Crime News: ಹಣಕ್ಕಾಗಿ ಹುಡುಗ ಹುಡುಗಿಯರನ್ನು ಬೆತ್ತಲಾಗಿಸಿ ಅಶ್ಲೀಲ ವಿಡಿಯೋ ಮಾಡಿದ ಕಿಡಿಗೇಡಿಗಳು

Crime News Today: ಇಬ್ಬರು ಯುವತಿಯರು ಮತ್ತು ಯುವಕರ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಮೀರತ್​: ಉತ್ತರ ಪ್ರದೇಶದ (Uttar Pradesh) ಮೀರತ್​ನಲ್ಲಿ ಇಬ್ಬರು ಯುವಕರನ್ನು ಮತ್ತು ಯುವತಿಯರನ್ನು ಬಲವಂತದಿಂದ ಬೆತ್ತಲಾಗಿಸಿ ಜತೆಯಲ್ಲಿ ವಿಡಿಯೋ ಮಾಡಿ ಬ್ಲಾಕ್​ಮೇಲ್ (Blackmailed with Video)​ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಮೂರು ಲಕ್ಷಕ್ಕಾಗಿ ಕಿಡಿಗೇಡಿಗಳು ಬೇಡಿಕೆ ಇಟ್ಟಿದ್ದಾರೆ. ಮೀರತ್​ ಜಿಲ್ಲೆಯ (Meerut District) ಖರ್ಖುದಾ ಎಂಬ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ಆರು ವ್ಯಕ್ತಿಗಳು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಇಬ್ಬರು ಯುವತಿಯರು ಮತ್ತು ಯುವಕರ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಅಶ್ಲೀಲ ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

    ಹಿಂದಿ ಹಿಂದೂಸ್ತಾನ್​ ಎಂಬ ಸ್ಥಳೀಯ ಪತ್ರಿಕೆಯ ವರದಿಯ ಪ್ರಕಾರ, ಆರೋಪಿಗಳ ಬಳಿ ಪಿಸ್ತೂಲಿತ್ತು. ಅದನ್ನು ತೋರಿಸಿ ಬೆದರಿಸಿ ಯುವಕ ಯುವತಿಯರ ಮೊಬೈಲ್​ ಫೋನ್​ಗಳನ್ನು ಮತ್ತು ಅವರ ಬಳಿಯಿದ್ದ 32 ಸಾವಿರ ರೂಪಾಯಿಗಳನ್ನು ಆರೋಪಿಗಳು ಕಿತ್ತುಕೊಂಡು ಹೋಗಿದ್ದಾರೆ.

    ಠಾಣೆಯಲ್ಲಿ ದೂರು ದಾಖಲು:

    ಸಂತ್ರಸ್ಥ ಯುವಕ ಮತ್ತು ಯುವತಿಯರು ಘಟನೆಯ ನಂತರ ಖರ್ಖುದಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ ಆರು ಆರೋಪಿಗಳು ಮತ್ತು ಒಂದು ಯುವತಿ ಸಂತ್ರಸ್ಥರಿಗೆ ಪಾರ್ಟಿ ನೀಡುತ್ತೀವೆಂದು ಲೋಹಿಯಾನಗರ್​ ಮಂಡಿಗೆ ಕರೆದಿದ್ದರು. ಸಂತ್ರಸ್ಥ ಯುವಕ ಯುವತಿಯರು ಪಾರ್ಟಿಗೆಂದು ಹೋಗಿದ್ದಾರೆ, ಆದರೆ ಅಲ್ಲಿ ವಿಧಿ ಬೇರೆಯನ್ನೇ ಬರೆದಿತ್ತು. ಯುವಕ ಯುವತಿಯರನ್ನು ದೋಚಲೆಂದೇ ಆರೋಪಿಗಳು ಉದ್ದೇಶ ಹೊಂದಿದ್ದರು.

    ಮೂರು ಲಕ್ಷಕ್ಕಾಗಿ ಬ್ಲಾಕ್​ಮೇಲ್​:

    ದೂರಿನ ಅನ್ವಯ ಆರೋಪಿಗಳು ಬಲವಂತದಿದ ಹುಡುಗ ಮತ್ತು ಹುಡುಗಿಯರ ಬಟ್ಟೆಯನ್ನು ಬಿಚ್ಚಿದ್ದಾರೆ. ನಂತರ ಫೋಟೊಗಳು ಮತ್ತು ವಿಡಿಯೋಗಳನ್ನು ರೆಕಾರ್ಡ್​ ಮಾಡಿದ್ದಾರೆ. ನಂತರ ಅವರ ಬಳಿಯಿದ್ದ ದುಡ್ಡು ಮತ್ತು ಮೊಬೈಲ್​ಗಳನ್ನು ಕಿತ್ತುಕೊಂಡಿದ್ದಾರೆ. ಜತೆಗೆ ಮೂರು ಲಕ್ಷ ಹಣ ನೀಡದಿದ್ದರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ್ದಾರೆ. ಇದರಿಂದ ಬೆದರಿದ ಸಂತ್ರಸ್ಥರಿಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ, ನಂತರ ಧೈರ್ಯ ತುಂಬಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

    ಇದನ್ನೂ ಓದಿ: Crime News: ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿಯನ್ನೇ ಕೊಂದ ಗರ್ಭಿಣಿ ಮಗಳು! ಅಂಥದ್ದೇನಿತ್ತು ದ್ವೇಷ?

    ಇಬ್ಬರು ಯುವಕರು ಮೂರು ಲಕ್ಷ ರೂಪಾಯಿಗಳನ್ನು ತಂದು ಕೊಡುವುದಾಗಿ ಹೇಳಿದ ನಂತರ ಆರೋಪಿಗಳು ಅವರನ್ನು ಬಿಟ್ಟು ಕಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದರೆ ಅಥವಾ ಬೇರೆ ಯಾರಿಗಾದರೂ ತಿಳಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾರೆ. ಬಿಜ್ಲಿ ಬಂಬಾ ಚೌಕಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಮೂಲಗಳ ಪ್ರಕಾರ ಪೊಲೀಸರು ಸಹ ಆರೋಪಿಗಳ ಪರವಾಗಿ ವಕಾಲತ್ತು ಮಾಡಿದ್ದಾರೆ. ಸಂತ್ರಸ್ಥರಿಗೆ ಆರೋಪಿಗಳ ಜತೆ ಹೊಂದಾಣಿಕೆ ಮಾಡಿಕೊಂಡು ಪ್ರಕರಣ ಹಿಂಪಡೆಯುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ನಡುರಸ್ತೆಯಲ್ಲಿ ಬಾಯ್ತೆರೆದು ಕಾದು ಕುಳಿತಿದ್ದ ಯಮ, ರಸ್ತೆಗುಂಡಿಯಿಂದ ಬೈಕರ್​ ಸವಾರ ಭೀಕರ ಸಾವು!

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇನ್ಸ್​ಪೆಕ್ಟರ್​ ಸಂಜಯ್​ ಶರ್ಮಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಆರೋಪಿಗಳಿಗಾಗಿ ಇನ್ನೂ ಹುಡುಕಾಟ ನಡೆದಿದೆ.

    ಬೇಲಿಯೇ ಹೊಲ ಮೇಯ್ದ ಕಥೆ:

    ಇದೊಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ಬದಲು ಪೊಲೀಸರು ಕೂಡ ಆರೋಪಿಗಳ ಜತೆ ಕೈಜೋಡಿಸಿ ಪ್ರಕರಣವನ್ನು ಹಿಂಪಡೆಯಲು ಪ್ರೇರೇಪಿಸಿದ್ದಾರೆ. ಒಂದೆಡೆ ಆರೋಪಿಗಳ ಬಳಿ ಸಂತ್ರಸ್ಥರ ವಿಡಿಯೋಗಳಿವೆ, ಇನ್ನೊಂದೆಡೆ ಪೊಲೀಸರು ಸಹ ಆರೋಪಿಗಳಿಗೇ ಸಹಕಾರ ಕೊಡುತ್ತಿದ್ದಾರೆ. ಅತ್ತ ದರಿ ಇತ್ತ ಪುಲಿ ಎಂಬ ಸ್ಥಿತಿಯಲ್ಲಿ ಸಂತ್ರಸ್ಥರು ಒದ್ದಾಡುವಂತಾಗಿದೆ.
    Published by:Sharath Sharma Kalagaru
    First published: