Vikas Dubey: ವಿಕಾಸ್​ ದುಬೆ ಎನ್​ಕೌಂಟರ್; ಎಮ್ಮೆಗಳು ಅಡ್ಡ ಬಂದಿದ್ದರಿಂದ ಕಾರು ಪಲ್ಟಿಯಾಯ್ತು ಎಂದ ಪೊಲೀಸರು

Vikas Dubey Encounter: ವಿಕಾಸ್​ ದುಬೆಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನಕ್ಕೆ ಎಮ್ಮೆಗಳು ಅಡ್ಡಬಂದ ಕಾರಣ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಎದುರು ಇದ್ದಕ್ಕಿದ್ದಂತೆ ಎಮ್ಮೆಗಳು ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.

ವಿಕಾಸ್‌ ದುಬೆ ಇದ್ದ ಪೊಲೀಸ್‌ ಕಾರು ಪಲ್ಟಿಯಾಗಿರುವ ದೃಶ್ಯ

ವಿಕಾಸ್‌ ದುಬೆ ಇದ್ದ ಪೊಲೀಸ್‌ ಕಾರು ಪಲ್ಟಿಯಾಗಿರುವ ದೃಶ್ಯ

  • Share this:
ನವದೆಹಲಿ (ಜು. 11): ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್​ಸ್ಟರ್ ವಿಕಾಸ್​ ದುಬೆಯನ್ನು ಬಂಧಿಸಿ ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸ್​ ವಾಹನ ಪಲ್ಟಿ ಹೊಡೆದಿತ್ತು. ಈ ವೇಳೆ ಪೊಲೀಸರ ಬಳಿಯಿದ್ದ ಗನ್ ಎತ್ತಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದ ವಿಕಾಸ್​ ದುಬೆಯನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಬಗ್ಗೆ ವಿರೋಧಪಕ್ಷಗಳು ಸಾಕಷ್ಟು ಅನುಮಾನಗಳನ್ನು ವ್ಯಕ್ತಪಡಿಸಿದ್ದವು.

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್​ (ಎಸ್​ಟಿಎಫ್) ವಿಕಾಸ್​ ದುಬೆಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನಕ್ಕೆ ಎಮ್ಮೆಗಳು ಅಡ್ಡಬಂದ ಕಾರಣ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಎದುರು ಇದ್ದಕ್ಕಿದ್ದಂತೆ ಎಮ್ಮೆಗಳು ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Vikas Dubey - ‘ಎನ್​ಕೌಂಟರ್​ನಲ್ಲಿ ವಿಕಾಸ್ ಡುಬೇ ಹತ್ಯೆಯಾಗಬಹುದು’ – ಒಂದು ದಿನ ಮುಂಚೆ ಸಲ್ಲಿಕೆಯಾಗಿತ್ತು ಪಿಐಎಲ್

ಗುರುವಾರ ಮಧ್ಯಪ್ರದೇಶದಲ್ಲಿ ವಿಕಾಸ್​ ದುಬೆಯನ್ನು ಬಂಧಿಸಲಾಗಿತ್ತು. ಆತನನ್ನು ಶುಕ್ರವಾರ ಬೆಳಗ್ಗೆ ಉಜ್ಜಯಿನಿಯಿಂದ ಕಾನ್ಪುರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಅಪಘಾತ ಸಂಭವಿಸಿತ್ತು. ಆತ್ಮರಕ್ಷಣೆಗಾಗಿ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಕಾನ್ಪುರ ಪೊಲೀಸರು ಸ್ಪಷ್ಟಪಡಿಸಿದ್ದರು. ನಮ್ಮ ಸಿಬ್ಬಂದಿಯ ಬಳಿಯಿದ್ದ ಗನ್ ಕಿತ್ತುಕೊಂಡು ವಿಕಾಸ್​ ದುಬೆ ಪರಾರಿಯಾಗಲು ಪ್ರಯತ್ನಿಸಿದ. ಆಗ ಪೊಲೀಸರು ಆತನನ್ನು ಸುತ್ತುವರೆದು ಶರಣಾಗುವಂತೆ ಎಚ್ಚರಿಸಿದರಾದರೂ ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಈ ವೇಳೆ ದುಬೆಯನ್ನು ಎನ್​ಕೌಂಟರ್ ಮಾಡಬೇಕಾಗಿ ಬಂತು ಎಂದು ಪೊಲೀಸರು ಹೇಳಿದ್ದರು.ಇದನ್ನೂ ಓದಿ: Vikas Dubey: ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಎನ್‌ಕೌಂಟರ್‌ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು; ಕಾಂಗ್ರೆಸ್ ಒತ್ತಾಯ

ಆದರೆ, ಎನ್​ಕೌಂಟರ್​ಗೂ ಅರ್ಧ ಗಂಟೆ ಮೊದಲು ಟೋಲ್ ಬಳಿ ಸೆರೆಯಾದ ವಿಡಿಯೋದಲ್ಲಿ ವಿಕಾಸ್ ದುಬೆಯನ್ನು ಕರೆದೊಯ್ಯುತ್ತಿದ್ದ ಕಾರನ್ನು ಹಿಂಬಾಲಿಸುತ್ತಿದ್ದ ಮಾಧ್ಯಮ ಸಿಬ್ಬಂದಿಗಳಿಗೆ ನಿರ್ಬಂಧ ಹೇರಿ ಪೊಲೀಸ್ ವಾಹನವನ್ನು ಮುಂದೆ ಬಿಡಲಾಗಿತ್ತು. ಈ ವಿಡಿಯೋ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಎನ್​ಕೌಂಟರ್​ನಲ್ಲಿ ವಿಕಾಸ್​ ದುಬೆಯನ್ನು ಸಾಯಿಸುವ ಸಾಧ್ಯತೆಯಿದೆ ಎಂದು ಗುರುವಾರವೇ ಸುಪ್ರೀಂಕೋರ್ಟ್​ನಲ್ಲಿ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ವಿಕಾಸ್​ ದುಬೆಯ ಸಹಚರರು ಹಾಗೂ ಕಾನ್ಪುರ ಪೊಲೀಸರ ಹತ್ಯೆಯ ಆರೋಪಿಗಳನ್ನು ಈಗಾಗಲೇ ಪೊಲೀಸರು ಎನ್​ಕೌಂಟರ್ ಮಾಡಿದ್ದಾರೆ. ವಿಕಾಸ್​ ದುಬೆಯನ್ನೂ ಅದೇ ರೀತಿ ಎನ್​ಕೌಂಟರ್ ಮಾಡುವ ಸಾಧ್ಯತೆಯಿದೆ. ಆತನಿಗೆ ಕಾನೂನು ರೀತಿಯಲ್ಲಿ ವಿಚಾರಣೆ ಮಾಡಿ, ಶಿಕ್ಷೆ ವಿಧಿಸಬೇಕೇ ವಿನಃ ಪೊಲೀಸರೇ ಕಾನೂನು ಕೈಗೆತ್ತಿಕೊಂಡು ಕೊಲ್ಲುವುದು ಸರಿಯಲ್ಲ ಎಂದು ವಕೀಲರು ಅರ್ಜಿ ಸಲ್ಲಿಸಿದ್ದರು. ಅದರ ಮಾರನೇ ದಿನ ಬೆಳಗ್ಗೆಯೇ ವಿಕಾಸ್​ ದುಬೆ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Published by:Sushma Chakre
First published: