'ಅಪ್ಪ', 'ಅಮ್ಮ' ಇಲ್ಲದ ತಮಿಳುನಾಡಿನ ಚಿತ್ತ ಈಗ ಎತ್ತ? ವ್ಯಕ್ತಿಯೋ, ಜಾತಿಯೋ, ಧರ್ಮವೋ?


Updated:August 8, 2018, 7:51 PM IST
'ಅಪ್ಪ', 'ಅಮ್ಮ' ಇಲ್ಲದ ತಮಿಳುನಾಡಿನ ಚಿತ್ತ ಈಗ ಎತ್ತ? ವ್ಯಕ್ತಿಯೋ, ಜಾತಿಯೋ, ಧರ್ಮವೋ?
ಕರುಣಾನಿಧಿ

Updated: August 8, 2018, 7:51 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 08): “ಜೀವನಪೂರ್ತಿ ಅವಿಶ್ರಾಂತವಾಗಿ ಹೋರಾಟಗಳನ್ನ ಮಾಡಿಕೊಂಡು ಬಂದ ಕರುಣಾನಿಧಿ ಈಗ ವಿಶ್ರಾಂತಿಯಲ್ಲಿದ್ದಾರೆ.” – ಇದು ಕರುಣಾನಿಧಿ ಅವರ ಸಮಾಧಿ ಮೇಲೆ ಬರೆಯಲಾಗಿರುವ ಸಂದೇಶ. ಕರುಣಾನಿಧಿ ಜೀವನವನ್ನೊಮ್ಮೆ ಹಾಗೆ ಸುಮ್ಮನೆ ಅವಲೋಕಿಸಿದರೆ ಈ ಸಂದೇಶ ಅವರ ಜೀವನಕ್ಕೆ ಹೊಂದಿಕೆಯಾಗುತ್ತದೆ. ಕರುಣಾನಿಧಿ ಎಂದ ಕೂಡಲೇ ಮೊದಲು ನೆನಪಾಗುವುದು ಅವರ ಕಪ್ಪು ಕನ್ನಡಕ ಹಾಗೂ ಅವರ ದ್ರಾವಿಡ ಹೋರಾಟ. ಹಾಗೆಯೇ ಅವರ ಹಿಂದಿ ವಿರೋಧಿ ಹೋರಾಟ, ತಮಿಳು ಅಸ್ಮಿತೆ ಇತ್ಯಾದಿಗಳೂ ಧುತ್ತೆಂದು ನಮ್ಮ ಮನಸ್ಸನ್ನು ಕಾಡುತ್ತವೆ. ಕಾಮರಾಜ್, ಅಣ್ಣಾದುರೈ ಹಾಕಿಕೊಟ್ಟ ಹಾದಿಯಲ್ಲಿ ದ್ರಾವಿಡ ಹೋರಾಟ ಮುಂದುವರಿಸಿ ಹೊಸ ಆಯಾಮ ಕೊಟ್ಟಿದ್ದು ಕರುಣಾನಿಧಿ ಅವರೇ.

ಮೂರು ದಶಕಗಳಿಂದ ತಮಿಳುನಾಡು ರಾಜಕಾರಣದ ಎರಡು ಧ್ರುವಗಳಂತಿದ್ದ ಜಯಲಲಿತಾ ಮತ್ತು ಕರುಣಾನಿಧಿ ಇಬ್ಬರೂ ಈಗ ಅಸ್ತಂಗತರಾಗಿದ್ದಾರೆ. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಇಬ್ಬರೂ ಬದ್ಧವೈರಿಗಳೇ ಆಗಿದ್ದರು. ಎಂಜಿಆರ್ ಮೂಲಕ ತಮಿಳುನಾಡಿನಲ್ಲಿ ಬೆಳೆದ ವ್ಯಕ್ತಿಕೇಂದ್ರಿತ ರಾಜಕಾರಣವನ್ನ ಜಯಲಲಿತಾ ಮತ್ತು ಕರುಣಾನಿಧಿ ಪೋಷಿಸಿದರು. ಈಗ ಈ ಎರಡು ಮೇರು ವ್ಯಕ್ತಿತ್ವಗಳು ಇಹಲೋಕ ತ್ಯಜಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ವ್ಯಕ್ತಿಕೇಂದ್ರಿತ ರಾಜಕಾರಣ ಮುಂದುವರಿಯುತ್ತಾ, ಇಲ್ಲವಾ ಎಂಬ ಪ್ರಶ್ನೆಯಂತೂ ಕಾಡುತ್ತದೆ.

ಈಗ ತಮಿಳುನಾಡಿನಲ್ಲಿ ದೊಡ್ಡ ಐಕಾನ್​ಗಳು ಯಾರಿದ್ದಾರೆ? ಪರ್ಯಾಯ ರಾಜಕೀಯ ಶಕ್ತಿಗಳು ಯಾರು?

ಮೇಲ್ನೋಟಕ್ಕೆ ಕಾಣಸಿಗುವ ಹೆಸರುಗಳು ಕರುಣಾನಿಧಿ ಅವರ ಪುತ್ರ ಸ್ಟಾಲಿನ್, ಶಶಿಕಲಾ ನಟರಾಜನ್, ಸಿಎಂ ಪಳನಿಸ್ವಾಮಿ, ಡಿಸಿಎಂ ಪನೀರ್​ಸೆಲ್ವಂ, ರಜಿನಿಕಾಂತ್, ಕಮಲಹಾಸನ್, ವಿಜಯಕಾಂತ್ ಇತ್ಯಾದಿ. ಆದರೆ, ಇವರಲ್ಲಿ ಕರುಣಾನಿಧಿ, ಜಯಲಲಿತಾರಂತೆ ಐಕಾನ್​ಗಳಂತಾಗಬಲ್ಲವರು ಯಾರು?

ರಜನಿ, ಕಮಲ್ ಆಟ ಸಾಗುವುದೇ?
ಕರುಣಾನಿಧಿ, ಎಂಜಿಆರ್ ಮತ್ತು ಜಯಲಲಿತಾ ಅವರು ಸಿನಿಮಾ ಜನಪ್ರಿಯತೆ ಬಳಸಿ ರಾಜಕೀಯ ಉತ್ತುಂಗಕ್ಕೆ ಏರಿದ್ದು ನಿಜವೇ. ಅದೇ ಹಾದಿಯಲ್ಲಿ ತಮಗೂ ರಾಜಕಾರಣದ ಬಾಗಿಲು ತೆರೆಯಬಹುದೆಂಬ ನಿರೀಕ್ಷೆಯಲ್ಲಿ ರಜಿನಿಕಾಂತ್ ಮತ್ತು ಕಮಲಹಾಸನ್ ಈಗ ಪ್ರವೇಶ ಮಾಡಿದ್ದಾರೆ. ಇವರಿಗೂ ಮುನ್ನ ಮತ್ತೊಬ್ಬ ಸ್ಟಾರ್ ವಿಜಯಕಾಂತ್ ಕೂಡ ರಾಜಕಾರಣ ಪ್ರವೇಶಿಸಿ ಕೈಸುಟ್ಟುಕೊಂಡಿದ್ಧಾರೆ. ರಜಿನಿಕಾಂತ್ ಮತ್ತು ಕಮಲಹಾಸನ್ ಇವೆಲ್ಲವನ್ನೂ ಗಮನಿಸಿಯೇ ಲೆಕ್ಕಾಚಾರಗಳ ನಡುವೆ ರಾಜಕೀಯಕ್ಕೆ ಅಡಿ ಇಟ್ಟಿದ್ದಾರೆ. ಆದರೆ, ಎಂಬತ್ತರ ದಶಕದವರೆಗೆ ಹೆಚ್ಚಿನ ತಮಿಳು ಸಿನಿಮಾಗಳ ಕಥಾವಸ್ತು ಸಾಮಾಜಿಕ ಕ್ರಾಂತಿಯ ಸಂದೇಶಗಳನ್ನ ನೀಡುತ್ತಿದ್ದವು. ಇವು ನಟರನ್ನ ಜನಮಾನಸದಲ್ಲಿ ಉತ್ತುಂಗದಲ್ಲಿ ನಿಲ್ಲಿಸಿದ್ದವು. ಈಗ ತಮಿಳು ಸಿನಿಮಾಗಳು ಕಮರ್ಷಿಯಲ್ ಆಗಿವೆ. ರಜನಿಕಾಂತ್ ಅವರು ಸಿನಿಮಾ ಜನಪ್ರಿಯತೆಯಲ್ಲಿ ಉತ್ತುಂಗದಲ್ಲಿದ್ದಾರಾದರೂ ಜನರು ಅವರನ್ನು ರಾಜಕಾರಣದಲ್ಲಿ ಒಪ್ಪಿಕೊಳ್ಳುತ್ತಾರೆನ್ನುವ ಹಾಗಿಲ್ಲ. ಯಾಕೆಂದರೆ ರಜನಿಕಾಂತ್ ಈ ಹಿಂದೆ ಆಗೀಗ ರಾಜಕೀಯದಲ್ಲಿ ಚೂರುಪಾರು ಕೈಯಾಡಿಸಿದಾಗೆಲ್ಲಾ ಕೈಸುಟ್ಟುಕೊಂಡಿದ್ದಾರೆ. ಜಯಲಲಿತಾ ಮತ್ತು ಕರುಣಾನಿಧಿ ಎಂಬ ಮಹಾನ್ ರಾಜಕಾರಣಿಗಳ ಪ್ರಾಬಲ್ಯದಲ್ಲಿ ಜನರು ರಜನಿಕಾಂತ್ ಅವರನ್ನ ಸ್ವೀಕರಿಸಿರಲಿಕ್ಕಿಲ್ಲ. ಈಗ ಪರಿಸ್ಥಿತಿ ವಿಭಿನ್ನವಾಗಿದ್ದು, ಆ ಇಬ್ಬರು ಮಹಾನ್ ನಾಯಕರು ಅಗಲಿದ್ದಾರೆ. ರಾಜಕಾರಣದಲ್ಲಿ ಪರ್ಯಾಯ ಶಕ್ತಿಗಳು ಕಾಣುತ್ತಿಲ್ಲ. ಜನರು ರಜನೀಕಾಂತ್ ಅವರನ್ನು ಈಗ ಸ್ವೀಕರಿಸಬಹುದು ಎಂಬ ವಾದವಿದೆ.
Loading...

ಇನ್ನು, ಕಮಲಹಾಸನ್ ಅವರು ಸಿನಿಮಾದಲ್ಲಿ ಕ್ಲಾಸ್ ಹೀರೋ ಎನಿಸಿದವರು. ರಜಿನಿಕಾಂತ್​ರಂತೆ ಥಿಯೇಟರ್​ನಲ್ಲಿ ಜನರನ್ನ ಶಿಳ್ಳೆ ಹೊಡೆಸುವಷ್ಟು ಮಾಸ್ ಹೀರೋಯಿಸಂ ಅವರದ್ದಲ್ಲ. ಆದರೆ, ತಮಿಳುನಾಡಿನ ಜನರಿಗೆ ಹೊಸ ರಾಜಕೀಯ ದಾರಿ ತೋರಿಸುತ್ತೇನೆಂಬ ಪರಿಕಲ್ಪನೆಯೊಂದಿಗೆ ರಾಜಕೀಯದ ಬಾಗಿಲು ತಟ್ಟುತ್ತಿದ್ದಾರೆ. ಆದರೆ, ಪರಿಕಲ್ಪನೆ ಇಟ್ಟುಕೊಂಡ ಮಾತ್ರಕ್ಕೆ ರಾಜಕೀಯದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಅಣ್ಣಾ ಹಜಾರೆ ಚಳವಳಿಯ ಜನಪ್ರಿಯತೆಯನ್ನು ಮಾತ್ರ ಬೆನ್ನಿಗಿಟ್ಟುಕೊಂಡು ಕೇಜ್ರಿವಾಲ್ ರಾಜಕಾರಣಕ್ಕೆ ಇಳಿದಿದ್ದರೆ ಬಹುಶಃ ದಿಲ್ಲಿ ಸಿಂಹಾಸನ ಸಿಗುತ್ತಿರಲಿಲ್ಲವೇನೋ. ಕೇಜ್ರಿವಾಲ್ ಬೂತ್ ಮಟ್ಟಕ್ಕೂ ಹೋಗಿ ಜನರನ್ನ ತಲುಪಿದರು. ಕಾರ್ಯಕರ್ತರ ಪಡೆ ಕಟ್ಟಿದರು. ಕಮಲಹಾಸನ್ ಈ ಕೆಲಸ ಮಾಡದೇ ಹೋದರೆ ಅವರ ಮುಂದಿನ ದಾರಿ ಕಷ್ಟವೇ.

ಅಪ್ಪನ ಸ್ಥಾನ ತುಂಬುತ್ತಾರಾ ಸ್ಟಾಲಿನ್?
ಕರುಣಾನಿಧಿ ಅವರ ಪುತ್ರ ಎಂ.ಕೆ. ಸ್ಟಾಲಿನ್ ಹಲವಾರು ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಕರುಣಾನಿಧಿ ಅವರ ರಾಜಕೀಯ ಉತ್ತರಾಧಿಕಾರಿ ಎಂದೇ ಆಗಿನಿಂದಲೂ ಬಿಂಬಿತರಾಗಿದ್ದಾರೆ. ಈಗ ಡಿಎಂಕೆ ಪಕ್ಷದ ಸರ್ವೋಚ್ಚ ನಾಯಕ ಅವರೇ ಆಗಿದ್ದಾರೆ. ಆದರೆ, ಇಂದಿರಾ ಗಾಂಧಿ ನಿಧನದ ನಂತರ ಕಾಂಗ್ರೆಸ್ ಪಕ್ಷವನ್ನು ರಾಜೀವ್ ಗಾಂಧಿ ಆವರಿಸಿದಂತೆ, ಡಿಎಂಕೆಯನ್ನು ಸ್ಟಾಲಿನ್ ಆವರಿಸಿಕೊಂಡಿಲ್ಲ ಎಂಬುದು ನಿಜ. ಅಪ್ಪನಂತೆ ಸ್ಟಾಲಿನ್ ಒಳ್ಳೆಯ ಸಂಘಟಕರೇನೋ ಹೌದು. ಆದರೆ, ಕರುಣಾನಿಧಿ ಅವರಂತೆ ಪ್ರಖರ ಭಾಷಣ ಮಾಡುವ ಕಲೆ ಸ್ಟಾಲಿನ್​ಗೆ ಸಿದ್ಧಿಸಿಲ್ಲ. ಐಕಾನ್ ಆಗಿ ಅವರು ಬೆಳೆಯಬಲ್ಲರಾ ಎಂಬುದು ಗೊತ್ತಿಲ್ಲ.

ಹಾಲಿ ಮುಖ್ಯಮಂತ್ರಿ ಇ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರ ಸ್ವಘೋಷಿತ ವಾರಸುದಾರರಾಗಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಜನಪ್ರಿಯತೆ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳಲು ಇಬ್ಬರೂ ವಿಫಲರಾಗಿದ್ದಾರೆ. ಜಯಲಲಿತಾ ನಿಧನಾನಂತರ ನಡೆದ ಉಪಚುನಾವಣೆಗಳಲ್ಲಿ ಎಐಎಡಿಎಂಕೆ ಪಕ್ಷ ಸೋಲನುಭವಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ.

ಶಶಿಕಲಾಗೆ ಸಾಧ್ಯವೇ? 
ಜೈಲುವಾಸಿ ಶಶಿಕಲಾ ಮತ್ತವರ ತಂಡದತ್ತವೂ ಹಲವರ ಚಿತ್ತ ನೆಟ್ಟಿದೆ. ಜಯಲಲಿತಾ ಅವರ ದೀರ್ಘಕಾಲದ ಆಪ್ತೆಯಾಗಿದ್ದ ಶಶಿಕಲಾ ಯಾವತ್ತೂ ಬ್ಯಾಕ್​ಸ್ಟೇಜ್ ಮಾಸ್ಟರ್​ಮೈಂಡ್. ಜಯಲಲಿತಾ ಅವರ ಹಿಂದಿನ ಶಕ್ತಿಯಾಗಿ ನಿಂತಿದ್ದು ಶಶಿಕಲಾ ಅವರೇ. ಜಯಲಲಿತಾ ಅವರ ವೈಯಕ್ತಿಕ ಮತ್ತು ರಾಜಕೀಯ ಏರಿಳಿತಗಳಿಗೆ ಕಾರಣವಾಗಿದ್ದು ಇದೇ ಶಶಿಕಲಾ ಅವರೆಯೇ. ಬೇರೆಯೇ ಕಾರಣಕ್ಕೆ ಸಾರ್ವಜನಿಕವಾಗಿ ವರ್ಚಸ್ಸು ಬೆಳೆಸಿಕೊಳ್ಳುವ ಸಾಹಸಕ್ಕೆ ಕೈಹಾಕದ ಶಶಿಕಲಾ, ತಮಿಳುನಾಡಿನ ಆಡಳಿತಯಂತ್ರದಲ್ಲಿ ತಮ್ಮ ಹಿಡಿತ ಸಾಧಿಸುವುದನ್ನು ಮರೆಯಲಿಲ್ಲ. ರಾಜಕಾರಣದ ವಿದ್ಯೆಗಳನ್ನ ಕರತಲಾಮಲಕ ಮಾಡಿಕೊಂಡಿರುವ ಶಶಿಕಲಾ ಮತ್ತವರ ಸೋದರ ಟಿ.ಟಿ.ವಿ. ದಿನಕರನ್ ಅವರು ರಾಜಕಾರಣದಲ್ಲಿ ಮುಂದಡಿ ಇಡುವಷ್ಟು ಛಾತಿ ಹೊಂದಿದ್ದಾರೆ.

ಶಶಿಕಲಾ ನಟರಾಜನ್


ಜಾತಿರಾಜಕಾರಣ? 
ಕರುಣಾನಿಧಿ ಮತ್ತು ಜಯಲಲಿತಾ ಅವರ ಅವಧಿಯವರೆಗೂ ತಮಿಳುನಾಡಿನಲ್ಲಿ ವ್ಯಕ್ತಿಕೇಂದ್ರಿತ ರಾಜಕಾರಣವಿತ್ತು. ತಮಿಳುನಾಡಿನಲ್ಲಿ ಇನ್ಮುಂದೆ ವ್ಯಕ್ತಿಕೇಂದ್ರಿತ ರಾಜಕಾರಣ ನಿಂತುಹೋಗಿ ಜಾತಿ ಆಧಾರಿತ ರಾಜಕಾರಣ ಪ್ರವರ್ದಮಾನಕ್ಕೆ ಬರುತ್ತದೆ ಎಂಬ ಅಭಿಪ್ರಾಯಗಳು ಬರುತ್ತಿವೆ. ತಮಿಳುನಾಡಿನ ಪ್ರಬಲ ತೇವರ್ ಜನಾಂಗಕ್ಕೆ ಸೇರಿದ ಶಶಿಕಲಾ ಮತ್ತವರ ತಂಡವು ಡಿಎಂಕೆ ಪಕ್ಷಕ್ಕೆ ಪರ್ಯಾಯ ರಾಜಕೀಯ ಶಕ್ತಿಯಾಗುವ ಸೂಚನೆಗಳು ಈಗಾಗಲೇ ಸಿಕ್ಕಿವೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆ ಇದೆ.

ಹಿಂದುತ್ವ ರಾಜಕಾರಣ?
ತಮಿಳುನಾಡಿನಲ್ಲಿ ಮುಂದೆ ಬರಬಹುದಾದ ಜಾತಿಕೇಂದ್ರಿತ ರಾಜಕಾರಣವನ್ನು ತಡೆಗಟ್ಟುವ ಶಕ್ತಿ ಇರುವುದು ಹಿಂದುತ್ವಕ್ಕೆ ಮಾತ್ರ ಎಂದು ಬಿಜೆಪಿ ಸಂಸದ ಸುಬ್ರಮಣಿನ್ ಸ್ವಾಮಿ ನಿನ್ನೆ ನ್ಯೂಸ್18 ವಾಹಿನಿಯಲ್ಲಿ ಅಭಿಪ್ರಾಯಪಟ್ಟಿದ್ದರು. ತಮಿಳುನಾಡಿನ ಜನರಿಗೆ ಹಿಂದುತ್ವ ಅಪಥ್ಯವೇನಲ್ಲ. ಆದರೆ, ಅವರಿಗೆ ಹಿಂದುತ್ವವನ್ನು ತಲುಪಿಸಬಲ್ಲ ಸಮರ್ಥ ಹಿಂದೂ ನಾಯಕತ್ವ ತಮಿಳುನಾಡಿನಲ್ಲಿಲ್ಲ ಎಂದು ಸ್ವಾಮಿ ಹೇಳುತ್ತಾರೆ.

ಬಲಪಂಥೀಯ ಸಂಘಟನೆಗಳು ದೇಶಾದ್ಯಂತ ಬಲವೃದ್ಧಿಸಿಕೊಳ್ಳುತ್ತಿರುವುದನ್ನು ಒಪ್ಪಲೇಬೇಕಾಗಿದೆ. ಬಲಪಂಥದ ಗಂಧವೇ ಇಲ್ಲದ ಕೇರಳದಲ್ಲೇ ಸಂಘಪರಿವಾರದ ಬೇರು ತಕ್ಕಮಟ್ಟಿಗೆ ಆಳಕ್ಕೆ ಹೋಗಿದೆ. ಕೆಲ ವರ್ಷಗಳ ಹಿಂದಿನವರೆಗೂ ಸಂಘಪರಿವಾರವನ್ನು ಊಹಿಸಿಕೊಳ್ಳಲೂ ಸಾಧ್ಯವಿರದ ಪಶ್ಚಿಮ ಬಂಗಾಳದಲ್ಲಿ ಈಗ ಮಮತಾ ಬ್ಯಾನರ್ಜಿ ಅವರಿಗೆ ಪರ್ಯಾಯ ಶಕ್ತಿಯಾಗಿ ಬಿಜೆಪಿ ಬೆಳೆದುಬಿಟ್ಟಿದೆ. ಅಲ್ಲಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಎರಡನ್ನೂ ಮೀರಿಸಿ ಬಿಜೆಪಿ ಬೇರು ಬಿಡುತ್ತಿದೆ. ತಮಿಳುನಾಡಿನಲ್ಲಿ ಈಗ ಮೊದಲಿನಂತೆ ದ್ರಾವಿಡ ಹೋರಾಟವಿಲ್ಲ. ಅತ್ಯುಗ್ರ ಹಿಂದಿ ವಿರೋಧಿ ಮತ್ತು ಬ್ರಾಹ್ಮಣ್ಯ ವಿರೋಧಿ ವಾತಾವರಣವೂ ಇಲ್ಲ. ಹಿಂದುತ್ವ ಎಂದರೆ ಬ್ರಾಹ್ಮಣ್ಯ ಎಂದು ಜನರಿಗೆ ಪಾಠ ಮಾಡಬಲ್ಲ ಕರುಣಾನಿಧಿ ಅವರಂತಹ ವ್ಯಕ್ತಿಗಳು ಇಲ್ಲ. ಹೀಗಾಗಿ, ತಮಿಳುನಾಡಿನಲ್ಲಿ ಹಿಂದುತ್ವಕ್ಕೆ ಪೂರಕ ವಾತಾವರಣ ಇರುವುದನ್ನು ತಳ್ಳಿಹಾಕಲಾಗದು. ಡಾ. ಸ್ವಾಮಿ ಹೇಳಿದಂತೆ ಹಿಂದುತ್ವವನ್ನು ಜನರಿಗೆ ತಲುಪಿಸಬಲ್ಲ ನಾಯಕತ್ವದ ಕೊರತೆ ಅಲ್ಲಿದೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...