news18 Updated:January 4, 2021, 10:55 AM IST
ಫ್ಯೂಚರ್ ಗ್ರೂಪ್ ಸಿಇಒ ಕಿಶಾನ್ ಬಿಯಾನಿ
- News18
- Last Updated:
January 4, 2021, 10:55 AM IST
ಮುಂಬೈ(ಜ. 04): ತಮ್ಮ ಫ್ಯೂಚರ್ ಗ್ರೂಪ್ ಸಂಸ್ಥೆ ಕಷ್ಟದಲ್ಲಿದ್ದಾಗ ಸಹಾಯಹಸ್ತಕ್ಕಾಗಿ ಎಷ್ಟು ಬಾರಿ ಮನವಿ ಮಾಡಿದರೂ ಅಮೇಜಾನ್ ಕಿವಿಗೊಡಲಿಲ್ಲ. ಈಗ ರಿಲಾಯನ್ಸ್ ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವಾಗ ಅಡ್ಡಗಾಲು ಹಾಕುತ್ತಿದೆ ಎಂದು ಅಮೇಜಾನ್ ಸಂಸ್ಥೆ ವಿರುದ್ಧ ಫ್ಯೂಚರ್ ಗ್ರೂಪ್ನ ಸಿಇಒ ಕಿಶೋರ್ ಬಿಯಾನಿ ಕಿಡಿಕಾರಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಫ್ಯೂಚರ್ ಗ್ರೂಪ್ ಸಂಸ್ಥೆ ತನ್ನ ಸಗಟು (Wholesale), ಚಿಲ್ಲರೆ (Retail) ವ್ಯವಹಾರ, ಉಗ್ರಾಣ (Warehouse) ಇತ್ಯಾದಿ ಆಸ್ತಿಯನ್ನು ರಿಲಾಯನ್ಸ್ ರೀಟೇಲ್ ವೆಂಚರ್ಸ್ಗೆ 25 ಸಾವಿರ ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು. ಆದರೆ, ಫ್ಯೂಚರ್ ಗ್ರೂಫ್ ಮತ್ತು ರಿಲಾಯನ್ಸ್ ನಡುವಿನ ಈ ಒಪ್ಪಂದ ಸಿಂಧುವಿಲ್ಲ ಎಂದು ಅಮೇಜಾನ್ ಸಂಸ್ಥೆ ಆಕ್ಷೇಪಿಸಿ ಕಾನೂನು ಹೋರಾಟ ಪ್ರಾರಂಭಿಸಿದೆ.
2019ರಲ್ಲಿ ಫ್ಯೂಚರ್ ಗ್ರೂಪ್ನ ಫ್ಯೂಚರ್ ಕೂಪನ್ಸ್ ಕಂಪನಿಯಲ್ಲಿ ಅಮೇಜಾನ್ ಶೇ. 49ರಷ್ಟು ಪಾಲನ್ನ ಹೊಂದಿದೆ. ಇದೇ ಕಾರಣಕ್ಕೆ ಫ್ಯೂಚರ್ ಗ್ರೂಪ್ನ ವ್ಯವಹಾರ ಮಾರಾಟಕ್ಕೆ ಅಮೇಜಾನ್ ವಿರೋಧಿಸುತ್ತಿದೆ. ಅಮೇಜಾನ್ ಸಂಸ್ಥೆಯ ಈ ನಡೆಗೆ ಫ್ಯೂಚರ್ ಗ್ರೂಪ್ ಅತೀವ ಅಸಮಾಧಾನ ವ್ಯಕ್ತಪಡಿಸಿದೆ.
ಫ್ಯೂಚರ್ ಗ್ರೂಪ್ ಸಂಸ್ಥೆ ಬಹಳಷ್ಟು ಹಣಕಾಸು ಸಂಕಷ್ಟಕ್ಕೆ ಸಿಲುಕಿದೆ. ತನ್ನ ಹೂಡಿಕೆದಾರರು ಮತ್ತು ಷೇರುದಾರರ ಹಿತ ಕಾಯುವುದು ಬಹಳ ಮುಖ್ಯ. ಹೀಗಾಗಿ, ಅಮೇಜಾನ್ ಸಂಸ್ಥೆ ಬಳಿ ನೆರವು ಕೋರಿ ಎಂಟು ಬಾರಿ ಮನವಿ ಮಾಡಿದ್ದೆವು. ಆದರೆ, ಬಾಯಿ ಮಾತಿನ ಭರವಸೆ ಮಾತ್ರ ನೀಡಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅಮೇಜಾನ್ ಜೊತೆಗಿನ ಒಪ್ಪಂದದ ಅನುಸಾರವಾಗಿಯೇ ನಮ್ಮ ಸಾಲಗಳ ಹೊಣೆ ಹೊತ್ತು ಹಣಕಾಸು ನೆರವು ಒದಗಿಸಬಹುದಿತ್ತು. ನಾವು ಎಷ್ಟೇ ಮನವಿ ಮಾಡಿದರೂ ಅಮೇಜಾನ್ ಕಿವಿಗೊಡಲಿಲ್ಲ ಎಂದು ಕಿಶೋರ್ ಬಿಯಾನಿ ಬೇಸರಪಟ್ಟಿದ್ದಾರೆ.
ಇದನ್ನೂ ಓದಿ: CSTRI Recruitment 2021; ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈಗ ರಿಲಾಯನ್ಸ್ ಜೊತೆಗಿನ ಒಪ್ಪಂದ ನಮ್ಮ ಕಂಪನಿಗೆ ಜೀವ ತುಂಬುತ್ತಿದೆ. ಆದರೆ, ಅಮೇಜಾನ್ ಸಂಸ್ಥೆ ಮಾತ್ರ ಅಡ್ಡಗಾಲು ಹಾಕುತ್ತಿದೆ. ಅವರ ಉದ್ದೇಶವಾದರೂ ಏನು? ನಮ್ಮ ಉದ್ಯೋಗಗಳು, ಸರಬರಾಜುದಾರರು, ಗ್ರಾಹಕರು, ಹೂಡಿಕೆದಾರರು ಸಂಕಷ್ಟ ಅನುಭವಿಸಬೇಕಾ? ನಮ್ಮ ಕಂಪನಿ ಬಾಗಿಲು ಮುಚ್ಚಬೇಕೆಂಬುದು ಅಮೇಜಾನ್ನ ಉದ್ದೇಶವಾ? ಎಂದು ಫ್ಯೂಚರ್ ಗ್ರೂಪ್ ಸಿಇಒ ಪ್ರಶ್ನೆ ಮಾಡಿದ್ದಾರೆ.
ರಿಲಾಯನ್ಸ್ ಜೊತೆಗಿನ ನಮ್ಮ ವ್ಯವಹಾರದ ಬಗ್ಗೆ ನಾವು ಅಮೇಜಾನ್ಗೆ ಅನೇಕ ಬಾರಿ ಮಾಹಿತಿ ನೀಡಿದ್ದೇವೆ. ಆಗೆಲ್ಲಾ ಅವರು ಯಾವುದೇ ಆಕ್ಷೇಪಿಸದೆ ಸುಮ್ಮನಿದ್ದರು. ಈಗ ಆಕ್ಷೇಪಿಸುತ್ತಿರುವುದು ಯಾಕೆ ಎಂಬುದು ಬಿಯಾನಿ ಅವರ ಅಳಲು.
ಅಮೇಜಾನ್ ಸಂಸ್ಥೆಯ ಮನವಿ ಮೇರೆಗೆ ಸಿಂಗಾಪುರದ ಅಂತರರಾಷ್ಟ್ರೀಯ ನ್ಯಾಯ ಕೇಂದ್ರ (ಎಸ್ಐಎಸಿ) ಫ್ಯೂಚರ್ ಗ್ರೂಪ್ – ರಿಲಾಯನ್ಸ್ ಒಪ್ಪಂದಕ್ಕೆ ತಡೆ ನೀಡಿದೆ. ಇದೇ ವೇಳೆ, ಭಾರತದ ಸ್ಪರ್ಧಾ ಆಯೋಗ (ಸಿಸಿಐ) ಫ್ಯೂಚರ್ ಗ್ರೂಪ್ ಮತ್ತು ಆರ್ಐಎಲ್ ವ್ಯವಹಾರಕ್ಕೆ ಅನುಮೋದನೆ ನೀಡಿ ಮಾನ್ಯ ಮಾಡಿದೆ.
ಸುದ್ದಿ ಮೂಲ: ಎಕನಾಮಿಕ್ ಟೈಮ್ಸ್
(ನ್ಯೂಸ್18 ಕನ್ನಡ ವಾಹಿನಿಯು ರಿಲಾಯನ್ಸ್ ಇಂಡಸ್ಟ್ರೀಸ್ನ ಒಡೆತನಕ್ಕೆ ಸೇರಿದ ನೆಟ್ವರ್ಕ್18 ಸಂಸ್ಥೆಯ ಅಡಿ ಬರುತ್ತದೆ.)
Published by:
Vijayasarthy SN
First published:
January 4, 2021, 10:52 AM IST