Vikas Dubey: ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು; ಕಾಂಗ್ರೆಸ್ ಒತ್ತಾಯ
ಗ್ಯಾಂಗ್ಸ್ಟರ್ ವಿಕಾಸ್ ದುಬೆ ಪ್ರಯಾಣಿಸಿದ್ದ ಪೊಲೀಸ್ ವಾಹನವನ್ನು ಉರುಳಿಸಿ, ಆತನನ್ನು ಎನ್ಕೌಂಟರ್ ಮಾಡುವ ಮೂಲಕ, ಉರುಳಬೇಕಿದ್ದ ಉತ್ತರಪ್ರದೇಶ ಸರ್ಕಾರವನ್ನು ಉಳಿಸಲಾಗಿದೆ ಎಂದುಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.
ಉತ್ತರಪ್ರದೇಶ (ಜುಲೈ 10); ಎಂಟು ಪೊಲೀಸ್ ಅಧಿಕಾರಿಗಳನ್ನು ಗುಂಡಿಟ್ಟು ಕೊಂದಿದ್ದ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಅವರನ್ನು ಉದ್ದೇಶಪೂರ್ವಕವಾಗಿ ಎನ್ಕೌಂಟರ್ ಮಾಡಲಾಗಿದೆ, ಈ ಎನ್ಕೌಂಟರ್ನಲ್ಲಿ ಸಾಕಷ್ಟು ಅನುಮಾನಗಳಿವೆ. ಹೀಗಾಗಿ ಈ ಕುರಿತು ಸುಪ್ರೀಂ ಕೋರ್ಟ್ನ ಸಿಟ್ಟಿಂಗ್ ನ್ಯಾಯಾಧೀಶರಿಂದ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ತಿಳಿಸಿದ್ದಾರೆ.
ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಲ್ಲಿ ನಿನ್ನೆ ಬಂಧಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶದ ಶಿವ್ಲಿಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಕಾರು ಇಂದು ಬೆಳಗ್ಗೆ ಕಾನ್ಪುರದ ಬಳಿ ಪಲ್ಟಿಯಾಗಿತ್ತು. ಈ ವೇಳೆ ವಿಕಾಸ್ ದುಬೆ ಪೊಲೀಸರ ಬಳಿ ಇದ್ದ ಗನ್ ಕಿತ್ತುಕೊಂಡು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಈ ಎನ್ಕೌಂಟರ್ನಲ್ಲಿ ವಿಕಾಸ್ ದುಬೆ ಸಾವನ್ನಪ್ಪಿದ್ದಾನೆ. ಆತ್ಮರಕ್ಷಣೆಗಾಗಿ ಎನ್ಕೌಂಟರ್ ಮಾಡಲಾಗಿದೆ ಎಂದು ಕಾನ್ಪುರ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಹಾಗೂ ಕಾನ್ಪುರದ ಐಜಿ ಮೋಹಿತ್ ಅಗರ್ವಾಲ್ ಸ್ಪಷ್ಟಪಡಿಸಿದ್ದರು.
ಆದರೆ, ಈ ಎನ್ಕೌಂಟರ್ ಕುರಿತು ಅನುಮಾನ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, “ಬಿಜೆಪಿ ಸರ್ಕಾರ ಉತ್ತರ ಪ್ರದೇಶವನ್ನು ’ಅಪರಾಧ ಪ್ರದೇಶ’ವನ್ನಾಗಿ ಪರಿವರ್ತಿಸಿದೆ. ವಿಕಾಸ್ ದುಬೆ ಅವರಂತಹ ಅಪರಾಧಿಗಳು ಅಧಿಕಾರದಲ್ಲಿರುವ ಜನರಿಂದ ಇಷ್ಟು ದಿನ ರಕ್ಷಿಸಲ್ಪಟ್ಟಿದ್ದಾರೆ. ಅಲ್ಲದೆ, ಆತನ ಎನ್ಕೌಂಟರ್ ಬಗ್ಗೆ ಸಾಕಷ್ಟು ಅನುಮಾನಗಳಿವೆ.
ಆತನ ಬಿನ್ನಿಗಿದ್ದ ಹಲವಾರು ರಾಜಕಾರಣಿಗಳು ಮತ್ತು ಪೊಲೀಸರನ್ನು ಉಳಿಸುವುದಕ್ಕಾಗಿ ಆತನನ್ನು ಎನ್ಕೌಂಟರ್ ಮಾಡಲಾಗಿದೆ. ಇದು ಫೇಕ್ ಎನ್ಕೌಂಟರ್ ಆಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ" ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ಇನ್ನೂ ಈ ಎನ್ಕೌಂಟರ್ ಕುರಿತು ಟ್ವೀಟ್ ಮೂಲಕ ಕಟುವಾಗಿ ವಿಮರ್ಶೆ ಮಾಡಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, “ಗ್ಯಾಂಗ್ಸ್ಟರ್ ವಿಕಾಸ್ ದುಬೆ ಪ್ರಯಾಣಿಸಿದ್ದ ಪೊಲೀಸ್ ವಾಹನವನ್ನು ಉರುಳಿಸಿ, ಆತನನ್ನು ಎನ್ಕೌಂಟರ್ ಮಾಡುವ ಮೂಲಕ, ಉರುಳಬೇಕಿದ್ದ ಉತ್ತರಪ್ರದೇಶ ಸರ್ಕಾರವನ್ನು ಉಳಿಸಲಾಗಿದೆ” ಎಂದು ಲೇವಡಿ ಮಾಡಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ