ನವದೆಹಲಿ(ಜು.10): ಇಂದು ಬೆಳಗ್ಗೆ ಕಾನ್ಪುರದ ಬಳಿ ನಡೆದ ಕಾರು ಅಪಘಾತದಲ್ಲಿ ಎಸ್ಕೇಪ್ ಆಗಲು ಯತ್ನಿಸಿದ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
8 ಮಂದಿ ಪೊಲೀಸರ ಹತ್ಯೆಕೋರ, ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಪೊಲೀಸ್ ಕಾರು ಇಂದು ಬೆಳಗ್ಗೆ ಕಾನ್ಪುರದ ಬಳಿ ಪಲ್ಟಿಯಾಗಿತ್ತು. ಬಂಧಿತ ಆರೋಪಿ ವಿಕಾಸ್ ದುಬೆಯನ್ನು ಮಧ್ಯ ಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶದ ಶಿವ್ಲಿಗೆ ಕರೆದೊಯ್ಯಲಾಗುತ್ತಿತ್ತು. ಕಾನ್ಪುರದ ಸಮೀಪ ಟೋಲ್ ಪ್ಲಾಜಾ ಕ್ರಾಸ್ ಮಾಡಿದ ಬಳಿಕ ಕಾರು ಪಲ್ಟಿಯಾಗಿತ್ತು ಎಂದು ತಿಳಿದು ಬಂದಿದೆ.
ಈ ವೇಳೆ ವಿಕಾಸ್ ದುಬೆ ಪೊಲೀಸರ ಬಳಿ ಇದ್ದ ಗನ್ ಕಿತ್ತುಕೊಂಡು,ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಎನ್ಕೌಂಟರ್ನಲ್ಲಿ ವಿಕಾಸ್ ದುಬೈ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಅಪಘಾತದ ದೃಶ್ಯಗಳು
ಆತ್ಮರಕ್ಷಣೆಗಾಗಿ ಎನ್ಕೌಂಟರ್ ಮಾಡಿರುವುದಾಗಿ ಕಾನ್ಪುರ ಎಸ್ಎಸ್ಪಿ ದಿನೇಶ್ ಕುಮಾರ್ ಹೇಳಿದ್ದಾರೆ. ಘಟನೆಯ ಬಗ್ಗೆ ಕಾನ್ಪುರದ ಐಜಿ ಮೋಹಿತ್ ಅಗರ್ವಾಲ್ ಖಚಿತಪಡಿಸಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ವಿಕಾಸ್ ದುಬೈ ಕಳೆದ ಶುಕ್ರವಾರ ಕಾನ್ಪುರದಲ್ಲಿ 8 ಮಂದಿ ಪೊಲೀಸರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ನಿನ್ನೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳ ದೇವಾಲಯದ ಬಳಿ ಬಂಧಿಸಲಾಗಿತ್ತು. ಸತತ 6 ದಿನಗಳ ಹುಡುಕಾಟಕ್ಕೆ ನಿನ್ನೆ ಪೂರ್ಣವಿರಾಮ ಬಿದ್ದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ