Sushma ChakreSushma Chakre
|
news18-kannada Updated:February 22, 2021, 11:18 AM IST
ಪ್ರಾತಿನಿಧಿಕ ಚಿತ್ರ
ಭೂಪಾಲ್ (ಫೆ. 22): ದೇಶದಲ್ಲಿ ಕಾನೂನು ಎಷ್ಟೇ ಕಟ್ಟುನಿಟ್ಟಾಗಿದ್ದರೂ ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಮಧ್ಯಪ್ರದೇಶದ ಶಾಹ್ದೂಲ್ ಜಿಲ್ಲೆಯಲ್ಲಿ ಶಾಲಾ ಶಿಕ್ಷಕ ಹಾಗೂ ಸ್ಥಳೀಯ ಬಿಜೆಪಿ ನಾಯಕ ಸೇರಿ ನಾಲ್ವರು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಬೆಳಕಿಗೆ ಬಂದಿದೆ. 20 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿದ್ದು, ಆಕೆಯನ್ನು 2 ದಿನ ಫಾರ್ಮ್ ಹೌಸ್ನಲ್ಲಿರಿಸಿ ನಾಲ್ವರು ಅತ್ಯಾಚಾರ ನಡೆಸಿದ್ದಾರೆ.
ಫೆ. 18ರಂದು ಈ ಘಟನೆ ನಡೆದಿದ್ದು, ಮನೆಯಿಂದ ದೂರದಲ್ಲಿದ್ದ ಅಂಗಡಿಯಿಂದ ಯುವತಿ ದಿನಸಿ ಸಾಮಾನುಗಳನ್ನು ತರಲು ಹೋಗಿದ್ದಳು. ಈ ವೇಳೆ ಅಡ್ಡಗಟ್ಟಿದ ಕಾಮುಕರು ಆಕೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಅಂಗಡಿಯ ಬಳಿಯಲ್ಲೇ ಸಂಬಂಧಿಕರ ಮನೆ ಇದ್ದುದರಿಂದ ಮಗಳು ಅವರ ಮನೆಗೆ ಹೋಗಿರಬಹುದು ಎಂದು ಆಕೆಯ ಮನೆಯವರು ಸುಮ್ಮನಾಗಿದ್ದರು. ಆದರೆ, ಮಾರನೇ ದಿನವೂ ಆಕೆ ಮನೆಗೆ ಬಾರದಿದ್ದಾಗ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದಾಗ ಅಲ್ಲಿಗೆ ಆಕೆ ಬಂದಿಲ್ಲ ಎಂಬ ಸಂಗತಿ ತಿಳಿಯಿತು.
ಆಕೆಗಾಗಿ ಎಲ್ಲ ಕಡೆ ಹುಡುಕಾಡಿದರೂ ಎಲ್ಲೂ ಆಕೆಯ ಪತ್ತೆಯಾಗಿರಲಿಲ್ಲ. 2 ದಿನಗಳ ಬಳಿಕ ಊರಿನಿಂದಾಚೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿ ಊರಿನವರು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. 2 ದಿನಗಳ ಕಾಲ ನಿರಂತರ ಅತ್ಯಾಚಾರದಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾಳೆ.
ಜೈತ್ಪುರ ಬಿಜೆಪಿ ನಾಯಕ ವಿಜಯ್ ತ್ರಿಪಾಠಿ ಮತ್ತು ಅವರ ಮೂವರು ಸ್ನೇಹಿತರು ಸೇರಿ ಈ ಅತ್ಯಾಚಾರ ಎಸಗಿರುವುದು ತನಿಖೆ ವೇಳೆ ಬಯಲಾಗಿದೆ. ಆ ಮೂವರಲ್ಲಿ ಒಬ್ಬ ಶಾಲಾ ಶಿಕ್ಷಕನಾಗಿದ್ದಾನೆ. ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ನನ್ನನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ವಿಜಯ್ ತ್ರಿಪಾಠಿ ಮತ್ತು ಮೂವರು ನನ್ನನ್ನು ಕಿಡ್ನಾಪ್ ಮಾಡಿ ಫಾರ್ಮ್ಹೌಸ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ನೀಡಿದ ಹೇಳಿಕೆಯನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿಜಯ್ ತ್ರಿಪಾಠಿ ಮೇಲೆ ಅತ್ಯಾಚಾರದ ಕೇಸ್ ದಾಖಲಾಗುತ್ತಿದ್ದಂತೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆತನನ್ನು ವಜಾಗೊಳಿಸಲಾಗಿದೆ. ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟ ವಿಜಯ್ ಈಗ ಪೊಲೀಸರ ವಶದಲ್ಲಿದ್ದಾನೆ. ಆತನನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಮಧ್ಯಪ್ರದೇಶದ ಬಿಜೆಪಿ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.
Published by:
Sushma Chakre
First published:
February 22, 2021, 11:18 AM IST