ಜಿಲೆಬಿ ತಿನ್ನುವುದರಿಂದ ವಾಯುಮಾಲಿನ್ಯವಾಗುತ್ತದೆ ಅಂದರೆ ಜಿಲೆಬಿ ತಿನ್ನುವುದನ್ನೇ ಬಿಡುತ್ತೇನೆ ಎಂದು ಹೇಳಿ ಮತ್ತೆ ಟ್ರೋಲ್​ ಆದ ಗಂಭೀರ್!

ಈ ಹೇಳಿಕೆಯೂ ಕೂಡ ಸಾಕಷ್ಟು ಟ್ರೋಲ್​ಗೆ ಗುರಿಯಾಗಿದೆ. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವೂ ಒಪ್ಪಂದವೇ ಮುಖ್ಯವಾಯಿತೆ. ಸಮಸ್ಯೆ ಪರಿಹಾರಕ್ಕಾಗಿ ಒಪ್ಪಂದ ಮುರಿದು, ಅದರ ಹಾನಿ ಹಣವನ್ನು ಕಟ್ಟಿ, ಸಭೆಯಲ್ಲಿ ಭಾಗವಹಿಸಬಹುದಿತ್ತು ಎಂದು ನೆಟ್ಟಿಗರು ಗೌತಮ್ ಗಂಭೀರ್ ವಿರುದ್ಧ ಹರಿಹಾಯ್ದಿದ್ದಾರೆ.

ವಿವಿಎಸ್ ಲಕ್ಷ್ಮಣ್ ಜೊತೆಗೆ ಜಿಲೆಬಿ ತಿನ್ನುತ್ತಿರುವ ಗೌತಮ್ ಗಂಭೀರ್

ವಿವಿಎಸ್ ಲಕ್ಷ್ಮಣ್ ಜೊತೆಗೆ ಜಿಲೆಬಿ ತಿನ್ನುತ್ತಿರುವ ಗೌತಮ್ ಗಂಭೀರ್

  • Share this:
ನವದೆಹಲಿ: ಚಿಂತಾಜನಕ ಸ್ಥಿತಿಗೆ ತಲುಪಿರುವ ದೆಹಲಿ ವಾಯುಮಾಲಿನ್ಯದ ಸಮಸ್ಯೆ ಕುರಿತು ಚರ್ಚಿಸಲು ಶುಕ್ರವಾರ ಕೇಜ್ರಿವಾಲ್ ಸರ್ಕಾರ ಆಯೋಜಿಸಿದ್ದ ಸಭೆಗೆ ಮಾಜಿ ಕ್ರಿಕೆಟಿಗ ಮತ್ತು ಸಂಸದ ಗೌತಮ್ ಗಂಭೀರ್ ಗೈರಾಗುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಂಸದ ಗಂಭೀರ್ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್​ಗಳು ದೆಹಲಿ ನಗರದ ತುಂಬೆಲ್ಲಾ ರಾರಾಜಿಸಿದ್ದವು. ಈ ವಿಷಯವಾಗಿ ಗೌತಮ್ ಗಂಭೀರ್ ನೀಡಿರುವ ಪ್ರತಿಕ್ರಿಯೆ ಅವರನ್ನು ಮತ್ತಷ್ಟು ಟ್ರೋಲ್​ಗೆ ಸಿಲುಕುವಂತೆ ಮಾಡಿದೆ.

ದೆಹಲಿಯ ವಾಯುಮಾಲಿನ್ಯ ಕುರಿತ ಕರೆಯಲಾಗಿದ್ದ ಸಂಸದೀಯ ಸಭೆಗೆ ದೆಹಲಿ ಪೂರ್ವ ಕ್ಷೇತ್ರದ ಬಿಜೆಪಿ ಸಂಸದ ಗೌತಮ್ ಗಂಭೀರ್ ಗೈರಾಗಿದ್ದರು. ಅಪಾಯಕಾರಿ ಸ್ಥಿತಿ ತಲುಪಿರುವ ದೆಹಲಿ ವಾಯುಮಾಲಿನ್ಯ ಸಭೆಯಲ್ಲಿ ಭಾಗಿಯಾಗುವ ಬದಲು ಗಂಭೀರ್ ಇಂದೋರ್​ನಲ್ಲಿ ಜಿಲಿಬಿ ತಿನ್ನುವುದರಲ್ಲಿ ತಲ್ಲೀನರಾಗಿರುವ ಫೋಟೋ ಟ್ವಿಟರ್​ನಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಂಭೀರ್ ಇಂದೋರ್​ನಲ್ಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಟೂರ್ನಿಯ ಕಾಮೆಂಟರ್ ಜೊತೆಗೆ ಜಿಲೇಬಿ ತಿನ್ನುತ್ತಿರುವ ಫೋಟೋವನ್ನು ಲಕ್ಷ್ಮಣ್ ಹಂಚಿಕೊಂಡಿದ್ದರು. ದೆಹಲಿ ಗಂಭೀರ ಸ್ಥಿತಿಗೆ ತಲುಪಿದ್ದರೂ ಜಿಲೆಬಿ ತಿನ್ನುತ್ತಾ ಸಂತಸ ಪಡುತ್ತಿರುವ ಗಂಭೀರ್ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಯೇ ಸುರಿಯುತ್ತಿದೆ.ಇದೇ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ನಾನು ಭಾರತ-ಬಾಂಗ್ಲಾದೇಶ ಟೂರ್ನಿಯ ಕಾಮೆಂಟರಿಗಾಗಿ ಜನವರಿಯಲ್ಲಿಯೇ ಒಪ್ಪಂದಕ್ಕೆ ಸಹಿ ಹಾಕಿದ್ದೆ. ಏಪ್ರಿಲ್​ನಲ್ಲಿ ರಾಜಕೀಯಕ್ಕೆ ಸೇರಿದೆ. ನಿಂದಿಸುತ್ತಿರುವವರಿಗೆ ನಾನು ಅಭಿನಂದಿಸುತ್ತೇನೆ. ನಾನು ಈ ಮೊದಲ ಒಪ್ಪಂದದಂತೆ ಕಾಮೆಂಟರಿ ಮಾಡಲು ಹೋಗುತ್ತೇನೆ. ನವೆಂಬರ್ 11ರಂದು ನಾನು ಸಭೆ ಮಾಹಿತಿಯ ಮೇಲ್ ಬಂತು. ಮತ್ತು ಅದೇ ದಿನ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ. ವಾಯುಮಾಲಿನ್ಯಕ್ಕಿತಂ ಜಿಲೆಬಿ ತುಂಬಾ ಮುಖ್ಯವಾಗಿ ಕಾಣುತ್ತಿದೆ. ಅನವಶ್ಯಕವಾಗಿ ನನ್ನನ್ನು ಗುರಿ ಮಾಡಲಾಗುತ್ತಿದೆ. ಒಂದು ವೇಳೆ ನಾನು ಜಿಲೆಬಿ ತಿನ್ನುವುದರಿಂದಲೇ ವಾಯುಮಾಲಿನ್ಯ ಆಗುತ್ತಿದೆ ಎಂದರೆ, ನಾನು ಇನ್ನು ಮುಂದೆ ಎಂದಿಗೂ ಜಿಲೆಬಿಯನ್ನೇ ತಿನ್ನುವುದಿಲ್ಲ ಎಂದು ಹೇಳಿದ್ದರು.ಈ ಹೇಳಿಕೆಯೂ ಕೂಡ ಸಾಕಷ್ಟು ಟ್ರೋಲ್​ಗೆ ಗುರಿಯಾಗಿದೆ. ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವೂ ಒಪ್ಪಂದವೇ ಮುಖ್ಯವಾಯಿತೆ. ಸಮಸ್ಯೆ ಪರಿಹಾರಕ್ಕಾಗಿ ಒಪ್ಪಂದ ಮುರಿದು, ಅದರ ಹಾನಿ ಹಣವನ್ನು ಕಟ್ಟಿ, ಸಭೆಯಲ್ಲಿ ಭಾಗವಹಿಸಬಹುದಿತ್ತು ಎಂದು ನೆಟ್ಟಿಗರು ಗೌತಮ್ ಗಂಭೀರ್ ವಿರುದ್ಧ ಹರಿಹಾಯ್ದಿದ್ದಾರೆ.First published: