ಆಗಸ್ಟ್‌ 14ಕ್ಕೆ ರಾಜಸ್ಥಾನ ಅಧಿವೇಶನ; ಆಪರೇಷನ್ ಕಮಲಕ್ಕೆ ಹೆದರಿ ಎಲ್ಲಾ ಕೈ ಶಾಸಕರು ರೆಸಾರ್ಟ್‌‌ಗೆ ಶಿಫ್ಟ್

ಬಿಜೆಪಿ ನಾಯಕರು ನಮ್ಮ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ರೆಸಾರ್ಟ್ ರಾಜಕಾರಣ ನಮಗೆ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳಲು ಎಲ್ಲಾ ಶಾಸಕರೂ ಆಗಸ್ಟ್ 14ರ ವರೆಗೆ ಜೈಪುರದ ಹೋಟೆಲ್‌ನಲ್ಲಿ ಇರಬೇಕಾಗುತ್ತದೆ ಎಂದು ಸಿಎಂ ಅಶೋಕ್ ಗೆಹ್ಲೋಟ್‌ ಕಾಂಗ್ರೆಸ್‌ ಶಾಸಕರಲ್ಲಿ ಮನವಿ ಮಾಡಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್ ಶಾಸಕರು ಮತ್ತು ಸಿಎಂ ಅಶೋಕ್‌ ಗೆಹ್ಲೋಟ್‌.

ರಾಜಸ್ಥಾನದ ಕಾಂಗ್ರೆಸ್ ಶಾಸಕರು ಮತ್ತು ಸಿಎಂ ಅಶೋಕ್‌ ಗೆಹ್ಲೋಟ್‌.

  • Share this:
ಜೈಪುರ (ಜುಲೈ 31); ಹಲವು ಗೊಂದಲ ಹಾಗೂ ಅಡೆತಡೆಗಳ ನಡುವೆ ಕೊನೆಗೂ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಆಗಸ್ಟ್ 14ಕ್ಕೆ ಅಧಿವೇಶನ ಕರೆಯಲು, ಬಹುಮತ ಸಾಬೀತುಪಡಿಸಲು ಸಿಎಂ ಅಶೋಕ್ ಗೆಹ್ಲೋಟ್‌ಗೆ ಅವಕಾಶ ನೀಡಿದ್ದಾರೆ. ಪರಿಣಾಮ ಅಧಿವೇಶನ ನಡೆಯುವವರೆಗೆ ತಮ್ಮ ಪಕ್ಷದ ಶಾಸಕರು ಮತ್ತೆ ಕುದುರೆ ವ್ಯಾಪಾರಕ್ಕೆ ಒಳಗಾಗದಿರಲಿ ಎಂದು ಸಿಎಂ ಅಶೋಕ್ ಗೆಹ್ಲೋಟ್ ಇದೀಗ ಎಲ್ಲಾ ಶಾಸಕರನ್ನು ರೆಸಾರ್ಟ್‌‌ಗೆ ವರ್ಗಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸುವ ಶಾಸಕರು ಇಂದು ಮೂರು ಚಾರ್ಟರ್ ವಿಮಾನಗಳ ಮೂಲಕ ಜೈಸಲ್ಮೇರ್‌ಗೆ ತೆರಳಲಿದ್ದಾರೆ. ಅಲ್ಲಿ ಮ್ಯಾರಿಯೇಟ್ ಹೋಟೆಲ್ ಅಥವಾ ಸೂರ್ಯ ರೆಸಾರ್ಟ್‌‌ನಲ್ಲಿ ಅವರನ್ನು ಉಳಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬಹುಮತ ಯಾಚನೆ ಆಗುವವರೆಗೆ ಎಲ್ಲಾ ಶಾಸಕರು ಮಾರಾಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಂಪುಟ ಸಚಿವರಿಗೆ ವಹಿಸಲಾಗಿದೆ.

ಈ ಹಿಂದೆ ಜುಲೈ 13ರಂದು ಅಶೋಕ್ ಗೆಹ್ಲೋಟ್ ತಮ್ಮ ಪಕ್ಷದ ಶಾಸಕರನ್ನು ಜೈಪುರದ ಫೇರ್ಮಾಂಟ್ ಹೋಟೆಲ್‌ನಲ್ಲಿ ಇರಿಸಿದ್ದರು. ಆದರೆ, ಈ ವೇಳೆ ಆಪರೇಷನ್ ಕಮಲಕ್ಕೆ ಮುಂದಾಗಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ ಕುದುರೆ ವ್ಯಾಪಾರಕ್ಕೆ ಯತ್ನಿಸಿದ್ದರರು. ಹೀಗಾಗಿ ಈ ಬಾರಿ ತಮ್ಮ ಪಕ್ಷದ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸದಂತೆ ಅಶೋಕ್ ಗೆಹ್ಲೋಟ್ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ‘ಲಡಾಖ್ ಗಡಿಯಿಂದ ಎರಡೂ ಸೇನೆಗಳು ಹಿಂಸರಿಯುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ‘ - ಚೀನಾ ಹೇಳಿಕೆ ಅಲ್ಲಗೆಳೆದ ಭಾರತ

ಈ ನಡುವೆ ನಿನ್ನೆ ಸಹ ತಮ್ಮ ಶಾಸಕರ ಬಳಿ ಮಾತನಾಡಿರುವ ಅಶೋಕ್ ಗೆಹ್ಲೋಟ್, “ಬಿಜೆಪಿ ನಾಯಕರು ನಮ್ಮ ಶಾಸಕರ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ರೆಸಾರ್ಟ್ ರಾಜಕಾರಣ ನಮಗೆ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳಲು ಎಲ್ಲಾ ಶಾಸಕರೂ ಆಗಸ್ಟ್ 14ರ ವರೆಗೆ ಜೈಪುರದ ಹೋಟೆಲ್‌ನಲ್ಲಿ ಇರಬೇಕಾಗುತ್ತದೆ” ಎಂದು ಮನವಿ ಮಾಡಿದ್ದಾರೆ.

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಜುಲೈ 13 ರಂದು ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದರು. ಅಲ್ಲದೆ, ತಮಗೆ 30 ಜನ ಶಾಸಕರ ಬೆಂಬಲ ಇದ್ದು, ಸರ್ಕಾರವನ್ನು ಉರುಳಿಸುವುದಾಗಿ ಘೋಷಿಸಿದ್ದರು. ಈ ಸಂಬಂಧ ಕೇಂದ್ರ ಬಿಜೆಪಿ ನಾಯಕರ ಜೊತೆಗೂ ಚರ್ಚೆ ನಡೆಸಿದ್ದರು. ಅಂದಿನಿಂದ ರಾಜಸ್ಥಾನ ರಾಜಕೀಯ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಅಂತಿಮವಾಗಿ ಆಗಸ್ಟ್ 14ರಂದು ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಎಂಬುದು ಸ್ಪಷ್ಟವಾಗಲಿದೆ.
Published by:MAshok Kumar
First published: