ಗೋವಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನೊಗ್ರಫಿ ಸಹಯೋಗದೊಂದಿಗೆ ನದಿ ನೀರಿನ ಪರೀಕ್ಷೆಯನ್ನು ನಡೆಸಲಾಯಿತು ಹರಿದ್ವಾರ, ಕಾನ್ಪುರ ಮತ್ತು ವಾರಣಾಸಿಯಲ್ಲಿನ ನದಿಯಿಂದ ಐದು ನೀರಿನ ಮಾದರಿಗಳನ್ನು ಸಂಗ್ರಹಿಸಲಾಯಿತು. ಅನೇಕ ಬಗೆಯ ಪ್ಲಾಸ್ಟಿಕ್ಗಳಿಂದ ಗಂಗಾ ನದಿಯು ಕಲುಷಿತಗೊಂಡಿದ್ದು, ವಾರಣಾಸಿಯಲ್ಲಿ ಇದು ಹೆಚ್ಚು ಪ್ರಮಾಣದಲ್ಲಿದೆ. ಅಂತೆಯೇ ಹರಿದ್ವಾರ, ಕಾನ್ಪುರ ಹಾಗೂ ವಾರಣಾಸಿಯಲ್ಲಿ ಮೈಕ್ರೋ ಪ್ಲಾಸ್ಟಿಕ್ ಮಾದರಿಗಳು ಪತ್ತೆಯಾಗಿವೆ ಎಂದು ಟಾಕ್ಸಿಕ್ಸ್ ಲಿಂಕ್ನ ಹೊಸ ಅಧ್ಯಯನವು ತಿಳಿಸಿದೆ. ಮೈಕ್ರೋ-ಪ್ಲಾಸ್ಟಿಕ್ ಎಂದರೆ 5 ಮಿ.ಮೀ ಗಿಂತ ಕಡಿಮೆ ಉದ್ದದ ಪ್ಲಾಸ್ಟಿಕ್ ಎಂದು ವ್ಯಾಖ್ಯಾನಿಸಲಾಗಿದ್ದು ಮತ್ತು ಅವುಗಳ ನಿರಂತರತೆ, ಸರ್ವವ್ಯಾಪಿ ಮತ್ತು ವಿಷಕಾರಿ ಸಾಮರ್ಥ್ಯದಿಂದಾಗಿ ಇವುಗಳು ಸಮುದ್ರ ಮಾಲಿನ್ಯದ ಪ್ರಮುಖ ಮೂಲವೆಂದು ಗುರುತಿಸಲಾಗಿದೆ.
ನದಿಗಳಲ್ಲಿ ಎಸೆಯಲಾದ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ತ್ಯಾಜ್ಯಗಳು ವಿಭಜನೆಯಾಗುತ್ತವೆ ಹಾಗೂ ಸೂಕ್ಷ್ಮ ಕಣಗಳಾಗಿ ಇಳಿಕೆಯಾಗುತ್ತವೆ. ಇದನ್ನು ನದಿಯು ದೊಡ್ಡ ಪ್ರಮಾಣದಲ್ಲಿ ಸಾಗರಕ್ಕೆ ಸೇರಿಸುತ್ತದೆ. ನೋಡುವುದಾದರೆ ಗಂಗಾ ನದಿಯುದ್ದಕ್ಕೂ ಮೈಕ್ರೋ ಪ್ಲಾಸ್ಟಿಕ್ ಅಂಶ ಸೇರಿಕೊಂಡು ಹರಿಯುತ್ತಿದೆ. ಯಾವುದೇ ರೀತಿಯ ತ್ಯಾಜ್ಯ ಸಂಗ್ರಹ ಕಾರ್ಯವನ್ನು ನಡೆಸಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹಾಗಾಗಿ, ಪರಿಹಾರ ಕ್ರಮದೆಡೆಗೆ ಶೀಘ್ರವೇ ಗಮನ ಹರಿಸಬೇಕೆಂದು ಟಾಕ್ಸಿಕ್ಸ್ ಲಿಂಕ್ನ ಮುಖ್ಯ ಸಂಯೋಜಕಿ ಪ್ರೀತಿ ಮಹೇಶ್ ತಿಳಿಸಿದ್ದಾರೆ.
ಅನೇಕ ನಗರಗಳಿಂದ ಸಂಸ್ಕರಿಸಿದ ಕೊಳಚೆ ನೀರು, ಕೈಗಾರಿಕಾ ತ್ಯಾಜ್ಯಗಳು ಮತ್ತು ಧಾರ್ಮಿಕ ಅರ್ಪಣೆಗಳನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ನದಿಗೆ ಸಮರ್ಪಿಸಲಾಗುತ್ತಿದೆ. ಇದು ಹೆಚ್ಚು ಪ್ರಮಾಣದ ಮಾಲಿನ್ಯಕಾರಕವನ್ನು ನದಿಗೆ ಸೇರಿಸುತ್ತದೆ. ಇದು ಜನನಿಬಿಡವಾಗಿರುವ ನಗರಗಳಿಗೆ ನದಿಯ ಮೂಲಕ ಹರಿಯುತ್ತದೆ ಎಂದು ಟಾಕ್ಸಿಕ್ಸ್ ಲಿಂಕ್ ಸ್ಪಷ್ಟಪಡಿಸಿದೆ.
ಮೈಕ್ರೋ ಪ್ಲಾಸ್ಟಿಕ್ ಅಂಶಗಳು ನಮ್ಮ ದೇಹವನ್ನು ಪ್ರವೇಶಿಸುವಲ್ಲಿ ಹೆಚ್ಚಿನ ಸಮಯ ಬೇಕಾಗಿಲ್ಲ. ಎಸೆದ ಪ್ಲಾಸ್ಟಿಕ್ ತ್ಯಾಜ್ಯವು ಸಮುದ್ರ ಜೀವಿಗಳಿಗೆ ವಿನಾಶಕಾರಿ ಪರಿಣಾಮಗಳೊಂದಿಗೆ ಸಮುದ್ರ ಮಾಲಿನ್ಯಕ್ಕೆ ಕೊಡುಗೆ ನೀಡುತ್ತದೆ. ಈ ಮೈಕ್ರೋ-ಪ್ಲಾಸ್ಟಿಕ್ಗಳನ್ನು ನದಿ ವ್ಯವಸ್ಥೆಯಿಂದ ಸಾಗರಗಳಿಗೆ ಹರಿಸುವುದರಿಂದ ಸಮುದ್ರ-ಪರಿಸರ ವ್ಯವಸ್ಥೆ ಮತ್ತು ಆಹಾರ ಜಾಲದಲ್ಲಿ ಗಂಭೀರ ಅಸಮತೋಲನ ಉಂಟಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು ಜಾರಿಯಲ್ಲಿದ್ದರೂ ಅವುಗಳ ಅನುಷ್ಠಾನ ಸರಿಯಾಗಿ ನಡೆದಿಲ್ಲ. ಏಕ-ಬಳಕೆಯ ಪ್ಲಾಸ್ಟಿಕ್ಗಳ ಮೇಲೆ ಕಟ್ಟುನಿಟ್ಟಿನ ನಿಷೇಧವನ್ನು ಜಾರಿಗೊಳಿಸುವುದರ ಜೊತೆಗೆ ಪ್ಲಾಸ್ಟಿಕ್ ನಿಯಮಗಳ ಅನುಷ್ಠಾನವನ್ನು ಸುಧಾರಿಸುವುದು ನಿರ್ಣಾಯಕ ಅಗತ್ಯವಾಗಿದೆ. ಅಲ್ಲದೆ, ಮೈಕ್ರೋ ಪ್ಲಾಸ್ಟಿಕ್ಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ನಮ್ಮ ನದಿ ವ್ಯವಸ್ಥೆಗಳ ಮೇಲೆ ಅವುಗಳ ಪ್ರಭಾವದ ಸಂಶೋಧನೆಯ ಅವಶ್ಯಕತೆಯಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರಗಿ ತುಂಟಾಟ: ಫಜಿತಿಗೆ ಸಿಲುಕಿದ್ದ ದಿವ್ಯಾ ಉರುಡುಗ..!
ಜಲಚರಗಳ ಮೇಲಿನ ಪ್ಲಾಸ್ಟಿಕ್ನ ಪರಿಣಾಮವನ್ನು ನಾವು ಹೆಚ್ಚು ವಾಸ್ತವಿಕ ರೂಪದಲ್ಲಿ ಪರಿಹರಿಸಬೇಕಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು ಮತ್ತು ನಂತರದ ಮೈಕ್ರೋ-ಪ್ಲಾಸ್ಟಿಕ್ ನಿರ್ಮೂಲನೆಗೆ ಉದ್ಯಮ, ಸರ್ಕಾರ, ನಾಗರಿಕ ಸಮಾಜ ಸಂಸ್ಥೆಗಳು ಸೇರಿದಂತೆ ವಿವಿಧ ಪಾಲುದಾರರು ಕೈಜೋಡಿಸಬೇಕಾಗಿದೆ. ಟಾಕ್ಸಿಕ್ಸ್ ಲಿಂಕ್ನ ಸಹಾಯಕ ನಿರ್ದೇಶಕ ಸತೀಶ್ ಸಿನ್ಹಾ ಹೇಳಿದ್ದಾರೆ.
ಗಂಗಾ ನದಿಯಲ್ಲಿನ ಮೈಕ್ರೋ ಪ್ಲಾಸ್ಟಿಕ್ನಿಂದ ಅಪಾಯವೇ ಉಂಟಾಗಬಹುದು. ನದಿ ನೀರನ್ನು ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತದೆ ಹಾಗಾಗಿ ಇದು ಪರಿಸರ ಹಾಗೂ ಮಾನವರ ಮೇಲೆ ಕೆಟ್ಟ ಪರಿಣಾಮ ಬೀರುವುದು ಖಂಡಿತ. ನದಿಯ ನೀರನ್ನು ಕೆಲವೊಂದು ನಗರಗಳಿಗೆ ಕುಡಿಯಲು ಕೂಡ ರವಾನಿಸಲಾಗುತ್ತಿದೆ ಇದು ನಿಜಕ್ಕೂ ಕಳವಳಕಾರಿಯಾದ ಅಂಶವಾಗಿದೆ ಎಂದು ಸಂಸ್ಥೆ ಎಚ್ಚರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ