧಿ ಸಮ್ಮೇಳನದಲ್ಲಿ ವಿಡಿಯೋ ಲಿಂಕ್ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, “ಇಡೀ ತಲೆಮಾರಿನ ಭ್ರಷ್ಟಾಚಾರ ಭಾರತದಲ್ಲಿ ನಿರ್ಭಯದಿಂದ ವರ್ತಿಸಿದೆ. ಆದರೆ, ಈ ಯಾರೂ ಶಿಕ್ಷೆ ಅನುಭವಿಸಿಲ್ಲ. ಅವರ ಸರ್ಕಾರದ ಅವಧಿಯಲ್ಲಿ ಜನರಿಗೆ ನಮ್ಮ ಮೇಲೆ ನಂಬಿಕೆ ಹೆಚ್ಚಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.
"ಕಳೆದ ದಶಕಗಳಲ್ಲಿ, ಒಂದು ತಲೆಮಾರಿನ ಭ್ರಷ್ಟಾಚಾರವನ್ನು ಶಿಕ್ಷಿಸದಿದ್ದಾಗ, ಇತರರು ಹೆಚ್ಚಿನ ಶಕ್ತಿಯಿಂದ ಭ್ರಷ್ಟಾಚಾರವನ್ನು ಮಾಡುತ್ತಾರೆ ಎಂದು ನಾವು ನೋಡಿದ್ದೇವೆ. ಈ ಕಾರಣದಿಂದಾಗಿ, ಅನೇಕ ರಾಜ್ಯಗಳಲ್ಲಿ, ಇದು ರಾಜಕೀಯ ಸಂಪ್ರದಾಯದ ಭಾಗವಾಗಿ ಪೀಳಿಗೆಯಿಂದ ಪೀಳಿಗೆಗೆ ಈ ಭ್ರಷ್ಟಾಚಾರದ ರಾಜವಂಶವು ಮುಂದುವರೆಯುತ್ತಿದೆ. ಪರಿಣಾಮ ದೇಶದ ಅಭಿವೃದ್ಧಿ ಟೊಳ್ಳಾಗುತ್ತಿದೆ.
ಇಂದು, ಸರ್ಕಾರದ ಮೇಲೆ ನಾಗರೀಕರ ನಂಬಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸರ್ಕಾರದ ಅನಗತ್ಯ ಒತ್ತಡವನ್ನು ಕಡಿಮೆ ಮಾಡಲು ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. ನಾಗರಿಕರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ಪತ್ರಿಕೆಯೊಂದಕ್ಕೆ ಲೇಖನ ಬರೆದಿದ್ದ ಸೋನಿಯಾ ಗಾಂಧಿ, "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಅಡ್ಡಹಾದಿಯಲ್ಲಿದೆ. ಆರ್ಥಿಕತೆಯು ಆಳವಾದ ಬಿಕ್ಕಟ್ಟಿನಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಾ ಸ್ತಂಭಗಳು ಆಡಳಿದ ಪಕ್ಷದಿಂದ ಆಕ್ರಮಣಕ್ಕೆ ಒಳಗಾಗುತ್ತಿದೆ" ಎಂದು ವಿಷಾಧಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ